ಸಸಿಹಿತ್ಲು ಕಡಲ ತೀರದಲ್ಲಿ ಅಪರೂಪದ ಕಡಲಾಮೆಗಳು ಪತ್ತೆ!
ಸಸಿಹಿತ್ಲು ಕಡಲ ತೀರದಲ್ಲಿ ಅಪರೂಪದ ಕಡಲಾಮೆಗಳು ಪತ್ತೆ!
ಮಂಗಳೂರು: ಸುಮಾರು ಮೂರು ದಶಕಗಳ ಬಳಿಕ ಮಂಗಳೂರಿನ ಸಸಿಹಿತ್ಲು ಕಡಲ ತಡಿಯಲ್ಲಿ ಅಪರೂಪದ ಕಡಲಾಮೆ ಒಲೀವ್ ರಿಡ್ಲೆ ಮತ್ತೆ ಕಾಣಿಸಿಕೊಂಡಿದೆ.
ಅಳಿವಿನ ಅಂಚಿನಲ್ಲಿರುವ ಈ ಕಡಲಾಮೆ, ತನ್ನ ಸಾಂಪ್ರದಾಯಿಕ ವಲಸೆ ಕ್ರಮದಂತೆ, ತಾನು ಹುಟ್ಟಿದ ತೀರವನ್ನು ಮುಟ್ಟಿದ್ದು, ಇಲ್ಲಿ ಮೊಟ್ಟೆ ಇಟ್ಟಿದೆ. ಕಡಲ ತಡಿಗೆ ಬಂದ ಆಮೆಯ ಅಪೂರ್ವ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಯಿಸಲಾಗಿದ್ದು, ಸ್ಥಳೀಯ ಮೀನುಗಾರರು ಮೊಟ್ಟೆಗಳ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.
ಈ ಹಿಂದೆ ಮಂಗಳೂರಿನ ಸುತ್ತಮುತ್ತಲಿನ ಸುಮಾರು 12 ತಟಗಳಲ್ಲಿ ಈ ಕಡಲಾಮೆಯ ಮೊಟ್ಟೆಗಳು ಪತ್ತೆಯಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಇವುಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ತಾವು ಹುಟ್ಟಿದ ತೀರವನ್ನು ಮರಳಿ ಹುಡುಕಿ ಮೊಟ್ಟೆ ಇಡುವುದೇ ಈ ಆಮೆಗಳ ಅಚ್ಚರಿಯ ವಿಶೇಷತೆಯಾಗಿದ್ದು, ಪ್ರಕೃತಿಯ ಅದ್ಭುತ ಕ್ರಿಯೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.
ಅತಿಯಾಗಿ ಅಪರೂಪವಾಗಿರುವ ಒಲೀವ್ ರಿಡ್ಲೆ ಕಡಲಾಮೆಗೆ ಕಾನೂನು ರಕ್ಷಣೆ ನೀಡಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ-1ರ ಅಡಿಯಲ್ಲಿ ಇವುಗಳ ಸಂರಕ್ಷಣೆಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ.