ಕೇರಳ -ಕರ್ನಾಟಕ, ಕೃಷಿ, ಶಿಕ್ಷಣ, ಕನ್ನಡ ಸಂಸ್ಕೃತಿ ಸಮ್ಮೇಳನ, ಕನ್ನಡ ಭವನದಲ್ಲಿ ಸಂಪನ್ನ.
ಕೇರಳ -ಕರ್ನಾಟಕ, ಕೃಷಿ, ಶಿಕ್ಷಣ, ಕನ್ನಡ ಸಂಸ್ಕೃತಿ ಸಮ್ಮೇಳನ, ಕನ್ನಡ ಭವನದಲ್ಲಿ ಸಂಪನ್ನ.
ಬದಿಯಡ್ಕ : ಕೃಷಿಕರು ದೇಶದ ಕಾಯಕಯೋಗಿ – ಡಾ. ಮಾನಸ ಮೈಸೂರು ‘ಯಾರು ಏನೇ ಹೇಳಿದರೂ ಕೃಷಿಕರು ದೇಶದ ಕಾಯಕ ಯೋಗಿಗಳು. ಕೃಷಿಕರು ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಾರೆ. ದೇಶದ ಪ್ರಗತಿಯಲ್ಲಿ ಅವರ ಕೊಡುಗೆ ಮಹತ್ವ ಪಡೆದಿದೆ’ ಎಂದು ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ಹೇಳಿದರು. ಅವರು ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯಲ್ಲಿ ಭಾನುವಾರ ನಡೆದ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ, ಸಂಸ್ಕೃತಿ ಸಮ್ಮೇಳನ-2024ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ‘ಸಾಹಿತ್ಯ, ಶಿಕ್ಷಣ, ಕೃಷಿ, ಸಂಸ್ಕೃತಿ ಎಂಬ ಪ್ರಧಾನ ಅಂಶಗಳನ್ನು ಸೇರಿಸಿಕೊಂಡು ನಡೆಯುವ ಈ ಸಮ್ಮೇಳನವು ಯಾವ ಅಖಿಲ ಭಾರತ ಮಟ್ಟದ ಸಮ್ಮೇಳನಕ್ಕೂ ಕಡಿಮೆಯಲ್ಲ’ ಎಂದು ಅವರು ಶ್ಲಾಘಿಸಿದರು. ಶಿಕ್ಷಣ ತಜ್ಞ ವಿ. ಬಿ ಕುಳಮರ್ವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿ. ಬಿ ಕುಳಮರ್ವ, ಲಲಿತಾಲಕ್ಷ್ಮಿ ಕುಳಮರ್ವ ದಂಪತಿಗೆ ಸ್ಪಂದನ ಶಿಕ್ಷಣ ಸಿರಿ ಸನ್ಮಾನ, ಕೆ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ದಂಪತಿಗೆ ಕನ್ನಡ ನುಡಿಸಿರಿ ದಂಪತಿ ಸನ್ಮಾನ, ಪುಟ್ಟಸ್ವಾಮಿ ಹೊಳೇನರಸೀಪುರ, ಎಚ್. ಎಂ. ರಮೇಶ್ ಚನ್ನರಾಯಪಟ್ಟಣ ಅವರಿಗೆ ಸ್ಪಂದನ ಕೃಷಿ ಸಿರಿ ಪ್ರಶಸ್ತಿ, ಸಾಹಿತಿಗಳಾದ ಕೆ ನರಸಿಂಹ ಭಟ್ ಏತಡ್ಕ, ವಿರಾಜ್ ಅಡೂರು ಅವರಿಗೆ ಸಾಹಿತ್ಯ ಸೇವಾ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಭವನ ಗ್ರಂಥಾಲಯದ ವತಿಯಿಂದ ನೀಡುವ ಕನ್ನಡ ಪಯಸ್ವಿನಿ ಪ್ರಶಸ್ತಿ-2024ನ್ನು ಭಾಗ್ಯಲಕ್ಷ್ಮಿ ವಿ ಹಂಪಿ, ಸುಂದರೇಶ್ ಡಿ ಉಡುವಾರೆ, ಆಶಾಕಿರಣ ಬೇಲೂರು, ಗಿರಿತೇಜ ತೇಜೋಮಯ ಹಾಸನ, ಜಿ. ಎಸ್ ಕಲಾವತಿ ಮಧುಸೂದನ, ಮಂಗಳಾ ನಂದಕುಮಾರ್, ಲಾವಣ್ಯ ಶೇರುಗಾರು ಉಪ್ಪಿನಕುದ್ರು, ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು ಅವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಧ್ವಜಾರೋಹಣ, ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ, ಜ್ಯೋತಿ ಹಾಸನ ಮತ್ತು ತಂಡದಿಂದ ನಾಡಗೀತೆ, ಕೃಷ್ಣಿಮಾ ಭುವನೇಶ್ ಕೂಡ್ಲು ಅವರಿಂದ ಸ್ವಾಗತ ನೃತ್ಯ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯ್ಯಕಟ್ಟೆ, ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶಿಕ್ಷಕಿ ಕೆ ಟಿ ಶ್ರೀಮತಿ, ನಿವೃತ್ತ ಪ್ರಾಂಶುಪಾಲ ಪ್ರೋ. ಶ್ರೀನಾಥ್ ಇದ್ದರು. ಜಿ ಎಸ್ ಕಲಾವತಿ ಮಧುಸೂದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ವಾಮನ್ ರಾವ್ ಬೇಕಲ್ ಸ್ವಾಗತಿಸಿದರು. ನರಸಿಂಹ ಭಟ್ ಏತಡ್ಕ ವಂದಿಸಿದರು. ವಿರಾಜ್ ಅಡೂರು ನಿರೂಪಿಸಿದರು.