ಹೋಟೆಲ್ ನಲ್ಲಿ ಗ್ಯಾಂಗ್ ರೇಪ್: ಹರಿಯಾಣ ಬಿಜೆಪಿ ಅಧ್ಯಕ್ಷ ಮೋಹನ್‌ಲಾಲ್ ಬಡೋಲಿ ವಿರುದ್ಧ FIR ದಾಖಲು
ಹೋಟೆಲ್ ನಲ್ಲಿ ಗ್ಯಾಂಗ್ ರೇಪ್: ಹರಿಯಾಣ ಬಿಜೆಪಿ ಅಧ್ಯಕ್ಷ ಮೋಹನ್‌ಲಾಲ್ ಬಡೋಲಿ ವಿರುದ್ಧ FIR ದಾಖಲು
ಚಂಢೀಗಢ: ಹರಿಯಾಣ ಬಿಜೆಪಿ ಅಧ್ಯಕ್ಷ ಮೋಹನ್‌ಲಾಲ್ ಬಡೋಲಿ ಮತ್ತು ಗಾಯಕರೊಬ್ಬ ಕಸೌಲಿಯ ಹೋಟೆಲ್‌ನಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ ನಂತರ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಿಬ್ಬರ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಆರೋಪಿಗಳು ಸಾಮೂಹಿಕ ಅತ್ಯಾಚಾರದ ವಿಡಿಯೋ ಮಾಡಿಕೊಂಡಿದ್ದು, ಯಾರಿಗಾದರೂ ವಿಷಯ ಬಾಯ್ಬಿಟ್ಟರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದು, ಡಿಸೆಂಬರ್ 13, 2024 ರಂದು ಸೋಲನ್ ಜಿಲ್ಲೆಯ ಕಸೌಲಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಡೋಲಿ ಮತ್ತು ಜೈ ಭಗವಾನ್ ಅಲಿಯಾಸ್ ರಾಕಿ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಎಫ್‌ಐಆರ್‌ನ ಪ್ರತಿ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಜುಲೈ 3, 2023 ರಂದು ಮಹಿಳೆ ತನ್ನ ಬಾಸ್ ಮತ್ತು ಸ್ನೇಹಿತನೊಂದಿಗೆ ಕಸೌಲಿಯ ಹೋಟೆಲ್‌ನಲ್ಲಿ ತಂಗಿರುವಾಗ ಆರೋಪಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ಬಡೋಲಿ ತನ್ನನ್ನು ರಾಜಕೀಯ ನಾಯಕ ಎಂದು ಪರಿಚಯಿಸಿಕೊಂಡರೆ, ರಾಕಿ ತನ್ನನ್ನು ತಾನು ಗಾಯಕ ಎಂದು ಪರಿಚಯಿಸಿಕೊಂಡಿದ್ದಾರೆ.
ನಂತರ ಇಬ್ಬರು ಆರೋಪಿಗಳೊಂದಿಗೆ ಮಹಿಳೆ ಹಾಗೂ ಅವರ ಸ್ನೇಹಿತ ಕೊಠಡಿಗೆ ತೆರಳಿದ್ದಾರೆ. ಆರೋಪಿಗಳು ಆಕೆಗೆ ಸರ್ಕಾರಿ ಕೆಲಸ ಹಾಗೂ ಮ್ಯೂಸಿಕ್ ವಿಡಿಯೋವೊಂದರಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ. ಆರೋಪಿಗಳು ಮಹಿಳೆಗೆ ಮದ್ಯ ಕುಡಿಯಲು ಒತ್ತಾಯಿಸಿದ್ದು, ಆಕೆ ನಿರಾಕರಿಸಿದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ, ಬಡೋಲಿ ಮತ್ತು ರಾಕಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಡಿ (ಗ್ಯಾಂಗ್ ರೇಪ್) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.