ಸಾಲ್ಮರ : ಮೃತ ಕೂಲಿ ಕಾರ್ಮಿಕನನ್ನು ರಸ್ತೆ ಬದಿ ಮಲಗಿಸಿ ಹೋದ ಆರೋಪ ; ಮನೆಯವರು, ಸ್ಥಳೀಯರ ಆಕ್ರೋಶ
ಸಾಲ್ಮರ : ಮೃತ ಕೂಲಿ ಕಾರ್ಮಿಕನನ್ನು ರಸ್ತೆ ಬದಿ ಮಲಗಿಸಿ ಹೋದ ಆರೋಪ ; ಮನೆಯವರು, ಸ್ಥಳೀಯರ ಆಕ್ರೋಶ
ಪುತ್ತೂರು:ಸಹಾಯಕ ಕೂಲಿಕಾರ್ಮಿಕನ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಮನೆಯ ಮುಂದಿನ ರಸ್ತೆ ಸಮೀಪ ಮಲಗಿಸಿ ಹೋದ ಘಟನೆಯೊಂದು ಸಾಲ್ಮರ ಸಮೀಪದ ಕೆರೆಮೂಲೆಯಲ್ಲಿ ನ.16ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿ ಮಾಲಕರ ವಿರುದ್ದ ಮನೆ ಮಂದಿ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತರ ಪುತ್ರಿ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಸಾಲ್ಮರ ಕೆರೆಮೂಲೆ ನಿವಾಸಿ ಸಿಮೆಂಟ್ ಸಾರಣೆ ಮೇಸ್ತ್ರಿ ಜೊತೆ ಸಹಾಯಕರಾಗಿ ಹೋಗುತ್ತಿದ್ದ ಕೂಲಿ ಕಾರ್ಮಿಕ, ಪರಿಶಿಷ್ಟ ಜಾತಿಗೆ ಸೇರಿದ ಶಿವಪ್ಪ (69)ರವರು ಮೃತಪಟ್ಟವರು.
ತಂದೆ ಶಿವಪ್ಪ ಅವರು ನ.16ರಂದು ಬೆಳಿಗ್ಗೆ ಮನೆಯಲ್ಲಿದ್ದ ಸಂದರ್ಭ ಸಾಲ್ಮರ ತಾವೋ ಇಂಡಸ್ಟ್ರೀಸ್‌ನ ಹೆನ್ರಿ ತಾವೋ ಅವರು ಕೆಲಸಕ್ಕೆಂದು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಧ್ಯಾಹ್ನದ ವೇಳೆ ಅದೇ ಪಿಕಪ್ ವಾಹನದಲ್ಲಿ ಅವರನ್ನು ಕರೆದುಕೊಂಡು ಬಂದು ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿದ್ದಾರೆ.ಈ ವೇಳೆ ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಇದ್ದು ತಕ್ಷಣ ರಸ್ತೆ ಬದಿ ಹೋಗಿ ನೋಡಿದಾಗ ತಂದೆ ಶಿವಪ್ಪಮೃತಪಟ್ಟಿದ್ದರು.
ಬಳಿಕ ಸ್ಥಳೀಯರು ಸೇರಿ ಮೃತ ದೇಹವನ್ನು ಮನೆಯೊಳಗೆ ತಂದಿದ್ದೇವೆ.ಶಿವಪ್ಪ ಅವರು ಆರೋಗ್ಯವಂತರಾಗಿದ್ದು ಆಕಸ್ಮಿಕವಾಗಿ ಅವರು ಮೃತಪಟ್ಟಿರುವುದು ಸಂಶಯಕ್ಕೆ ಎಡೆ ಮಾಡಿದೆ. ಅದೂ ಅಲ್ಲದೆ ಮೃತಪಟ್ಟವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಬಿಟ್ಟು ರಸ್ತೆ ಬದಿ ಮಲಗಿಸಿ ಹೋಗಿರುವುದು ಮನಸ್ಸಿಗೆ ಆಘಾತ ಉಂಟು ಮಾಡಿದೆ ಎಂದು ಮೃತರ ಪುತ್ರಿ ಉಷಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದು, ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಮೃತ ಶಿವಪ್ಪ ಅವರು ಪತ್ನಿ ಗುಲಾಬಿ, ಪುತ್ರಿಯರಾದ ಹೇಮಾವತಿ, ಉಷಾ, ಶಶಿಲಾ, ಅಶ್ವಿನಿ ಅವರನ್ನು ಅಗಲಿದ್ದಾರೆ.