ಭಗವದ್ಗೀತೆ,ಅಧ್ಯಾಯ ಎರಡು,ಶ್ಲೋಕ 48
ಶ್ಲೋಕ – 48
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ॥೪೮॥
ಯೋಗಸ್ಥಃ ಕುರು ಕರ್ಮಾಣಿ ಸಂಗಮ್ ತ್ಯಕ್ತ್ವಾ ಧನಂಜಯ- ಸಿದ್ಧಿ ಅಸಿದ್ಧ್ಯೋಃ ಸಮಃ ಭೂತ್ವಾ ಸಮತ್ವಂ ಯೋಗಃ ಉಚ್ಯತೇ – ಧನಂಜಯ, ‘ಯೋಗ’ ದಲ್ಲಿ ನೆಲೆಗೊಂಡು ಕರ್ಮಗಳನ್ನು ಮಾಡು-ಫಲದ ನಂಟನ್ನು ತೊರೆದು, ಕೆಲಸ ಕೈಗೂಡಿದರೂ, ಕೆಟ್ಟರೂ-ಸಮಭಾವದಿಂದಿದ್ದು. ಇಂಥ ಸಮಭಾವಕ್ಕೆ ‘ಯೋಗ’ವೆಂದು ಹೆಸರು.
ಎಂತಹ ಕರ್ಮ ಮಾಡುವುದಾದರೂ ಸಹ ಸುಮ್ಮನೆ ಮಾಡುವುದಲ್ಲ. ಅದರ ಹಿಂದೆ ಒಂದು ಯೋಗವಿರಬೇಕು. ಭಗವಂತ ಫಲವನ್ನು ಕೊಡತಕ್ಕಂತವ, ನನ್ನಿಂದ ಕರ್ಮವನ್ನು ಮಾಡಿಸತಕ್ಕಂತವನೂ ಅವನೆ. ಏನು ಫಲ, ಎಷ್ಟು ಫಲ, ಯಾವಾಗ ಫಲ, ಎಲ್ಲವೂ ಅವನಿಗೆ ಸೇರಿದ್ದು. ಸಿಕ್ಕಿದರೂ ಸಂತೋಷ, ಸಿಗದಿದ್ದರೂ ಸಂತೋಷ. ಇದು ಭೌತಿಕ ಸಮತೋಲನ. ಇಂತಹ ಸಮತೋಲನದಲ್ಲಿ ಕರ್ತವ್ಯ ದೃಷ್ಟಿಯಿಂದ ಕರ್ಮವನ್ನು ಮಾಡಬೇಕು. ನಮ್ಮ ಬದುಕಿನ ಸಮಸ್ತ ಕರ್ಮದಲ್ಲಿ ಈ ಅನುಸಂಧಾನವಿದ್ದಾಗ ಅದು ಭಗವಂತನ ಪೂಜೆಯಾಗುತ್ತದೆ. ಇದೇ ಕರ್ಮಯೋಗ.
ಸಿದ್ಧಿ-ಅಸಿದ್ಧಿಯನ್ನು ಸಮಭಾವದಿಂದ ಕಾಣುವುದು ಮನಸ್ಸಿನ ಯೋಗ. ಇದೊಂದು ಮಾನಸಿಕ ಸ್ಥಿತಿ. ಈ ರೀತಿಯ ಯೋಗ ಭಾವನೆಯಿಂದ ಕರ್ಮ ಮಾಡಿದರೆ-ಫಲ ಬಂದಾಗ ಹೆಗ್ಗಳಿಕೆ ಇರುವುದಿಲ್ಲ, ಬಾರದೆ ಇದ್ದಾಗ ದುಃಖವಿರುವುದಿಲ್ಲ. ಹೀಗೆ ಸಿದ್ಧಿ-ಅಸಿದ್ಧಿಗಳ ಸಮತ್ವದಿಂದ ಮಾಡುವ ಪ್ರತಿಯೊಂದು ಕರ್ತವ್ಯವೂ ಕೂಡಾ ಭಗವಂತನ ಪೂಜೆಯಾಗುತ್ತದೆ. ಈ ಅನುಸಂಧಾನವಿಲ್ಲದೆ ಮಾಡುವ ಮಹಾಯಜ್ಞ ಕೂಡಾ ಪೂಜೆ ಆಗಲಾರದು. ಭಗವಂತ ನನ್ನಿಂದ ಈ ಕೆಲಸವನ್ನು ಮಾಡಿಸಿದ. ಇದು ಭಗವಂತನ ಪೂಜಾರೂಪವಾಗಿ ಅರ್ಪಿತವಾಗಲಿ ಎನ್ನುವ ಅನುಸಂಧಾನವಿದ್ದಾಗ ಮಾತ್ರ ಕರ್ಮ-ಯೋಗವಾಗುತ್ತದೆ. ನಮ್ಮ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದೇ ಯೋಗ. ಈ ಅನುಸಂಧಾನಕ್ಕೆ ಪೂರಕವಾದ ಮತ್ತು ಅನುಸಂಧಾನಪೂರ್ವಕವಾದ ಎಲ್ಲಾ ಕರ್ಮವೂ ಕರ್ಮಯೋಗ.