ಇಂದಿನಿಂದ ಪ್ರೊ. ಕಬಡ್ಡಿ ಲೀಗ್ ಸಮರ ಆರಂಭ
ಇಂದಿನಿಂದ ಪ್ರೊ. ಕಬಡ್ಡಿ ಲೀಗ್ ಸಮರ ಆರಂಭ
ಕಳೆದ ಒಂದೂವರೆ ತಿಂಗಳಿನಿಂದ ಏಕದಿನ ವಿಶ್ವಕಪ್ ಹಬ್ಬದಲ್ಲಿ ತಲ್ಲೀನರಾಗಿದ್ದ ಕ್ರೀಡಾಭಿಮಾನಿಗಳಿಗೆ ಇಂದು ದೇಸಿ ಕ್ರೀಡೆಯ ಸೊಬಗನ್ನು ಸವಿಯುವ ಅವಕಾಶ ಒಲಿದಿದೆ. ಬಹು ನಿರೀಕ್ಷಿತ 10ನೇ ಆವೃತ್ತಿಯ ಪ್ರೊ. ಕಬಡ್ಡಿ ಲೀಗ್‌ಗೆ ಇಂದು ಅಹ್ಮದಾಬಾದ್‌ನಲ್ಲಿ ಚಾಲನೆ ಸಿಗಲಿದೆ. ಮುಂದಿನ ಮೂರು ತಿಂಗಳ ಕಾಲ ನಡೆಯಲಿರುವ ಈ ಲೀಗ್ ಭರ್ಜರಿ ಮನರಂಜನೆ ನೀಡುವ ಜತೆಗೆ ಸಾಕಷ್ಟು ಕುತೂಹಲ ಮೂಡಿಸಲಿದೆ. ಉದ್ಘಾಟನಾ ಪಂದ್ಯ ಗುಜರಾತ್ ಜೈಂಟ್ಸ್ & ತೆಲುಗು ಟೈಟನ್ಸ್ ನಡುವೆ ಇಂದು ನಡೆಯಲಿದೆ.
ಟೂರ್ನಿ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡ ಇತರ ತಂಡಗಳ ವಿರುದ್ಧ ಲೀಗ್ ಹಂತದಲ್ಲಿ 2 ಬಾರಿ ಆಡಲಿವೆ. ಬಹುತೇಕ ದಿನ ಎರಡೆರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ರಾತ್ರಿ 8ಕ್ಕೆ, 2ನೇ ಪಂದ್ಯ 9 ಗಂಟೆಗೆ ಆರಂಭಗೊಳ್ಳಲಿದೆ. ಟ್ರಾನ್ಸ್ ಸ್ಟೇಡಿಯಾದಿಂದ ಇಕೆಎ ಅರೆನಾದಲ್ಲಿ ಇಂದು ಪಿಕೆಎಲ್ 10ನೇ ಆವೃತ್ತಿಯ ಬ್ಲಾಕ್ ಬಸ್ಟರ್ ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ ಸೆಣಸಲಿದೆ.
ಕೋವಿಡ್ ಬಳಿಕ ಈ ಬಾರಿ ಟೂರ್ನಿ ಮತ್ತೆ ಹಳೆಯ ಮಾದರಿಯಲ್ಲಿ ನಡೆಯಲಿದ್ದು, 12 ನಗರಗಳು ಆತಿಥ್ಯ ವಹಿಸಲಿವೆ. ಸದ್ಯ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದ್ದು, 2ನೇ ವಾರ ಅಂದರೆ ಡಿ.8ರಿಂದ 13ರ ವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ಬಳಿಕ ಪುಣೆ (ಡಿ.15-ಡಿ.20), ಚೆನ್ನೈ (ಡಿ.22-27), ನೋಯ್ಡಾ (ಡಿ.29-ಜ.3), ಮುಂಬೈ (ಜ.5-10), ಜೈಪುರ (ಜ.12-17), ಹೈದರಾಬಾದ್ (ಜ.19-24), ಪಾಟ್ನಾ (ಜ.26-31), ಡೆಲ್ಲಿ (ಫೆ.2-7), ಕೋಲ್ಕತಾ(ಫೆ.9-14), ಪಂಚಕುಲ(ಫೆ.16-21) ಟೂರ್ನಿಗೆ ಆತಿಥ್ಯ ವಹಿಸಲಿವೆ.