ಅಪಘಾತ; ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೊಲೀಸ್
ಅಪಘಾತ; ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೊಲೀಸ್
ಬುಧವಾರ ನಸುಕಿನ ಜಾವ ನಗರದ ಕೆಪಿಟಿ ಬಟಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಮಹಿಳಾ ಪೊಲೀಸ್ ಸಿಬಂದಿ ತನ್ನ ಸ್ಕೂಟರ್‌ನಲ್ಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕದ್ರಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುರ್ಶಿದಾ ಬಾನು ಮಹಿಳಾ ಪೊಲೀಸ್ ಸಿಬಂದಿ. ಅವರು ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಕೆಪಿಟಿ ಬಳಿಯ ವ್ಯಾಸನಗರ ತಿರುವಿನಲ್ಲಿ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಕೋಳಿ ಸಾಗಾಟದ ಪಿಕಪ್ ವಾಹನ ಢಿಕ್ಕಿಯಾಗಿದ್ದು, ಪರಿಣಾಮ ಪಿಕಪ್ ವಾಹನದ ಕ್ಲೀನರ್ ತೀವ್ರ ಗಾಯಗೊಂಡಿದ್ದರು. ಘಟನೆಯಲ್ಲಿ ಚಾಲಕನಿಗೂ ಪೆಟ್ಟಾಗಿದ್ದು, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದರು.
ಈ ವೇಳೆ ಸ್ಕೂಟರ್‌ನಲ್ಲಿ ಠಾಣೆಗೆ ತೆರಳುತ್ತಿದ್ದ ಮುರ್ಶಿದಾ ಬಾನು ಅವರು ಚಾಲಕನ ಬೊಬ್ಬೆ ಕೇಳಿ ಹತ್ತಿರ ಹೋಗಿದ್ದು, ಗಾಯಗೊಂಡಿದ್ದ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆಟೋ ಸಿಗದ ಕಾರಣ ತನ್ನ ಸ್ಕೂಟರ್‌ನಲ್ಲಿಯೇ ಒಂದು ಕೈಯಲ್ಲಿ ಆತನನ್ನು ಹಿಡಿದುಕೊಂಡು ಆಸ್ಪತ್ರೆಗೆ ತಲುಪಿದ್ದಾರೆ. ಅಲ್ಲಿ ಉರ್ವ ಠಾಣೆಯ ಪೊಲೀಸರು ಇದ್ದುದರಿಂದ ಅವರ ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಬಳಿಕ ಕದ್ರಿ ಸಂಚಾರ ವಿಭಾಗದ ಪೊಲೀಸರಿಗೆ ತಿಳಿಸಿ ಅಪಘಾತ ಸ್ಥಳಕ್ಕೆ ಬರಲು ಹೇಳಿದ್ದಾರೆ. ಮುರ್ಶಿದಾಬಾನು ಅವರ ಕರ್ತವ್ಯನಿಷ್ಠೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.