• 4 ನವೆಂಬರ್ 2024

ಗಿರಿಕನ್ಯೆ ಮುನಿದರೆ…

 ಗಿರಿಕನ್ಯೆ ಮುನಿದರೆ…
Digiqole Ad

 

ಗಿರಿಕನ್ಯೆ ಮುನಿದರೆ…

ಲೇಖಕರು: ಎಂ ರಾಮ ಈಶ್ವರಮಂಗಲ

( ಖ್ಯಾತ ನಾಟಕ ನಿರ್ದೇಶಕ,ರಂಗ ಚಾಣಕ್ಯ ಬಿರುದಾಂಕಿತರು)

ಭೂಮಿಯ ಸಮತೋಲನವನ್ನು ಕಾಪಾಡಲು ಬೆಟ್ಟ ಗುಡ್ಡಗಳನ್ನು. ಆ ದೇವರೇ ಸೃಷ್ಟಿಸಿದ.. ಎಂದು ಹಿರಿಯರು ಹೇಳುತ್ತಿದ್ದರು… ಮಣ್ಣಿನ ಯಾವುದೇ ಕೆಲಸವನ್ನು ಜನರ ಕೈಕೆಲಸದಿಂದಲೇ ಮಾಡುತ್ತಿದ್ದರು.. ಊರಲ್ಲಿ ತೋಟಕ್ಕೆ ಮಣ್ಣು ಹಿಡಿಯುವುದು ಅಂತ ಒಂದು ಕೆಲಸ ಇತ್ತು.. ಇದಕ್ಕೆ ಮಣ್ಣು ಎತ್ತರದ ಬರೆ (ಧರೆ) ಯಿಂದ ಮಣ್ಣು ಹೋರುವುದು.. ಆಗ ಅದರ ಕಾಂಟ್ರಾಕ್ಟ್‌ರಿಗೆ. ಕೋಲು ಲೆಕ್ಕ (ಮಧೂರು ಕೋಲು, ಪಯ್ಯನೂರು ಕೋಲು) ಮಣ್ಣು ಅಗೆಯುತ್ತ ಹೋದಂತ್ತೆ ಅಲ್ಲೊಂದು ಲೆಕ್ಕಕ್ಕೆ ಮಣ್ಣಿನ ಗುಂಪ್ಪೆ.. ಅಂದರೆ ಒಂದು ರೌಂಡ್ ಫಿಲ್ಲರಿನ ಹಾಗೆ ಲೆಕ್ಕಕ್ಕೆ ಇಡುತ್ತಿದ್ದರು.. ಹಾಗೆನೇ ಎಂಟು ಕೋಲು ಬರೆ ಇದ್ದರೆ ಅರ್ಧದಿಂದ ಎರಡು ಕೋಲು ಅಗಲ ತಟ್ಟು ಬಿಟ್ಟು ನಂತರ ಮಣ್ಣು ತೆಗೆಯುತಿದ್ದರು.. ಹಾರೆ, ಪಿಕ್ಕಾಸು, ಸಬ್ಬಲ್, ಇಷ್ಟೆ ಅವರಿಗೆ ಕೆಲಸಕ್ಕೆ ಬೇಕಾದ ಸಾಧನ..
ಎಂತಾ ಜಡಿ ಮಳೆ ಬಂದರೂ ಬರೆ ಜರಿದು ಬಿದ್ದದ್ದು ಬಹಳ ಕಡಿಮೆ… ಮಳೆ ಆವಾಗಲೂ ಈಗಿನಂತೆ ಬರುತ್ತಿತ್ತು.. ಮಳೆ ನೀರು ಹೋಗಲು ಅಷ್ಟೇ ಅಗಲ ಆಳದ ಚರಂಡಿಗಳು ಇದ್ದವು.. ದಿನ ಕಳೆದಂತೆ.. ಜೆಸಿಬಿ, ಹಿಟಾಚಿ, ಬರತೊಡಗಿದವು.. ಜನ ಎರಡು ತಿಂಗಳು ಕೆಲಸ ಮಾಡುವುದನ್ನು.. ಒಂದು ದಿನದಲ್ಲೇ ಯಂತ್ರಗಳು ಮಾಡಿ ಮುಗಿಸತೊಡಗಿದವು.. ಹಿಂದೆ ಮಾರ್ಗದ ಕೆಲಸಕ್ಕೂ ಏಳೆಂಟು ಜನರ ಗ್ಯಾಂಗ್ ಇತ್ತು.. ಮಾರ್ಗದ ಕೆಲಸವನ್ನು ಈ ಜನಗಳೇ ಮಾಡಿ ಬಿಡುತಿದ್ದರು.. ಅಲ್ಲಿಗೂ.. ಈ ಯಂತ್ರಗಳ ಆಗಮನದಿಂದ ಹತ್ತು ಅಡಿ ಅಗಲದ ಡಾಂಬರು ರಸ್ತೆಗಳು ಬಹು ಬೇಗನೆ ಆಗತೊಡಗಿದವು..
ಈಗ ಒಂದಲ್ಲ ನಾಲ್ಕು ರಸ್ತೆಗಳು.. ಎತ್ತರದ ಬೆಟ್ಟವನ್ನು ಕಡಿದು. ಸಮತಟ್ಟು ಮಾಡಿ ಒಂದು ಕಡೆಯಿಂದ ನೋಡಿದರೆ ಮೈಲುಗಟ್ಟಲೆ ದೂರಕ್ಕು ಕಾಣುವ ರಸ್ತೆಗಳು.. ಈಗಿನವರಿಗೆ ಬಹುಬೇಗನೆ ಕೆಲಸ ಮುಗಿಸಿ ಕೊಡಬೇಕು.. ಇಲ್ಲಾಂದ್ರೆ ನೋಡಿ ಟ್ರೋಲ್ ಪೇಜಲ್ಲಿ ರಾರಾಜಿಸುತ್ತಿವೆ.. ಕೆಲಸದ ಅನುಭವ ಇಲ್ಲದವನೂ ಬಾಯಿಗೆ ಬಂದಂತೆ ಬೈಯಲು ಶುರು ಮಾಡುತ್ತಾನೆ.. ತಮ್ಮ ಮನೆಯ ಕೆಲಸ ಹತ್ತು ವರ್ಷವಾದರೂ ಕಂಪ್ಲೀಟ್ ಆಗದೆ ಕೊಳೆಯುತ್ತಾ ಇದ್ದರು ಅದು ಅವನಿಗೆ ಚಿಂತೆಯಿಲ್ಲ.. ರಸ್ತೆ ಕಾಮಗಾರಿಗಳು ಮಾತ್ರ ಬಲು ಬೇಗನೆ ಆಗಿಬಿಡಬೇಕು.. ಆಗದೆ ಇದ್ದರೆ ಅವನಿಗೆ ಹೋಗಲು ಬರಲು ದಾರಿಯೆ ಇಲ್ಲದವನಂತ್ತೆ ಅರಚಾಟ…
ಎಲ್ಲಾ ಆತುರ.. ಬೇಗ ಕೆಲಸ ಮುಗಿಸಿ ಬಿಡುವಂತೆ ಮೇಲಿನವರಿಗೆ ಒತ್ತಡ… ನಾನು ಮೊನ್ನೆ ಕೇರಳ ಕಣ್ಣೂರು ಕಡೆ ಪ್ರಯಾಣ ಮಾಡುವಾಗ ನೋಡಿದ್ದು.. ರೋಡಿನ ಕೆಲಸ.. ದೊಡ್ಡ ದೊಡ್ಡ ಗುಡ್ಡೆಗಳು ನೆಲಸಮ… ಅದೂ ಸಧ್ಯದಲ್ಲೇ ಜರಿದು ಬೀಳುವಂತಹ ಬರೆಗಳು .. ಹಿಂದೆ ಎತ್ತಿನ ಬಂಡಿಗಳೇ ಗುಡ್ಡದಾರಿ ಏರಿಸಿಕೊಂಡು ಸಂಚಾರ ಮಾಡುತಿದ್ದವು.. ಈಗಿನ ಆಧುನಿಕ ವಾಹನಗಳಿಗೆ ಸಂಚರಿಸಲು ಮಾತ್ರ ಕಷ್ಟ.. ಅದಕ್ಕಾಗಿಯೇ ಗುಡ್ಡ ತೆಗೆದು ನೆಲಸಮದ ರಸ್ತೆ ನಿರ್ಮಾಣ ಆಗಿರಲು ಬಹುದು.. ಗುಡ್ಡದ ಆಚೆ ಈಚೆ ಬೇರೆಯವರ ಜಾಗದ ಬೇಲಿ ಇದ್ದರೆ ಬೇಲಿಯ ಅಡಿಯಿಂದಲೇ ಮಣ್ಣು ತೆಗೆದು ಒಂದೇ ಸಮವಾಗಿ ಕೆಳಗಿನ ತನಕ ಮಾಡಿ ಬಿಡುತ್ತಾರೆ.. ಜೆಸಿಬಿ ಕೊಕ್ಕೆ ಹಾಕಿ ಮಣ್ಣು ತೆಗೆಯುವಾಗ ಕೊಕ್ಕೆ ಹಾಕಿದ ಜಾಗದಿಂದ ಸಾಧಾರಣ ಎಂಟು ಅಡಿ ದೂರದ ವರೆಗೂ ಬಿರುಕು ಬಿಡುತ್ತದೆ.. ಮಳೆಗಾಲದಲ್ಲಿ ಮಳೆನೀರು ಆ ಬಿರುಕುಗಳಲ್ಲಿ ಸೇರಿ..ಮರ ಕಲ್ಲು ಬಂಡೆ ಸಮೇತ ರಸ್ತೆ ಮೇಲೆ … ಗುಡ್ಡ ಜಾರಿದಾಗ ಯಾರನ್ನು ದೂರುವುದು..? ಮಣ್ಣು ಅಗೆದ ಜೆಸಿಬಿಯವನನ್ನಾ..ಅಥವ ಅದರ ಕಾಂಟ್ರಕ್ಟರನ್ನಾ..? ಇಲ್ಲಾ ಇಂಜಿನಿಯರನ್ನಾ..? ಯಾರನ್ನೂ ದೂರಿ ಪ್ರಯೋಜನವಿಲ್ಲ.. ರಸ್ತೆಗಳ ಪ್ರಗತಿ ಬೇಕು ಆದರೆ ಅತೀ ವೇಗದ ಪ್ರಗತಿಯಿಂದ ಅಪಾಯ ತಪ್ಪಿದಲ್ಲ.. ಕೆಲವರಿಗೆ ಒಂದು ಅಭ್ಯಾಸ ಉಂಟು.. ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿ ಹಣ ಮಾಡಿದ ಎಂದು.. ಆ ಗುತ್ತಿಗೆದಾರನ ಕುತ್ತಿಗೆ ಹಿಸುಕುವವರು ಮೇಲಿಂದಲೇ ಇದ್ದಾರೆ.. ಅವರ ಕಿಸೆ ತುಂಬಿಸಿಕೊಂಡು ಬಂದರೆ ಮಾತ್ರ ಅವನಿಗೆ ಬಿಲ್ಲು ಪಾಸು.. ಊರಿನ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಇಪ್ಪತ್ತು ಸಾವಿರದ… ಕೆಲಸ ಇದ್ದರು ಕೂಡ ವಾರ್ಡ್ ಮೆಂಬರಿಂದ ಹಿಡಿದು.. ಪಂಚಾಯತ್ ಇಂಜಿನಿಯರ್ ತನಕ ಪಾಲು ಕೊಡಬೇಕು.. ಇಷ್ಟೆಲ್ಲಾ ಕೊಟ್ಟು ಇಪ್ಪತ್ತರಲ್ಲಿ ಹದಿಮೂರು ಸಾವಿರ ಉಳಿಸಿ ಅದರಲ್ಲಿ ಇಪ್ಪತ್ತು ಸಾವಿರದ ವೆಚ್ಚದ ಕೆಲಸ ಮಾಡಿ ಮುಗಿಸಬೇಕು.. ಗುತ್ತಿಗೆದಾರ ಆವಾಗ ಕಳಪೆ ಮಾಡದೆ ಕೈಯಿಂದ ಹಣ ಹಾಕಿ ಕೆಲಸ ಮಾಡಲು ಸಾಧ್ಯವೇ.. ಇನ್ನು ಜಿಲ್ಲಾ ಪಂಚಾಯತ್,ಕೇಳುವುದೇ ಬೇಡ.. ಒಂದು ಕಂತಿನ ಬಿಲ್ಲು ಪಾವತಿಗೆ ಇಂಜಿನಿಯರ ಒಂದು ಸಹಿ ಹಾಕಿಸಿಕೊಳ್ಳಲು ಎರಡು ಮೂರು ದಿನ ಆಫೀಸಿನ ಎದುರು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದು ಕುಳಿತುಕೊಳ್ಳಬೇಕು.. ಲಂಚ ಕೊಟ್ಟ ನಂತರವೇ ಸಹಿ.. ಗುತ್ತಿಗೆದಾರರಿಗೆ ಈ ಅನುಭವ ಆಗಿರಬಹುದು..
ಈ ವಿಷಯ ಬಿಟ್ಟು ಬಿಡುವ ಅಲ್ವಾ.. .. ನಾವು ಪುನಃ ಗುಡ್ಡದ ರಸ್ತೆ ಕಡೆಗೆ ಬರುವ.. ಅಲ್ಲಾ. ಈ ಗುಡ್ಡವನ್ನು ನೆಲಸಮ ಮಾಡದೆ ರಸ್ತೆ ಆಗುವುದಿಲ್ಲವೇ.. ರಸ್ತೆಯೂ ವಾಟರ್ ಲೆವೆಲ್‌ನಂತೆ ಲೆವೆಲ್ ಆಗಿರಬೇಕಾ… ಇನ್ನು ಪೇಟೆಯ ಕತೆ… ಈ ಸಲ ಹತ್ತು ಅಡಿ ಆಳ ಅಗೆದು ರಸ್ತೆ ಮಾಡಿದರೆ, ಮರುವರ್ಷ ಅದನ್ನೇ ಅಗೆದು ಇಪ್ಪತ್ತು ಅಡಿ ಆಳ ಮಾಡಿ ಅಲ್ಲಿಂದಲೇ ಜಲ್ಲಿ ತುಂಬಿಸಿಕೊಂಡು ಕಾಂಕ್ರೀಟ್ .. ಫ್ಲೈ ಓವರ್‌ಗಾಗಿ ದೊಡ್ಡ ಬೀಮ ಗಾತ್ರದ ಫಿಲ್ಲರುಗಳು… ಆ ಒಂದು ಫಿಲ್ಲರಿನ ಕಾಂಕ್ರೀಟಿಂದ ಹಳ್ಳಿಯ ಕೆಸರಿನಿಂದ ಹದಗೆಟ್ಟ ರಸ್ತೆಗೆ ನೂರು ಮೀಟರಿಗಾದರು ಕಾಂಕ್ರೀಟ್ ಹಾಕಬಹುದು.. ಕೆಲವು ಕಡೆ ಹಳ್ಳಿಗಳಲ್ಲಿ ಸರಿಯಾದ ರಸ್ತೆಗಳು ಇಲ್ಲದೆ ಜನ ನರಕ ಬರುತ್ತಿದ್ದಾರೆ.. ಯಾರೇ. ಗೆದ್ದು ಬಂದರು ಅವನ ಮೊದಲ ಕೆಲಸ ಪೇಟೆಯ ರಸ್ತೆಯ ಕಾಮಗಾರಿ.. ಪೇಟೆ ಮಾತ್ರ ಅವನ ಕಣ್ಣಿಗೆ ಬೀಳೊದು.. ರಸ್ತೆ ಗಟ್ಟಿಮುಟ್ಟಾಗಿ ಇದ್ದರೂ ಅದನ್ನೇ ಅಗೆದು ಅಗೆದು ಅಲ್ಲಿಗೇ ಕಾಂಕ್ರೀಟ್… ಹಳ್ಳಿ ಯಾವತ್ತಿಗೂ ಮರದ ತಾಯಿಬೇರು ಇದ್ದಂತೆ.. ತಾಯಿಬೇರು ಸರಿಯಾಗಿ ಇದ್ದರೆ ಮರದ ರೆಂಬೆ ಕೊಂಬೆ ಚಿಗುರು ಎಲ್ಲವೂ ಸೊಂಪಾಗಿ ಇರುವುದು.. ಪೇಟೆ ರೆಂಬೆ ಕೊಂಬೆಯಂತ್ತೆ.. ಅಲ್ವೇ..
ಏನೇ ಆಗಲಿ.. ಆದರೆ ಈವಾಗಿನ ರಸ್ತೆ ಅಗಲೀಕರಣದಲ್ಲಿ ಬೆಟ್ಟ ಗುಡ್ಡಗಳು ಮಾಯ.. ನೆರಳು ನೀಡುವ ಮರಗಳೂ ಮಾಯ.. ಭತ್ತ ಬೆಳೆಯುವ ಗದ್ದೆ, ತೋಟಗಳು ಮಣ್ಣಿನ ಅಡಿಗೆ.. ಕರಿ ಕಲ್ಲಿನ ಬೆಟ್ಟಗಳು ಜಲ್ಲಿಯ ರೂಪವಾಗಿ.. ಕಾಣೆಯಾಗುತಿವೆ… ಕಲ್ಲು ಒಡೆಯಲು ಸಿಡಿಮದ್ದು ಹಾಕಿ ನೆಲವೇ ಅದುರಿ ಹೋಗುತ್ತಿವೆ.. ಇಷ್ಟೆಲ ಭೂಮಿಯನ್ನು ಗುದ್ದಿ ಗುದ್ದಿ ..ಭೂಮಿ ಬಾಯಿ ಬಿಟ್ಟಾಗ.. ತಲೆಮೇಲೆ ಕೈಹೊತ್ತು ಬೊಬ್ಬೆ .. ಭೂಮಿ ತಾಯಿ ಮುನಿದರೆ ಅವಳ ಎದುರು ಯಾರು ಇಲ್ಲ..
ಒಂದರ ಸೃಷ್ಟಿಗೆ ಹಲವಾರು ನಾಶಗಳು..
ಪ್ರಗತಿಯೊಂದಿಗೆ ಅವನತಿಯ ಪಯಾಣ…

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ