ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕಾರ್ಯಸೂಚಿ ಬಿಡುಗಡೆ
ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕಾರ್ಯಸೂಚಿ ಬಿಡುಗಡೆ
ಕಾಸರಗೋಡು ಕನ್ನಡನಾಡು. ಇಲ್ಲಿನ ಕನ್ನಡಿಗರಿಗೆ ಅಪಾರ ಭಾಷಾ ಪ್ರೇಮವಿದೆ. ನಿರಂತರ ಕನ್ನಡ ಪರವಾದ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಎಲ್ಲಾ ಕನ್ನಡಿಗರು ಏಕಮನಸ್ಕರಾಗಿ ಭಾಗವಹಿಸುತ್ತಾರೆ. ಪ್ರಸ್ತುತ ಕನ್ನಡ ಪರವಾದ ವಾತಾವರಣವನ್ನು, ಜಾಗೃತಿಯನ್ನು, ಕನ್ನಡ ಕಟ್ಟುವ ಮನಸುಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಇದೆ. ಭಾಷಾ ರಕ್ಷಣೆಯ ಹಿನ್ನಲೆಯಲ್ಲಿ ಕಾಸರಗೋಡು ಕನ್ನಡಿಗರು ಗಮನಾರ್ಹ ಸೇವೆಯನ್ನು ಮಾಡುತ್ತಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಅಳಿಲ ಸೇವೆಯನ್ನು ಮಾಡುವ ಉದ್ದೇಶದಿಂದ ಈ ಸಂಸ್ಥೆಗೆ ರೂಪು ನೀಡಲಾಗಿದೆ.
ಕಾಸರಗೋಡಿನ ಕನ್ನಡ ಸಾಹಿತಿಗಳನ್ನು, ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಹಿತರಕ್ಷಣೆಯ ಜವಾಬ್ದಾರಿಯನ್ನು ಹಲವು ಯೋಜನೆಗಳ ಮೂಲಕ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯವೆಸಗಲಿರುವ
ಈ ಸಂಸ್ಥೆಯನ್ನು ಕನ್ನಡಿಗರು ತುಂಬು ಹೃದಯದಿಂದ ಒಪ್ಪಿಕೊಂಡು, ನಮ್ಮ ಯೋಜನೆಗಳ ಅನುಷ್ಠಾನಕ್ಕೆ ಸಕಲ ರೂಪದಿಂದ ಸಹಕರಿಸಬೇಕಾಗಿ ವಿನಂತಿ.
ಯೋಜನೆಗಳು
—————————–.
1) ‘ *ಇಂದಿನ ಕನ್ನಡ ಮಕ್ಕಳೇ ಮುಂದಿನ ಕನ್ನಡ ರಕ್ಷಕರು* ‘, ಎಂಬ ಧೋರಣೆಯಲ್ಲಿ ಜಿಲ್ಲೆಯ ಕನ್ನಡ ಮಕ್ಕಳಿಗೆ ಕನ್ನಡ ಸಾಹಿತ್ಯ ರಚನೆಯ ಒಂದು ದಿವಸದ ಕಾರ್ಯಾಗಾರ ನಡೆಸಲಾಗುವುದು. ಈ ನಿಟ್ಟಿನಲ್ಲಿ, ” *ಶಾಲೆಗಳಲ್ಲಿ ಕನ್ನಡ – ಬೆಳೆಸೆ ಬನ್ನಿ ಸಂಗಡ* “
ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.
2) ಕಾಸರಗೋಡಿನಲ್ಲಿ ಇತಿಹಾಸದಿಂದಲೇ ಕನ್ನಡ ಕಟ್ಟುವ ಕೆಲಸ ನಡೆದಿದೆ. ಅನೇಕ ಕನ್ನಡದ ಕಟ್ಟಾಳುಗಳು ಇಂದು ನೇಪಥ್ಯಕ್ಕೆ ಸರಿದಿದ್ದಾರೆ. ಅವರ ಬದುಕು, ಬರಹ ಹಾಗೂ ಆದರ್ಶ ಜೀವನದ ಕುರಿತು ಹೊಸ ತಲೆಮಾರಿನ ಮಕ್ಕಳಿಗೆ ಹಾಗೂ ಪೋಷಕರಿಗೆ ತಿಳಿಸಿ, ಅವರ ತ್ಯಾಗ, ಹೋರಾಟ ಮತ್ತು ಬರವಣಿಗೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ
ಅಂತಹ ಸಾಧಕರ ಜೀವನ ಶೈಲಿಯನ್ನು ಮೆಲುಕು ಹಾಕುವ ” *ಸ್ಮರಣಾಂಜಲಿ* ” ಕಾರ್ಯಕ್ರಮ ನಡೆಯಲಿದೆ .
ಈ ಯೋಜನೆಯಂತೆ ಸಾಧಕರ ಮನೆಗೆ ತೆರಳಿ ಅವರ ಸಾಧನೆಯನ್ನು ನೆನಪಿಸಿಕೊಂಡು, ಚುಟುಕು ಕವಿಗೋಷ್ಠಿ ನಡೆಸಿ ಅವರ ಕುಟುಂಬದ ಹಿರಿಯರನ್ನು ಗೌರವಿಸಲಾಗುವುದು.
3) ಔದ್ಯೋಗಿಕ ಕ್ಷೇತ್ರದಲ್ಲಿ ಉದ್ಯೋಗ ಆಕಾಂಕ್ಷಿಗಳಾಗಿ ಕಾಸರಗೋಡಿನಲ್ಲಿ ಅನೇಕ ಕನ್ನಡಿಗ ಉದ್ಯೋಗಾರ್ಥಿಗಳಿದ್ದಾರೆ .
ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ .ಕೇರಳದ ಲೋಕಸೇವಾ ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾರ್ಗದರ್ಶನದ ಕೊರತೆಯಿಂದ ಸೋಲುವ ಕನ್ನಡಿಗರು ಅನೇಕ ಮಂದಿ ಇದ್ದಾರೆ. ಅದೇ ರೀತಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕನ್ನಡ ಮಾಧ್ಯಮದಲ್ಲಿ ಕಲಿಯುವುದರಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಕಡಿಮೆ ಇದೆ. ಗಡಿನಾಡ ಕನ್ನಡಿಗರಿಗೆ ಕರ್ನಾಟಕ ಸರಕಾರದಿಂದ ದೊರೆಯುವ ಸೌಲಭ್ಯಗಳು, ಭಾಷಾ ಅಲ್ಪಸಂಖ್ಯಾತರೆಂಬ ನೆಲೆಯಲ್ಲಿ ಕನ್ನಡಿಗರಿಗೆ ದೊರೆಯುವ ಸೌಲಭ್ಯಗಳು, ಕೇರಳ ಸರಕಾರದಿಂದ ದೊರೆಯಬೇಕಾದ ಸೌಲಭ್ಯಗಳು ಮೊದಲಾದ ವಿಚಾರಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡುವುದು. ಈ ನಿಟ್ಟಿನಲ್ಲಿ ” *ಅರಿವು* ” ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
4) ಕಾಸರಗೋಡಿನಲ್ಲಿ ಅನೇಕ ಪ್ರಬುದ್ಧ ಸಾಹಿತಿಗಳು , ಕವಿಗಳು , ಕನ್ನಡ ಹೋರಾಟಗಾರರು ಇದ್ದಾರೆ. ಅವರನ್ನು ಭೇಟಿ ಮಾಡಿ ಅವರ ಇತಿಹಾಸದ ಕನ್ನಡ ಸೇವೆಯ ಬದುಕಿನ ಬಗ್ಗೆ ಸಂವಾದ ನಡೆಸುವುದು. ಇದರಿಂದ ಹೊಸ ತಲೆಮಾರಿನ
ಮಕ್ಕಳಿಗೆ ಕನ್ನಡ ಪರವಾದ ಹೋರಾಟಕ್ಕೆ ಕ್ರಿಯಾತ್ಮಕ ಚಾಲನೆ ನೀಡುವ ಪ್ರಯತ್ನ ಮಾಡಲಾಗುವುದು.
*ಕವಿನಮನ/ ಗುರುನಮನ* ಎಂಬ ಈ ಕಾರ್ಯಕ್ರಮವು ಪ್ರಾದೇಶಿಕವಾದ ಸಾಹಿತ್ಯಾಸಕ್ತರು ಹಾಗೂ ಶಾಲಾ ಮಕ್ಕಳನ್ನು ಜತೆಗೂಡಿಸಿಕೊಂಡು ನಡೆಯಲಿದೆ.
5) ಕಾಸರಗೋಡು ಜಿಲ್ಲೆಯ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ಮಕ್ಕಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ *ವಿವಿಧ ಸಾಹಿತ್ಯ ಸ್ಪರ್ಧೆ* ಗಳನ್ನು ಏರ್ಪಡಿಸುವುದು. ಇದರಿಂದಾಗಿ ಕನ್ನಡ ಭಾಷೆಯ ಬಗ್ಗೆ ಕನ್ನಡಿಗರಿಗೆ ಒಲವು ಹೆಚ್ಚುವುದೆಂಬ ನಂಬಿಕೆ ಇದೆ.
ಈ ಐದು ಯೋಜನೆಗಳೊಂದಿಗೆ ಕನ್ನಡ ಪೋಷಕರಿಗೆ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಲು ಮನವಿ ಮಾಡುವುದು, ಕರ್ನಾಟಕ ರಾಜ್ಯದಲ್ಲಿ ಸಂಸ್ಥೆಯ ಘಟಕಗಳನ್ನು ಸ್ಥಾಪಿಸುವುದು,
ಕಾಸರಗೋಡು ಜಿಲ್ಲೆಯ ಉದಯೋನ್ಮುಖ
ಕನ್ನಡ ಸಾಹಿತಿಗಳ ಕೃತಿಗಳ ಪ್ರಕಟಣೆ ಮೊದಲಾದ ಅನೇಕ ಚಟುವಟಿಕೆಗಳನ್ನು ಸಂಘಟನೆ ನಡೆಸಲಿದೆ.
ಡಾ. ಕೆ .ವಾಮನ್ ಶ್ರೀ
ರಾವ್ ಬೇಕಲ್ ವಿರಾಜ್
ಸ್ಥಾಪಕ ಅಡೂರು
ಸಂಚಾಲಕರು ಅಧ್ಯಕ್ಷರು
(ಕೇರಳ ರಾಜ್ಯ (ಕಾಸರಗೋಡು
ಕನ್ನಡ ಚು ಸಾ. ಪ.). ಘಟಕ)
ಕಾಸರಗೋಡು
ಕೇಂದ್ರ ಸಮಿತಿ
ಮತ್ತು ಸರ್ವ ಸದಸ್ಯರು