ಭಗವದ್ಗೀತೆ,ಅಧ್ಯಾಯ 2, ಶ್ಲೋಕ 52
ಶ್ಲೋಕ – 52
ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ ।
ತದಾ ಗಂತಾನಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ ॥೫೨॥
ಯದಾ ತೇ ಮೋಹ ಕಲಿಲಮ್ ಬುದ್ಧಿಃ ವ್ಯತಿತರಿಷ್ಯತಿ ತದಾ ಗಂತಾ ಅನಿ ನಿರ್ವೇದಮ್ ಶ್ರೋತವ್ಯಸ್ಯ ಶ್ರುತಸ್ಯ ಚ –ಎಂದು ನಿನ್ನ ಬುದ್ಧಿ ಅಜ್ಞಾನದ ಕೊಳೆಯನ್ನು ಕಳೆದುಕೊಳ್ಳುವುದೋ, ಅಂದು ಮುಂದೆ ಕೇಳುವ, ಹಿಂದೆ ಕೇಳಿದ ಉಪದೇಶದ ಪೂರ್ತಿ ಫಲವನ್ನು ಪಡೆಯುವೆ.
ಯಾವಾಗ ನಾವು ಓದಿದ್ದು ಕೇಳಿದ್ದು ಸಾರ್ಥಕವಾಗುವುದು? ನಮ್ಮ ಬುದ್ಧಿ ಎಷ್ಟು ಕೇಳಿದರೂ ಕೂಡಾ ಪುನಃ ಗೊಂದಲದಲ್ಲೇ ಇದ್ದರೆ, ಎಷ್ಟು ಕೇಳಿಯೂ ಉಪಯೋಗವಿಲ್ಲ. ಓದುವುದರಿಂದ, ಕೇಳುವುದರಿಂದ ನಮ್ಮ ಮನಸ್ಸಿನ ಕೊಳೆ ತೊಳೆದು ಹೋಗಿ ಮನಸ್ಸು ತಿಳಿಯಾಗಬೇಕು. ಇಂತಹ ಮನಸ್ಸಿಗೆ ಎಂದೂ ದುಗುಡ, ಆತಂಕ ಇರುವುದಿಲ್ಲ. ಈ ಸ್ಥಿತಿಯಲ್ಲಿ ಕೋಪ ಬಾರದು. ಇಂತಹ ರಾಗ-ದ್ವೇಷ ರಹಿತವಾದ, ಎಂತಹ ಸಂದರ್ಭದಲ್ಲೂ ಸಮತೋಲನ ಕಳೆದುಕೊಳ್ಳದ ಮನಸ್ಸು ಬಂದಾಗ, ಓದಿದ್ದು, ಕೇಳಿದ್ದು ಸಾರ್ಥಕವಾಗುತ್ತದೆ.ಇಂತಹ ಸ್ಥಿತಿಯಲ್ಲಿ ಹಿಂದೆ ಕೇಳಿದ, ಹಾಗು ಇನ್ನು ಕೇಳುವ ಉಪದೇಶ ಪೂರ್ತಿ ಫಲವನ್ನು ಕೊಡುತ್ತದೆ.