ಕರಾವಳಿಯಲ್ಲಿ ತೂಫಾನ್: ಹವಾಮಾನ ಇಲಾಖೆ ಎಚ್ಚರಿಕೆ
ಕರಾವಳಿಯಲ್ಲಿ ತೂಫಾನ್: ಹವಾಮಾನ ಇಲಾಖೆ ಎಚ್ಚರಿಕೆ
ದಸರಾ ಹಬ್ಬದ ಸಂದರ್ಭದಲ್ಲಿಯೇ ಮೀನುಗಾರರಿಗೆ ಮತ್ತೆ ತೂಫಾನ್ ಎದುರಾಗಿದೆ. ಮೂರ್ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಗಾಳಿ ಅಬ್ಬರ ಜೋರಾಗಿದೆ. ಇನ್ನೂ ಒಂದು ದಿನ ಗಾಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಪಕ್ಕದ ತಮಿಳುನಾಡು, ಕೇರಳ, ಸಮೀಪದ ಲಕ್ಷದ್ವೀಪ ಭಾಗದಲ್ಲಿ ಮೂರ್ನಾಲ್ಕು ದಿನ ವೇಗವಾಗಿ ಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ತಿಂಗಳ ಹಿಂದೆಯಷ್ಟೇ ಮಳೆ ಕಡಿಮೆಯಾಗಿ ಮೀನುಗಾರಿಕೆ ಶುರುವಾಗಿತ್ತು. ಯಾಂತ್ರೀಕೃತ ಬೋಟುಗಳು ಚೂರು ಪಾರು ಮೀನು ತರುತ್ತಿರುವ ಸಂದರ್ಭದಲ್ಲಿಯೇ ಗಾಳಿ ಅಬ್ಬರ ಶುರುವಾಗಿದೆ. ಮೂರು ದಿನಗಳಿಂದ ಗಾಳಿಯ ಕಾರಣಕ್ಕೆ ಆಳ ಸಮುದ್ರ ಮೀನುಗಾರಿಕೆ ಕಡಿಮೆಯಾಗಿತ್ತು. ವೇಗದ ಗಾಳಿಶನಿವಾರದಿಂದ ಮುಂದಿನ ಐದು ದಿನಗಳು ಕರ್ನಾಟಕ, ಕೇರಳ, ಲಕ್ಷದ್ವೀಪ ಕರಾವಳಿ ತೀರದಲ್ಲಿ ಗಂಟೆಗೆ ಗರಿಷ್ಠ 35 ಕಿ.ಮೀ. ಇಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಜತೆಗೆ ಅಲೆಗಳ ಎತ್ತರ ಹೆಚ್ಚಾಗಲಿದೆ. ಅಲ್ಲಲ್ಲಿ ಚದುರಿದಂತೆ ಮಳೆ ಕೂಡ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮೀಪದ ಮೀನುಗಾರಿಕೆ ಬಂದರುಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.ಕೆಲ ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ದಿನಬಿಟ್ಟು ದಿನ ರಾತ್ರಿ ಮಳೆ ಬೀಳುತ್ತಿದೆ.
ಸಂಜೆಯಾಗುತ್ತಿದ್ದಂತೆಯೇ ಮೋಡ ಕವಿದು ರಾತ್ರಿ ಉತ್ತಮ ಮಳೆಯಾಗಿದೆ. ಶನಿವಾರವೂ ಕರಾವಳಿ ಭಾಗದಲ್ಲಿ ಮೋಡ ಕವಿದಿದೆ. ಸದ್ಯ ವಾತಾವರಣದ ಹದ ನೋಡಿ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾರೆ. ದಸರಾ ಪೂಜೆ ನಂತರ ಮೀನುಗಾರಿಕೆ ಆರಂಭಿಸುವ ಸಿದ್ಧತೆಯಲ್ಲಿದ್ದವರು ಮತ್ತೊಂದಿಷ್ಟು ದಿನ ಕಾಯುತ್ತಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಕೇರಳ, ತಮಿಳುನಾಡಿಗೂ ಹೋಗಿ ಮೀನುಗಾರಿಕೆ ನಡೆಸುತ್ತಾರೆ. ಕೆಲವರು ಅಲ್ಲಿನ ಬೋಟುಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಹವಾಮಾನ ಮುನ್ಸೂಚನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ನಾಲ್ಕು ದಿನ ಭಾರಿ ಮಳೆ ಎಚ್ಚರಿಕೆಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅಕ್ಟೋಬರ್ 16ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮಂಗಳವಾರ ಹಾಗೂ ಬುಧವಾರ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ರಾಮನಗರ, ಮೈಸೂರು, ಮಂಡ್ಯ ಮತ್ತು ಚಾಮರಾಜ ನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.