ಭಾಷಾಂತರದಿಂದ ಸಂಸ್ಕೃತಿ ಹಸ್ತಾಂತರ : ರಾಧಾಕೃಷ್ಣ ಕೆ. ಉಳಿಯತ್ತಡ್ಕ
ಭಾಷಾಂತರದಿಂದ ಸಂಸ್ಕೃತಿ ಹಸ್ತಾಂತರ : ರಾಧಾಕೃಷ್ಣ ಕೆ. ಉಳಿಯತ್ತಡ್ಕ
ಕಾಸರಗೋಡು : ಭಾಷಾಂತರ ಕೇವಲ ಭಾವಾಂತರ ಮಾತ್ರ ಅಲ್ಲ, ಸಂಸ್ಕೃತಿಯ ಹಸ್ತಾಂತರ ಎಂದು ಹಿರಿಯ ಕವಿ, ಪತ್ರಕರ್ತ, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಹೇಳಿದರು. ಇವರು ಬೆಂಗಳೂರು ದ್ರಾವಿಡ ಭಾಷಾ ಅನುವಾದಕರ ಸಂಘ ಹಾಗೂ ಕಾಸರಗೋಡು ನುಳ್ಳಿಪಾಡಿ ಸೀತಮ್ಮ – ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಸಹಯೋಗದೊಂದಿಗೆ ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ ಮಲಯಾಳಂ-ಕನ್ನಡ ಅನುವಾದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಭವನದ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಾಷಾಂತರದ ಮೂಲಕ ಒಂದು ಕೃತಿಯ ಪರಿಚಯ ಮಾತ್ರ ಅಲ್ಲ ಭಾಷಾ ವಿನಿಮಯವೂ ಆಗಬೇಕಾಗಿದೆ ಎಂದು ಹೇಳಿದ ಅವರು ಕಾರ್ಯಾಗಾರಕ್ಕೆ ನೇತೃತ್ವ ನೀಡಿದ ದ್ರಾವಿಡ ಭಾಷಾ ಅನುವಾದಕರ ಸಂಘ ಮತ್ತು ಕನ್ನಡ ಭವನ ಗ್ರಂಥಾಲಯದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಡಿ.ಬಿ.ಟಿ.ಎ. ಅಧ್ಯಕ್ಷೆ ಡಾ. ಸುಷ್ಮಾಶಂಕರ್‌ರವರು ಅಧ್ಯಕ್ಷತೆ ವಹಿಸಿದ್ದರು. ನಾವು ಪ್ರತಿಯೊಂದು ಭಾಷೆಯೊಂದಿಗೆ, ಹೊಸ ಜಗತ್ತನ್ನು ಕಲಿಯುತ್ತೇವೆ ಮತ್ತು ನಮ್ಮ ಸಾಂಸ್ಕೃತಿಕ ಪರಿಧಿಯನ್ನು ವಿಸ್ತರಿಸುತ್ತೇವೆ ಹಾಗೂ ಯಾರೂ ಯಾವುದೇ ಭಾಷೆಯನ್ನು ಕಲಿಯಲು ಹಿಂಜರಿಯಬಾರದು ಎಂದು ಸುಷ್ಮಾಶಂಕರ್ ಹೇಳಿದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಕವಿ ಟಿ. ಉಬೈದ್, ಕಯ್ಯಾರ್ ಕಿಞ್ಞಣ್ಣ ರೈ, ವಿದ್ವಾಂಸ ಪಿ. ವೆಂಕಟರಾಜ ಪುಣಿಂಚಿತ್ತಾಯ, ಸಿ. ರಾಘವನ್, ಕೆ.ವಿ. ಕುಮಾರನ್ ಮತ್ತು ಮುಂತಾದವರು ಉತ್ತರ ಕೇರಳದ ಪ್ರಮುಖ ಅನುವಾದಕರು ಎಂದು ಅವರು ಹೇಳಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಹಾಗೂ ಬರಹಗಾರರೂ ಆದ ಪ್ರೊ. ರತ್ನಾಕರ ಮಲ್ಲಮೂಲೆ ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೂ ಆಗಿರುವ ಪ್ರಸಿದ್ಧ ಅನುವಾದಕ ಕೆ.ವಿ. ಕುಮಾರನ್ ಮಾಸ್ಟರ್, ಕುಪ್ಪಂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಬಿ.ಎಸ್. ಶಿವಕುಮಾರ್, ಡಾ| ಸುಷ್ಮಾ ಶಂಕರ್ ಮತ್ತು ಪ್ರೊ. ವಿ.ಎಸ್. ರಾಕೇಶ್ ತರಗತಿ ನಡೆಸಿದರು. ಪ್ರತಿಯೊಂದು ಭಾಷೆಗೂ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳು ಮತ್ತು ಸಾಂಸ್ಕೃತಿಕ ಮಟ್ಟವಿದೆ ಮತ್ತು ಅದನ್ನು ಅರ್ಥಮಾಡಿಕೊಂಡು ಅನುವಾದಿಸಿದಾಗ ಮಾತ್ರ ಅನುವಾದಕ್ಕೆ ಜೀವ ತುಂಬಿದಂತಾಗುತ್ತದೆ ಎಂದು ತರಗತಿ ನಡೆಸಿದವರು ಹೇಳಿದರು.
ಬಿ.ಟಿ. ಜಯರಾಮ್, ಸುಭದ್ರಾ ರಾಜೇಶ್, ರಾಜನ್ ಮುನಿಯೂರ್, ದಿನೇಶ್ ಬಲ್ಲಾಳ್, ರಾಬಿನ್ ರವೀಂದ್ರನ್, ಸಂಧ್ಯಾ ರಾಣಿ ಟೀಚರ್, ಎಂ.ಪಿ. ಜಿಲ್ ಜಿಲ್, ಪ್ರದೀಪ್ ಬೇಕಲ್, ಪುರುಷೋತ್ತಮ ಪೆರ್ಲ, ಜಗನ್ನಾಥ ಶೆಟ್ಟಿ, ಕೆ.ವಿ. ರಮೇಶ್, ಎಂ. ಶಾರದಾ ಮೊಳೆಯಾರ್, ಪಿ.ಜಿ. ಜೋಸೆಫ್, ವಸಂತ ಕೆರೆಮನೆ. ಸುಂದರ ಬಾರಡ್ಕ, ನಾರಾಯಣನ್ ಕರಿಚೇರಿ, ಕಾರ್ತಿಕ್ ಪಡ್ರೆ, ವನಜಾಕ್ಷಿ ಚೆಂಬ್ರಕಾನ, ರೇಖಾ ರೋಶನ್, ಸೌಮ್ಯ ಚೆಂಬ್ರಕಾನ, ರೇಖಾ, ಸುದೇಶ್ ರಾವ್, ರಾಜೇಶ್ ಕೋಟೆಕಣಿ ಮುಂತಾದವರು ಕಾರ್ಯಾಗಾರದ ಮೌಲ್ಯಮಾಪನ ಮಾಡಿದರು.
ಎಸ್.ಎಲ್. ಭೈರಪ್ಪ ಬರೆದ ಕನ್ನಡ ಕಾದಂಬರಿ ‘ಯಾನ’ದ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೆ.ವಿ. ಕುಮಾರನ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭವನ್ನು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಉದ್ಘಾಟಿಸಿದರು. ಸಾಮಾಜಿಕ ಮುಂದಾಳು ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಬಿ.ಟಿ. ಜಯರಾಂ ಮುಖ್ಯ ಅತಿಥಿಗಳಾಗಿದ್ದರು. ತರಗತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಪತ್ರಕರ್ತರು, ಬರಹಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಯಸ್ಸಿನ ಸುಮಾರು ಐವತ್ತು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಸ್ವಾಗತಿಸಿದರು ಮತ್ತು ಕಾರ್ಯಕ್ರಮ ಸಂಯೋಜಕ ರವೀಂದ್ರನ್ ಪಾಡಿ ಧನ್ಯವಾದವಿತ್ತರು ಹಾಗೂ ಡಿ.ಬಿ.ಟಿ.ಎ. ಕಾರ್ಯದರ್ಶಿ ಡಾ. ರಾಕೇಶ್, ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ಕಾರ್ಯಕ್ರಮ ನಿರ್ವಹಿಸಿದರು.