ಬಂಟ್ವಾಳ: ಇನ್‌ಸ್ಟಾಗ್ರಾಂ ಲೈಕ್ ವಿವಾದ – ನಿಶ್ಚಿತಾರ್ಥಗೊಂಡ ಯುವತಿ ಕಿರಿಕಿರಿ, ಯುವಕ ಆತ್ಮಹತ್ಯೆ


ಬಂಟ್ವಾಳ: ಇನ್‌ಸ್ಟಾಗ್ರಾಂ ಲೈಕ್ ವಿವಾದ – ನಿಶ್ಚಿತಾರ್ಥಗೊಂಡ ಯುವತಿ ಕಿರಿಕಿರಿ, ಯುವಕ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಬಂಟ್ವಾಳ : ಇನ್‌ಸ್ಟಾಗ್ರಾಂನಲ್ಲಿ ಮತ್ತೊಬ್ಬ ಯುವತಿಯ ಫೋಟೋಗೆ ಲೈಕ್ ಮಾಡಿದ ವಿಚಾರದಲ್ಲಿ ನಿಶ್ಚಿತಾರ್ಥಗೊಂಡ ಯುವತಿ ಕಿರಿಕಿರಿ ಮಾಡಿದ ಪರಿಣಾಮ, ಮನನೊಂದು ಚೇತನ್ (25) ಎಂಬ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದಲ್ಲಿ ನಡೆದಿದೆ. ಚೇತನ್‌ಗೆ ಮಂಗಳೂರಿನ ಚೈತನ್ಯಾ ಎಂಬ ಯುವತಿಯ ಪರಿಚಯ ಇನ್‌ಸ್ಟಾಗ್ರಾಂ ಮೂಲಕವಾಗಿದ್ದು, ಈ ಪರಿಚಯವು ಪ್ರೀತಿಯಾಗಿ ಬೆಳೆಯಿತು. 8 ತಿಂಗಳ ಹಿಂದೆ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು.
ಘಟನೆಯ ದಿನದಂದು ಅಂದರೆ ಜನವರಿ 21ರಂದು ಬೆಳಗ್ಗೆ ಚೇತನ್ ಮನೆಯಲ್ಲಿ ಇದ್ದನು. ಆತನ ತಾಯಿ ಪುಷ್ಪ ತಮ್ಮ ತವರು ಮನೆಗೆ ಹೋಗಿದ್ದರು. ಚೈತನ್ಯಾ ಆ ದಿನ ಚೇತನ್ ಮನೆಗೆ ಬಂದಿದ್ದಳು. ಬೆಳಗ್ಗೆ 11.30ರ ಸುಮಾರಿಗೆ ಪುಷ್ಪಾ ಮನೆಗೆ ಹಿಂದಿರುಗಿದಾಗ, ಚೇತನ್ ಮಲಗಿದ ಸ್ಥಿತಿಯಲ್ಲಿ ಕಂಡುಬಂದನು. ಎಬ್ಬಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಮನೆಯ ಮೇಲ್ಚಾವಣಿಯಲ್ಲಿ ಲುಂಗಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಚೇತನ್ ಶವ ಪತ್ತೆಯಾಯಿತು.
ಚೈತನ್ಯಾ ಹೇಳಿಕೆಯ ಪ್ರಕಾರ, ಚೇತನ್ ಇನ್‌ಸ್ಟಾಗ್ರಾಂನಲ್ಲಿ ಮತ್ತೊಬ್ಬ ಯುವತಿಯ ಫೋಟೋಗೆ ಲೈಕ್ ಮಾಡಿದ ವಿಚಾರವಾಗಿ ಅವರು ಚರ್ಚೆ ಮಾಡಿದ್ದರು. ಈ ವಿಷಯ ಗಲಾಟೆಗೆ ತಿರುಗಿ, ಚೇತನ್ ಈ ನಿರ್ಧಾರಕ್ಕೆ ಬಂದಿರುವುದು ತಿಳಿದುಬಂದಿದೆ.
ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.