ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ ನುಳಿಯಾಲು ರಘುನಾಥ ರೈ ನಿಧನ:
ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ ನುಳಿಯಾಲು ರಘುನಾಥ ರೈ ನಿಧನ:
ಪುತ್ತೂರು: ನಿವೃತ್ತ ಶಿಕ್ಷಕ, ಹಿರಿಯ ಸಾಹಿತಿ, ಯಕ್ಷಗಾನ ವೇಷಧಾರಿ,ಅರ್ಥಧಾರಿ ನುಳಿಯಾಲು ರಘುನಾಥ ರೈ (80) ನಿನ್ನೆ ರಾತ್ರಿ ನುಳಿಯಾಲು ಸ್ವಗೃಹದಲ್ಲಿ ನಿಧನರಾದರು. ಎರಡು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ರಘುನಾಥ ರೈ ಅವರು ಸುಳ್ಯ ಪದವು ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 1993ರಲ್ಲಿ ಇವರಿಗೆ ‘ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’, 2015ರಲ್ಲಿ ‘ಎನ್. ಎಸ್ ಕಿಲ್ಲೆ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿ ಸನ್ಮಾನಗಳು ಲಭಿಸಿದೆ.
2018ರಲ್ಲಿ ಪುತ್ತೂರಿನಲ್ಲಿ ನಡೆದ ಕರ್ನಾಟಕ ಏಕೀಕರಣ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ, ಚೂರಿಪದವು ಶಾಲೆಯಲ್ಲಿ ನಡೆದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಗಡಿನಾಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದವರು ಹಲವು ಕಡೆ ಧಾರ್ಮಿಕ ಮತ್ತು ಸಾಹಿತ್ಯ ಉಪನ್ಯಾಸಗಳನ್ನು ನೀಡಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಬದುಕಿನ ಬಗ್ಗೆ ಅನೇಕ ಲೇಖನಗಳನ್ನು ಪತ್ರಿಕೆಗಳಿಗೆ ಬರೆದಿದ್ದಾರೆ.ಯಕ್ಷಗಾನ ಮತ್ತು ಕಾವ್ಯ ವಾಚನದಲ್ಲೂ ಹೆಸರು ಪಡೆದಿದ್ದಾರೆ.
ಮೃತರು ಪತ್ನಿ, ಮಕ್ಕಳು, ಮೊಮ್ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.