ನಮ್ಮಮೆಟ್ರೋ ದರ ಏರಿಕೆ:3 ದಿನದಲ್ಲಿ 1 ಲಕ್ಷ ಮಂದಿ ಓಡಾಟ ಇಳಿಕೆ!
ನಮ್ಮಮೆಟ್ರೋ ದರ ಏರಿಕೆ:3 ದಿನದಲ್ಲಿ 1 ಲಕ್ಷ ಮಂದಿ ಓಡಾಟ ಇಳಿಕೆ!
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪ್ರಯಾಣಿಕರು, ಈ ವಿಚಾರವಾಗಿ ಬಿಎಂಆರ್ ಸಿಎಲ್ ಬಿಸಿ ಮುಟ್ಟಿಸಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಉಂಟಾಗಿದೆ.
ಹೌದು.. ನಿತ್ಯ ಸುಮಾರು 8.5 ಲಕ್ಷ ಪ್ರಯಾಣಿಕರು ಓಡಾಡುತ್ತಿದ್ದ ಮೆಟ್ರೋ ರೈಲಿನಲ್ಲಿ ಇದೀಗ 7.5 ಲಕ್ಷ ಮಂದಿ ಪ್ರಯಾಣಿಕರು ಮಾತ್ರ ಓಡಾಡುತ್ತಿದ್ದಾರೆ. ಅಂದರೆ ಸುಮಾರು 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ತೊರೆದಿದ್ದಾರೆ ಎಂದು ಹೇಳಲಾಗಿದೆ. ದರ ಏರಿಕೆ ಬಳಿಕ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 35ರಿಂದ 40 ರಷ್ಟು ಕುಸಿತ ಕಂಡುಬಂದಿದೆ.
ಕಳೆದ ಫೆಬ್ರವರಿ 5 ಬುಧವಾರದಂದು ಅಂದರೆ ದರ ಏರಿಕೆಗೂ ಮುನ್ನ ನಮ್ಮ ಮೆಟ್ರೋದಲ್ಲಿ 8,67, 660 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು. ದರ ಏರಿಕೆ ಬಳಿಕ ಅಂದರೆ ಫೆಬ್ರವರಿ 12 ಬುಧವಾರದಂದು 7, 62,811 ಮಂದಿ ಪ್ರಯಾಣಿಕರ ದಾಖಲಾಗಿದೆ. ಅಂದರೆ 1,04,749 ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಮೆಟ್ರೋ ಪ್ರಯಾಣಿಕರಿಂದ ನಿತ್ಯ ಬಿಎಂಆರ್ ಸಿಎಲ್ ಗೆ 2 ರಿಂದ 2.5 ಕೋಟಿ ರೂ ಸಂಗ್ರಹವಾಗುತ್ತಿತ್ತು.
ಮೆಟ್ರೋ ಪ್ರಯಾಣ ದರ ಏರಿಕೆ ಫೆ.9ರಿಂದಲೇ (ಭಾನುವಾರ) ಅನ್ವಯವಾಗಿತ್ತು. ದರ ಏರಿಕೆಯ ಮೊದಲಿನ ಸೋಮವಾರಗಳಿಗೆ ಹೋಲಿಸಿದರೆ, ಫೆ.10 ರಂದು(ಸೋಮವಾರ) ಮೆಟ್ರೋದಲ್ಲಿ ಪ್ರಯಣಿಸಿದವರ ಸಂಖ್ಯೆ ಕಡಿಮೆಯಾಗಿದೆ. ಫೆ.3ರಂದು 8.7ಲಕ್ಷ ಜನ ಪ್ರಯಾಣಿಸಿದ್ದರು, ಅದೇ ಫೆ.10ರಂದು 8.2ಲಕ್ಷ ಜನ ಪ್ರಯಾಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆಯೇ ಎನ್ನುವ ಪ್ರಶ್ನೆ ವ್ಯಕ್ತವಾಗಿದೆ.