ಪಾಂಗೋಡು ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಅ.3ರಿಂದ
ಪಾಂಗೋಡು ಶ್ರೀ ದುರ್ಗಾ
ಪರಮೇಶ್ವರೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಅ.3ರಿಂದ
ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು 2024 ಅಕ್ಟೋಬರ್ 3ರಿಂದ ಅಕ್ಟೋಬರ್ 12ರ ತನಕ ಹಾರ್ನಾಡು ಪದ್ಮನಾಭ ತಂತ್ತಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅ.3ರಂದು ಬೆಳಗ್ಗೆ 10 ಗಂಟೆಗೆ ಶ್ರೀಕ್ಷೇತ್ರದ ಪಾತ್ರಿಗಳಾದ ಪಾಂಗೋಡು ಪ್ರವೀಣ ನಾಯಕ್ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡುವರು. ಕಾಸರಗೋಡಿನ ಮಲ್ಲಿಕಾರ್ಜುನ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಕ್ಯಾ ಗಣೇಶ ಕಾರ್ಣಿಕ್ ಉದ್ಘಾಟಿಸುವರು. ಕೋಟೆ ವೀರಾಂಜನೇಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ. ಅನಂತ ಕಾಮತ್ ಗೌರವ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಉದ್ಯಮಿ ರಾಮ್ ಪ್ರಸಾದ್, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್ ಸುಬ್ಬಯ್ಯಕಟ್ಟೆ, ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಧಾರ್ಮಿಕ ಮುಖಂಡರಾದ ಅರಿಬೈಲ್ ಗೋಪಾಲ ಶೆಟ್ಟಿ, ಶ್ರೀಧರ ಶೆಟ್ಟಿ ಮುಟ್ಟಂ, ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಶಿಕ್ಷಣ ತಜ್ಞ ವಿಶಾಲಾಕ್ಷ ಪುತ್ರಕಳ, ಪತ್ರಕರ್ತರಾದ ಪ್ರದೀಪ್ ಬೇಕಲ್, ಗಂಗಾಧರ ತೆಕ್ಕೇಮೂಲೆ, ಪಿ.ಕೆ ಜಗನ್ನಾಥ ಶೆಟ್ಟಿ, ಜಯ ಮಣಿಯಂಪಾರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಂತರ ಸಂಕೀರ್ತನಾ ಸಾಮ್ರಾಟ ಜಯಾನಂದ ಕುಮಾರ್ ಹೊಸದುರ್ಗ ಅವರ ಸಾರಥ್ಯದಲ್ಲಿ 11ನೇ ವರ್ಷದ ದಸರಾ ಸಂಕೀರ್ತನಾ ದಶಾಹ ಉದ್ಘಾಟನೆಯಾಗಲಿದೆ. ಧಾರ್ಮಿಕ ಮುಂದಾಳು ಸವಿತಾ ಟೀಚರ್ ಶುಭಾಶಂಸನೆ ಮಾಡುವರು. ಉತ್ಸವದ ಅಂಗವಾಗಿ ಪ್ರತೀದಿನ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅ.6ರಂದು ಮಧ್ಯಾಹ್ನ 1.30ರಿಂದ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಕಾಸರಗೋಡು ದಸರಾ ಸಾಹಿತ್ಯ, ಸಾಂಸ್ಕೃತಿಕ ಉತ್ಸವ-2024 ನಡೆಯಲಿದೆ. ಅ.10ರಂದು ಸಂಜೆ 7ರಿಂದ ಬದಿಯಡ್ಕದ ವಸಂತ ಬಾರಡ್ಕ ಮತ್ತು ಬಳಗದವರಿಂದ ಸಂಗೀತ ರಸಮಂಜರಿ, ಅ. 11ರಂದು ಸಂಜೆ 7ರಿಂದ ಡಾ. ವಾಣಿಶ್ರೀ ಕಾಸರಗೋಡು ಮತ್ತು ಗುರುರಾಜ್ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಂಘದ ಸದಸ್ಯರಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ನಡೆಯಲಿದೆ.