ಇಲ್ಲಿದೆ 👇 ಕಾವೇರಿ ಸಂಕ್ರಮಣದ ಇತಿಹಾಸ
ಇಲ್ಲಿದೆ 👇 ಕಾವೇರಿ ಸಂಕ್ರಮಣದ ಇತಿಹಾಸ
ಕಾವೇರಿಯು ಭಾರತದ ದಕ್ಷಿಣದಲ್ಲಿರುವ ಒಂದು ಮುಖ್ಯ ನದಿ. ಇದು ಕರ್ನಾಟಕದ ನೈಋತ್ಯ ಕೊನೆಯಲ್ಲಿರುವ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟಸಾಲುಗಳಲ್ಲಿರುವ ತಲಕಾವೇರಿಯಲ್ಲಿ ಹುಟ್ಟಿ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹರಿದು, ಬಂಗಾಳ ಕೊಲ್ಲಿಯನ್ನು ಸೇರುವದು. ಈ ನದಿಯನ್ನು ಹಿಂದೂಗಳು ದೇವರೆಂದು ಪೂಜಿಸುವರು. ವರ್ಷಕ್ಕೊಮ್ಮೆ ಕಾವೇರಿ ಸಂಕ್ರಮಣವನ್ನು ಹಬ್ಬವನ್ನಾಗಿ ತುಲಾ ಸಂಕ್ರಮಣದಂದು ಆಚರಿಸಲಾಗುತ್ತದೆ. ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನದಂದು, ಅಂದರೆ ಸಾಮಾನ್ಯವಾಗಿ ಅಕ್ಟೋಬರ್ ೧೭ರಂದು, ಒಂದು ನಿಯತ ಕಾಲದಲ್ಲಿ ತೀರ್ಥೋದ್ಭವವುಂಟಾಗುತ್ತದೆ. ತಲಕಾವೇರಿಯಲ್ಲಿರುವ ಒಂದು ಸಣ್ಣ ಕುಂಡಿಕೆಯಲ್ಲಿ ಈ ಮುಹೂರ್ತದಲ್ಲಿ ನೀರು ಭೂಮಿಯೊಳಗಿನಿಂದ ಚಿಲುಮೆಯಂತೆ ಮೇಲೆ ಉಕ್ಕಿ ಹರಿಯುತ್ತದೆ. ಅದನ್ನು ಸಾವಿರಾರು ಜನ ವೀಕ್ಷಿಸಿ, ಕುಂಡಿಕೆಯ ಕೆಳಗಿನ ಸಣ್ಣ ಕೊಳದಲ್ಲಿ ಮಿಂದು, ತೀರ್ಥವನ್ನು ತೆಗೆದುಕೊಂಡು ಹೋಗುತ್ತಾರೆ.
ಈ ಸಂಕ್ರಮಣದಂದು ಕಾವೇರೀಮಾತೆಯು ಪ್ರತಿಯೊಂದು ಮನೆಯನ್ನೂ ಸಂದರ್ಶಿಸುವಳೆಂದು ನಂಬಿಕೆ. ಆದ್ದರಿಂದ ತೀರ್ಥೋದ್ಭವಕ್ಕೆ ಮುಂಚಿತವಾಗಿ ಎಲ್ಲರೂ ತಮ್ಮ ಮನೆ, ಸುತ್ತಮುತ್ತಲಿನ ಅಂಗಳ, ಹಿತ್ತಿಲು, ದನಗಳ, ಭತ್ತ ಕುಟ್ಟುವ, ಸೌದೆಯ, ಹೀಗೆ ಎಲ್ಲಾ ಕೊಟ್ಟಿಗೆಗಳು, ಇತ್ಯಾದಿ ಸ್ಥಳಗಳನ್ನು ಕಳೆ-ಕಸ ತೆಗೆದು, ಗುಡಿಸಿ, ಸಾರಿಸಿ, ಚೊಕ್ಕಟಗೊಳಿಸುವರು. ಎಲ್ಲಾ ಭತ್ತದ ಗದ್ದೆಗಳು, ಮನೆಯೆದುರು, ಬಾವಿ, ಕೊಟ್ಟಿಗೆಗಳು, ಗೊಬ್ಬರದ ಗುಂಡಿ, ಮುಂತಾದ ಸ್ಥಳಗಳಲ್ಲಿ ಒಂದೊಂದು ‘ಬೊತ್ತ್’ನ್ನು ಚುಚ್ಚಿ ನೆಟ್ಟಗೆ ನಿಲ್ಲಿಸುವರು. ‘ಬೊತ್ತ್’ ಎನ್ನುವದು ‘ಪೊಂಗ’ ಮರದ ರೆಂಬೆಯನ್ನು ಆಳೆತ್ತರಕ್ಕೆ ಕತ್ತರಿಸಿ, ಅದರ ಒಂದು ಕೊನೆಯನ್ನು ಗೇಣುದ್ದಕ್ಕೆ ಸೀಳಿ, ಅದರಲ್ಲಿ ‘ಕೈಬಳ’ ಬಳ್ಳಿಯನ್ನು ಸಿಂಬಿ ಸುತ್ತಿ ಸಿಕ್ಕಿಸಿದುದು. ಕೆಲವೆಡೆ ಪೊಂಗ ಮರದ ರೆಂಬೆಯ ಬದಲಿಗೆ ಬಿದಿರಿನ ದಬ್ಬೆಯಯನ್ನು ಉಪಯೋಗಿಸುವರು. ಇನ್ನು ಕೆಲವು ಗ್ರಾಮಗಳಲ್ಲಿ (ಉದಾ: ಅಮ್ಮತ್ತಿಯ ಸುತ್ತುಮುತ್ತಲಲ್ಲಿ) ಈ ಬಳ್ಳಿ-ರೆಂಬೆಯ ಬದಲು ‘ಕಾಂಡ’ವೆನ್ನುವ ಕಡಿದರೆ ಬಿಳಿ ಹಾಲು ಒಸರುವ ಗಿಡದ ಗೆಲ್ಲನ್ನಷ್ಟೇ ಚುಚ್ಚುವರು. ಇನ್ನು ಕೆಲವೆಡೆ, ಉದಾಹರಣೆಗೆ ವಿರಾಜಪೇಟೆಯ ಸಮೀಪದ ಬಿಳುಗುಂದ ಗ್ರಾಮದಲ್ಲಿ, ಯಾವ ರೀತಿಯ ಬೊತ್ತನ್ನೂ ಚುಚ್ಚುವದಿಲ್ಲ. ಈ ಊರನ್ನು ಕುರುವಂಶದ ಕಾರಣರು ರಕ್ಷಿಸುತ್ತಾರೆಂದು ನಂಬಿಕೆ.
ತೀರ್ಥೋದ್ಭವವಾದ ಮರುದಿನ ಎಲ್ಲಾ ಕೊಡವರ ಮನೆಗಳಲ್ಲಿ ಕಾವೇರಿಯ ಸಾಂಕೇತಿಕ ಮೂರ್ತಿಯನ್ನು ನಿರ್ಮಿಸಿ ಪೂಜಿಸುವರು. ಇದಕ್ಕೆ ಕಣಿ ಪೂಜಿಸುವದು ಎಂದು ಹೆಸರು. ಬಹುಶಃ ಕನ್ಯಾ ಎನ್ನುವದು ಕನ್ನಿ ಎಂದಾಗಿ ಕಣಿ ಎಂದು ಅಪಭ್ರಂಶವಾಗಿದೆ. ಕನ್ಯಾ ಎಂದರೆ ಪಾರ್ವತಿ. ಕಾವೇರಿಯು ಪಾರ್ವತಿಯ ಅವತಾರವೆನ್ನುವರು. ಈ ಪೂಜೆಯ ಹಿಂದಿನ ಸಂಜೆ ಹೂಗಳನ್ನು ತಂದು ಇಬ್ಬನಿಯಲ್ಲಿಟ್ಟಿರುತ್ತಾರೆ. ಮರುದಿನ ಬ್ರಾಹ್ಮೀ ಮುಹೂರ್ತದಲ್ಲಿ ಮನೆಯ ಮುತ್ತೈದೆಯೊಬ್ಬಳು ಎದ್ದು ಸ್ನಾನ ಮಾಡಿ ಶುಭ್ರವಾಗಿ ಉಟ್ಟು-ತೊಟ್ಟು, ‘ತಳಿಯತಕ್ಕಿ ಬೊಳಕ’ನ್ನು ತಯಾರಿಸುವಳು. ತಳಿಯತಕ್ಕಿ ಬೊಳಕ್ ಎಂದರೆ ತಳಿಯತ್ (ತಳಿಗೆಯಲ್ಲಿ) ಅಕ್ಕಿ ಮತ್ತು ಬೊಳಕ್ (ಬೆಳಕು). ಅರ್ಥಾತ್ ಒಂದು ದುಂಡಗಿನ ತಟ್ಟೆಯಲ್ಲಿ ಅಕ್ಕಿಯನ್ನು ತುಂಬಿ, ಅದರ ನಡುವೆ ಒಂದು ಕೆಂಪು ರೇಷ್ಮೆಯ ವಸ್ತ್ರವನ್ನು ತ್ರಿಕೋಣಾಕಾರದಲ್ಲಿ ಮಡಚಿಟ್ಟು, ಹಣತೆಯೊಂದನ್ನು ಹಚ್ಚಿಡುವದು. ಇನ್ನೊಂದು ಕೆಂಪು ರೇಶ್ಮೆಯ ವಸ್ತ್ರದಲ್ಲಿ ಒಂದು ತೆಂಗಿನಕಾಯಿ ಇಲ್ಲವೇ ಸೌತೇಕಾಯನ್ನು ಸುತ್ತಿ, ತ್ರಿಕೋಣಾಕಾರದ ಬಟ್ಟೆಯ ಮೇಲಿಡಲಾಗುತ್ತದೆ. ಈ ಕಾಯಿಗೆ ‘ಪತ್ತಾಕ್’(ಕೊಡವತಿಯ ಮಂಗಲಸೂತ್ರ)ನ್ನು ತೊಡಿಸಿ, ಅದರ ಪಕ್ಕದಲ್ಲಿ ಮೂರು ಗಾಜಿನ ಕರಿಬಳೆಗಳು, ಮೂರು ವೀಳ್ಯದೆಲೆಗಳು, ಅವುಗಳ ಮೇಲೆ ಮೂರು ಅಡಿಕೆ ಚೂರುಗಳನ್ನಿಡಲಾಗುತ್ತದೆ. ಉಳಿದೆಡೆಯನ್ನು ಇಬ್ಬನಿಯಲ್ಲಿಟ್ಟಿದ್ದ ಹೂಗಳಿಂದಲೂ ಇತರ ಒಡವೆಗಳಿಂದಲೂ ಸಿಂಗರಿಸಲಾಗುತ್ತದೆ. ನೆಲ್ಲಕ್ಕಿ ನಡುಬಾಡೆಯ ತೂಗುದೀಪದಡಿಯಲ್ಲಿ ಎತ್ತರದ ಮುಕ್ಕಾಲಿ ಇಲ್ಲವೇ ಕುರ್ಚಿಯ ಮೇಲೆ ಈ ಅಲಂಕರಿಸಲಾದ ತಟ್ಟೆಯನ್ನು ಹಣತೆ ಎದುರಿಗೆ ಬರುವಂತೆ ಇಡಲಾಗುತ್ತದೆ. ಮನೆಯವರೆಲ್ಲರೂ ಸ್ನಾನಾದಿಗಳಿಂದ ಶುಚಿರ್ಭೂತರಾಗಿ, ತಟ್ಟೆಯಲ್ಲಿಟ್ಟಿರುವ ಅಕ್ಷತೆಯನ್ನು ಮೂರ್ತಿಗೆ ಹಾಕಿ, ನಮಸ್ಕರಿಸುವರು.
ಕೆಲವೆಡೆ ಪೂಜೆಯ ಹಿಂದಿನ ರಾತ್ರಿ ಮುತ್ತೈದೆಯು ಮಲಗುವ ಮುನ್ನ ಈ ಪೂಜೆಯ ಅಲಂಕಾರವನ್ನು ಸಿದ್ಧಪಡಿಸಿಡುವಳು.
ಕಣಿ ಪೂಜೆಯಾದ ಮೇಲೆ ಮುತ್ತೈದೆಯು ಅಡುಗೆ ಕೋಣೆಯಲ್ಲಿ ಮೂರು ಪುಟ್ಟ ದೋಸೆಗಳನ್ನು ತಯಾರಿಸಿ, ಅವನ್ನು ಒಂದು ಕುಡಿಬಾಳೆಯೆಲೆಯ ಮೇಲಿಟ್ಟುಕೊಂಡು ಮನೆಯ ಬಾವಿಗೆ ಹೋಗಿ ಅಲ್ಲಿ ನೈವೇದ್ಯವಿಡುವಳು. ಗಂಗಾಪೂಜೆ ಮಾಡಿ, ಬಿಂದಿಗೆಯೊಂದರಲ್ಲಿ ನೀರು ಸೇದಿ ಮನೆಗೆ ತರುವಳು. ಮನೆಯ ಹುಡುಗನೊಬ್ಬನು ಇನ್ನೂ ಮೂರು ದೋಸೆಗಳನ್ನು ಒಂದು ಕುಡಿಬಾಳೆಯೆಲೆಯಲ್ಲಿಟ್ಟುಕೊಂಡು ತನ್ನ ಮನೆಯ ಗದ್ದೆಯ ಏರಿಯ ಮೇಲಿಟ್ಟು, ದೇವರನ್ನು ನೈವೇದ್ಯವನ್ನು ಸ್ವೀಕರಿಸಲು ಕೂಗಿ ಕರೆಯುವನು.
ಮನೆಯಾಕೆ ಮನೆಗೆ ತಂದ ಗಂಗೆಯಲ್ಲಿ ಅಡುಗೆ ಮಾಡುವಳು. ಇಂದಿನ ವಿಶೇಷ ಅಡುಗೆಯೆಂದರೆ ದೋಸೆ, ಸಿಹಿಕುಂಬಳದ ಮೇಲೋಗರ ಮತ್ತು ಸಿಹಿಕುಂಬಳದ ಪಾಯಸ. ಈ ದಿನ ಮನೆಯಲ್ಲಿ ಮಾಂಸಾಹಾರ ನಿಷಿದ್ಧ.
ಸಂಜೆಯಲ್ಲಿ ಕಣಿ ಪೂಜಿಸಿದ ಹೂಗಳನ್ನು ಹರಿಯುವ ನೀರಿನಲ್ಲಿ ಹಾಕುವರು. ಕೆಲವರು ಕಾವೇರಿಯ ಮೂರ್ತಿಯನ್ನು ಎರಡುಮೂರು ದಿನಗಳವರೆಗೂ ಇಡುವದುಂಟು.
ಮರುದಿನ ಕಿರಿಯರು ನೆರೆಕರೆಯ ಮನೆಗಳನ್ನು ಸಂದರ್ಶಿಸಿ ಹಿರಿಯರ ಕಾಲುಟ್ಟಿ ನಮಸ್ಕರಿಸಿ ಗೌರವಿಸುವರು.