• 20 ಮಾರ್ಚ್ 2025

ಅಡೂರು ಶ್ರೀ ಮಹತೋಬಾರ ಮಹಾಲಿಂಗೇಶ್ವರ ಕ್ಷೇತ್ರದ ಇತಿಹಾಸ ತಿಳಿಯೋಣ…!

 ಅಡೂರು ಶ್ರೀ ಮಹತೋಬಾರ ಮಹಾಲಿಂಗೇಶ್ವರ ಕ್ಷೇತ್ರದ ಇತಿಹಾಸ ತಿಳಿಯೋಣ…!
Digiqole Ad

ಅಡೂರು ಶ್ರೀ ಮಹತೋಬಾರ ಮಹಾಲಿಂಗೇಶ್ವರ ಕ್ಷೇತ್ರದ ಇತಿಹಾಸ ತಿಳಿಯೋಣ..!  ದೇವಾಲಯಗಳು ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅವು ನಮ್ಮ ಮಾನ ಬಿಂದುಗಳಿವೆ. ದೇವಾಸ್ಥಾನಗಳಲ್ಲಿ ನಡೆಯುವ ಪೂಜೆ ಉತ್ಸಾವಾದಿಗಳಲ್ಲಿ ಸಹಭಾಗಿತ್ವ ಹೊಂದಿದಾಗ ಲಭಿಸುವ ಪುಣ್ಯದ ಜೊತೆ ಜೊತೆಗೆ, ಸನ್ಮಸ್ಸಿನ ಸಜ್ಜನರಿಗೆ ಯೋಗ್ಯ ಸಂಸ್ಕಾರಗಳನ್ನು ನೀಡುವ ಶ್ರದ್ದಾಭಕ್ತಿಯ ಕೇಂದ್ರಗಳಾಗಿವೆ.

Adooru god ಪುರಾಣಪ್ರಸಿದ್ಧವಾದ ಕುಂಬಳೆ ಸೀಮೆಯ ಇತಿಹಾಸದಲ್ಲಿ ಪರಮಪಾವನವಾದ ಆಡೂರು ಪ್ರಾಧಾನ್ಯವುಳ್ಳ ದೇಗುಲವಾಗಿದೆ. ಕುಂಬಳೆ ಸೀಮೆಯ ಆಡೂರು, ಮಧೂರು, ಕಾವು (ಮುಂಜಂಗಾವು), ಕಣಿಪುರ (ಕುಂಬಳೆ) ಎಂಬ ಪ್ರಸಿದ್ದ ನಾಲ್ಕು ದೇವಾಲಯಗಳು ಈ ಸೀಮೆಯ ಮಾತ್ರವಲ್ಲದೆ ಪರವೂರ ಭಕ್ತಬಾಂಧವರ ಶ್ರದ್ಧಾ ಭಕ್ತಿಯ ಅರಾಧನಾ ಕೇಂದ್ರಗಳಲ್ಲ್ದೆ ಸರ್ವಾಭಯಪ್ರದವಾದ ದೇವಸನ್ನಿಧಿಗಳಾಗಿವೆ.

 

Payaswiniಪಾವನೆಯಾದ ಪಯಸ್ವಿನಿಯ ಝುಳು ಝುಳು ನಿನಾದಕ್ಕೆ ಮೈಮರತು ತಲಕಾವೇರಿಯ ಬ್ರಹ್ಮಗಿರಿಯಿಂದ ಚಾಚಿ ನಿಂತಿರುವ ಹಚ್ಚ ಹಸುರಿನ ಬೆಟ್ಟದ ಸಾಲುಗಳ ಪ್ರಕೃತಿ ಸೌಂದರ್ಯವನ್ನು ಮೈಗೂಡಿಸಿಕೊಂಡು ತಲ್ವಚ್ಚೇರಿಯ ಕಾನನ ಮಧ್ಯದಿಂದ ಉಮಗಮಗೊಂಡು ಹರಿಯುವ ಲಿಂಗಧಾರೆಯೆಂಬ ತೊರೆಯಿಂದ ಬಳಸಲ್ಪಟ್ಟು ಭತ್ತದ ಗದ್ದೆಗಳಿಂದಲೂ ತೆಂಗು ಕಂಗು ಕೃಷಿಯ ಮಧ್ಯೆ ಘನಗಾಂಭೀರ್ಯದಿಂದ ತಲೆಎತ್ತಿ ಶೋಭಿಸುತ್ತಿರುವ ಕ್ಷೇತ್ರವೇ ನಾಡಿನ ಕಲಶಪ್ರಾಯವಾದ ಅಡೂರು ಶ್ರೀಕ್ಷೇತ್ರ ದೇವಾಲಯದ ಮಳಲಿ ಲಿಂಗದಲ್ಲಿ ದಿವ್ಯಶಕ್ತಿಯಾಗಿ ನೆಲೆಯಾಗಿ ಶಾಂತ ರೂಪಿಯಾಗಿ ಹರಸುತ್ತಿರುವ ಆರಾಧ್ಯ ಮೂರ್ತಿಯೇ ಅಡೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ಎಂಬ ಅನನ್ಯ ಚೈತನ್ಯ.

 

ಹಿನ್ನಲೆ

Adoorದ್ವಾಪರಯುಗದಲ್ಲಿ ಪಾಂಡವರು ವನವಾಸದಲ್ಲಿದ್ದ ಸಮಯವನ್ನುಪಯೋಗಿಸಿಕೊಂಡು ಶ್ರೀ ಕೃಷ್ಣ ಪರಮಾತ್ಮನು ಮಹಾಭಾರತ ಯುದ್ಧವನ್ನು ಜಯಸಿ ಧರ್ಮರಾಜ್ಯದ ಸಂಸ್ಥಾಪನೆಗೋಸ್ಕರ, ಅರ್ಜುನನಿಗೆ ತಪಸ್ಸಿನ ಮೂಲಕ ಪರಮೇಶ್ವರನ ಅನುಗ್ರಹ ಪಡೆಯಲು ಆಜ್ಜಾಪಿಸುತ್ತಾನೆ. ಸ್ವಾಮಿಯ ಅಣತಿಯಂತೆ ಅರ್ಜುನನು ಪ್ರಕೃತಿ ಸುಂದರವಾದ ಕಪದೀ ಕಾನ (ಕವಡಿಕಾನ)ವನ್ನು ಯೋಗ್ಯವೆಂದು ಆಯ್ದುಕೊಂಡು ನಿರ್ಮಲಭಕ್ತಿಯಿಂದ ಪರಮೇಶ್ವರನ ಕುರಿತು ತಪ್ಪಸ್ಸಿಗೆ ಪ್ರಾರಂಭಿಸಿದ ಅಡೂರಿನ ದಕ್ಷಿಣ ಪಾರ್ಶ್ವದಲ್ಲಿರುವ ಈ ನಿರ್ಜನ ಘೋರಾರಣ್ಯವೇ ಶ್ರೀ ಕ್ಷೇತ್ರದ ಮೂಲಸ್ಥಾನವೆಂದು ಗುರುತಿಸಲ್ಪಟ್ಟಿರುವ ಕವಡಿಕಾನವಾಗಿದೆ. ಅರ್ಜುನನ ತಪಸ್ಸನ್ನೂ ಭಕ್ತಿಯನ್ನು ಪರೀಕ್ಷಿಸಲು ಜಗದ ಮಾತಪಿತರಾದ ಪಾರ್ವತಿ ಪರಮೇಶ್ವರರು ಒಂದು ನಾಟಕವಾಡಿದರು. ಅವರ ಲೀಲಾ ನಾಟಕವೇ ಅಡೂರು ಶ್ರೀ ಕ್ಷೇತ್ರದ ಸ್ಥಳಪುರಾಣವಾಯಿತು.

ಸ್ಥಳ ಪುರಾಣ

Adoorಶಿವ ಪಾರ್ವತಿಯರು ಗಣಗಳಿಂದೊಡಗೂಡಿ ಕುಂಡಕುಳಿ ಎಂಬಲ್ಲಿ ಭುವಿಗಿಳಿದರು. ಬೇಡಡ್ಕ ಎಂಬಲ್ಲಿ ಬೇಡ ಬೇಡತಿಯರಾಗಿಯೂ ಗಣಗಳೆಲ್ಲರೂ ಬೇಡ ಪಡೆಯಾಗಿ ವೇಷಪಲ್ಲಟಗೊಂಡರು. ಶಾಪಗ್ರಸ್ತ ಮೂಕನೆಂಬ ದಾನವನು ಹಂದಿರೂಪದಲ್ಲಿದ್ದುದನ್ನು ಮನಗಂಡು ಶಿವನು ಅವನ ಶಾಪವಿಮೋಚನೆಗಾಗಿ ಅವನನ್ನು ಗುರಿಯಾಗಿರಿಸಿಕೊಂಡು ಬೇಟೆಯಾಡತೊಡಗಿದರು. ಕುತ್ತಿಕೋಲು ಎಂಬಲ್ಲಿಂದ ಆರಂಭಿಸಿದ ಬೇಟೆ ಬಂದಡ್ಕಕ್ಕೆ (ಹಂದಿ+ಅಡ್ಕ) ತಲುಪಿದಾಗ ಕಾಣಸಿಕ್ಕಿದ ಹಂದಿಗೆ ಕಿರಾತನು (ಶಿವನು) ಬಾಣಪ್ರಯೋಗಿಸಲು ನೋವು ತಾಳಲಾರದೆ ಶಬ್ದ ಮಾಡುತ್ತಾ ಕೌಡಿಂಕನವನ್ನು ಪ್ರವೇಶಿಸಿ ಅರ್ಜುನನ ತಪ್ಪಸ್ಸಿಗೆ ಭಂಗವನ್ನುಂಟುಮಾಡಿತು. ಸಿಟ್ಟಿಗೆದ್ದ ಅರ್ಜುನನು ತಾನೂ ಒಂದು ಬಾಣ ಪ್ರಯೋಗಿಸಿ ಹಂದಿಯನ್ನು ಕೊಂದು ಎಸೆದುಬಿಟ್ಟನು. ಹಂದಿ ಬಿದ್ದ ಸ್ಥಳವೇ ಪಂಜಳವಾಗಿದೆ. ಕಿರಾತನಿಗೂ ಅರ್ಜುನನಿಗೂ ಹಂದಿಯನ್ನು ಕೊಂದವರು ತಾನು ತಾನೆಂದು ವಾಗ್ವಾದ ನಡೆದುದಲ್ಲದೆ ಮುಷ್ಟಿಯುದ್ದ ಮಲ್ಲಯುದ್ದದಿಂದ ಸೆಣಸಿ ಉರುಡಾಡಿದರು. ಆದುದರಿಂದ ಆ ಸ್ಥಳ ಉರುಡೂರಾಯಿತು. ಎಂದೂ ಸೋಲರಿಯದ ಅರ್ಜುನನು ತಾನು ಸೋತುಹೋದ ಅವಮಾನವನ್ನು ತಾಳದೆ, ತನ್ನ ತಪ್ಪನ್ನು ಅರ್ಥೈಸಿಕೊಂಡು ತಾನು ಬಿದ್ದ ಸ್ಥಳದಿಂದಲೇ ಮಳಲನ್ನು ಆಯ್ದುಕೊಂಡು ಭಕ್ತಿಭಯಗಳಿಂದ ಶಿವಲಿಂಗವನ್ನು ರಚಿಸಿ ಚಿಕ್ಕ ಕುಂಡಿಕೆಯೊಂದನ್ನು ರಚಿಸಿ ಅದರ ಜಲದಿಂದಲೇ ಅಭಿಷೇಕ ಮಾಡಿ, ಬಿಲ್ವಪತ್ರೆಗಳಿಂದಲೂ ಪುಷ್ಪಗಳಿಂದಲೂ ಭಕ್ತಿಯಿಂದ ಅರ್ಚಿಸಿದ, ತಾನು ಶಿವಲಿಂಗಕ್ಕೆ ಅರ್ಪಿಸಿದ ಹೂವು, ಪತ್ರೆಗಳು ದೂರದಲ್ಲಿ ಹಸನ್ಮುಖಿಯಾಗಿ ನಿಂತು ನೋಡುತ್ತಿರುವ ಕಿರಾತನ ಶಿರದಲ್ಲಿ ಕಂಗೊಳಿಸಲು, ಜ್ಞಾನೋದಯಗೊಂಡ ಅರ್ಜುನನು ಬೇಡನ ರೂಪದಲ್ಲಿ ಸಾಕ್ಷಾತ್ ಪರಮೇಶ್ವರನೇ ನಿಂತಿರುವುದನ್ನು ಅರಿತುಕೊಂಡು ಓಡೋಡಿ ಬಂದು ಪಾದಗಳಿಗೆ ಬಿದ್ದು ತನ್ನ ತಪ್ಪಿಗಾಗಿ ಕ್ಷಮೆಯಾಚಿಸಿದ.

 

ಕ್ಷೇತ್ರದ ಬಗ್ಗೆ.

Adoorಶ್ರೀಕ್ಷೇತ್ರವು ಮೂರು ಅಂತಸ್ತುಗಳಿಂದ ಕೂಡಿದ್ದು ಗಜಪೃಷ್ಠಾಕರವಾಗಿದೆ. ಸುತ್ತಲೂ ವಿಶಾಲ ಪ್ರಾಂಗಣವನ್ನು ಹೊಂದಿ ಎದುರು ನಡೆಯಲ್ಲಿ ನಂದಿ ವಿಗ್ರಹವಿರುವ ನಮಸ್ಕಾರ ಮಂಟಪವಿದ್ದು ಎಡಬಲಗಳಲ್ಲಿ ಶ್ರೀ ಮಹಾಗಣಪತಿ, ಶ್ರೀ ಮಹಾವಿಷ್ಣು ಗುಡಿಗಳಿಂದ ಕಂಗೊಳಿಸುತ್ತಿದೆ. ಪ್ರಾಂಗಣದೊಳಗೆ ಮೂಡುಭಾಗದಲ್ಲಿ ಶ್ರೀ ಕೌಡಿಂಕಾನ ರಕ್ತೇಶ್ವರಿ ದೇವಿಯ ಶ್ರೀ ಭಂಡಾರ ಮತ್ತು ಶ್ರೀಪೀಠವಿದೆ. ಅನತಿ ದೂರದಲ್ಲಿ ದಕ್ಷಿಣ ಪಾರ್ಶ್ವವಾಗಿ ಶ್ರೀ ಶಾಸ್ತಾರ ದೇವರ ಗುಹಾದೇವಾಲಯವಿದೆ. ಅತ್ಯಪೂರ್ವ ಕೆತ್ತನೆಯ ದಾರುಶಿಲ್ಪಗಳಿಂದ ಕೂಡಿದ ರಚನೆಗಳು ನಮಸ್ಕಾರ ಮಂಟಪದ ಮೇಲ್ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಕೆತ್ತನೆಯು ಶಿಲ್ಪಾಚಾತುರ್ಯದ ಸಾಕ್ಷಿಗಳಾಗಿವೆ.

 

ಶ್ರೀಕ್ಷೇತ್ರವು ನಾಲ್ಕು ಭಾಗಗಳಿಂದ ಶ್ರೀದೈವಗಳ ರಕ್ಷಣಾ ಶ್ರೀ ರಕ್ಷೆಯನ್ನು ಹೊಂದಿಕೊಂಡಿದೆ. ಪೂರ್ವಭಾಗದಲ್ಲಿ ವಿಷ್ಣುಮೂರ್ತಿ ದೈವವೂ, ದಕ್ಷಿಣಭಾಗದಲ್ಲಿ ಗುಳಿಗ ದೈವವೂ, ಪಶ್ಚಿಮದಲ್ಲಿ ಚಾಮುಂಡಿ ದೈವವೂ, ಉತ್ತರದಲ್ಲಿ ರಕ್ತೇಶ್ವರೀ ದೈವವೂ ನೆಲೆ ನಿಂತಿರುವರು. ಶ್ರೀ ದೇವಾಲಯದ ಬಡಗುಭಾಗದಲ್ಲಿ ರಾಜದೈವಗಳಾದ ಶ್ರೀ ಕಿನ್ನಿ ಮಾಣಿ ಪೂಮಾಣಿ ದೈವಗಳ ಭಂಡಾರ ಚಾವಡಿಯೂ, ಅನತಿ ದೂರದ ದೈಯ್ಯರೆ ಕಾನದಲ್ಲಿ ಶ್ರೀ ದೈಯ್ಯರೆ ದೈವದ ಕಟ್ಟೆ ಇದೆ. ಜಾತ್ರೋತ್ಸವದ ಪ್ರತೀ ವರುಷವೂ ಶ್ರೀ ದೈವಗಳ ನೇಮ ನಡೆಸಲ್ಪಡುವುದು ಶ್ರೀ ಕ್ಷೇತ್ರದ ವಿಶೇಷತೆಯಾಗಿದೆ.ಕಾರಣಿಕದಲ್ಲಿ ಮಹಿಮೆಯಲ್ಲಿ ಶ್ರೇಷ್ಟವಾದ ಈ ಪುಣ್ಯಕ್ಷೇತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೇಳಲ್ಪಟ್ಟ ಹರಕೆಗಳು ನಿವೃತ್ತಿ ಕಾಣುತ್ತದೆ ಎಂಬುವುದು ಇನ್ನೊಂದು ವಿಶೇಷತೆಯಾಗಿದೆ.

 

Adooruಮಕರ ಮಾಸ 20 ರಿಂದ 24 ರ ತನಕ ನಡೆಯುವ ಪದಿಕ್ಕಾಲಡ್ಕ ದೈವಸ್ಥಾನದ ಕಳಿಯಾಟ ಮಹೋತ್ಸವದ ಸಂದರ್ಭದಲ್ಲಿ ಶ್ರೀದೈವಗಳು ಶ್ರೀಕ್ಷೇತ್ರ ನಡೆಯವರೆಗೆ ಆಗಮಿಸಿ ನುಡಿಕೊಟ್ಟು ಪ್ರಸಾದ ಪಡೆದು ಹೋಗುವ ಪದ್ದತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ (ಕೆಂಡಸೇವೆ)ಕ್ಕೆ ಬೇಕಾಗುವ ಮೇಲರಿಗೆ ಶ್ರೀಕ್ಷೇತ್ರದಿಂದ ಆರತಿ ಕೊಂಡು ಹೊಗಿ ಅಗ್ನಿ ಸ್ಪರ್ಶ ಮಾಡುವ ಪದ್ಧತಿ ರೂಢಿಯಾಗಿದೆ. ತುಲಾ ಸಂಕ್ರಮಣದಂದು ತಲಕಾವೇರಿಯಿಂದ ತೀರ್ಥ ತಂದು ಶ್ರೀಕ್ಷೇತ್ರದಲ್ಲಿ ತೀರ್ಥ ಸಮಾರಾಧನೆ ಇಂದಿಗೂ ನಡೆದುಕೊಂಡು ಬರುತ್ತಿರುವ ಪದ್ಧತಿಯಾಗಿದೆ. ಕುಂಭ ಮಾಸ ೨೭ ರಂದು ಧ್ವಜಾರೋಹಣವಾಗಿ ಮೀನ ಸಂಕ್ರಮಣದಂದು ಪ್ರಾರಂಭಗೊಂಡು ೫ ದಿನಗಳ ಪರ್ಯಂತ ನಡೆಯುವ ಜಾತ್ರೆಯೂ ಮತ್ತೆ ೨ ದಿನ ನಡೆಯುವ ದೈವ ನೇಮೋತ್ಸವಗಳು ವಿಜೃಂಭಣೆಯಿಂದ ಆಚರಿಸಲ್ಪಡುತ್ತೇವೆ. ಶ್ರೀ ಕ್ಷೇತ್ರವು ಒಳ, ಹೊರ ಮತ್ತು ರಾಜಾಂಗಣವೆಂದು ಮೂರು ಅಂಗಣಗಳನ್ನು ಹೊಂದಿದ್ದು ಉತ್ಸವ ಬಲಿಯು ರಾಜಾಂಗಣದಲ್ಲಿ ನಡೆಯುತ್ತದೆ. ಶ್ರೀಕ್ಷೇತ್ರ ನಿತ್ಯ ನವಕ, ನಿತ್ಯ ಗಣಪತಿ ಹವನ ನಿರಂತರ ನಡೆದು ಬರುತ್ತಿದೆ.

 

ಶ್ರೀಕ್ಷೇತ್ರದಲ್ಲಿ ಜಾತ್ರೋತ್ಸವದ ಸಂದರ್ಭದಲ್ಲಿ ಮಾತ್ರ ನಡೆಯುವ ತುಲಾಭಾರ ಹರಕೆ ಸೇವೆಯು ವಿಶೇಷವಾಗಿದ್ದು ಭಕ್ತರು ತಮ್ಮ ಯಾವುದೇ ಕಷ್ಟ ಕಾರ್ಪಣ್ಯಗಳ ಸಂದರ್ಭದಲ್ಲೋ ತಮ್ಮ ತಮ್ಮ ಮನೋಭಿಷ್ಟ ಪೂರೈಕೆಗಾಗಿಯೂ ಈ ಸೇವೆಯನ್ನು ನಡೆಸಿಕೊಂಡು ಕೃತಾರ್ಥರಾಗುತ್ತಾರೆ. ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಮಾಡಿಸುವವರು ಸೇವೆಯ ಮೊದಲ ದಿನವೇ ಬಂದು ಪ್ರಾರ್ಥಿಸಿಕೊಂಡು ಕ್ಷೇತ್ರೋಪವಾಸವಿದ್ದು ಮರುದಿನ ಸೇವೆ ನಡೆಸುವುದು ಶ್ರೀ ಕ್ಷೇತ್ರದ ಮಾತ್ರ ವಿಶಿಷ್ಟ ವಿಶೇಷತೆಯಾಗಿದೆ.

 

ಪುಣ್ಯಪರ್ವವಾದ ಶಿವರಾತ್ರಿಯಂದು ಶ್ರೀ ಕ್ಷೇತ್ರದಲ್ಲಿ ರಾತ್ರಿ ಅಭಿಷೇಕ ನಡೆಯುವ ಏಕೈಕ ದಿನವಾಗಿದೆ. ಅಭಿಷೇಕ ಪ್ರಿಯನಾದ ಪರಮ ಮಂಗಲಮೂರ್ತಿ ಪರಮೇಶ್ವರನಿಗೆ ಇಲ್ಲಿ ಶತರುದ್ರಾಭಿಷೇಕ, ಏಕಾದಶ ರುದ್ರಾಭಿಷೇಕ ಪುಣ್ಯಪ್ರದವಾದ ವಿಶೇಷ ಸೇವೆಗಳಾಗಿವೆ. ಇವುಗಳು ಭಕ್ತರ ಕೇಳಿಕೆಯಂತೆ, ತಂತ್ರಿವರ್ಯರ ಮುಖಾಂತರ ನಡೆಯುವ ಸೇವೆಗಳಾಗಿವೆ. ಅಲ್ಲದೆ ನಿತ್ಯವೂ “ರುದ್ರಾಭಿಷೇಕ” ಸೇವೆಯು ಇಲ್ಲಿ ನಡೆಯುತ್ತದೆ. ಸೋಮವಾರ ಪೂಜೆ ಹಾಗೂ ದೊಡ್ಡ ಸೋಮವಾರ ಪೂಜೆಯು ಕ್ಷೇತ್ರದಲ್ಲಿ ನಡೆಯುವ ಅತ್ಯಂತ ಪ್ರಧಾನ ಪೂಜೆಗಳು. ಪ್ರತಿಯೊಂದು ಪೂಜೆಗೂ ಪ್ರತ್ಯೇಕ ನೈವೇದ್ಯ ಮತ್ತು ಆರತಿ, ಈ ಪೂಜೆಯ ವಿಶೇಷತೆಯಾಗಿದೆ. ದೊಡ್ಡ ಸೋಮವಾರ ಪೂಜೆಯು ಉಪದೇವರುಗಳಿಗೂ ದೈವಗಳಿಗೂ ಸೇವೆ ಸಹಿತ,, ದೀಪಾಲಂಕಾರದೊಂದಿಗೆ ರಾತ್ರಿಕಾಲದಲ್ಲಿ ಮಾತ್ರ ನಡೆದು ಬರುತ್ತಿರುವ ಮಹತ್ವದ ಸೇವೆಯಾಗಿದೆ.“ಪಾದ ಕಾಣಿಕೆ” ಎಂಬುವುದು ಇಲ್ಲಿನ ಅತ್ಯಂತ ವಿಶೇಷವುಳ್ಳ ಕಾಣಿಕೆ ಸಂಪ್ರದಾಯವಾಗಿದೆ. ಸೀಮೆಯ, ಪರವೂರ ಭಕ್ತರ ಮನೆಗಳಲ್ಲಿ ನಡೆಯುವ ಯಾವುದೇ ಶುಭಕಾರ್ಯದ ಸಂದರ್ಭದಲ್ಲಿ ತೆಗೆದಿರಿಸಿ ಅದನ್ನು ಒಟ್ಟು ಸೇರಿಸಿ ಕ್ಷೇತ್ರಕ್ಕೆ ತಂದು ಪ್ರಾರ್ಥಿಸಿ ಸಮರ್ಪಿಸುವುದೇ ಈ ಪಾದ ಕಾಣಿಕೆ ಪದ್ಧತಿ. ಇಂದಿಗೂ ಕ್ಷೇತ್ರಕ್ಕೆ ಈ ರೀತಿಯಲ್ಲಿ ನಾಡಿನ ಮೂಲೆಗಳಿಂದಲೂ ಭಕ್ತರು ಸಮರ್ಪಿಸುತ್ತಿರುವುದು ಕ್ಷೇತ್ರ ಮಹಿಮೆಯಾಗಿದೆ.

 

ಶ್ರೀ ಚಾಮುಂಡಿ ದೈವಕ್ಕೂ ಗುಳಿಗೆ ದೈವಕ್ಕೂ ಭಕ್ತರ ಬಯಕೆಯನುಸರಿಸಿ ತಂಬಿಲ, ಕಲಶಾದಿಗಳು ಸಾಮಾನ್ಯ ಎಲ್ಲಾ ದಿನಗಳಲ್ಲೂ ನಡೆಸಬಹುದಾಗಿದೆ.ರಕ್ತೇಶ್ವರಿ ದೈವಕ್ಕೆ ತಂಬಿಲ, ಉಳ್ಳಾಕುಳು ದೈವಗಳಿಗೆ ತಂಬಿಲ ಸೇವೆಗಳು ಎಲ್ಲಾ ದಿವಸಗಳಲ್ಲಿಯೂ ನಡೆದು ಬರುತ್ತದೆ. ಶ್ರೀ ವಿಷ್ಣುಮೂರ್ತಿ ದೈವಕ್ಕೆ ವಾರ್ಷಿಕ ನೃತ್ಯ ಸಂದರ್ಭದಲ್ಲಿ ಮಾತ್ರ ಸೇವೆ ಕೊಡಬಹುದಾಗಿದೆ.ಕಾರಣಿಕದಿಂದ ಶ್ರೇಷ್ಟವಾದ ಶ್ರೀ ಮಹಾಲಿಂಗೇಶ್ವರ ಸನ್ನಿಧಾನ ಊರ, ಪರವೂರ ಭಕ್ತರ ಶ್ರದ್ಧೆಯ ಕೇಂದ್ರವಾಗಿದೆ. ಬದುಕಿನ ಎಲ್ಲಾ ಚಟುವಟಿಕೆಗಳಿಗೂ ಪ್ರೇರಣೆಯಿತ್ತು ಮುನ್ನಡೆಸುವ ಶಕ್ತಿಯ ದಿವ್ಯಸನ್ನಿಧಿಯಲ್ಲಿ ಅನೇಕಾನೇಕ ನಿರ್ಮಾಣ ಕಾರ್ಯಗಳು ಊರ ಪರವೂರ ಭಕ್ತಜನರ ಉದಾರ ಕೊಡುಗೆಯಿಂದ ಬಂದದ್ದಾಗಿದೆ. ಅನೇಕಾನೇಕ ಕೆಲಸಗಳು ಇನ್ನೂನೆರವೇರಿಸಲು ಬಾಕಿ ಇವೆ. ಭಗವಂತನ ಪ್ರೇರಣೆಯಿಂದ ಭಗವದ್ಭಕ್ತರ ಸಹಕಾರದೊಂದಿಗೆ ಶ್ರೀಕ್ಷೇತ್ರವು ಸಕಲ ರೀತಿಯಲ್ಲಿ ಉನ್ನತಿಯನ್ನು ಹೊಂದಿ ವೈಭವದ ಶಿಖರವನ್ನೇರಿ, ಆರಾಧ್ಯಮೂರ್ತಿ ಪರಮೇಶ್ವರ ನಮ್ಮೆಲ್ಲರನ್ನು ಅನುಗ್ರಹಿಸುವನೆಂಬುದೇ ನಮ್ಮೆಲ್ಲರ ಮನದಾಳದ ವಿಶ್ವಾಸವಾಗಿದೆ.

 

(ಕೃಪೆ)

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಡೂರು ಗ್ರಾಮ,ಉರ್ಡೂರು ಪೋಸ್ಟ್, ಕಾಸರಗೋಡು ತಾಲೂಕು, ಕೇರಳ – 671543

ಇಮೇಲ್: info@adoortemple.in

ದೂರವಾಣಿ: 04994 -270262

ಮೊಬೈಲ್: 094469 87012

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ