ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ ಅವರಿಗೆ ತಿರುವನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ದೇಗುಲದ ಮಹಾ ಪ್ರಧಾನ ಅರ್ಚಕ ಸ್ಥಾನ
ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ ಅವರಿಗೆ ತಿರುವನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ದೇಗುಲದ ಮಹಾ ಪ್ರಧಾನ ಅರ್ಚಕ ಸ್ಥಾನ
ಬೆಳ್ತಂಗಡಿ: ಕೇರಳದ ಪ್ರಸಿದ್ಧ ತಿರುವನಂತಪುರಂ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮಹಾ ಪ್ರಧಾನ ಅರ್ಚಕರಾಗಿ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ (45) ಅವರು ನೇಮಕಗೊಂಡಿದ್ದಾರೆ. ಇವರಿಗೆ ಅತಿ ಕಡಿಮೆ ವಯಸ್ಸಿನಲ್ಲಿ ಈ ಗೌರವ ಸ್ಥಾನ ಲಭಿಸಿರುವುದು ವಿಶೇಷ.
ಸತ್ಯನಾರಾಯಣ ತೋಡ್ತಿಲ್ಲಾಯರು ದಿ| ಸುಬ್ರಾಯ ತೋಡ್ತಿಲ್ಲಾಯ ಹಾಗೂ ಶಾರದಾ ದಂಪತಿಯ ಪುತ್ರರಾಗಿದ್ದು, ಕೊಕ್ಕಡದ ಪೌರೋಹಿತ್ಯ ಪರಂಪರೆಯಿಂದ ಬಂದಿದ್ದಾರೆ. ಅವರು 6 ತಿಂಗಳ ಹಿಂದೆ ಪ್ರಧಾನ ಅರ್ಚಕರಾಗಿ ಸೇವೆಗೆ ಸೇರಿದ್ದರು. ಈಗ, ಇವರಿಗೆ ಮಹಾ ಪ್ರಧಾನ ಅರ್ಚಕ (ಪೆರಿಯ ನಂಬಿ) ಹುದ್ದೆ ಲಭಿಸಿದ್ದು, ಇದು ಅಪರೂಪದ ಗೌರವ.
*ಪರಂಪರೆ ಮತ್ತು ವಿಶೇಷತೆ:*
ಈ ಹುದ್ದೆ ಅಕ್ಕರೆ ದೇಶಿ (ಕೊಕ್ಕಡದ 8 ಮನೆತನ) ಹಾಗೂ ಇಕ್ಕರೆ ದೇಶಿ (ಕೇರಳದ 4 ಮನೆತನ)ಗಳಿಗೆ ಸೇರಿದ ಅರ್ಚಕರಿಗೇ ದೊರೆಯುವ ವ್ಯವಸ್ಥೆ ಇದೆ. ಈ ಹಿಂದಿನ ಮಹಾ ಪ್ರಧಾನ ಅರ್ಚಕರಾಗಿ ರಾಜೇಂದ್ರ ಅರೆಮನೆತ್ತಾಯ (ಅಕ್ಕರೆ ದೇಶಿ) ಅವರು 1.4 ವರ್ಷ ಸೇವೆ ಸಲ್ಲಿಸಿದ್ದರು.
ಈ ಹುದ್ದೆಯನ್ನು ಸ್ವೀಕರಿಸಿದ ಬಳಿಕ, ಸತ್ಯನಾರಾಯಣ ತೋಡ್ತಿಲ್ಲಾಯರು ಗೃಹಸ್ಥಾಶ್ರಮ ತೊರೆದು ಸನ್ಯಾಸ ಧರ್ಮ ಅನುಸರಿಸಬೇಕು. ಜೊತೆಗೆ, ದೇವಾಲಯದ ಎಲ್ಲಾ ಉತ್ಸವಗಳಿಗೆ ಅವರೇ ಪ್ರಧಾನ ಪೌರೋಹಿತರಾಗಿರುತ್ತಾರೆ.
ಸತ್ಯನಾರಾಯಣ ತೋಡ್ತಿಲ್ಲಾಯರು ಜನವರಿ 30ರಂದು ಅಧಿಕೃತವಾಗಿ ಹುದ್ದೆ ಸ್ವೀಕರಿಸಲಿದ್ದಾರೆ. ಈ ಮಹತ್ತರ ಸಾಧನೆಗಾಗಿ ಅವರ ಕುಟುಂಬ, ಊರಿನವರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.