• 19 ಮಾರ್ಚ್ 2025

ಭಾರತೀಯ ವಾಯುಸೇನೆಗೆ ಹೊಸ ಆಯುಧ: ಶತ್ರುಪಡೆಯ ಡ್ರೋನ್‌ಗಳಿಗೆ ‘ಜೇಡರ ಬಲೆ’ ತಂತ್ರಜ್ಞಾನ!

Digiqole Ad

ಭಾರತೀಯ ವಾಯುಸೇನೆಗೆ ಹೊಸ ಆಯುಧ: ಶತ್ರುಪಡೆಯ ಡ್ರೋನ್‌ಗಳಿಗೆ ‘ಜೇಡರ ಬಲೆ’ ತಂತ್ರಜ್ಞಾನ!

ಬೆಂಗಳೂರು: ಶತ್ರುಪಡೆಯ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಲು ಭಾರತೀಯ ವಾಯುಸೇನೆ (IAF) ಹೊಸ “ಹಾರ್ಡ್ ಕಿಲ್ – UAV” ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಇದು ಡ್ರೋನ್‌ಗಳ ಮೇಲೆ ಜೇಡರ ಬಲೆ ಮಾದರಿಯ ಬಲೆ ಬೀಸಿ ಅವುಗಳನ್ನು ಸೆರೆಹಿಡಿಯುವ ತಂತ್ರವಾಗಿದೆ. ಈ ಹೊಸ ಆಯುಧವನ್ನು ಪುಣೆಯ ಫೈರಿಂಗ್ ರೇಂಜ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

500 ಮೀಟರ್ ದೂರದಿಂದಲೇ ಹಾರುವ ಬಲೆ!

ಈ ತಂತ್ರಜ್ಞಾನ “ಚಕ್ರ” ಎಂಬ ಬುಲೆಟ್ ಮಾದರಿಯ ಆಯುಧವನ್ನು ಬಳಸುತ್ತದೆ. ಇದರಲ್ಲಿ ಮದ್ದಿನ ಪುಡಿ ಮತ್ತು ಗಟ್ಟಿದಾರದಿಂದ ಹೆಣೆಯಲಾದ ಬಲೆಯನ್ನು ತುಂಬಲಾಗಿರುತ್ತದೆ. ಲೇಸರ್ ರೇಂಜ್ ಫೈಂಡರ್ ಮೂಲಕ ಡ್ರೋನ್ ಪತ್ತೆಯಾಗುತ್ತಿದ್ದಂತೆ, ಇದನ್ನು ಗುರಿಯತ್ತ ಹಾರಿಸಲಾಗುತ್ತದೆ. ಶರವೇಗದಲ್ಲಿ ಹೋಗುವ ಈ ಚಕ್ರವು 8 ಚದರ ಮೀಟರ್‌ನಷ್ಟು ದೊಡ್ಡ ಬಲೆಯನ್ನು ಬಿಡುತ್ತಿದ್ದು, ಡ್ರೋನ್‌ಗಳನ್ನು ಮುಕ್ತಾಯಗೊಳಿಸುತ್ತದೆ.

ಜಾಮರ್‌ಗಿಂತ ಮುನ್ನಡೆಯ ಹೊಸ ತಂತ್ರಜ್ಞಾನ

ಸಾಮಾನ್ಯವಾಗಿ ಶತ್ರುಪಡೆಯ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಲು ಜಾಮರ್‌ಗಳನ್ನು ಬಳಸಲಾಗುತ್ತದೆ. ಆದರೆ, ಈಗ ಆ್ಯಂಟಿ-ಜಾಮರ್‌ಗಳು ಲಭ್ಯವಾಗಿರುವುದರಿಂದ, ಡ್ರೋನ್‌ಗಳನ್ನು ನಾಶ ಮಾಡಲು ಹೊಸ ತಂತ್ರಜ್ಞಾನ ಅಗತ್ಯವಾಯಿತು. ಈ ಹೊಸ ‘ಚಕ್ರ’ ತಂತ್ರಜ್ಞಾನವು ರೇಡಿಯೋ ಫ್ರೀಕ್ವೆನ್ಸಿ (RF) ಅಥವಾ ವೈರ್ ತಂತ್ರಜ್ಞಾನ ಹೊಂದಿರುವ ಎಲ್ಲ ಪ್ರಕಾರದ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಬಲ್ಲದು.

ಭಾರತೀಯ ಸೇನೆಗೆ ಹೊಸ ಬಲ

ಈ ಹೊಸ ಆಯುಧವನ್ನು ಸಿಯಾಚಿನ್‌ನಂತಹ ಎತ್ತರ ಪ್ರದೇಶಗಳಲ್ಲಿ ಪರೀಕ್ಷಿಸಲು ಮುಂದಿನ ಎರಡು ತಿಂಗಳಲ್ಲಿ ತಯಾರಿ ನಡೆಯುತ್ತಿದೆ. ಜೂನ್-ಜುಲೈ ವೇಳೆಗೆ ಭಾರತೀಯ ವಾಯುಸೇನೆಯ ಬಳಕೆಗೆ ಈ ತಂತ್ರಜ್ಞಾನವನ್ನು ಒಪ್ಪಿಸಲು ಉದ್ದೇಶಿಸಲಾಗಿದೆ. ವಾಯುಸೇನೆ ಇದಕ್ಕಾಗಿ ಈಗಾಗಲೇ ಅನುದಾನ ಒದಗಿಸಿದ್ದು, ಇದು ಭವಿಷ್ಯದ ಯುದ್ಧ ತಂತ್ರದಲ್ಲಿ ಮಹತ್ವದ ಭೂಮಿಕೆಯನ್ನು ವಹಿಸಲಿದೆ.

ಭಾರತವು ಸ್ವತಃ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನ, ಡ್ರೋನ್‌ಗಳ ವಿರುದ್ಧದ ಸಮರದಲ್ಲಿ ಮಹತ್ವದ ಸಾಧನೆಯಾಗಲಿದ್ದು, ದೇಶದ ರಕ್ಷಣಾ ವ್ಯವಸ್ಥೆಗೆ ಹೊಸ ಬಲ ನೀಡಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ