ಎಳೆಯರಲ್ಲಿ ಕಾವ್ಯಾಸಕ್ತಿಗೆ ಯತ್ನ – ವಾಮನ್ ರಾವ್ ಬೇಕಲ್
ಎಳೆಯರಲ್ಲಿ ಕಾವ್ಯಾಸಕ್ತಿಗೆ ಯತ್ನ – ವಾಮನ್ ರಾವ್ ಬೇಕಲ್
ಬದಿಯಡ್ಕ:”ಪರಿಷತ್ತು ಈ ಅಭಿಯಾನದ ಒಂದು ವರ್ಷದಲ್ಲಿ ಕನಿಷ್ಠ ನೂರು ಮಂದಿ ಯುವ ಕವಿಗಳನ್ನು ತರಬೇತು ನೀಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆಗೊಳಿಸಲಿದೆ. ಈ ಉದ್ದೇಶದಿಂದ ಎಳೆಯರನ್ನು ಕೇಂದ್ರೀಕರಿಸಿ ಸಾಹಿತ್ಯ ತರಬೇತಿ ನಡೆಯಲಿದೆ. ಇದಕ್ಕೆ ಕನ್ನಡಿಗರ ಸಹಕಾರದ ಅಗತ್ಯ ಇದೆ’ ಎಂದು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ಕೆ ವಾಮನ್ ರಾವ್ ಬೇಕಲ್ ಹೇಳಿದರು. ಅವರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಬದಿಯಡ್ಕದ ಗಣೇಶ ಪೈ ಅವರ ಮನೆಯಲ್ಲಿ ಭಾನುವಾರ (ಫೆ.9)ದಂದು ನಡೆದ ದಿ. ಕೃಷ್ಣ ಪೈ ಸ್ಮರಣಾಂಜಲಿ ಕಾರ್ಯಕ್ರಮದ ಚುಟುಕು ಕವಿಗೋಷ್ಠಿಯಲ್ಲಿ ಮಾತನಾಡಿದರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ, ಪತ್ರಕರ್ತ ವಿರಾಜ್ ಅಡೂರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ,’
ಆಧುನಿಕ ತಂತ್ರಜ್ಞಾನ ಪ್ರೇರಿತ ವ್ಯವಸ್ಥೆಯಲ್ಲಿ ಸಾಹಿತ್ಯದ ಪ್ರಚಾರ ಹಾಗೂ ಭಾಷಾ ಜಾಗೃತಿಗೆ ಅಂತರ್ಜಾಲದ ಬಳಕೆ ಸೂಕ್ತ’ ಎಂದು ಹೇಳಿದರು. ಚುಟುಕು ಕವಿಗೋಷ್ಠಿಯಲ್ಲಿ ಶಾರದಾ ಮೊಳೆಯಾರ್ ಎಡನೀರು, ಕೆ ನರಸಿಂಹ ಭಟ್ ಏತಡ್ಕ, ರಾಧಾಕೃಷ್ಣ ಭಟ್ ಕುರುಮುಜ್ಜಿ. ಗಾಯತ್ರಿ ಪಳ್ಳತ್ತಡ್ಕ , ಶಶಿಕಲಾ ಟೀಚರ್ ಕುಂಬಳೆ, ಶಾರದಾ ಭಟ್ ಕಾಡಮನೆ,ಗಣೇಶ್ ಪೈ ಬದಿಯಡ್ಕ, ಎಂ. ಗಣೇಶ ಆಚಾರ್ಯ, ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿನಿಯರಾದ ಅವನಿ ಕರಿಂಬಿಲ, ಹರ್ಷಿತಾ ಪಳ್ಳಕ್ಕಾನ, ಶಾತೋಧರಿ ಪಿ ಎಂ, ಸಮನ್ವಿ, ಅವನಿ ಮಿತ್ತಜಾಲು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಬೇ. ಸೀ. ಗೋಪಾಲಕೃಷ್ಣ ಭಟ್, ನಿವೃತ್ತ ಪ್ರಾಧ್ಯಾಪಕ ಪ್ರೋ. ಎ ಶ್ರೀನಾಥ್ ಕಾಸರಗೋಡು, ನಿವೃತ್ತ ಉಪಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ, ಕನ್ನಡ ಭವನ ಕಾರ್ಯದರ್ಶಿ ವಸಂತ ಕೆರೆಮನೆ, ರಾಜೇಶ್ ಕೋಟೆಕಣಿ ಮೊದಲಾದವರು ಇದ್ದರು. ಬಿ ಉನ್ನತಿ ಪೈ ಪ್ರಾರ್ಥನೆ ಹಾಡಿದರು. ಬದಿಯಡ್ಕ ಗಣೇಶ ಪೈ ಸ್ವಾಗತಿಸಿದರು. ಶಾರದಾ ಮೊಳೆಯಾರ್ ಎಡನೀರು ವಂದಿಸಿದರು. ಪ್ರೋ. ಲತಾ ಪ್ರಕಾಶ ರಾವ್ ನಿರೂಪಿಸಿದರು