• 27 ಜುಲೈ 2024

ಅಮ್ಮಾ ನಿನ್ನಯ ಋಣವನ್ನು ನಾ ಹೇಗಮ್ಮ ( mother) ತೀರಿಸಲಿ??

 ಅಮ್ಮಾ ನಿನ್ನಯ ಋಣವನ್ನು ನಾ ಹೇಗಮ್ಮ ( mother) ತೀರಿಸಲಿ??
Digiqole Ad

ಅಮ್ಮಾ …!! ಹೊತ್ತು ಹೆತ್ತು ತುತ್ತು ನೀಡಿದವಳು. ಅಮ್ಮ ಎಂದು ಉಚ್ಚರಿಸಿದ ಕೂಡಲೇ ವಾತ್ಸಲ್ಯದ ಜಗತ್ತೊಂದು ಕಣ್ಣೆದುರು ತೆರೆದುಕೊಳ್ಳುತ್ತದೆ. ಆಕೆಗೆ ಪರ್ಯಾಯವಾದ ಪದವೂ ಇಲ್ಲ, ವಸ್ತುವೂ ಇಲ್ಲ, ವ್ಯಕ್ತಿಯೂ ಇಲ್ಲ. ಜಗತ್ತಿನ ಏಕೈಕ ನಿಸ್ವಾರ್ಥಿ.

ಅಮ್ಮ ಎಂದರೆ ಪ್ರೀತಿ…

ಅಮ್ಮ ಎಂದರೆ ಮಮತೆ…

ಅತ್ತು ಕರೆದಾಗಲೆಲ್ಲ ಎತ್ತಿ ಆಡಿಸಿ, ತುತ್ತಿಟ್ಟು ಕಥೆ ಕಟ್ಟಿದವಳು…

ammaತಾಯಿ ಗುರುವಾಗಿ ವಿದ್ಯೆ-ಬುದ್ಧಿ ಕಲಿಸಿದವಳು.ಕಲ್ಲುಮುಳ್ಳಿನ ಮಧ್ಯೆ ಕೈಹಿಡಿದು ನಡೆಸಿದವಳು. ಪುಟ್ಟ ಹೆಜ್ಜೆಗಳು ತಡವರಿಸಿದಾಗ ಅತ್ತವಳು. ಭದ್ರವಾಗಿ ಬದುಕು ನೆಲೆ ಕಂಡಾಗ ಸಂತೃಪ್ತಿಯಿಂದ ಮನದುಂಬಿ ನಕ್ಕವಳು. ಅಡಿಗಡಿಗೆ ಎದುರಾದ ನೋವು ಅಸಹಾಯಕತೆಗಳನ್ನು ನುಂಗುತ್ತಲೇ ಬಂದವಳು. ವಾಸ್ತವದ ಬಿಸಿಯನ್ನು ಒಳಗೊಳಗೆ ಅರಗಿಸಿಕೊಂಡವಳು. ದುಡಿಮೆಯ ಹಾದಿಯಲ್ಲಿ ಬಾಳು ಸವೆಸಿದವಳು. ನಿವೃತ್ತಿಯೇ ಇಲ್ಲದ ಉದ್ಯೋಗದಲ್ಲಿ ಉರಿವ ದೀಪವಾಗಿಯೇ ಬದುಕಿಗೆ ಸರಿದವಳು. ಭಾವಕ್ಕೊಂದು ಜೀವ ಕೊಟ್ಟು, ಜೀವಕ್ಕೊಂದು ರೂಪ ಇಟ್ಟು ಬದುಕಿಗೊಂದು ಗುರುತು ಕೊಡುವ ಅಮ್ಮ. ಬದುಕಿನ ವಾಸ್ತವದ ಕಹಿ ಜಂಜಾಟವನ್ನು ಸದಾ ತನ್ನ ವಾತ್ಸಲ್ಯದ ನೆಗೆಯೊಳಗೆ ಅಡಗಿಸಿ ಸುಂದರ ಹಾಗೂ ಸರಳವಾದ ಬಾಲ್ಯವನ್ನು ಕೊಟ್ಟವಳು. ಹೆತ್ತು ಹತ್ತಿರವಾದವಳು. ತುತ್ತನಿತ್ತು ಬಾಳಬುತ್ತಿ ತೋರಿಸಿದವಳು. ಮುತ್ತನಿತ್ತು ಅಣಿಮುತ್ತನ್ನಾಗಿಸಿದವಳು. ಹೆಸರು ಇಟ್ಟ ದಷ್ಟೇ ಅಲ್ಲ. ಇಟ್ಟ ಹೆಸರು ಉಳಿಸಿದವಳು. ಎತ್ತಿಕೊಂಡದ್ದು ಅಷ್ಟೇ ಅಲ್ಲ ಎತ್ತರಕ್ಕೆ ಬೆಳೆಸಿದವಳು. ಕೈ ಹಿಡಿದು ನಡೆದ ದಷ್ಟೇ ಅಲ್ಲ ಕೈ ದೀವಿಗೆಯಾದವಳು…. ಒಟ್ಟಾರೆಯಾಗಿ ಬಾಳ ಹೊಳೆಯ ಏರಿಳಿತದಿ ಸಾಗಿಬರುವ ತೇಲುದೀಪಾವಾಗಿದ್ದಾಳೆ ಈ ಅಮ್ಮ.

ಹೀಗೆ… ಅಮ್ಮ ಎಂದರೆ ಹೆಮ್ಮೆ, ಅಮ್ಮನೆಂದರೆ ವಿಶಾಲ.. ಆದ್ದರಿಂದಲೇ ಜಗತ್ತಿನಲ್ಲಿರುವ ಧರ್ಮ, ದೇಶ, ಭಾಷೆ ಅಮ್ಮನನ್ನು ಮೊದಲ ಸ್ಥಾನದಲ್ಲಿರಿಸಿದೆ. ಹಿಂದೂ ಧರ್ಮದಲ್ಲಿ “ತಾಯಿಯೇ ದೇವರು”ಎಂಬುದು ವಿಶ್ವಾಸ, ಇಸ್ಲಾಂನಲ್ಲಿ “ಸ್ವರ್ಗ ವಿರುವುದು ತಾಯಿಯ ಪಾದದಡಿಯಲ್ಲಿ”ಎಂಬ ನಂಬಿಕೆ, ಕ್ರೈಸ್ತರು ಮರಿಯಮ್ ದೇವತೆ ಅನುಯಾಯಿಗಳು: ಹೀಗೆ ನೋಡಿದರೆ ಸರ್ವ ಧರ್ಮಗಳನ್ನೊಳಗೊಂಡ ಭವ್ಯ ಭಾರತ ದೇಶ.”ಭಾರತ ಮಾತೆ” ಎಂದು ಕರೆಯುತ್ತಿದೆ. ಇದು ಅಮ್ಮನಿಗೆ ಸಿಗುವ ಗೌರವ. ಅಮ್ಮ ನಿಜಕ್ಕೂ ಜಗಬೆಳಕು. ಜಗಜ್ಯೋತಿ, ಜಗಕಿರಣ,ಜಗಕಣ್ಮಣಿ. ಮುರಿಯದ ಸ್ಥಿರವಾದ ಸಂಬಂಧ. ಎಲ್ಲ ಬಂಧಕ್ಕಿಂತಲೂ ಅತ್ಯಗತ್ಯ ಹಾಗೂ ಉದಾತ್ತವಾದ ಸಂಬಂಧ ಅಮ್ಮನ ಜೊತೆಯಾಗಿದೆ. ಯಾಂತ್ರಿಕ ಬದುಕನ್ನು ಸರಿಪಡಿಸುವ ಮಾಂತ್ರಿಕ ಶಕ್ತಿಯೊಂದಿದ್ದರೆ ಅದು ತಾಯಿಯ ಮನಸ್ಸು. ಶಿಲ್ಪಿಯೊಬ್ಬ ಒಂದು ಕಲ್ಲನ್ನು ಕೊರೆದು ತಿದ್ದಿ ತೀಡಿ ಒಂದು ಸುಂದರ ರೂಪ ಕೊಡುವಂತೆ ತಾಯಿ ಮಕ್ಕಳನ್ನು ಸಲಹುತ್ತಾಳೆ.”ನಿನ್ನಯ ಋಣವನ್ನು ತೀರಿಸಲಿ, ನಾ ಹೇಗಮ್ಮ??”

ಅಮ್ಮಾ…. ಅಮ್ಮಾ….. ಅಮ್ಮಾ…..!!!!!

–✍ ಸಂಜನಾ ವಾಲ್ತಾಜೆ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ