ಕೇರಳದಲ್ಲಿ ‘ನಿಫಾ’ ವೈರಸ್ ಭೀತಿ: ಕೇರಳದ 7 ಗ್ರಾಮಗಳು ಕಂಟೈನ್‌ಮೆಂಟ್ ವಲಯವಾಗಿ ಘೋಷಣೆ, ಶಾಲೆಗಳು ಬಂದ್
ಕೇರಳದಲ್ಲಿ ‘ನಿಫಾ’ ವೈರಸ್ ಭೀತಿ: ಕೇರಳದ 7 ಗ್ರಾಮಗಳು ಕಂಟೈನ್‌ಮೆಂಟ್ ವಲಯವಾಗಿ ಘೋಷಣೆ, ಶಾಲೆಗಳು ಬಂದ್
ನಿಫಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ನಿಫಾ ವೈರಸ್‌ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದ ಕೋಝಿಕೋಡ್‌ನಲ್ಲಿ ಏಳು ಗ್ರಾಮ ಪಂಚಾಯಿತಿಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಿಲಾಗಿದೆ. ತಿರುವಳ್ಳೂರು, ಕುಟ್ಟಿಯಾಡಿ,ಅತಂಚೇರಿ, ಕಾಯಕ್ಕೋಡಿ, ಮಾರುತೊಂಕರ, ವಿಲ್ಲವಲ್ಲಿ ಮತ್ತು ಕವಿಲುಂಪಾರ ಪಂಚಾಯಿತಿಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೋಝಿಕ್ಕೋಡ್ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕ ಸೇರಿದಂತೆ ನಾಲ್ವರಲ್ಲಿ ನಾಲ್ಕು ನಿಫಾ ಪ್ರಕರಣಗಳು ದೃಢಪಟ್ಟ ನಂತರ ರಾಜ್ಯ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.9 ವರ್ಷದ ಬಾಲಕ ಸೇರಿದಂತೆ ನಾಲ್ಕು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಆಗಸ್ಟ್ 30 ಹಾಗೂ ಸೆಪ್ಟೆಂಬರ್ 11 ರಂದು ಕೇರಳದಲ್ಲಿ ಇಬ್ಬರು ವ್ಯಕ್ತಿಗಳ ಸಾವಾಗಿತ್ತು. ಇದಕ್ಕೆ ನಿಫಾ ವೈರಸ್ ಕಾರಣ ಎಂದು ಶಂಕಿಸಲಾಗಿದೆ.ಸಾವಿನ ಪ್ರಕರಣಗಳು ವರದಿಯಾದ ನಂತರ ಕೇರಳ ಆರೋಗ್ಯ ಇಲಾಖೆ ಕೋಯಿಕೋಡ್ ಜಿಲ್ಲೆಯಲ್ಲಿ ಆರೋಗ್ಯ ಎಚ್ಚರಿಕೆಯನ್ನು ನೀಡಿದೆ.ನಿಫಾ ವೈರಸ್ ಕುರಿತು ವಿಶೇಷ ಸಭೆ ಕರೆಯಲಾಗಿದ್ದು, ಸಂಜೆ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಅಧಿಕಾರಿಗಳಿಂದ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ನಿಫಾ ವೈರಸ್ ಹರಡುವುದು ಹೇಗೆ?.
-ಸೋಂಕಿತ ಪ್ರಾಣಿಗಳಿಂದ ಇತರ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತದ ನೇರ ಸಂಪರ್ಕದಿಂದ ಬರಬಹುದು
- ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ, ಬಾವಲಿಗಳು ಕಚ್ಚಿ ಎಸೆದ ಹಣ್ಣು ಸೇವಿಸುವುದರಿಂದ ಸೋಂಕು ಹರಡ ಬಹುದು
- ಸೋಂಕಿತ ಪ್ರಾಣಿ ಅಥವಾ ಮನುಷ್ಯನ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಬರಬಹುದು
ತಡೆಗಟ್ಟುವುದು ಹೇಗೆ?
ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣನ್ನು ಸೇವಿಸಬಾರದು, ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ, ನೀರಾ ಕುಡಿಯಬಾರದು, ತಾಜಾ ತಾಳೆ ಹಣ್ಣಿನ ರಸ ಸೇವಿಸಬಾರದು, ಹಣ್ಣು ಮತ್ತು ಒಣ ಖರ್ಜೂರ ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಬೇಕು, ಆನಾರೋಗ್ಯದ ಹಂದಿಗಳನ್ನು ಮತ್ತು ಪ್ರಾಣಿಗಳೊಂದಿಗೆ ನೇರ ಸಂಪರ್ಕ ತಪ್ಪಿಸಬೇಕು, ಬಾವಲಿಗಳ ಪ್ರವೇಶವನ್ನು ತಪ್ಪಿಸಲು ತೆರೆದ ಬಾವಿಗಳಿಗೆ ಜಾಲರಿ ಅಳವಡಿಸಬೇಕು, ಸೋಂಕಿತ ರೋಗಿಯು ಕನಿಷ್ಠ 15 ದಿನಗಳ ಕಾಲ ಮನೆಯಲ್ಲಿ ಮತ್ತು ಚಿಕಿತ್ಸೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿರಬೇಕು, ಬಾವಲಿಗಳ ವಾಸ ಇರುವ ಬಾವಿ, ಸುರಂಗದ ನೀರನ್ನು ಕುದಿಸದೆ ಉಪಯೋಗಿಸಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಿಫಾ ವೈರಸ್‌ಗೆ ಚಿಕಿತ್ಸೆ
ಮೂಲಗಳ ಪ್ರಕಾರ ನಿಫಾ ವೈರಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ಉಸಿರಾಟದ ಕಾರ್ಯವನ್ನು ನಿರ್ವಹಿಸುವುದು, ಜ್ವರ ಹಾಗೂ ದೇಹದ ನೋವನ್ನು ನಿಯಂತ್ರಿಸುವುದು ಮತ್ತು ಇಂಟ್ರಾವೆನಸ್ ದ್ರವಗಳನ್ನು ದೇಹಕ್ಕೆ ನೀಡುವುದು, ಈ ರೀತಿಯ ಆರೈಕೆಗಳು ಅವಶ್ಯವಾಗುತ್ತವೆ. ಕೆಲವು ಪ್ರಕರಣಗಳಲ್ಲಿ ಪ್ರಾಯೋಗಿಕ ಚಿಕಿತ್ಸೆಗಳು ಮತ್ತು ಆಂಟಿವೈರಲ್ ಔಷಧಿಗಳನ್ನು ಪರಿಶೋಧಿಸಲಾಯಿತು. ಆದರೆ ಅವುಗಳ ಪರಿಣಾಮ ಈಗಲೂ ಅನಿಶ್ಚಿತವಾಗಿಯೇ ಉಳಿಸಿದೆ. ನಿಪಾ ವೈರಸ್‌ನ ಗಂಭೀರ ಸ್ವರೂಪ ಮತ್ತು ಏಕಾಏಕಿ ಸಂಭವಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಂದ ಮಾರ್ಗಸೂಚಿಗಳು ಮತ್ತು ಶಿಫಾರಸುಗಳನ್ನು ಅನುಸರಿಸುವುದು ಮತ್ತು ಶಂಕಿತ ಪ್ರಕರಣಗಳು ಉದ್ಭವಿಸಿದರೆ ತಕ್ಷಣದ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಬಹಳ ಮುಖ್ಯ.
ನಿಫಾ ಜ್ವರದ ಲಕ್ಷಣಗಳೇನು ಯಾವುದೆಲ್ಲ ಗೊತ್ತಾ ?
ನಿಫಾ ಜ್ವರದ ಲಕ್ಷಣಗಳೇನು ಎಂಬುದನ್ನು ನೋಡಿದ್ದೇ ಆದರೆ ತಲೆನೋವು, ವಾಂತಿ, ನಡುಕ, ನಿದ್ರಾಲಸ್ಯ,ಮೈಕೈನೋವು, ತೊದಲುವಿಕೆ, ಪ್ರಜ್ಞಾಹೀನತೆಯಾಗಿದೆ. ಇದಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗೂ ಸೂಕ್ತ ನಿರ್ವಹಣೆಯಿಂದ ಸೋಂಕನ್ನು ಗುಣಪಡಿಸಬೇಕಾಗಿದೆ. ಸಾಕುಪ್ರಾಣಿಗಳಾದ ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕಿತ ಜಾನುವಾರಗಳು ಮಧ್ಯಂತರ ಮೂಲಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಬೇಕಾಗುತ್ತದೆ.
ಸೋಂಕು ತಗುಲಿದ ಅಥವಾ ಶಂಕಿತ ಪ್ರಕರಣಗಳನ್ನು ಪ್ರತ್ಯೇಕವಾಗಿಡಬೇಕು. ರೋಗಿಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಸಾಬೂನು ನೀರು ಬಳಸಿ ಶುಚಿಗೊಳಿಸಬೇಕು. ಹಸ್ತಲಾಘವ ಕೊಡವುದನ್ನು ತಪ್ಪಿಸಿ ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್ ತಪ್ಪದೇ ಬಳಸುವುದು, ಎಲ್ಲಾ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ, ಸುಲಿದು ಮತ್ತು ಬೇಯಿಸಿ ತಿನ್ನುವುದು, ಪ್ಲೂ ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು.