ಕಡಬ: “ಅಪರಾಧ ಮಾಡುವ ಹೆಚ್ಚಿನ ವ್ಯಕ್ತಿಗಳು ಮಾದಕ ವಸ್ತುವಿನ ದಾಸರಾಗಿರುತ್ತಾರೆ” ಪೋಲೀಸ್ ಅಧಿಕಾರಿ ಹರೀಶ್ ಅಭಿಪ್ರಾಯ.
ಕಡಬ: “ಅಪರಾಧ ಮಾಡುವ ಹೆಚ್ಚಿನ ವ್ಯಕ್ತಿಗಳು ಮಾದಕ ವಸ್ತುವಿನ ದಾಸರಾಗಿರುತ್ತಾರೆ” ಪೋಲೀಸ್ ಅಧಿಕಾರಿ ಹರೀಶ್ ಅಭಿಪ್ರಾಯ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ರಾಮನಗರದಲ್ಲಿ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ನಡೆಯಿತು.
ಕಾರ್ಯಕ್ರಮವನ್ನು ಉಧ್ಘಾಟಿಸಿದ ಕಡಬ ಪೋಲೀಸ್ ಠಾಣೆಯ ಪೋಲೀಸ್ ಅಧಿಕಾರಿ ಹರೀಶ್ ರವರು ಮಾತನಾಡಿ ವಿಶ್ವಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಮಾದಕ ವಸ್ತುಗಳ ದುಷ್ಪರಿಣಾಮದ ತಿಳುವಳಿಕೆ ನೀಡುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಧರ್ಮಸ್ಥಳ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ನಡೆಸುವ ಹತ್ತು ಹಲವು ಜನಪಯೋಗಿ ಕಾರ್ಯಕ್ರಮಗಳಲ್ಲಿ ಇದೂ ಒಂದು. ವ್ಯಕ್ತಿಯ ದೇಹದಲ್ಲಿ ಮಧ್ಯಪಾನ ಗಾಂಜಾ, ಅಫೀಮ್ ಗಳು ಅಮಲು ನೀಡುವ ಮಾತ್ರೆಗಳು ಮನುಷ್ಯನ ದೇಹದ ಹತೋಟಿಯನ್ನು ತಪ್ಪಿಸುವುದರ ಜೊತೆಗೆ ಸಮಾಜಘಾತುಕ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸುತ್ತದೆ.
ಪೋಲೀಸ್ ಇಲಾಖೆಯ ಸರ್ವೇಕ್ಷಣೆ ಪ್ರಕಾರ ಅಪರಾಧಗಳನ್ನು ಮಾಡುವ ಅತೀ ಹೆಚ್ಚು ಪ್ರಕರಣಗಳು ಮಾದಕ ವಸ್ತುಗಳನ್ನು ಸೇವಿಸಿದ ವ್ಯಕ್ತಿಯಿಂದಲೇ ನಡೆಯುತ್ತಿರುವುದು ಕಂಡುಬರುತ್ತಿದೆ. ಕಾನೂನು ಉಲ್ಲಂಘಣಾ ಚಟುವಟಿಕೆಗಳನ್ನು ಮಾಡಲೂ ಇದು ಪ್ರೇರಣೆ ನೀಡುತ್ತದೆ .ಸಂಚಾರಿ ನಿಯಮಗಳನ್ನೂ ಸರಿಯಾಗಿ ಪಾಲಿಸುವ ಕುರಿತು ಹಾಗೂ ಪೋಕ್ಸೋ ಕಾಯಿದೆಯನ್ವಯ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ವಿಧಾನಗಳು, ಮಹಿಳಾ ಸಂರಕ್ಷಣಾ ಕಾನೂನಿನ ಅರಿವು ಮೂಡಿಸಿದರು. ಧರ್ಮಸ್ಥಳ ಯೋಜನೆಯ ಸ್ವಸಹಾಯ ಸಂಘಗಳ ಮೂಲಕ ಉತ್ತಮ ಸಂಸ್ಕಾರಯುತ ಜೀವನ ನಡೆಸುವ ಅದೆಷ್ಟೋ ಕುಟುಂಬಗಳು ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಪ್ರಯೋಜನದಿಂದಲೇ ಸಾಧ್ಯವಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶಿವಪ್ರಸಾದ್ ರೈ ಮೈಲೇರಿಯವರು ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮನಗರ ಒಕ್ಕೂಟದ ಅಧ್ಯಕ್ಷೆ ರಝೀಯಾ ವಹಿಸಿದ್ದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಭವ್ಯ ,ಪೋಲೀಸ್ ಅಧಿಕಾರಿ ಸರಸ್ವತಿ ಹಾಗೂ ಒಕ್ಕೂಟದ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಮಾತೃಶ್ರೀ ಸಂಘದ ಸದಸ್ಯೆ ಅನಿತಾ ಸ್ವಾಗತಿಸಿ ಸೇವಾಪ್ರತಿನಿಧಿ ಜಯಲಕ್ಷ್ಮಿ ವಂದಿಸಿದರು.
ರಾಮನಗರ ಒಕ್ಕೂಟದ ಸದಸ್ಯರುಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು.