ಪಂಜದಲ್ಲಿರುವ ಆಧುನಿಕ ಗಾಂಧಿ ಬಗ್ಗೆ ತಿಳಿದಿದೆಯಾ :
ಪಂಜದಲ್ಲಿರುವ ಆಧುನಿಕ ಗಾಂಧಿ ಬಗ್ಗೆ ತಿಳಿದಿದೆಯಾ :
ಮಂಗಳೂರು: ಬಾಪೂಜಿ ಸ್ವಸಹಾಯ ಸಂಘ, ಮಹಾತ್ಮ ಗಾಂಧಿ ವಿದ್ಯಾಪೀಠ ಸ್ಥಾಪಿಸಿ ನೂರಾರು ಗ್ರಾಮೀಣರ ಬದುಕಿಗೆ ಬೆಳಕಾದ ಮಾದರಿ ವ್ಯಕ್ತಿಯೊಬ್ಬರು ದ.ಕ. ಜಿಲ್ಲೆಯ ಪಂಜದಲ್ಲಿದ್ದಾರೆ.
ಪಂಜ ನಿವಾಸಿ ಪುರುಷೋತ್ತಮ ಮೂಡೂರು ಗಾಂಧೀ ತತ್ವಕ್ಕೆ ಅನ್ವರ್ಥವಾಗುವಂತೆ ಬಾಳಿದವರು. ವಿದ್ಯಾರ್ಥಿಗಳ ಪಾಲಿಗಂತೂ ಅಚ್ಚುಮೆಚ್ಚಿನ ಗಾಂಧಿಯೇ.
ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು ಓದಿದ್ದು ಕಾನೂನು ಪದವಿ. ಗಾಂಧೀಜಿಯವರ ಆದರ್ಶಗಳನ್ನು ಪಾಲಿಸಿದವರು. ಪದವಿ ಮುಗಿಸಿ ಗ್ರಾಮೀಣ ಜನರನ್ನು ಸಾಕ್ಷರರ ನ್ನಾಗಿಸುವ ಕೈಂಕರ್ಯಕ್ಕೆ ಮುಂದಾದರು. ಅನೇಕರಿಗೆ ಅಕ್ಷರ ಜ್ಞಾನ ನೀಡಿದರು. ಅವರ ಪತ್ನಿ ಶಿಕ್ಷಕಿಯಾಗಿದ್ದು, ಪತಿಯ ಗಾಂಧಿ ತತ್ವ ಪಸರಿಸುವ ಕಾರ್ಯಕ್ಕೆ ನೆರವಾಗುತ್ತಿದ್ದಾರೆ.
ಸ್ವಸಹಾಯ ಸಂಘಗಳ ಸ್ಥಾಪನೆ
ಜಿಲ್ಲೆಯ ವಿವಿಧ ಪ್ರದೇಶಗಳ ಜನತೆಯನ್ನು ಒಟ್ಟುಗೂಡಿಸಿ 1998ರಲ್ಲಿ ಅನೇಕ ಗ್ರಾಮಗಳಿಗೆ ತೆರಳಿ 15ಕ್ಕೂ ಅಧಿಕ ಸಂಘಗಳನ್ನು ಸ್ಥಾಪಿಸಿ ಉಳಿತಾಯದ ಜಾಗೃತಿ ಮೂಡಿಸಿದರು. ಪ್ರಸ್ತುತ ತಲಾ 10 ಸದಸ್ಯರ 15 ಸಂಘಗಳು ಸಮಾಜ ಸೇವೆಯಲ್ಲಿ ನಿರತವಾಗಿವೆ.
ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ
ಬಡವರ್ಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಮುಂದಾದರು ಮೂಡೂರು. 1998ರಲ್ಲೇ ವಿದ್ಯಾ ಪೀಠ ಆರಂಭಿಸಿ ವಿದ್ಯಾರ್ಥಿಗಳಿಗೆ ರವಿವಾರ ದಿನವಿಡಿ ತರಬೇತಿ ನೀಡತೊಡಗಿದರು. 2005ರ ವರೆಗೆ ಮಂಗಳೂರಿನಲ್ಲಿ ಆಬಳಿಕ 2005ರಿಂದ ಪಂಜದ ತಮ್ಮ ಮನೆಯಲ್ಲಿ ತರಬೇತಿ ನೀಡಲಾರಂಭಿಸಿದರು. ಮತ್ತೆ ಮಂಗಳೂರಿನ ವಿ.ವಿ. ಕಾಲೇಜು, ಬಿ.ಸಿ.ರೋಡಿನಲ್ಲಿ ತರಬೇತಿ ಮುಂದುವರಿಸಿದರು
ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಈ ಪೈಕಿ ಸುಮಾರು 800 ಮಂದಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದು, ಹಲವರು ಬ್ಯಾಂಕಿಂಗ್, ಸರಕಾರಿ ಇಲಾಖೆಗಳು ಸೇರಿದಂತೆ ವಿವಿಧೆಡೆ ಉದ್ಯೋಗ ಗಳಿಸಿರುವುದು ವಿಶೇಷ.
ಪ್ಲಾಸ್ಟಿಕ್ ಕುರಿತು ಅಭಿಯಾನ
ಸುಳ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಗಾಂಧಿ ವಿದ್ಯಾ ಪೀಠದ ಮೂಲಕ ಶ್ರಮಿಸತೊಡಗಿದ್ದಾರೆ ಅವರು. ಜಾಲೂÕರು, ಮಂಡೆಕೋಲು, ಅಜ್ಜಾವರ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದ್ದು, ವಿವಿಧ ಸಂಘ ಸಂಸ್ಥೆಗಳ ಸಹಕಾರವಿದೆ. ಕೆಲವು ಶಾಲೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ್ದರ ಪರಿಣಾಮ ವಿದ್ಯಾರ್ಥಿಗಳು ಮನೆಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ ಶಾಲೆಗಳಿಗೆ ತಂದು ಅಲ್ಲಿಂದ ಪಂಚಾಯತ್ ಮೂಲಕ ವಿಲೇವಾರಿ ಮಾಡುತ್ತಿದ್ದಾರೆ.
ಗ್ರಾಮ ಸ್ವರಾಜ್ಯ ಕಲ್ಪನೆ
ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಯೊಂದಿಗೆ ಸಾವಯವ ಕೃಷಿ, ಶೂನ್ಯ ಬಂಡವಾಳದಿಂದ ಆದಾಯ ಗಳಿಸುವ ಬಗ್ಗೆಯೂ ಅವರು ಅಜ್ಜಾವರದಲ್ಲಿ ವಿವಿಧ ತರಬೇತಿ ನೀಡುತ್ತಿದ್ದಾರೆ. ಮಂಗಳೂರಿನ ವಿಜ್ಞಾನಿಗಳ ಮೂಲಕ ಸಾವಯವ ಕೃಷಿ, ಎರೆಹುಳು ಗೊಬ್ಬರ ತಯಾರಿ ಸೇರಿದಂತೆ ಪರಿಸರಕ್ಕೆ ಪೂರಕವಾದ ತರಬೇತಿಯನ್ನೂ ನೀಡು ತ್ತಿರುವುದು ವಿಶೇಷ.
ವಿಭಿನ್ನವಾಗಿ ಆಚರಿಸಿದ್ದಾರೆ
ಪುರುಷೋತ್ತಮ ಅವರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಕನಕ ಮಜಲುವಿನಿಂದ ಪೈಚಾರುವರೆಗೆ ಹೆದ್ದಾರಿ ಬದಿಯಲ್ಲಿ ಪ್ಲಾಸ್ಟಿಕ್ ಹೆಕ್ಕುವ ಕಾರ್ಯ ನಡೆಸಿದರು. ಸ್ನೇಹಿತರು ಹಾಗೂ ವಿವಿಧ ಸಂಘದವರ ಸಹಕಾರದೊಂದಿಗೆ ಸ್ವತ್ಛತ ಕಾರ್ಯ ನಡೆಸಿ ಪ್ಲಾಸ್ಟಿಕ್ ಅನ್ನು ಪಂಚಾಯತ್ ಮೂಲಕ ರವಾನಿಸುವ ಕೆಲಸವೂ ನಡೆದಿದೆ.