ಅಕ್ಟೋಬರ್ 15ರಿಂದ 34ನೇ ವರ್ಷದ ಐತಿಹಾಸಿಕ ‘ಮಂಗಳೂರು ದಸರಾ’ ಆರಂಭ
ಅಕ್ಟೋಬರ್ 15ರಿಂದ 34ನೇ ವರ್ಷದ ಐತಿಹಾಸಿಕ “ಮಂಗಳೂರು ದಸರಾ”ಆರಂಭ
ಐತಿಹಾಸಿಕ 34 ನೇ ವರ್ಷದ ಮಂಗಳೂರು ದಸರಾ ಅಕ್ಟೋಬರ್ 15ರಿಂದ ಶ್ರೀ ಕ್ಷೇತ್ರ ಕುದ್ರೊಳಿಯಲ್ಲಿ ಪ್ರಾರಂಭವಾಗಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವ ಕಳೆದ 33 ವರ್ಷಗಳಿಂದ ವರ್ಷಂಪ್ರತಿ ಕ್ಷೇತ್ರದಲ್ಲಿ ನಡೆಯುತ್ತಿದ್ದು ಈ ಬಾರಿಯೂ ವಿಶ್ವವಿಖ್ಯಾತ “ಮಂಗಳೂರು ದಸರಾ” ಶ್ರೀ ಕ್ಷೇತ್ರದ ನವೀಕರಣದ ರುವಾರಿ ಬಿ. ಜನಾರ್ಧನ ಪೂಜಾರಿಯವರ ಮಾರ್ಗದರ್ಶನದಲ್ಲಿ ಇದೇ ತಿಂಗಳ ಅ.15ರಂದು ಶ್ರೀ ಗಣೇಶ, ನವದುರ್ಗೆ ಮತ್ತು ಶ್ರೀ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಗೊಳಿಸಿ ಪ್ರಾರಂಭವಾಗಲಿದೆ. ಅ.15ರಿಂದ ಅಕ್ಟೋಬರ್ 23ರವರೆಗೆ ದಿನಂಪ್ರತಿ ಸಂಜೆ 6.00 ರಿಂದ ರಾತ್ರಿ 9.00 ಗಂಟೆಯವರೆಗೆ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಅ. 24ರಂದು 4 ಗಂಟೆಗೆ ಸರಿಯಾಗಿ “ಮಂಗಳೂರು ದಸರಾ” ಮೆರವಣಿಗೆ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ನಗರದ ರಾಜರಸ್ತೆಯಲ್ಲಿ ಸಾಗಿ ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ. ಮಂಗಳೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಬರುವ ಭಾರತೀಯ ಸನಾತನ ಧರ್ಮದ, ಇತಿಹಾಸ ಭಾವದ ನೆನಪುಗಳನ್ನು ಸ್ಮರಿಸುವ ವಿಶೇಷ ಟ್ಯಾಬ್ ಗಳು ಭಾಗವಹಿಸಲಿದ್ದು ಈ ಸುಂದರ ಮೆರವಣಿಗೆ ವಿಶೇಷ ಮೆರುಗು ನೀಡಲಿದೆ. ದಸರಾ ಸಿದ್ದತೆಗಳ ಬಗ್ಗೆ ದೇವಳದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.