‘ಕಣಿಪುರ’ದ ಎಂ.ನಾ.ಚಂಬಲ್ತಿಮಾರ್ ಅವರಿಗೆ 4ರಂದು ಚಿಕ್ಕಮಗಳೂರಲ್ಲಿ ಗೌರವ ಸನ್ಮಾನ
‘ಕಣಿಪುರ’ದ ಎಂ.ನಾ.ಚಂಬಲ್ತಿಮಾರ್ ಅವರಿಗೆ 4ರಂದು ಚಿಕ್ಕಮಗಳೂರಲ್ಲಿ ಗೌರವ ಸನ್ಮಾನ
ಪತ್ರಕರ್ತ, ಲೇಖಕ, ಮತ್ತು ಸಾಂಸ್ಕೃತಿಕ ಕಲಾವಲಯದ ಬಹುಮುಖೀ ಪ್ರತಿಭೆಯಾಗಿ ಜನಪ್ರಿಯತೆ ಪಡೆದಿರುವ ಗಡಿನಾಡು ಕಾಸರಗೋಡಿನ ಸೃಜನಶೀಲ ಬರಹಗಾರ ಎಂ.ನಾ. ಚಂಬಲ್ತಿಮಾರ್ ಅವರಿಗೆ ಆ.4ರಂದು ಭಾನುವಾರ ಚಿಕ್ಕಮಗಳೂರಲ್ಲಿ ಗೌರವ ಸನ್ಮಾನ ನಡೆಯಲಿದೆ.
ಚಿಕ್ಕಮಗಳೂರಿನ “ಯಕ್ಷಸಿರಿ ನಾಟ್ಯವೃಂದ”, ಕಲ್ಕಟ್ಟೆ ಪುಸ್ತಕಮನೆ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಮತ್ತು ಹರಿ ಓಂ ಬಿಲ್ಡರ್ಸ್ ಸಂಯುಕ್ತವಾಗಿ ಆಯೋಜಿಸಿದ ಯಕ್ಷಗಾನೀಯ ಸಮಾರಂಭದಲ್ಲಿ ಗಡಿನಾಡ ಸಾಧಕನಿಗೆ ಗೌರವ ಸಲ್ಲುತ್ತಿದೆ.
ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ತವರುನೆಲ ಕುಂಬ್ಳೆಯಿಂದ ಯಕ್ಷಗಾನ ಕಲಾಸಂಸ್ಕೃತಿಗೆ ಸೃಜನಶೀಲ, ವೃತ್ತಿಪರತೆಯ ಮಾಧ್ಯಮ “ಕಣಿಪುರ” ಮಾಸಪತ್ರಿಕೆಯನ್ನು ನೀಡಿದ್ದಲ್ಲದೇ, ಕಲೆಗೆ ನೀಡಿದ ಸಮಗ್ರ ಕೊಡುಗೆ ಮಾನಿಸಿ ಈ ಗೌರವ ನೀಡಲಾಗುತ್ತಿದೆ.ಆ.4ರಂದು ಆದಿತ್ಯವಾರ ಸಂಜೆ 4ಕ್ಕೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕಾರ್ಯಕ್ರಮ ಜರಗಲಿದೆ.
ಸ್ಥಾನೀಯ ಶಾಸಕ ಎಚ್. ಡಿ. ತಮ್ಮಯ್ಯ ಉದ್ಘಾಟಿಸುವರು. ನಗರದ ವೈದ್ಯ ಡಾ. ಜೆ.ಪಿ ಕೃಷ್ಣೇಗೌಡ ಸನ್ಮಾನ ಗೌರವ ಸಲ್ಲಿಸುವರು. ಕವಿ, ಗಾಯಕ ನಾಗರಾಜ ರಾವ್ ಕಲ್ಕಟ್ಟೆ ಉಪಸ್ಥಿತರಿರು. ಬಳಿಕ ಯಕ್ಷಸಿರಿ ನಾಟ್ಯವೃಂದದ ನೇತೃತ್ವದಲ್ಲಿ, ಚಿಕ್ಕಮಗಳೂರು ನಗರದ 9ವನಿತೆಯರು ಭಾಗವಹಿಸುವ “ದೇವಿ ಮಹಾತ್ಮೆ” ಎಂಬ ತೆಂಕಣ ಯಕ್ಷಗಾನ ಪ್ರದರ್ಶನವಾಗಲಿದೆ.
ಪತ್ರಕರ್ತ, ಲೇಖಕ ಎಂ.ನಾ. ಚಂಬಲ್ತಿಮಾರ್ ಅವರು ಸುಮಾರು 3ದಶಕಗಳಿಂದ ಗಡಿನಾಡಲ್ಲಿ ಬರಹಗಾರನಾಗಿ ಸಕ್ರಿಯರಿದ್ದು ಕಳೆದ 14ವರ್ಷಗಳಿಂದ ಏಕಾಂಗಿಯಾಗಿ ‘ಕಣಿಪುರ’ ಮಾಸಪತ್ರಿಕೆ ರೂಪಿಸಿ, ಪ್ರಕಟಿಸುತ್ತಾರೆ.ಶೀಘ್ರವೇ ಇದು ಇ-ಪೇಪರ್ ಮತ್ತು ಡಿಜಿಟಲ್ ಸುದ್ದಿಜಾಲ ಸ್ವರೂಪವನ್ನು ಪಡೆದು ಜಾಗತಿಕ ಮಟ್ಟಕ್ಕೆ ವಿಸ್ತರಿಸಲಿದೆ.