ಪುತ್ತೂರು ‘ಹೊಸಜಿಲ್ಲೆ’ ಘೋಷಣೆಗೆ ಎಸ್‌ಡಿಪಿಐ ಆಗ್ರಹ
ಪುತ್ತೂರು ‘ಹೊಸಜಿಲ್ಲೆ ‘ಘೋಷಣೆಗೆ ಎಸ್‌ಡಿಪಿಐ ಆಗ್ರಹ
ಪುತ್ತೂರು: ವಿಶಾಲ ವ್ಯಾಪ್ತಿಯನ್ನು ಹೊಂದಿರುವ ದ.ಕ ಜಿಲ್ಲೆಯಲ್ಲಿ ಆಡಳಿತಾತ್ಮಕ ವ್ಯವಸ್ಥೆ- ಸಾರ್ವಜನಿಕರ ಅನುಕೂಲದ ದೃಷ್ಠಿಯಿಂದ ಪುತ್ತೂರನ್ನು ಹೊಸಜಿಲ್ಲೆಯಾಗಿ ಘೋಷಣೆ ಮಾಡಬೇಕು. ಜಿಲ್ಲೆಯಾಗುವ ಎಲ್ಲಾ ಅರ್ಹತೆ ಹೊಂದಿರುವ ಪುತ್ತೂರು ಜಿಲ್ಲೆಗಾಗಿ ಇಲ್ಲಿನ ಜನಪ್ರನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಎಸ್‌ಡಿಪಿಐ ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಅವರು ಸರ್ಕಾರವನ್ನು ಆಗ್ರಹಿಸಿದರು.
ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಮತ್ತು ಸರ್ಕಾರಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆನ್ನುವುದು ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆಯಾಗಿದ್ದು, ಇದನ್ನು ಈಡೇರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಮಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಸರ್ಕಾರದ ನಿಯಂತ್ರಣವಿಲ್ಲದ ಕಾರಣದಿಂದಾಗಿ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಮೆಡಿಕಲ್ ಮಾಫಿಯಾದಿಂದಾಗಿ ಕಾನೂನುಗಳ ಅನುಷ್ಠಾನವಾಗುತ್ತಿಲ್ಲ.ಸರ್ಕಾರ ಇದಕ್ಕೆ ಕಡಿವಾಣ ಹಾಕುವ ಜತೆಗೆ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬಸ್ಸುಗಳ ಓಡಾಟದಲ್ಲಿ ಕಡಿತ ಕಂಡು ಬಂದಿದೆ. ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿಯಿಂದ ಮಂಗಳೂರಿಗೆ ಸಂಚರಿಸುವ ಬಹುತೇಕ ಬಸ್‌ಗಳನ್ನು ಹಿಂಪಡೆಯಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು, ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು. ಖಾಸಗಿ ಬಸ್ಸುಗಳಲ್ಲಿ ಬಾಗಿಲಿನ ವ್ಯವಸ್ಥೆ ಅಳಡಿಸಲು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅರಬ್ಬಿ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಸುಂದರ ಪ್ರದೇಶವಾದ ದ.ಕ.ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದಕ್ಕಾಗಿ ಮುಂದಿನ ಬಜೆಟ್‌ನಲ್ಲಿ ರೂ.೩ ಸಾವಿರ ಕೋಟಿ ಮೀಸಲಿಡಬೇಕು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಜಾಲವು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಮಂದಗತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಗಮನಹರಿಸಬೇಕು. ಪಾಲಕ್ಕಾಡ್, ಮೈಸೂರು, ಕೊಂಕಣ್ ರೈಲ್ವೇಯನ್ನು ವಿಭಜಿಸಿ ಪ್ರತ್ಯೇಕ ಮಂಗಳೂರು ರೈಲ್ವೇ ವಲಯವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.