ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣ: ಮೂವರು ವಿದ್ಯಾರ್ಥಿನಿಯರು ನ್ಯಾಯಾಲಯಕ್ಕೆ ಹಾಜರು: ಷರತ್ತುಬದ್ಧ ಜಾಮೀನು ಮಂಜೂರು
ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣ: ಮೂವರು ವಿದ್ಯಾರ್ಥಿನಿಯರು ನ್ಯಾಯಾಲಯಕ್ಕೆ ಹಾಜರು: ಷರತ್ತುಬದ್ಧ ಜಾಮೀನು ಮಂಜೂರು
ಉಡುಪಿ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಉಡುಪಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಖುದ್ದಾಗಿ ಹಾಜರಾಗಿದ್ದಾರೆ.ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ ವಿದ್ಯಾರ್ಥಿನಿಯರಿಗೆ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.ಆರೋಪಿ ವಿದ್ಯಾರ್ಥಿನಿಯರು ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 509,204,175,34 ಐ,ಪಿ,ಸಿ,ಮತ್ತು 66(ಇ) ಐಟಿ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಮೂವರು ವಿದ್ಯಾರ್ಥಿನಿಯರು ಇಂದು ಉಡುಪಿಯ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮೂವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ತನಿಖಾಧಿಕಾರಿಗಳಿಗೆ ತನಿಖೆಗೆ ಸಹಕರಿಸುವುದು, ವಿಚಾರಣೆ ದಿನ ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗುವುದು, ಸಾಕ್ಷಿ ಗಳಿಗೆ ಯಾವುದೇ ಬೆದರಿಕೆಯೊಡ್ಡದಿರುವುದು ಮತ್ತು ತಲಾ 20,000ರೂ. ಮೊತ್ತ ಬಾಂಡ್ ನ್ಯಾಯಾಲಯಕ್ಕೆ ಸಲ್ಲಿಸುವುದು ಸೇರಿದಂತೆ ಹಲವು ಶರತುಗಳನ್ನು ನ್ಯಾಯಾಲಯ ವಿಧಿಸಿದೆ.
ಏನಿದು ಉಡುಪಿ ವಿಡಿಯೋ ಪ್ರಕರಣ?
ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ವಾಶ್ ರೂಮ್‌ನಲ್ಲಿ ಮೂವರು ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯ ವಿಡಿಯೋವನ್ನು ರಹಸ್ಯವಾಗಿ ಸೆರೆಹಿಡಿದಿದ್ದರು ಎಂದು ಹೇಳಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲಿಯೇ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ. ಇದರ ಬಳಿಕ ಜುಲೈ 26ರಂದು ಮೂವರು ವಿದ್ಯಾರ್ಥಿನಿಯರು ಹಾಗೂ ಕಾಲೇಜು ಆಡಳಿತ ಮಂಡಳಿ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.ಈ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈಗಾಗಲೇ ಮಹಿಳಾ ಆಯೋಗದ ಸದಸ್ಯೆ ಬುಧವಾರ ಹಾಗೂ ಗುರುವಾರ ಖುಷ್ಬು ಸುಂದರ್ ಉಡುಪಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಕ್ಯಾಮೆರಾ ಪತ್ತೆಯಾಗಿಲ್ಲ ಎಂದು ಹೇಳಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕು ಎಂದು ತಿಳಿಸಿದ್ದಾರೆ.