• 8 ಸೆಪ್ಟೆಂಬರ್ 2024

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಬಾಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ ರಷ್ಯಾಕ್ಕೆ ರಫ್ತು ಆರಂಭಿಸಿದ ಭಾರತ ಸರ್ಕಾರ

 ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಬಾಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ ರಷ್ಯಾಕ್ಕೆ ರಫ್ತು ಆರಂಭಿಸಿದ ಭಾರತ ಸರ್ಕಾರ
Digiqole Ad

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಬಾಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ ರಷ್ಯಾಕ್ಕೆ ರಫ್ತು ಆರಂಭಿಸಿದ ಭಾರತ ಸರ್ಕಾರ

ವಿಶ್ವದ ಪ್ರಮುಖ ಬಾಳೆಹಣ್ಣು ಉತ್ಪಾದಕ ರಾಷ್ಟ್ರವಾಗಿರುವ ಭಾರತ, ಇತ್ತೀಚೆಗೆ ರಷ್ಯಾದ ಮಾಸ್ಕೋಗೆ ಮುಂಬೈನಿಂದ ಬಾಳೆಹಣ್ಣು ತುಂಬಿದ ಹಡಗಿಗೆ ಹಸಿರು ನಿಶಾನೆ ತೋರಿದೆ.
ಭಾರತದಿಂದ ರಷ್ಯಾಕ್ಕೆ ಸಮುದ್ರ ಮಾರ್ಗದ ಮೂಲಕ ಬಾಳೆಹಣ್ಣು ರಫ್ತಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೃಷಿ ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಭಾರತದಿಂದ ರಷ್ಯಾಕ್ಕೆ ಸಮುದ್ರ ಮಾರ್ಗದ ಮೂಲಕ ಬಾಳೆಹಣ್ಣು ರಫ್ತು ಮಾಡಲು ಮುಂಬೈ ಮೂಲದ ರಫ್ತು ಸಂಸ್ಥೆ ಗುರುಕೃಪ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ್ ಗೆ ಅನುಮತಿ ನೀಡಿದೆ. ಈ ಸಂಸ್ಥೆ ಈಗಾಗಲೇ ಯುರೋಪ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ನಿರಂತರವಾಗಿ ತಾಜಾ ಹಣ್ಣುಗಳು ಹಾಗೂ ತರಕಾರಿಗಳನ್ನು ರಫ್ತು ಮಾಡುತ್ತಿದೆ. 1540 ಬಾಕ್ಸ್ ಬಾಳೆಹಣ್ಣುಗಳನ್ನು ಫೆ.17ರಂದು ಮಹಾರಾಷ್ಟ್ರದಿಂದ ರಷ್ಯಾಕ್ಕೆ ಕುಳಿಸಲಾಗಿದ್ದು, ಈ ಹಡಗಿಗೆ ಎಪಿಇಡಿಎ ಮುಖ್ಯಸ್ಥ ಅಭಿಷೇಕ ದೇವ್ ಚಾಲನೆ ನೀಡಿದ್ದಾರೆ. ಎಪಿಇಡಿಎ ಹೊಸ ಉತ್ಪನ್ನಗಳನ್ನು ಹೊಸ ಸ್ಥಳಗಳಿಗೆ ರಫ್ತು ಮಾಡಲು ಎಪಿಇಡಿಎ ಮುಖ್ಯಸ್ಥರು ಹೆಚ್ಚಿನ ಉತ್ತೇಜನ ನೀಡುತ್ತಿದ್ದಾರೆ.
ಮಹಿಳಾ ಉದ್ಯಮಿಗಳಿಗೆ ವಿಶೇಷ ಉತ್ತೇಜನ ನೀಡುತ್ತಿರುವ ಎಪಿಇಡಿಎ ಹಣಕಾಸಿನ ನೆರವಿನ ಯೋಜನೆಯನ್ನು ಎಪಿಇಡಿಎ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಸಮುದ್ರ ಮಾರ್ಗದ ನಿಯಮಗಳನ್ನು ರೂಪಿಸಲು ನೆರವು ನೀಡಿದ್ದ ಸೆಂಟ್ರಲ್ ಇನ್ಸಿಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ (CISH) ಸಂಸ್ಥೆಗೆ ಕೂಡ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಮೇಕ್‌ ಇನ್‌ ಇಂಡಿಯಾ ಇಂಪ್ಯಾಕ್ಟ್‌, 1.24 ಲಕ್ಷ ಕೋಟಿ ದಾಟಲಿದೆ ಭಾರತದ ಮೊಬೈಲ್‌ ಫೋನ್‌ ರಫ್ತು!

ಇತ್ತೀಚೆಗೆ ರಷ್ಯಾ ಭಾರತದಿಂದ ಉಷ್ಣವಲಯದ ಹಣ್ಣುಗಳನ್ನು ಖರೀದಿಸುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿತ್ತು. ಈ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಸೇರಿತ್ತು. ಬಾಳೆಹಣ್ಣು ರಷ್ಯಾ ಆಮದು ಮಾಡಿಕೊಳ್ಳುವ ಪ್ರಮುಖ ಕೃಷಿ ಉತ್ಪನ್ನಗಳಲ್ಲಿ ಒಂದಾಗಿದ್ದು, ಪ್ರಸ್ತುತ ಲ್ಯಾಟಿನ್ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ.

ಭಾರತದ ಬಾಳೆಹಣ್ಣುಗಳನ್ನು ಇರಾನ್, ಇರಾಕ್, ಯುಎಎಇ, ಒಮನ್, ಉಜ್ಬೇಕಿಸ್ತಾನ್, ಸೌದಿ ಅರೇಬಿಯಾ, ನೇಪಾಳ, ಕತಾರ್, ಕುವೈಟ್, ಬಹ್ರೈನ್, ಅಫ್ಘಾನಿಸ್ತಾನ್ ಹಾಗೂ ಮಾಲ್ಡೀವ್ಸ್ ಗೆ ರಫ್ತು ಮಾಡಲಾಗುತ್ತಿದೆ. ಇದರ ಜೊತೆಗೆ ಯುಎಸ್ಎ, ರಷ್ಯಾ, ಜಪಾನ್, ಜರ್ಮನಿ, ಚೀನಾ, ನೆದರ್ಲ್ಯಾಂಡ್ಸ್, ಯುಕೆ ಹಾಗೂ ಫ್ರಾನ್ಸ್ ಗೆ ಕೂಡ ರಫ್ತು ಮಾಡಲು ಭಾರತಕ್ಕೆ ಸಾಕಷ್ಟು ಅವಕಾಶಗಳಿವೆ.

ಮಹಿಳಾ ಉದ್ಯಮಿಯೊಬ್ಬರ ಸಂಸ್ಥೆ ಮಹಾರಾಷ್ಟ್ರ ಮೂಲದ ಗುರುಕೃಪ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ್ ರಷ್ಯಾಕ್ಕೆ ಬಾಳೆಹಣ್ಣುಗಳನ್ನು ರಫ್ತು ಮಾಡುತ್ತಿದೆ. ಈ ಸಂಸ್ಥೆ ಆಂಧ್ರಪ್ರದೇಶದ ರೈತರುಗಳಿಂದ ಬಾಳೆಹಣ್ಣುಗಳನ್ನು ನೇರವಾಗಿ ಖರೀದಿಸಿ, ಸಂಸ್ಕರಿಸುತ್ತಿದೆ. ಬಾಳೆಹಣ್ಣುಗಳನ್ನು ಮಹಾರಾಷ್ಟ್ರದಲ್ಲಿರುವ APEDA ಅನುಮೋದಿತ ಪ್ಯಾಕ್ ಹೌಸ್ ಗೆ ತರಲಾಗುತ್ತದೆ. ಅಲ್ಲಿ ಅವುಗಳನ್ನು ಬೇರ್ಪಡಿಸಿ, ಪ್ಯಾಕ್ ಮಾಡಿ, ಬಾಕ್ಸ್ ಗಳನ್ನು ತುಂಬಿಸಿ ಆ ಬಳಿಕ ಕಂಟೈನರ್ ಗಳಲ್ಲಿ ಜೆಎನ್ ಪಿಟಿ ಬಂದರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ರಷ್ಯಾದ ನವೋರೊಸಿಯಸ್ಕ ಬಂದರಿಗೆ ಕಳುಹಿಸಲಾಗುತ್ತದೆ.

ಬಾಳೆಹಣ್ಣು ಭಾರತದ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಆಂಧ್ರಪ್ರದೇಶವು ಇಡೀ ದೇಶದಲ್ಲೇ ಅತೀಹೆಚ್ಚು ಬಾಳೆಹಣ್ಣುಗಳನ್ನು ಉತ್ಪಾದಿಸುವ ರಾಜ್ಯವಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶ ನಂತರದ ಸ್ಥಾನಗಳಲ್ಲಿವೆ. ಈ ಐದು ರಾಜ್ಯಗಳು ಒಟ್ಟಾಗಿ 2022-23ನೇ ಸಾಲಿನಲ್ಲಿ ಭಾರತದ ಬಾಳೆಹಣ್ಣು ಉತ್ಪಾದನೆಯಲ್ಲಿ ಸುಮಾರು ಶೇ.67ರಷ್ಟು ಕೊಡುಗೆ ನೀಡುತ್ತಿವೆ.
ಭಾರತ ವಿಶ್ವದಲ್ಲೇ ಬಾಳೆಹಣ್ಣಿನ ಅತೀದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದರೂ, ರಫ್ತಿನಲ್ಲಿ ಮಾತ್ರ ಹಿಂದೆ ಉಳಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಬಾಳೆಹಣ್ಣಿನ ರಫ್ತಿನಲ್ಲಿ ಭಾರತದ ಪಾಲು ಶೇ.1ರಷ್ಟು ಮಾತ್ರ ಇದೆ. ಬಾಳೆಹಣ್ಣು ಉತ್ಪಾದನೆಯಲ್ಲಿ ಮಾತ್ರ ಭಾರತದ ಪಾಲು ಜಾಗತಿಕ ಮಟ್ಟದಲ್ಲಿ ಶೇ.26.45 ರಷ್ಟಿದೆ. 2022-23ನೇ ಸಾಲಿನಲ್ಲಿ ಭಾರತ 176 ಮಿಲಿಯನ್ ಡಾಲರ್ ಮೌಲ್ಯದ ಬಾಳೆಹಣ್ಣುಗಳನ್ನು ರಫ್ತು ಮಾಡಿದೆ. ಇನ್ನು ಮುಂದಿನ ಐದು ವರ್ಷಗಳಲ್ಲಿ ಭಾರತದ ಬಾಳೆಹಣ್ಣಿನ ರಫ್ತು 1 ಬಿಲಿಯನ್ ಅಮೆರಿಕನ್ ಡಾಲರ್ ಗುರಿ ತಲುಪುವ ನಿರೀಕ್ಷೆಯಿದೆ. ಅಲ್ಲದೆ, ಇದು ಪೂರೈಕೆ ಸರಪಳಿಯಲ್ಲಿ 50,000 ನೇರ ಅಥವಾ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಕೂಡ ಇದೆ.

Digiqole Ad

ಈ ಸುದ್ದಿಗಳನ್ನೂ ಓದಿ