• 7 ಫೆಬ್ರವರಿ 2025

ಸತ್ತ ಮೇಲೂ ಯಾತನೆ ಅನುಭವಿಸಿದ ಒಂದು ಮನುಷ್ಯನಿದ್ದಲ್ಲಿ ……

 ಸತ್ತ ಮೇಲೂ ಯಾತನೆ ಅನುಭವಿಸಿದ ಒಂದು ಮನುಷ್ಯನಿದ್ದಲ್ಲಿ ……
Digiqole Ad

ಸತ್ತ ಮೇಲೂ ಯಾತನೆ ಅನುಭವಿಸಿದ ಒಂದು ಮನುಷ್ಯನಿದ್ದಲ್ಲಿ ……

ಅದು 

ಸಾರಾ ಬಾರ್ಟ್‌ಮನ್, ಎಂಬ ಹೆಂಗಸು, ದಕ್ಷಿಣ ಆಫ್ರಿಕಾದ ಪೂರ್ವ ಕೇಪ್‌ನಲ್ಲಿ 1789 ರಲ್ಲಿ ಜನಿಸಿದರು ಮತ್ತು ಅವರು ಖೋಖೋಯ್ ಬುಡಕಟ್ಟು ಜನಾಂಗದವರು ಆಗಿದ್ದು, ಗುಹೆಯ ನಿವಾಸಿಗಳಾಗಿದ್ದು, ದನ-ಕುರಿ ಮೇಯಿಸುವಿಕೆ ಮತ್ತು ಕೃಷಿಯಿಂದ ಬದುಕುತ್ತಿದ್ದರು. 

ಸಾರಾ ಎರಡು ವರ್ಷದವಳಿದ್ದಾಗ ತಾಯಿ, ನಾಲ್ಕು ವರ್ಷದವಳಾಗಿದ್ದಾಗ, ಅವಳ ತಂದೆ ತೀರಿಕೊಂಡರು. ಮದುವೆಯಾಗಿ ಒಂದು ಪುಟ್ಟ ಸಂಸಾರ ಸಾಗಿಸುತ್ತಿದ್ದಾಗ, ಸಾರಾಳ ಒಬ್ಬಳೇ ಮಗಳು ಚಿಕ್ಕ ವಯಸ್ಸಿನಲ್ಲೇ ತೀರಿಹೋದಳು. ಜೊತೆಗೆ ನಂತರದ ದಿನಗಳಲ್ಲಿ , ಡಚ್ ಆಕ್ರಮಣಕಾರರಿಂದ ಪ್ರೀತಿ ಪಾತ್ರರಾದ ಪತಿ ಕೊಲ್ಲಲ್ಪಟ್ಟರು. ಸಂಪೂರ್ಣ ಅನಾಥತೆ ಅವಳನ್ನು ಬಿಡಲೇ ಇಲ್ಲ. ಈ ಸಂಧರ್ಭದಲ್ಲಿ, ದಕ್ಷಿಣ ಆಫ್ರಿಕಾ ಬ್ರಿಟಿಷ್ ಆಳ್ವಿಕೆಯಲ್ಲಿತ್ತು.

ಸಾರಾ ಜೀವನೋಪಾಯಕ್ಕಾಗಿ ಮನೆಗೆಲಸವನ್ನು ಹುಡುಕುತ್ತಾ ಕೇಪ್ ಟೌನ್‌ಗೆ ಹೋದಳು.

ಮುಗಿಯಲಿಲ್ಲ… ಸಾರಾರವರ ಬುಡಕಟ್ಟಿನ ಹೆಸರು ಖೋಖೋಯ್.

ಆ ಬುಡಕಟ್ಟು ಜನರ ದೇಹವು ವಿಶಿಷ್ಟವಾದ ಮೈಕಟ್ಟು ಹೊಂದಿತ್ತು. ಪೃಷ್ಟಗಳು ಒಂದು ರೀತಿಯಲ್ಲಿ ದಷ್ಟ ಪುಷ್ಪವಾಗಿ ಬೃಹದಾಕಾರದಲ್ಲಿ ಸ್ವಲ್ಪ ಮುಕ್ಕಾಲು ವೃತ್ತಾಕೃತಿಯ ದಪ್ಪವಾಗಿತ್ತು. ಈ ರೀತಿಯ ಪೃಷ್ಠದ ಅಸಹಜ ಬೆಳವಣಿಗೆಯಿಂದಾಗಿ ಮತ್ತು ಪೃಷ್ಠದಲ್ಲಿ ಅಸಹಜ ಕೊಬ್ಬು ಹೆಚ್ಚಾಗುವ ಸ್ಥಿತಿಯನ್ನು Steatopygia/ಸ್ಟೀಟೋಪಿಜಿಯಾ ಎಂದು ಆ ದೈಹಿಕ ಸ್ಥಿತಿಯನ್ನು ಕರೆಯಲಾಗುತ್ತದೆ. ಆದ್ದರಿಂದ ಆ ಬುಡಕಟ್ಟು ಜನರನ್ನು ಎಲ್ಲರೂ ಕೂಡಲೇ ಗುರುತಿಸುತ್ತಿದ್ದರು.

ಸಾರಾಳು ಕೇಪ್ ಟೌನಿನಲ್ಲಿ ಪೀಟರ್ ಸೋರ್ಸಾ ಎಂಬವರ ಮನೆಯಲ್ಲಿ ಕೆಲಸಕ್ಕೆ ಸೇರಿದಳು. ಒಂದು ದಿನ ಪೀಟರ್‌ನ ಸಹೋದರ ಹೆನ್ರಿಕ್ ಸೀಸರ್ ಮತ್ತು ಅವನ ಸ್ನೇಹಿತ ವಿಲಿಯಂ ಡನ್‌ಲಪ್ ಎಂಬವರು ಅತಿಥಿಗಳಾಗಿ , ಸಾರಾ ಕೆಲಸ ಮಾಡುತ್ತಿದ್ದ ಆ ಮನೆಗೆ ಬಂದರು. ಪೀಟರ್ ನಲ್ಲಿ ಅವರು ಸಾರಾಳ ಬಗ್ಗೆ ವಿಚಾರಿಸಿದರು. ಇಬ್ಬರೂ ಅವಳಲ್ಲಿ ಕನಿಕರ ತೋರಿ, ಲಂಡನ್ನಿನಲ್ಲಿ ಸಾರಾಳಿಗೆ ಎಷ್ಟು ಕಾಲ ಬೇಕಾದರೂ ದುಡಿದು, ವಯಸ್ಸಾದ ಮೇಲೆ ಪೆನ್ಶನ್ ಸಿಗುವ ಕೆಲಸ ಮಾಡಿಸಿ ಕೊಡುತ್ತೇವೆ ಎಂದರು. ಈ ರೀತಿ ಪೆನ್ಶನ್ ಇದ್ದರೆ ಮಾತ್ರ ಕೆಲಸ ಮಾಡುವೆ ಎಂಬ ಒಡಂಬಡಿಕೆ ಬರೆದು ಸರ್ಕಾರಕ್ಕೆ ಸಮರ್ಪಿಸಲು ನಾವು ಸಹಾಯ ಮಾಡುತ್ತೇವೆ ಎಂದು ತೆರಳಿದರು.

ಅವರಿಬ್ಬರ ಮಾತು ಕೇಳಿ ಸಾರಾ , ಒಡಂಬಡಿಕೆ ತಯಾರಿಸಲು ಹೇಳಿದಳು. ಕೆಲ ದಿನಗಳಲ್ಲಿ ಅವರಿಬ್ಬರೂ ಒಡಂಬಡಿಕೆ ತಂದು ಅವಳ ಸಹಿ ಪಡೆದರು. ಮತ್ತೆ ಎರಡು ವಾರದಲ್ಲಿ ಅವಳನ್ನು ಗೌರವದಿಂದ ಕಾರಿನಲ್ಲಿ ಕೂರಿಸಿ ಕರೆದುಕೊಂಡು ಹೋದರು. ಇದನ್ನೆಲ್ಲಾ ನೋಡಿ, ಸಾರಾಳಿಗೆ ಒಳ್ಳೆಯದಾಗಲಿ ಎಂದು ಪೀಟರ್ ಕುಟುಂಬ ಅವಳನ್ನು ಬೀಳ್ಕೊಟ್ಟರು. 

ಮುಗಿಯಲಿಲ್ಲ

ಆದರೆ ….  ಆ ಸಮಯದಲ್ಲಿ ಲಂಡನ್ ನಗರವು ವಿವಿಧ ವಸ್ತು, ಪ್ರಾಣಿ, ಸರ್ಕಸ್…..ಮನರಂಜನಾ ಪ್ರದರ್ಶನ ಶೋರೂಂ ಸಭಾಂಗಣಗಳ ಡೇರೆಗಳಿಂದ ತುಂಬಿ ತುಳುಕಿ ಸಮೃದ್ಧವಾಗಿತ್ತು. ಶೋರೂಂ ಹೊಂದುವುದು ಸಾಮಾಜಿಕ ಔನ್ನತ್ಯದ ಗೌರವ ಎಂದು ಪರಿಗಣಿಸಲ್ಪಟ್ಟ ಕಾಲವಾಗಿತ್ತು. ಒಂದು ಪ್ರದರ್ಶನಾ ಶೊರೂಂ ಆರಂಬಿಸುವುದಕ್ಕಿಂತ ಅದನ್ನು ಅಡೆ ತಡೆ ಇಲ್ಲದೆ ಕಾರ್ಯಪ್ರವೃತ್ತವಾಗಿ ಮುಂದುವರಿಸುವುದು ಸುಲಭಸಾಧ್ಯವಾಗಿರಲಿಲ್ಲ. ಅದರಿಂದ ಜನಪ್ರೀಯತೆ ಜೊತೆ ಲಾಭ ಪಡೆಯುವುದಂತು ಅಸಾಧ್ಯವೇ ಆಗಿತ್ತು.

ಅಂದು ಕೇಪ್ ಟೌನಿನ ಪೀಟರನ ಮನೆಯಲ್ಲಿ ಸಾರಾಳ ದೇಹಾಕೃತಿಯಿಂದ ಪ್ರಭಾವಿತರಾದ ಆ ಅತಿಥಿಗಳಾದ ಸೀಸರ್ ಹಾಗೂ ಡನ್ಲಪ್ , ಅವಳನ್ನು ಲಂಡನ್‌ಗೆ ಕರೆತರುವ ಯೋಜನೆಗಳನ್ನು ಒಳಗೊಳಗೆ ಆಶಿಸಿ ರೂಪಿಸಿದರು. ಸ್ವತಃ ಒಂದು ಶೋರೂಂ ಪ್ರಾರಂಭಿಸಿ, ಅಂತಹ ವೇದಿಕೆಯಲ್ಲಿ ಸಾರಾ ಅವರ ಅಸಾಮಾನ್ಯ ಪೃಷ್ಠದ ಸೌಂದರ್ಯ ಪರಿಯನ್ನು ಪ್ರದರ್ಶಿಸುವುದು ಆ ಇಬ್ಬರ ಗುರಿಯಾಗಿತ್ತು. ಇದು ಗೊತ್ತಾದರೆ ಸಾರಾ ಬರುವುದಿಲ್ಲವೆಂದೂ, ಪೀಟರನ ಕುಟುಂಬ ನಿರಾಕರಿಸುವುದೆಂದೂ, ಸಾರಾನಿಗೆ ಆಂಗ್ಲ ಭಾಷೆ ಗೊತ್ತಿಲ್ಲವೆಂದೂ ಗೊತ್ತಿದ್ದ ಅವರಿಬ್ಬರೂ, ಸಾರಾ ಓದಲು ಸಾಧ್ಯವಾಗದಂತಹಾ ರೀತಿಯಲ್ಲಿ ಎಚ್ಚರಿಕೆಯಿಂದ ಆಳವಾದ ಆಂಗ್ಲಭಾಷೆಯಲ್ಲಿ ಸಿದ್ಧಪಡಿಸಿದ (“ಒಪ್ಪಂದದ ಸೇವಕಿ “ ಎಂಬ ಶೀರ್ಷಿಕೆಯ)ಒಪ್ಪಂದದಲ್ಲಿ ಸಹಿ ಹಾಕಿಸಿದರು. ಆ ಒಪ್ಪಂದದ ಆಧಾರದ ಮೇಲೆ ಅವರು 1810 ರಲ್ಲಿ ಸಾರಾಳನ್ನು ಪ್ರೀತಿ ಅಕ್ಕರೆ ತೋರಿ ಲಂಡನ್‌ಗೆ ಕರೆತಂದರು.

ಆ ಅತಿಥಿಗಳಿಬ್ಬರೂ ಶೋರೂಂ ತೆರೆದರು. ಆ ಕಾಲದಲ್ಲಿ ಬಿಳಿಯರ ಸಮಾಜವು ಆಫ್ರಿಕಾದ ಜನರನ್ನು, ವಿಶೇಷವಾಗಿ ಆಫ್ರಿಕಾದ ಮಹಿಳೆಯರನ್ನು “ಕೀಳು” ಎಂದು ಪರಿಗಣಿಸಿದ್ದರಿಂದ, ಆಫ್ರಿಕನರ ಮೇಲೆ ಯಾವುದೇ ದುರ್ವರ್ತನೆಗೈಯಲು , ಶೋರೂಂ ಪ್ರಾರಂಭಿಸಲು, ಸುಲಭದಲ್ಲಿ ಅನುಮತಿ ದೊರಕಿತು. ಸೀಸರ್ ಮತ್ತು ಡನ್ಲಪ್ ಅದಕ್ಕೆ ಹಣ ಚೆಲ್ಲುವ ಶ್ರೀಮಂತರನ್ನು ಕಾರ್ಯಕ್ರಮದ ಸಂಘಾಟಕರನ್ನಾಗಿ ಮಾಡಿದರು. ಸಾರಾನ ಪ್ರದರ್ಶನದ ಜಾಹಿರಾತು “ಹಾಟೆಂಟಾಟ್ ವೀನಸ್” ಎಂಬ ಹೆಸರಿನ ವಿಲಕ್ಷಣ ಪ್ರದರ್ಶನದ ಬಗ್ಗೆ ಲಂಡನಿನ ಮೂಲೆ ಮೂಲೆಗಳಲ್ಲಿ ಪ್ರಚಾರ ಮಾಡಲಾಯಿತು. ಸಾರಾ ಮತ್ತು ಅವಳ ಬಟ್/ನಿತಂಬ ಯುರೋಪಿಯನ್ನರಿಗೆಲ್ಲಾ ಕಾಣುವ ಕಾತರದ ಬಿಸಿ ಏರಿತು.

ಅಲ್ಲಿ ಸಾಕಷ್ಟು ಕೊಬ್ಬಿದ ನಿತಂಬವನ್ನು ಯಾರೂ ಕಾಣಲಿಲ್ಲವಾದುದರಿಂದ, ಆ ಸಮಯದಲ್ಲಿ ಅದೊಂದು ಸೌಂದರ್ಯದ ಆಶ್ಚರ್ಯಕರ ಮಾನದಂಡವೆಂದು ಸಾರ್ವಜನಿಕರ ಅನಿಸಿಕೆಯಾಯಿತು. ಒಟ್ಟಾರೆಯಾಗಿ ಆ ಪ್ರದರ್ಶನದ ಜಿಜ್ಞಾಸೆ– ಕುತೂಹಲ ಗ್ರಹಿಕೆ, ವೈಜ್ಞಾನಿಕ ಆಸಕ್ತಿ ಹಾಗೂ ಕಾಮಪ್ರಚೋದಕ ಉತ್ಪ್ರೇಕ್ಷೆಗಳ ಕೇಂದ್ರವಾಯಿತು.

ಜೊತೆಗೆ ಕಾರ್ಯಕ್ರಮದ ಸಂಘಾಟಕರು ಜನರನ್ನು ಆಕರ್ಷಿಸಲು, ಸಾರನ ಅಂಗಗಳನ್ನು ಉಲ್ಲೇಖಿಸಿ ಹಾಡುಗಳನ್ನು ಬರೆಯಲು, ಹಾಡಲು. ಅವಳನ್ನು ಊಹಿಸಿ ರೇಖಾಚಿತ್ರ ಬರೆಯಲೂ , ಅವಳನ್ನು ಕಂಡ ನಂತರದ ರೇಖಾ ಚಿತ್ರ ಬರೆಯಲೂ ಪ್ರೇಕ್ಷಕರಲ್ಲಿ ಕರೆ ಇತ್ತರು. 

ಇದೇನೂ ಅರಿಯದ ಸಾರಾನನ್ನು ಒಂದು ಮನೆಯಲ್ಲಿ ಒಳ್ಳೆಯ ಆಹಾರ ಕೊಟ್ಟು ಸತ್ಕರಿಸುತ್ತಿದ್ದರು. ಪ್ರದರ್ಶನದ ದಿನ, ಮಧ್ಯಾಹ್ನದ ಆಹಾರ ತಿಂದು ಕುಳಿತಿದ್ದ ಸಾರಾನನ್ನು , ಆಸ್ಟ್ರಿಚ್ ಹಕ್ಕಿಯ ಗರಿಗಳ ಬಿಗಿಯಾದ ಬಟ್ಟೆಯೊಂದಿಗೆ ಅರೆಬೆತ್ತಲೆ ಬಟ್ಟೆ ತೊಡುವಂತೆ ಬಲವಂತ ಮಾಡಿದರು. ತನ್ನನ್ನು ಸಂಪೂರ್ಣ ನಗ್ನ ಮಾಡದಿರಲು ಕೋರಿಕೊಂಡಳು. ಅವಳು ಒಪ್ಪದೇ ಇದ್ದಾಗ ಅವಳನ್ನು ಬಿಗಿ ಹಿಡಿದು ಕಟ್ಟಿ , ಎದೆ ಹಾಗೂ ಸೊಂಟದ ಭಾಗದಲ್ಲಿ ಆ ಗರಿಗಳನ್ನು ತುರುಕಿಸಿ ಕಟ್ಟಿ, ಮೈಮೇಲೆ ಕಬ್ಬಿಣದ ಸಂಕೊಲೆ ಹಾಕಿ, ಒಂದು ಕಬ್ಬಿಣದ ಪಂಜರ ಅಂದರೆ, ಬೋನಿನೊಳಗೆ ಸೇರಿಸಿ, ಆ ಬೋನನ್ನು ರೇಷ್ಮೆ ಬಟ್ಟೆಯಿಂದ ಮುಚ್ಚಿದರು.

ಪ್ರದರ್ಶನ ನೋಡಲು ಜನರು ಕ್ಕಿಕ್ಕಿರಿದಿದ್ದರು. ವೇದಿಕೆಗೆ ಆ ರೇಷ್ಮೆ ಬಣ್ಣ ಹಾಕಿದ ಬೋನು/ಪಂಜರ ತಂದರು. ನಿಧಾನವಾಗಿ ರೇಷ್ಮೆ ಬಟ್ಟೆ ಸರಿಸಿದಾಗ, ಬೋನಿನೊಳಗೆ ಚಡಪಡಿಸುವ, ಆಸ್ಟ್ರಿಚ್ ಹಕ್ಕಿಯ ಪುಕ್ಕ ತೊಟ್ಟ ಅರೆನಗ್ನ ಸಾರಾಳನ್ನು- ಅವಳ ದೇಹವನ್ನು ಜನ ಚಕಿತರಾಗಿ ನೋಡಿ ಬೊಬ್ಬಿಟ್ಟರು. ಕೆಲವರು ದುಡ್ಡನ್ನು ಬೋನಿನ ಪಂಜರದ ಕಡೆ ಎಸೆದರು.  

ಬೋನಿನ ಪಕ್ಕ ನಿಂತಿದ್ದ, ಒಬ್ಬ ಪ್ರದರ್ಶನಕಾರ ಅಂದರೆ ಇವೆಂಟ್ ಮಾಸ್ಟರ್ , ಕೈಯಲ್ಲಿ ಒಂದು ಕಬ್ಬಿಣದ ಕೋಲು ಹಾಗೂ ಚಾಟಿ ಹಿಡಿದು ನಿಂತಿದ್ದ. ಅವನು ಗರಿಯ ಬಟ್ಟೆ ತೊಟ್ಟ ಸಾರಾಳನ್ನು ಕಬ್ಬಿಣದ ಪಂಜರದೊಳಗಿಂದ, ಅವಳ ಸಂಕೊಲೆಗೆ ಕೈ ಹಾಕಿ, ಪ್ರಾಣಿಯಂತೆ ವೇದಿಕೆಗೆ ಎಳೆದ. ಅವಳು ಆಗ ಕಬ್ಬಿಣದ ಬೋನಿನಿಂದ ಹೊರಬರಲು ನಿರಾಕರಿಸಿದಾಗ, ಅವಳನ್ನು ಚಾಟಿಯಿಂದ ಹೊಡೆದು ಕಬ್ಬಿಣದ ಕೋಲಿನ ಸಲಾಕೆಯಿಂದ ಚುಚ್ಚಿ ಹೊರಗೆಳೆದರು. ಆ ಸಮಯದಲ್ಲಿ ಅವಳು ನೋವಿನಿಂದ ಚೀರಿದಾಗ ಆ ನೆರೆದ ಜನರು ಖುಷಿ ಪಡತೊಡಗಿದರು. ನೋಡಲು ನೆರೆದ ಆ ಬಿಳಿಬಣ್ಣದ ಜನರು, ವಿಚಿತ್ರ ಪ್ರಾಣಿಗಳನ್ನು ಕಂಡಂತೆ, ಕುತೂಹಲ ಮತ್ತು ಕೂಗುಗಳೊಂದಿಗೆ ಅವಳ ಕಡೆ ಮುಗಿಬೀಳತೊಡಗಿದರು. ಇದು ಮೊದಲೇ ಗೊತ್ತಿದ್ದ ಸಂಘಾಟಕರು, ಜನರು ಅವಳ‌ ಬಳಿ ಬಾರದಂತೆ, ಅವಳು ಓಡಿ ಹೋಗದಂತೆ ನಿಯಂತ್ರಿಸಲು, ಸುತ್ತಲೂ ಕಬ್ಬಿಣದ ಬೇಲಿಯ ಜೊತೆ ದಾಂಡಿಗರನ್ನು ನಿಯಮಿಸಿದ್ದರು. 

ಒಂದರ ನಂತರ ಒಂದು ಪ್ರದರ್ಶನ ಮುಂದುವರಿಯಿತು. “ ಮನುಷ್ಯ ಹಾಗೂ ಮೃಗಗಳ ನಡುವಿನ ಮಿಸ್ಸಿಂಗ್ ಲಿಂಕ್” ಎಂದು ಕೆಲವು ಕಡೆ ಸಾರಾಳ ಬಗ್ಗೆ ಜಾಹಿರಾತು ಅಳವಡಿಸಿದರು. ಲಂಡನ್‌ನ ಗೋಡೆಗಳಲ್ಲಿ ಅವಳ ಎತ್ತರದ ಪೃಷ್ಠದ ನಗ್ನ ರೇಖಾ ಚಿತ್ರಗಳು ಹೇಗೆ‌ ತುಂಬಿದುವು ಎಂದರೆ, ಮೊತ್ತ ಮೊದಲ ಬಾರಿಗೆ ಸ್ವತಃ ಲಂಡನ್ ನಗರದ ನಗ್ನತೆಯನ್ನು ಆ ಪೋಸ್ಟರ್ ಗಳು ಮುಚ್ಚಿದವು!!!!!

ದಿನಕ್ಕೆ ಮೂರು ಪ್ರದರ್ಶನ. ಜೊತೆಗೆ ಅವಳನ್ನು ಮುಟ್ಟಲು ಪ್ರತ್ಯೇಕ ಸಾಲು ಹಾಗೂ ಶುಲ್ಕ ಪಾವತಿಕೆ. 

ಸಾರಾನನ್ನು ಖಾಸಗಿ ಪ್ರದರ್ಶನಗಳಿಗೆ ಕರೆದೊಯ್ಯಲು ದುಬಾರಿ ದುಡ್ಡಿನಲ್ಲಿ ಬಾಡಿಗೆಗೆ ಕೊಡಲಾಯಿತು. 

ಶ್ರೀಮಂತರ ಮನೆಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರಾ, ಪುರುಷರ ಮನರಂಜನೆಯ ಅತ್ಯಂತ ದುಂದು ವೆಚ್ಚದ ಆಟಿಕೆಯಾಯಿತು. 

ಕೆಲವು ಬ್ರಿಟಿಷ್ ಮಹಿಳೆಯರು ಆಕೆಯ ಬಣ್ಣ ಮತ್ತು ಆಕಾರವನ್ನು ಹಾಸ್ಯೋಲ್ಕರಿಸಿ, ನಕ್ಕು , ಚಪ್ಪಾಳೆ ತಟ್ಟಿ, ತ್ಯಾಜ್ಯಗಳನ್ನು ಅವಳೆಡೆ ಎಸೆದು, ಅವಳನ್ನು ದೃಷ್ಟಿಗೋಚರಿಸದ ನಿರ್ಜೀವ ಮೃಗದಂತೆ ಕಂಡರು.

 ಆದರೆ ಇದನ್ನು ಕಂಡು ನೊಂದ ಕನಿಷ್ಠ ಕೆಲವು ಬ್ರಿಟೀಷ್ ಮನಸ್ಸುಗಳಿದ್ದು, ಇಂತಹಾ ಅಮಾನವೀಯ ಪ್ರದರ್ಶನ ರದ್ದು ಮಾಡಬೇಕೆಂದು ಸೆನೆಟಿನಲ್ಲಿ ಮೊಕದ್ದಮೆ ದಾಖಲಿಸಿದರು. ಅವರಲ್ಲಿ ಒಬ್ಬರು ಜಕಾರಿ ಮೆಕಾಲೆ (ಭಾರತದಲ್ಲಿ ಮೆಕಾಲೆ ಶಿಕ್ಷಣ ತಂದ , ತಾಮಸ್ ಬಾಬಿಂಗ್ಟನ್ ಮೆಕಾಲೆಯವರ ತಂದೆ) ನೇತೃತ್ವ ವಹಿಸಿದ್ದರು. . ಆದರೆ ಅವಳು ಸಹಿ ಹಾಕಿದ ಒಪ್ಪಂದದ ಮುಂದೆ ಮೊಕದ್ದಮೆ ಪ್ರಕರಣಕ್ಕೆ ನೆಲೆ ಇಲ್ಲದಾಯಿತು. 

1807 ರಲ್ಲಿ, ಗುಲಾಮರ ವ್ಯಾಪಾರವನ್ನು ಕೊನೆಗೊಳಿಸುವ ಕಾಯಿದೆಯು ಲಂಡನ್‌ನಲ್ಲಿ ಜಾರಿಗೆ ಬಂದಿದ್ದರೂ, ವರ್ಣಬೇದದ ನೆರಳಲ್ಲಿ ಈ ಪ್ರದರ್ಶನ ಮುಂದುವರಿಯುತ್ತಿತ್ತು. ಆದರೆ ಆಂಗ್ಲ-ರಷ್ಯಾ ಯುದ್ದದ ಪರಿಣಾಮ, ಜನರಲ್ಲಿ ಆರ್ಥಿಕ ಹೊಡೆತ ಉಂಟಾಯಿತು. ಇದರಿಂದ ಅದೇ ಸಮಯದಲ್ಲಿ ಸಾರಾ ಬಾರ್ಟ್‌ಮ್ಯಾನ್ ಪ್ರದರ್ಶನಕ್ಕೆ ಪ್ರೇಕ್ಷಕರು ಕಡಿಮೆಯಾಗತೊಡಗಿದರು. ಆದ್ದರಿಂದ ಸಂಘಾಟಕರು ಅವಳೊಂದಿಗೆ ಬ್ರಿಟನ್ ಮತ್ತು ಐರ್ಲೆಂಡ್‌ಗೆ ಪ್ರದರ್ಶನ ಪ್ರವಾಸಗಳನ್ನು ಆಯೋಜಿಸಿದರು.

 1814 ರಲ್ಲಿ, ಸಾರಾರನ್ನು ಪ್ರಾನ್ಸಿನ ಪ್ಯಾರಿಸಿನಲ್ಲಿ, , ಖ್ಯಾತ ಶ್ರೀಮಂತ ಪ್ರದರ್ಶಕ ಎಸ್.ರಿಯಾಕ್ಸ್ ಎಂಬವರಿಗೆ ದುಬಾರಿ ದರಕ್ಕೆ ಮಾರಾಟ ಮಾಡಲಾಯಿತು. ರಿಯಾಕ್ಸ್ ಗಡಿಪಾರಾದ ಒಬ್ಬ ಆರೋಪಿಯಾಗಿದ್ದ. ಅಲ್ಲೂ ಅವಳನ್ನು ಸಾರ್ವಜನಿಕ ಪ್ರದರ್ಶನಗಳಿಗೆ ಇಡಲಾಯಿತು. ಬಾರ್‌ಗಳಲ್ಲಿ ಮುಖ್ಯ ಅತಿಥಿಯಾಗಿ ಗಣ್ಯರನ್ನು ಮೆಚ್ಚಿಸಲು ಅವಳನ್ನು ಅಲ್ಲಿ ನಿಯೋಜಿಸಲಾಯಿತು. ಅಲ್ಲಿ ಅವಳು ದಿನಗಳೆದಂತೆ ಮಧ್ಯಪಾನದ ವ್ಯಸನಿಯಾದಳು. ಮುಂದಿನ ದಿನಗಳಲ್ಲಿ ಅವಳನ್ನು ಲೈಂಗಿಕ ಕಿರುಕಳ ಕೊಡುವ ಹಲವರಿಗೆ ಬಾಡಿಗೆಗೆ ಕೊಡಲಾಯಿತು. 

ಅವಳ‌ ಬಗ್ಗೆ ಸಂಶೋಧನೆ ಮಾಡಲು, ಕೆಲವು ದಿನ ಫ್ರೇಂಚ್ ವಿಜ್ಞಾನಿಗಳಿಗೆ ಕೊಡಲು ಸರ್ಕಾರದ ಆದೇಶವನ್ನು ಪಡೆಯಲಾಯಿತು. ಆದರೆ, ಸಾರಾ ತನ್ನ ದೇಹದ ರಚನೆಯನ್ನು, ರಕ್ತವನ್ನು, ಚರ್ಮವನ್ನು ಮಾಂಸವನ್ನು ಕಿತ್ತು ಅಧ್ಯಯನ ಮಾಡಲು ಬಂದ ವಿಜ್ಞಾನಿಗಳ ಮುಂದೆ ತನ್ನ ಬೆತ್ತಲೆ ತನವನ್ನು ಪ್ರದರ್ಶಿಸಲು ನಿರಾಕರಿಸಿದಳು. ಅವಳು ಸಾಯುವ ವರೆಗೂ ತನ್ನ ಪೂರ್ಣ ನಗ್ನತೆ ಎಲ್ಲೂ ಪ್ರದರ್ಶಿಸಲು ತೋರಲೇ ಇಲ್ಲ. ಇದು ತನ್ನ, ಭೂಮಿಯಲ್ಲಿರುವ ತನ್ನಂತಹಾ ಹಲವಾರು ಮಹಿಳೆಯರ ಘನತೆಯನ್ನು ಕಸಿದುಕೊಳ್ಳುವ ವಿಷಯ ಎಂದು ಸಾರಾ ಕಿರುಚಿದಳು.

ಅವಳಿಂದ ಬೇಕಾದಷ್ಟು ದುಡ್ಡು ಮಾಡಿದ ರಿಯಾಕ್ಸ್ , ಕೊನೆಗೊಂದು ದಿನ ಅವಳನ್ನು ಮೃಗಾಲಯಕ್ಕೆ ಒಪ್ಪಿಸಿ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಿದನು.

ಒಂಟಿತನ, ಖಿನ್ನತೆ ಮತ್ತು ಬಲವಂತದ ವ್ಯಭಿಚಾರವು ಸಾರಾ ಅವರನ್ನು ದೀರ್ಘಕಾಲದ ಆಲ್ಕೊಹಾಲ್ಯುಕ್ತರನ್ನಾಗಿ ಮಾಡಿತು. ಹಲವಾರು ರೋಗಗಳು ಅವಳನ್ನು ಶೀಘ್ರತಿಶೀಘ್ರದಲ್ಲಿ ಆವರಿಸಿದವು. ಡಿಸೆಂಬರ್ 29, 1815 ರಂದು, ಪ್ಯಾರಿಸ್ನಲ್ಲಿ ನಡೆಯುತ್ತಿದ್ದ ವೇದಿಕೆಯ ಪ್ರದರ್ಶನದ ನಡುವೆಯೇ, ಸಾರಾ ಇಪ್ಪತ್ತಾರನೇ ವಯಸ್ಸಿನಲ್ಲಿ ನಿಧನರಾದರು.

ಮುಗಿದಿಲ್ಲ ….

ಸಾವಿನ ನಂತರವೂ ಅವಳ ಮೇಲಿನ ಪ್ರದರ್ಶನದ ಚಿತ್ರಹಿಂಸೆಗಳ ಬಾಣಗಳು ಕೊನೆಗೊಳ್ಳಲಿಲ್ಲ. ಸಾರಾಳ ಮರಣಾನಂತರ, ಅವಳ ಪೃಷ್ಠಗಳು, ಜನನಾಂಗಗಳು, ಮೆದುಳು,ಅವಳ ದೇಹದ ಎಲ್ಲಾ ಮಾಂಸದ ತಿರುಳು ಹಾಗೂ ಆ ಮಾಂಸದ ತಿರುಳು ಕಿತ್ತು ತೆಗೆದ ಅಸ್ಥಿಪಂಜರವನ್ನು ಫ್ರಾನ್ಸ್‌ನ ಮ್ಯೂಸಿಯಂ ಡಿ’ ಹಿಸ್ಟೋಯಿರ್ ನ್ಯಾಚುರಲ್ ಡಿ’ ಆಂಗರ್ಸನ್ ನಲ್ಲಿರುವ – ಮ್ಯೂಸಿಯಂ ಆಫ್ ಮ್ಯಾನ್ (Museum of Man) ವಿಭಾಗದಲ್ಲಿ ಪ್ರದರ್ಶನಕ್ಕಿರಿಸಿದರು.!!! ಅದೂ ಅಲ್ಲದೆ, ಅವಳ ಪೂರ್ಣಕಾಯ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ನಿರ್ಮಿಸಿದ, ಮುಟ್ಟಲು ನುಣ್ಣಗಿನ ಶಿಲ್ಪವೂ ಅಲ್ಲಿರಿಸಲಾಯಿತು. 1815 ರಿಂದ 1974 ರವರೆಗೆ ಮ್ಯೂಸಿಯಂನಲ್ಲಿ ಪ್ರದರ್ಶನ ವಸ್ತುವಾಗಿ ಮುಂದುವರಿಯಿತು. 

ಗಾಂಧೀಜಿಯ ವರ್ಣಬೇಧ ನೀತಿ ವಿರುದ್ದದ ಸಮರದ ನಂತರ , ಆಫ್ರಿಕನ್ನರು ತಮ್ಮ ಹಕ್ಕಿನ ಬಗ್ಗೆ ಜಾಗೃತರಾದರು. 1940 ರ ದಶಕದಿಂದ, ಅವಳ ಅವಶೇಷಗಳನ್ನು ಹಿಂದಿರುಗಿಸಲು ವಿರಳವಾದ ಆಫ್ರಿಕನ್ ಜನಜಾಗೃತಿ ಕರೆಗಳು ಬಂದವು. 

1998 ರಲ್ಲಿ ದಕ್ಷಿಣ ಆಫ್ರಿಕಾದ ಕವಯಿತ್ರಿ ಡಯಾನಾ ಫೆರಸ್ ಅವರು ಖೋಖೋ ಮೂಲದವರಿಂದ ಬರೆದ “ನಾನು ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದೇನೆ” ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಕವನವು ಸಾರಾ ಬಾರ್ಟ್‌ಮ್ಯಾನ್‌ನ ಅವಶೇಷಗಳನ್ನು ಅವಳ ಜನ್ಮ ಮಣ್ಣಿಗೆ ಮರಳಿ ತರುವ ಚಳುವಳಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

 ಆದರೆ, 1980 ರ ದಶಕದಲ್ಲಿ ಅಮೆರಿಕದ ಪ್ರಾಗ್ಜೀವಶಾಸ್ತ್ರಜ್ಞ ಸ್ಟೀಫನ್ ಜೇ ಗೌಲ್ಡ್ ಅವರು ಬರೆದ -” ದಿ ಮಿಸ್‌ಮೀಸರ್ ಆಫ್ ಮ್ಯಾನ್ “ ಕೃತಿಯಿಂದ, ಈ ಸಾರಾಳ ಕಥೆ ಪ್ರಪಂಚದಾದ್ಯಂತ ಪ್ರಾಮುಖ್ಯತೆಯನ್ನು ಪಡೆಯಿತು .  

ಕೆಲವೇ ದಿನಗಳಲ್ಲಿ ವಸಾಹತುಶಾಹಿ ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ಪರಿಣತಿ ಹೊಂದಿರುವ ಸಂಶೋಧಕ ಮತ್ತು ನ್ಯಾಯಶಾಸ್ತ್ರಜ್ಞ ಮ್ಯಾನ್ಸೆಲ್ ಉಪಮ್ ಅವರು. ಸಾರಾಳ ಅವಶೇಷಗಳನ್ನು ದಕ್ಷಿಣ ಆಫ್ರಿಕಾಕ್ಕೆ ಮರಳಿ ತರಲು ಚಳುವಳಿಯನ್ನು ಉತ್ತೇಜಿಸಿದರು.1994 ರ ನ್ಯಾಷನಲ್ ಕಾಂಗ್ರೆಸ್ (ANC) ವಿಜಯದ ನಂತರ , ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರು ಫ್ರಾನ್ಸ್ ಅವಶೇಷಗಳನ್ನು ಹಿಂದಿರುಗಿಸುವಂತೆ ವಿನಂತಿಸಿದರು. 

1994 ರಲ್ಲಿ, ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ, ಸಾರಾ ಅವರ ಅವಶೇಷಗಳನ್ನು ಬಿಡುಗಡೆ ಮಾಡಲು ಎಲ್ಲಾ ರೀತಿಯ ಔಪಚಾರಿಕ ಕ್ರಮಗಳನ್ನು ತೆಗೆದುಕೊಂಡರು.ಆ ಪ್ರಕ್ರಿಯೆ ಪೂರ್ಣಗೊಳಿಸಲು ಎಂಟು ವರ್ಷಗಳನ್ನು ತೆಗೆದುಕೊಂಡಿತು. ಅಂತಿಮವಾಗಿ, (192)ನೂರ ತೊಂಬತ್ತೆರಡು ವರ್ಷಗಳ ನಂತರ, 2002ರ 6ನೇ ಮೇ ತಿಂಗಳಲ್ಲಿ ಸಾರಾ ಬಾರ್ಟ್‌ಮ್ಯಾನ್ ಪೃಷ್ಠದ, ಗುದದ್ವಾರ, ಮಾಂಸ, ಮಾಂಸವನ್ನು ತೆಗೆದ ಅಸ್ಥಿಪಂಜರ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ನುಣ್ಣಗಿನ ಶಿಲ್ಪ ಹಳೆಯ ಪ್ರತಿಮೆಯೊಂದಿಗೆ ತನ್ನ ಸ್ಥಳೀಯ ನೆಲಕ್ಕೆ ಮರಳಿದಳು ಎನ್ನಬಹುದು.

ಅಂದರೆ, ಫ್ರೆಂಚ್ ನ್ಯಾಶನಲ್ ಅಸೆಂಬ್ಲಿಯಲ್ಲಿ ಸಾಕಷ್ಟು ಕಾನೂನು ವಾಗ್ವಾದಗಳು ಮತ್ತು ಚರ್ಚೆಗಳ ನಂತರ , ಮಾರ್ಚ್ 6, 2002 ರಂದು ಫ್ರಾನ್ಸ್ ವಿನಂತಿಯನ್ನು ಒಪ್ಪಿಕೊಂಡಿತು. ಆಕೆಯ ಅವಶೇಷಗಳನ್ನು 6 ಮೇ 2002 ರಂದು, ಆಕೆಯ ತಾಯ್ನಾಡಿಗೆ ಹಿಂದಿರುಗಿಸಲಾಯಿತು ,

ಅವಳ ಈ ಭಾಗಗಳನ್ನು ಸ್ವಾಗತಿಸಲು ಮಂಡೇಲಾ ಅವರು, 9ನೇ ಆಗಸ್ಟ್ 2002ರಂದು ಆಫ್ರೀಕಾದ ಹ್ಯಾಂಕಿ ಎಂಬ ಊರಲ್ಲಿನ ಇತಿರಿಂ ಬೆಟ್ಟದ ಮೇಲಣ, ಶಾಂತಿಯುತ ಪ್ರದೇಶದಲ್ಲಿ ಸಮಾಧಿಗೆ ವ್ಯವಸ್ಥೆ ಮಾಡಲಾಯಿತು. , ಅಸಂಖ್ಯಾತ ವರ್ಣಭೇದ ಕಿರುಕುಳ, ಆಕ್ರಮಣ, ….ವೈವಿಧ್ಯತೆಯ ಅಮಾನವೀಯ ಕೃತ್ಯಗಳನ್ನು ಸಹಿಸಿ, ಮೃತಾನಂತರ ಚಿದ್ರ ಚಿದ್ರಪಡಿಸಿ, ಬೇರ್ಪಡಿಸಿದ ದೇಹದ ನಾನಾ ಭಾಗಗಳ ಅವಶೇಷಗಳು, ತನ್ನ ಮಾತೃ ಭೂಮಿಯೊಳಗೆ ಸಮಾಧಿಯಾಗಿ, ಸೇರಿ ಕರಗತೊಡಗಿತು. ಆ ಕರಗುವ ಅವಶೇಷಗಳ ಮೇಲೆ ಅಮೃತಶಿಲೆಯ ಚಪ್ಪಡಿ ಸ್ಥಾಪಿಸಿ, 

“””ಅಚ್ಚಳಿಯದ ಬಣ್ಣ”””””ದಿಂದ

 (ನೆನಪಿಡಿ ಅಚ್ಚಳಿಯದ ಬಣ್ಣದಿಂದ) 

ಹೀಗೆ ಕೆತ್ತಲಾಗಿತ್ತು…..

“ಸಾರಾ ಬಾರ್ಟ್‌ಮ್ಯಾನ್‌ನ ಈ ಹಿಂದಿರುಗುವಿಕೆಯ ಮೂಲಕ, ಮಾತೃ ರಾಜ್ಯವು ಅವರ ಆ ಜೀವನದೊಳಗೆ ಒಂದು ನೋಟವನ್ನು ಸದಾ ನೋಡಬಹುದು. ಅವರ ಜೀವನದ ಹೋರಾಟವು ಇದರೊಂದಿಗೆ ಆಫ್ರಿಕನ್ ಸ್ವಗೋತ್ರದ ಪೂರ್ವಜರು , ಉತ್ತರಾಧಿಕಾರಿಗಳ ಹಾಗೂ ಮುಂದಿನ ಪೀಳಿಗೆಯ ಘನತೆಯನ್ನು ಹೆಚ್ಚಿಸುತ್ತದೆ. ಮಾರ್ಗದರ್ಶಿಸುತ್ತದೆ”

ಮುಗಿಯಲಿಲ್ಲ…

“””‘ಅಚ್ಚಳಿಯದ ಬಣ್ಣ””” ಅಲ್ಲಿಗೇ ಮುಗಿಯಲಿಲ್ಲ.

ಶನಿವಾರ, ಏಪ್ರಿಲ್ 25, 2015 ರಂದು, ಫಲಕವನ್ನು ಬಿಳಿ ಬಣ್ಣದಿಂದ ಕೆಲವು ನೆಲ್ಸನ್ ಮಂಡೇಲಾ ವಿರೋಧಿ ಕಿಡಿಗೇಡಿಗಳು ವಿರೂಪಗೊಳಿಸಿದರು…

ಮುಗಿಯಲಿಲ್ಲ…. ಸುಮಾರು 236 ವರುಷಗಳಾದರೂ, ಇನ್ನೂ ಸಾರಾ ತನ್ನ ಮೇಲಿನ ಮುಂದುವರಿದ ಆಕ್ರಮಣಕ್ಕೆ ಕಾಯುತ್ತಾ ಇದ್ದಾಳೆ….

ನಾನು ಸಾರಾ ಆಗಿದ್ದಲ್ಲಿ….

” ಸಾಯುವ ಮೊದಲು ಒಂಚೂರು ಜೀವಿಸಬೇಕೆಂಬ ಆಸೆ” ಎಂದು ಹಂಬಲಿಸುತ್ತಿದ್ದೆ.

ಕೃಪೆ:ROOPESH PUTTUR

Digiqole Ad

ಈ ಸುದ್ದಿಗಳನ್ನೂ ಓದಿ