ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ !
ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ !
ಮಂಗಳೂರು: ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸು ವವರಿಗೆ ಖಾಸಗಿ ಬಸ್‌ನಲ್ಲಿ ಅತೀ ಹೆಚ್ಚಿನ ದರ 3,500 ರೂ. ಇದೆ.
ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಕೆ ಮಾಮೂಲಿಯಾಗಿದೆ. ಈ ಹಿಂದೆ ಗೌರಿ-ಗಣಪತಿ ಹಬ್ಬದ ಸಮಯದಲ್ಲೂ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಇದೀಗ ನವರಾತ್ರಿ ಹಬ್ಬಕ್ಕೂ ದರ ಏರಿಕೆ ಮುಂದುವರಿದಿದೆ.
ವಾರಾಂತ್ಯ ದಲ್ಲಿ ಬಂದಿರುವು ದರಿಂದ ಬೆಂಗಳೂರಿನಿಂದ ವಿವಿಧೆಡೆಗೆ ಪ್ರಯಾಣ ಬೆಳೆಸುವವರ ಸಂಖ್ಯೆಯೂ ಅಧಿಕವಾಗಿದೆ. ಇದು ಕೂಡ ಟಿಕೆಟ್ ದರ ಹೆಚ್ಚಳಕ್ಕೆ ಕಾರಣವಾಗಿದೆ. ಅ.10ರಿಂದಲೇ ಕೆಲ ಖಾಸಗಿ ಬಸ್‌ಗಳ ಟಿಕೆಟ್ ದರಲ್ಲಿ ಏರಿಕೆಯಾಗಿದ್ದು ಹಬ್ಬ ಮುಗಿದು ವಾಪಸ್ ಬರುವವರೆಗೂ ದರ ಏರಿಕೆ ಬಿಸಿ ಮುಟ್ಟಲಿದೆ.
ಮಂಗಳೂರು ದಸರಾ ಕಣ್ತುಂಬಿಕೊಳ್ಳಲು ಸಾಮಾನ್ಯವಾಗಿ ದೂರ ದೂರಿನಿಂದ ಸಾರ್ವಜನಿಕರು ಆಗಮಿಸುತ್ತಾರೆ. ಈ ಬಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ. 3ರಿಂದ 14ರ ವರೆಗೆ ಮಂಗಳೂರು ದಸರಾ ನಡೆಯಲಿದೆ. ಅ. 13ರಂದು ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಜರಗಲಿದೆ. ಈ ಬಾರಿ ಅ. 12 ಎರಡನೇ ಶನಿವಾರ ಮತ್ತು ಅ.13 ರವಿವಾರ ಇದ್ದ ಕಾರಣ ಅ.11ರಂದೇ ಬೆಂಗಳೂರು, ಮೈಸೂರು ಸಹಿತ ವಿವಿಧ ಕಡೆಗಳಿಂದ ಊರಿಗೆ ಜನ ಹೊರಡುತ್ತಾರೆ. ಇದನ್ನೇ ಬಂಡವಾಳವಾಗಿರಿಸಿದ ಖಾಸಗಿ ಬಸ್‌ಗಳು ಟಿಕೆಟ್ ದರ ಮೂರು ಪಟ್ಟು ಹೆಚ್ಚಿಸಿದೆ.