ಬೆಂಗಳೂರು ಕಂಬಳ ಈ ಬಾರಿ ಅನುಮಾನ:
ಬೆಂಗಳೂರು ಕಂಬಳ ಈ ಬಾರಿ ಅನುಮಾನ:
ಕಳೆದ ವರ್ಷ ಬೆಂಗಳೂರಿನಲ್ಲಿ ಅದ್ದೂರಿ ಯಾಗಿ ನಡೆದಿದ್ದ ಕಂಬಳವು ಈ ಬಾರಿ ಅ.26ಕ್ಕೆ ನಿಗದಿಯಾಗಿತ್ತು. ಆದರೆ ಈ ದಿನದಂದು ಕಂಬಳ ನಡೆಯುವುದಿಲ್ಲ. ಜತೆಗೆ ಈ ವರ್ಷ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಕಂಬಳ ನಡೆಸುವುದು ಬಹಳ ಕಷ್ಟದ ಕೆಲಸ. ಪ್ಯಾಲೇಸ್ ಗ್ರೌಂಡ್ ಅನುಮತಿ ದೊರೆಯಬೇಕಾದರೆ 3 ತಿಂಗಳ ಮುನ್ನ ಪ್ರಕ್ರಿಯೆ ನಡೆಸಬೇಕು. ಮೈಸೂರು ಅರಮನೆ ಹಾಗೂ ಸರಕಾರದಿಂದ ಅನುಮತಿ ಪಡೆಯಬೇಕು. ಕರೆ ನಿರ್ಮಾಣ ಸಹಿತ ಮೂಲ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕೋಣಗಳನ್ನು ಕರಾವಳಿಯಿಂದ ಬೆಂಗಳೂರಿಗೆಜನ ಕೊಂಡೊಯ್ಯಬೇಕು; ಇಂತಹ ಹತ್ತು ಹಲವು ಸವಾಲು ಎದುರಿಸುವ ಜತೆಗೆ ಕೋಟ್ಯಂತರ ರೂ. ಖರ್ಚು ಕೂಡ ಆಗುತ್ತದೆ. ಕಳೆದ ವರ್ಷ ಮೊದಲ ಕಂಬಳ ಎಂಬ ನೆಲೆಯಲ್ಲಿ ಯಶಸ್ವಿಯಾಗಿ ಮೂಡಿಬಂತಾದರೂ, ಈ ಬಾರಿ ಮಾತ್ರ ಈ ಕುರಿತ ಉತ್ಸಾಹ ಎಲ್ಲೂ ಕಂಡುಬಾರದೆ ಒಂದೇ ವರ್ಷಕ್ಕೆ ಕಂಬಳದಾಟ ಮುಗಿಯಿತೇ ಎಂಬ ಪ್ರಶ್ನೆ ಮೂಡಿದೆ.
ಮಾರ್ಚ್‌ನಲ್ಲಿ ಸಾಧ್ಯವೇ?
ಸದ್ಯದ ಮಾಹಿತಿ ಪ್ರಕಾರ ಈ ಋತುವಿನ ಆರಂಭದಲ್ಲಿ ಬೆಂಗಳೂರು ಕಂಬಳ ನಡೆಯುವುದಿಲ್ಲ. ಆದರೆ ಕಂಬಳ ಸಮಿತಿ ಹಾಗೂ ಕೋಣಗಳ ಯಜಮಾನರು ಒಪ್ಪಿಗೆ ಸೂಚಿಸಿದರೆ ಮಾರ್ಚ್‌ನಲ್ಲಿ ಬೆಂಗಳೂರು ಕಂಬಳ ನಡೆಸಬಹುದೇ ಎಂಬ ಬಗ್ಗೆ ಚರ್ಚೆ ಈಗ ನಡೆಯುತ್ತಿದೆ. ಇದಕ್ಕಾಗಿ ಅರಮನೆ ಮೈದಾನದ ಅನುಮತಿಗೆ ಬೆಂಗಳೂರು ಸಮಿತಿ ಅರ್ಜಿ ಹಾಕಿದೆ. ಈ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟಾಪರ್ ಕೋಣವಷ್ಟೇ ಭಾಗವಹಿಸಲಿ
ಕಂಬಳದ ತೀರ್ಪುಗಾರರ ಸಮಿತಿಯ ಸಂಚಾಲಕರಾದ ವಿಜಯ್ ಕುಮಾರ್ ಕಂಗಿನಮನೆ ಅವರು ಮಾತನಾಡಿ, “157 ಜತೆ ಕೋಣಗಳನ್ನು ಜಿಲ್ಲೆಯ ಹೊರಭಾಗಕ್ಕೆ ಕೊಂಡೊಯ್ಯುವುದು ಸುಲಭದ ಕೆಲಸವಲ್ಲ. ಇದರಲ್ಲಿ ಆಯ್ಕೆ ಮಾಡಿ 65 ಜತೆ ಕೋಣಗಳು ಮಾತ್ರ ಹೊರಜಿಲ್ಲೆಗೆ ಕೊಂಡೊಯ್ದರೆ ಹೆಚ್ಚು ಅನುಕೂಲ. ಹೀಗೆ ಮಾಡಿದರೆ ಬೇರೆ ಕಡೆಯೂ ಕಂಬಳ ನಡೆಸಬಹುದು. ಇಲ್ಲದಿದ್ದರೆ ಕಷ್ಟ’ ಎನ್ನುತ್ತಾರೆ.