ಪಂಜ ಹೋಬಳಿ ಕೇಂದ್ರ ತಲುಪುವುದೇ ಕಷ್ಟ!
ಪಂಜ ಹೋಬಳಿ ಕೇಂದ್ರ ತಲುಪುವುದೇ ಕಷ್ಟ!
ಗುತ್ತಿಗಾರು- ಬಳಕ್ಕ- ಪಂಜ ಜಿಲ್ಲಾ ಮುಖ್ಯ ರಸ್ತೆ ಹಲವೆಡೆ ಹೊಂಡ- ಗುಂಡಿಗಳಿಂದ ಕೂಡಿ ದುಸ್ತರಗೊಂಡಿದ್ದು, ಗುತ್ತಿಗಾರು ಭಾಗದ ಜನತೆಗೆ ಹೋಬಳಿ ಕೇಂದ್ರ ಪಂಜವನ್ನು ಸಂಪರ್ಕಿಸುವುದೇ ತ್ರಾಸದಾಯಕವಾಗಿದೆ.
ಪಂಜ-ಬಳಕ್ಕ-ಗುತ್ತಿಗಾರು ರಸ್ತೆ ಮೇಲ್ದರ್ಜೆ ಗೇರಿಸಲಾದ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಕೆಲವು ವರ್ಷಗಳ ಹಿಂದೆ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ರಸ್ತೆಯ ಅಭಿವೃದ್ಧಿ ನಡೆಸಲಾಗಿತ್ತು. ಆದರೆ ಪೂರ್ಣ ಪ್ರಮಾಣದ ಅಭಿವೃದ್ಧಿ ಆಗದೆ ಇದ್ದುದರಿಂದ ಇಂದಿಗೂ ಈ ರಸ್ತೆ ಹೊಂಡ-ಗುಂಡಿಗಳಿಂದಲೇ ಕೂಡಿದೆ.
ಪಂಜ-ಬಳಕ್ಕ-ಗುತ್ತಿಗಾರು ಈ ರಸ್ತೆ ಸುಮಾರು 10 ಕಿ.ಮೀ. ದೂರ ವ್ಯಾಪ್ತಿ ಹೊಂದಿದ್ದು, ಇದರಲ್ಲಿ ಗುತ್ತಿಗಾರಿನಿಂದ ಚಿಕ್ಮುಳಿ ಎಂಬಲ್ಲಿವರೆಗೆ ರಸ್ತೆ ಡಾಮರೀಕರಣಗೊಂಡು ಅಭಿವೃದ್ಧಿಗೊಂಡಿದೆ. ಆದರೆ ಚಿಕ್ಮುಳಿ ಎಂಬಲ್ಲಿಂದ ಬಳಕ್ಕ-ಪಂಜ ವರೆಗೆ ಸುಮಾರು 7 ಕಿ.ಮೀ.ವರೆಗೆ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. ಈ ರಸ್ತೆಯ ಎರಡೂ ಬದಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಸರಿಯಾಗಿ ಹರಿಯದೆ ರಸ್ತೆಯಲ್ಲೇ ಹರಿಯುವ ಸ್ಥಿತಿ ಇದೆ. ಪಂಜದಿಂದ ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ರಸ್ತೆ ಎಲ್ಲಿ ಎಂದು ಹುಡುಕಬೇಕಾದ ಸ್ಥಿತಿಯಿದೆ.
ಪಂಜ ಹೋಬಳಿ ಕೇಂದ್ರವಾಗಿದ್ದು, ಇಲ್ಲಿಗೆ ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಗುತ್ತಿಗಾರು ಭಾಗದ ಜನರು ತಮ್ಮ ಕಂದಾಯ ವಿಭಾಗ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಅದಕ್ಕೆ ಇದೇ ರಸ್ತೆ ಬಳಕೆಯಾಗುತ್ತಿದ್ದು, ಆದರೆ ಪ್ರಸ್ತುತ ಈ ರಸ್ತೆ ಸರಿ ಇಲ್ಲದೆ ಇರುವುದರಿಂದ ಜನತೆಗೆ ಹೋಬಳಿ ಕೇಂದ್ರ ಸಂಪರ್ಕವೇ ತ್ರಾಸದಾಯಕವಾಗಿದೆ. ಈ ರಸ್ತೆಯನ್ನು ಬೇಗ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.