ಅಕ್ಷಯ ತೃತೀಯದಂದು ಶುಭ ಅಶುಭ ಸೂಚಿಸುವ ಸಂಗತಿಗಳು
ಪ್ರತಿ ವರ್ಷ ಅಕ್ಷಯ ತೃತೀಯವನ್ನು ದೇಶದಾದ್ಯಂತ ವಿಜೃಂಭಣೆ ಹಾಗೂ ವೈಭವದಿಂದ ಆಚರಿಸಲಾಗುತ್ತದೆ. ಹಿಂದೂ ಸಮುದಾಯಕ್ಕೆ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾದ ಅಕ್ಷಯ ತೃತೀಯವನ್ನು ಧ್ಯಾನ, ದಾನ ಮತ್ತು ಆಧ್ಯಾತ್ಮಿಕತೆಯ ಮೂಲಕ ಆಚರಿಸಲಾಗುತ್ತದೆ. ಅಕ್ಷಯ ಎಂಬ ಪದವು ಎಂದಿಗೂ ಕಡಿಮೆಯಾಗದ ಹಾಗೂ ನಾಶವಾಗದ ಎಂಬ ಅರ್ಥವನ್ನು ಸೂಚಿಸುತ್ತದೆ. ಆದ್ದರಿಂದ ಜನರು ಈ ದಿನದಂದು ಚಿನ್ನ ಖರೀದಿಸುತ್ತಾರೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಯಿಂದ ಕಾಲಕ್ರಮೇಣ ಅದರ ಮೌಲ್ಯ ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅಖಾ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯವನ್ನು ಭಗವಾನ್ ವಿಷ್ಣುವಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತದೆ. ಭಗವಾನ್ ವಿಷ್ಣುವು ತನ್ನ ಭಕ್ತರ ಸಮೃದ್ಧಿ ಮತ್ತು ಸಂಪತ್ತನ್ನು ರಕ್ಷಿಸುತ್ತಾನೆ ಎಂದು ನಂಬಲಾಗಿದೆ.
ಅಕ್ಷಯ ತೃತೀಯದಂದು ಮಾಡಬಹುದಾದ ಹಾಗೂ ಮಾಡಬಾರದಾದ ಕೆಲವು ಪ್ರಮುಖ ಸಂಗತಿಗಳು ಹೀಗಿವೆ.
ಮಾಡಬಹುದಾದ ಸಂಗತಿಗಳು
- ಚಿನ್ನ ಖರೀದಿ: ಈ ದಿನದಂದು ಚಿನ್ನ ಖರೀದಿ ಮಾಡುವುದು ಶುಭ ಸಂಕೇತ ಎಂದು ಬಲವಾಗಿ ನಂಬಲಾಗುತ್ತದೆ. ಯಾಕೆಂದರೆ ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡುವುದರಿಂದ ಸಮೃದ್ಧಿ ಹಾಗೂ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಅಲ್ಲದೆ ಇದು ಭವಿಷ್ಯದ ಜೀವನದ ವೃದ್ಧಿಗೂ ಸಹಕಾರಿ.
- ಹೊಸ ಆರಂಭಕ್ಕೆ ಮುನ್ನುಡಿ ಬರೆಯುವುದು: ಅಕ್ಷಯ ತೃತೀಯದಂದು ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಶುಭದಿನವಾಗಿದೆ. ಕಾರು ಖರೀದಿ, ಹೊಸ ಉದ್ಯೋಗಕ್ಕೆ ಸೇರುವುದು, ಹೊಸ ಉದ್ಯಮ ಆರಂಭಿಸುವುದು ಈ ಎಲ್ಲದ್ದಕ್ಕೂ ಇದು ಶುಭವಾಗಿದೆ.
- ಹೂಡಿಕೆಗೂ ಸೂಕ್ತ: ಆಸ್ತಿಯಲ್ಲಿ ಹೂಡಿಕೆ ಮಾಡಲು ಅಥವಾ ಹೊಸ ಮನೆ ಕಟ್ಟಿಸಲು ಮುಹೂರ್ತ ಇಡಲು ಇದು ಪ್ರಶಸ್ತ ದಿನವೂ ಹೌದು. ಈ ದಿನ ಹೂಡಿಕೆ ಮಾಡುವುದರಿಂದ ಅದೃಷ್ಟ ಒಲಿಯುತ್ತದೆ ಹಾಗೂ ಭವಿಷ್ಯದ ಭರವಸೆಗೂ ಬೆಳಕು ನೀಡುತ್ತದೆ ಎನ್ನಲಾಗುತ್ತದೆ.
- ಆಧ್ಯಾತ್ಮಿಕ ಕ್ರಿಯೆಗಳು: ಅಕ್ಷಯ ತೃತೀಯದಲ್ಲಿ ಧ್ಯಾನ, ಯಜ್ಞ ಮತ್ತು ಪೂಜೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
- ಸಾತ್ವಿಕ ಭೋಗ: ವಿಷ್ಣುವಿಗೆ ಪೂಜೆ ಮಾಡುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಸಾತ್ವಿಕ ಭೋಗವನ್ನು ದೇವರಿಗೆ ನೀಡಬೇಕು.
ಈ ಕೆಲಸಗಳನ್ನು ಎಂದಿಗೂ ಮಾಡದಿರಿ
- ಕತ್ತಲೆ ಕೋಣೆಯ ನಿರ್ಮಾಣ: ಈ ಶುಭ ದಿನದಂದು ಸಮೃದ್ಧಿಯ ಬೆಳಕನ್ನು ಪ್ರತಿ ಕೋಣೆಗೆ ಪ್ರವೇಶಿಸಲು ಅನುಮತಿಸಬೇಕು ಮತ್ತು ಮನೆಯಲ್ಲಿ ಯಾವುದೇ ಕೋಣೆಯನ್ನು ಕತ್ತಲೆಯಾಗಿ ಇಡಬಾರದು.
- ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವತೆ: ಈ ಎರಡು ದೇವರು ಮತ್ತು ದೇವತೆಗಳನ್ನು ಪ್ರತ್ಯೇಕವಾಗಿ ಪೂಜಿಸಬಾರದು. ಇವರನ್ನು ಒಟ್ಟಿಗೆ ಪೂಜಿಸುವುದರಿಂದ ಹೆಚ್ಚಿನ ಶ್ರೇಯಸ್ಸು ದೊರೆಯುತ್ತದೆ.
- ಬರಿಗೈಯಲ್ಲಿ ಹಿಂತಿರುಗುವುದು: ನೀವು ಶಾಪಿಂಗ್ ಮಾಡಲು ಹೋದರೆ, ನೀವು ಬರಿಗೈಯಲ್ಲಿ ಹಿಂತಿರುಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಚಿನ್ನ ಬೆಳ್ಳಿಯಲ್ಲದಿದ್ದರೂ ಮನೆಗೆ ಸಂಪತ್ತು ತರಲು ಲೋಹದ ಆಭರಣವನ್ನು ಖರೀದಿಸಬೇಕು.
- ಉಪವಾಸ ಮುರಿಯುವುದು: ನಿರ್ದಿಷ್ಟ ಸಮಯದವರೆಗೆ ಉಪವಾಸ ಮುಂದುವರಿಸುವುದು ಅವಶ್ಯ. ಮಧ್ಯದಲ್ಲಿ ಉಪವಾಸ ಕೈಬಿಡುವುದು ಅಶುಭವನ್ನು ಸೂಚಿಸುತ್ತದೆ.
- ಪವಿತ್ರ ದಾರ: ಈ ದಿನದಂದು ನಾವು ಪವಿತ್ರ ದಾರವನ್ನು ದೀರ್ಘಕಾಲದವರೆಗೆ ಧರಿಸಬಾರದು, ಏಕೆಂದರೆ ಇದು ಅಶುಭವೆಂದು ಪರಿಗಣಿಸಲಾಗಿದೆ.