• 8 ಸೆಪ್ಟೆಂಬರ್ 2024

ಸಿಇಟಿ-2024 ಹೊಸ ಸಾಫ್ಟ್ವೇರ್ – ವಿದ್ಯಾರ್ಥಿಗಳು ಹೈರಾಣು

 ಸಿಇಟಿ-2024 ಹೊಸ ಸಾಫ್ಟ್ವೇರ್ – ವಿದ್ಯಾರ್ಥಿಗಳು ಹೈರಾಣು
Digiqole Ad

ಸಿಇಟಿ-2024 ಹೊಸ ಸಾಫ್ಟ್ವೇರ್ – ವಿದ್ಯಾರ್ಥಿಗಳು ಹೈರಾಣು

ಕೆಇಎ ಸಿಇಟಿ-2024 ಕ್ಕೆ ಹೊಸ ತಂತ್ರಾಂಶವನ್ನು ಹೊರತಂದಿದ್ದು, ಆನ್ಲೈನ್ ಅಪ್ಲಿಕೇಶನ್ ಕಂ ವೆರಿಫಿಕೇಶನ್ ಮಾಡ್ಯೂಲ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರಿಚಯಿಸಿದ್ದು, ಆರಂಭದಲ್ಲಿ ಅದರ ವೈಶಿಷ್ಟ್ಯತೆಯನ್ನು ಗಮನಿಸಿದ ಹಲವಾರು ವಿದ್ಯಾರ್ಥಿಗಳು ಮತ್ತು ಪೋಷಕರು ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡ್ಸಿದ್ದರು.

ಆದರೆ ದಿನಾಂಕ 13ನೇ ಜನವರಿ 2024 ರಿಂದ 17ನೇ ಜನವರಿ 2024ರ ಸಮಯದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳನ್ನು ವಿಲೀನಗೊಳಿಸಿ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆಗಿ ಪರಿವರ್ತಿತಗೊಂಡಿದ್ದು ಅವುಗಳ ಡೇಟಾಬೇಸ್ ಅನ್ನು ಏಕೀಕೃತಗೊಳಿಸಲಾಗಿರುವುದರಿಂದ, ಹೆಚ್ಚಿನ ವಿದ್ಯಾರ್ಥಿಗಳ ಮಾಹಿತಿ FETCH ಆಗದಿರುವ ಕಾರಣ, ಬಹುತೇಕ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಪ್ರಮಾಣಪತ್ರಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

ಸಿಇಟಿ ಅಪ್ಲಿಕೇಶನ್‍ನಲ್ಲಿ ಪ್ರಸ್ತುತ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಎಲ್ಲಾ ವರ್ಷಗಳ ವ್ಯಾಸಂಗ ಪ್ರಮಾಣಪತ್ರಗಳನ್ನು ಕೇಳುತ್ತಿರುವುದರಿಂದ, ವಿದ್ಯಾರ್ಥಿಗಳು ಒಂದರಿಂದ ಹತ್ತನೇ ತರಗತಿವರೆಗಿನ ವ್ಯಾಸಂಗ ಪ್ರಮಾಣಪತ್ರಗಳನ್ನು ಹೇಗೋ ಪಡೆಯಲು ಪ್ರಯತ್ನಿಸುತ್ತಿದ್ದಾರಾದರೂ, ಪ್ರಸ್ತುತ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕೋರ್ಸು ಪೂರ್ಣಗೊಳ್ಳದೇ ವ್ಯಾಸಂಗ ಪ್ರಮಾಣಪತ್ರಗಳನ್ನು ನೀಡಲು ಹಿಂಜರಿಯುತ್ತಿರುವುದರಿಂದ ವಿದ್ಯಾರ್ಥಿಗಳು ದಿಕ್ಕು ತೋಚದಂತಾಗಿದ್ದಾರೆ.

ಒಂದೆಡೆ ಪ್ರಿಪರೇಟರಿ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೊಂದೆಡೆ, ಪ್ರವರ್ಗವಾರು ಮೀಸಲಾತಿ ಕೋರಲು, ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಕಡ್ಡಾಯ ಮಾಡಲಾಗಿದ್ದು, ವಿದ್ಯಾರ್ಥಿಗಳು ನಾಡಕಚೇರಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿಯನ್ನು ಎಳೆದು ತಂದಿದೆ. ಈ ಹಿಂದಿನ ವರ್ಷಗಳಲ್ಲಿ, ಪ್ರವರ್ಗವಾರು ಮೀಸಲಾತಿ ಕೋರಲು, ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಕೋರಲು ಅರ್ಜಿ ಸಲ್ಲಿಸಿದ ನಂತರವೂ ಅವಕಾಶ ಕಲ್ಪಿಸುತ್ತಿದ್ದ ಕೆಇಎ, ಈ ಬಾರಿ ವಿದ್ಯಾರ್ಥಿಗಳಿಗೆ ಅನಾನುಕೂಲವನ್ನು ಉಂಟುಮಾಡುತ್ತಿದೆ.

ಎನ್‍ಸಿಸಿ, ಸೈನಿಕ, ಮಾಜಿ ಸೈನಿಕ, ಕೇಂದ್ರೀಯ ಶಸಸ್ತ್ರ ಪೊಲೀಸ್ ಪಡೆ, ಇತ್ಯಾದಿ ವಿಶೇಷ ಕೋಟಾದಡಿಯಲ್ಲಿ ಮೀಸಲಾತಿ ಕೋರುವ ವಿದ್ಯಾರ್ಥಿಗಳಿಗೂ ಸೂಕ್ತ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಿದ್ದು, ಅದನ್ನು ಅಪ್ಲೋಡ್ ಮಾಡದೇ, ಮುಂದುವರಿಯಲು ಅಪ್ಲಿಕೇಶನ್ ಬಿಡುತ್ತಿಲ್ಲ. ಸಾಮಾನ್ಯವಾಗಿ ಇಂತಹ ವಿಶೇಷ ಕೋಟಾದ ಮೀಸಲಾತಿಗಾಗಿ ಪ್ರಮಾಣಪತ್ರಗಳನ್ನು ಕೋರಲು ಸಿಇಟಿ ಅರ್ಜಿ ಸಲ್ಲಿಸಿದ ನಂತರ ಸಿಇಟಿ ಅರ್ಜಿಯ ಸ್ವೀಕೃತಿಯೊಂದಿಗೆ ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ ನಂತರವೇ ಅಂತಹ ಪ್ರಮಾಣಪತ್ರಗಳನ್ನು ಒದಗಿಸುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ದಿಕ್ಕು ತೋಚದಂತಾಗಿದ್ದಾರೆ.

ಕೆಇಎ ಸಹಾಯವಾಣಿಯೂ ಕೆಲಸ ಮಾಡುತ್ತಿಲ್ಲ

ಈ ಬಗ್ಗೆ ಹಲವಾರು ವಿದ್ಯಾರ್ಥಿಗಳು ಎದುರಿಸುತ್ತಿರುವ ಗೊಂದಲಗಳನ್ನು ಗಮನಿಸಿದ, ಪುತ್ತೂರಿನ ಕ್ರಸ್ಟ್ ಎಜುಕೇಶನಲ್ ಕನ್ಸಲ್ಟೆಂಟ್ಸ್ ನಿಂದ ಎರಡು ದಿನಗಳಿಂದ ಕೆಇಎಯನ್ನು ಅದರ ಅಧಿಕೃತ ಸಹಾಯವಾಣಿಯ ಮೂಲಕ ಸಂಪರ್ಕಿಸುವ ಸತತ ಪ್ರಯತ್ನಗಳನ್ನು ನಡೆಸುತ್ತಿದ್ದರೂ, ಕಾಲ್ ಕನೆಕ್ಟ್ ಆಗದೇ, ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಸಮರ್ಪಕ ಮಾಹಿತಿ ನೀಡಲು ಲಭ್ಯವಿಲ್ಲದ ಕೆಇಎಯ ಸಹಾಯವಾಣಿ ಸಂಖ್ಯೆಯು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ