• 22 ನವೆಂಬರ್ 2024

ಶ್ಲೋಕ – 11

 ಶ್ಲೋಕ – 11
Digiqole Ad

ಶ್ಲೋಕ – 11

ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ ।

ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ ॥೧೧॥

ದೇವಾನ್ ಭಾವಯತಾ ಅನೇನ ತೇ ದೇವಾಃ ಭಾವಯಂತು ವಃ ಪರಸ್ಪರಮ್ ಭಾವಯಂತಃ ಶ್ರೇಯಃ ಪರಮ್ ಅವಾಪ್ಸ್ಯಥ-ಇದರಿಂದ ದೇವತೆಗಳಿಗೆ ನೆರವಾಗಿ. ಆ ದೇವತೆಗಳು ನಿಮಗೆ ನೆರವಾಗಲಿ. ಒಬ್ಬರಿಗೊಬ್ಬರು ನೆರವಾಗುತ್ತ ಹಿರಿಯ ಹಿತವನ್ನು ಪಡೆಯಿರಿ.

ಈ ರೀತಿ ಯಜ್ಞದ ಸೃಷ್ಟಿ ಮಾಡಿದ ಚತುರ್ಮುಖ ಹೇಳಿದನಂತೆ: “ಯಜ್ಞಗಳ ಮೂಲಕ ನೀವು ದೇವತೆಗಳಿಗೆ ನೇರವಾಗಿ ಹಾಗು ಅವರು ನಿಮ್ಮ ಅಭೀಷ್ಟವನ್ನು ಪೂರೈಸಲಿ” ಎಂದು. “ಹೀಗೆ ಒಬ್ಬರಿಗೊಬ್ಬರು ನೆರವಾಗುತ್ತಾ ಹಿರಿಯ ಹಿತವನ್ನು ಪಡೆಯಿರಿ” ಎಂದನಂತೆ. ನಾವು ನಮಗೆ ಬೇಕಾದುದನ್ನು ನಾವೇ ಸೃಷ್ಟಿಸಿ ಕೊಳ್ಳುತ್ತೇವೆ ಎನ್ನುವುದು ನಮ್ಮ ಭ್ರಮೆ. ನಾವು ಬಿತ್ತಿ ಬೆಳೆಯಬೇಕು ಎಂದರೆ ಪ್ರಕೃತಿಯಲ್ಲಿ ವಾತಾವರಣ ವೈಪರಿತ್ಯ ಆಗಬಾರದು. ಇಲ್ಲದಿದ್ದರೆ ನಮಗೆ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಪ್ರತಿಯೊಂದು ಕ್ರಿಯೆಯ ಹಿಂದೆ ಅನೇಕ ದೇವತಾ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ನಮ್ಮ ಪ್ರತಿಯೊಂದು ಅಂಗಾಂಗಳಿಗೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಆ ಶಕ್ತಿ ಕೆಲಸ ಮಾಡದೆ ಇದ್ದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗೆ ನಮಗೆ ಬದುಕು ಕೊಟ್ಟು, ನೋಡುವ ಕಣ್ಣು, ಕೇಳುವ ಕಿವಿ ಕೊಟ್ಟು, ಒಳ್ಳೆಯದನ್ನು ನೋಡುವ, ಒಳ್ಳೆಯದನ್ನು ಕೇಳುವ ಬುದ್ಧಿ ಕೊಟ್ಟು, ಈ ಎಲ್ಲಾ ಕಾರ್ಯವನ್ನು ಒಂದು ದೇವತೆಗಳ ಸಮೂಹ ನಿರಂತರ ನಡೆಸುವಂತೆ ಭಗವಂತನ ವ್ಯವಸ್ಥೆ ಇದೆ. ಹೀಗಿರುವಾಗ ನಾವು ಇಂತಹ ದೇವತಾ ಶಕ್ತಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಹೀಗೆ ಒಬ್ಬರಿಗೊಬ್ಬರು ನೆರವಾದಾಗ ನಾವು ಹಿತವನ್ನು ಕಾಣಲು ಸಾಧ್ಯ.

 

ಸಾಮಾನ್ಯವಾಗಿ ಅಗ್ನಿ ಮುಖದಲ್ಲಿ ಮಾಡುವ ಪೂಜೆಯನ್ನು ಯಜ್ಞ ಎನ್ನುವುದು ವಾಡಿಕೆ. ದೇವರ ಪೂಜೆಯಲ್ಲಿ ಅಗ್ನಿ ಅತ್ಯಂತ ಮುಖ್ಯ ಪ್ರತೀಕ. ಏಕೆಂದರೆ ಅಗ್ನಿ ಅತ್ಯಂತ ಶುದ್ಧ. ಅಗ್ನಿಗೆ ಏನನ್ನು ಹಾಕಿದರೂ ಅದು ಶುದ್ಧವಾಗುತ್ತದೆ. ಅಗ್ನಿ ಭಗವಂತನ ಪ್ರತೀಕ. ಭಗವಂತನಿಗೆ ಆಕಾರವಿಲ್ಲ, ಆತ ಬೆಳಕಿನ ಪುಂಜ ಹಾಗು ಪವಿತ್ರ. ಇದೇ ಗುಣವನ್ನು ಅಗ್ನಿಯಲ್ಲಿ ನಾವು ಕಾಣಬಹುದು. ಇನ್ನು ನಾವು ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎಂದರೆ ಅದು ಅಗ್ನಿ ಮುಖೇನ ಮಾತ್ರ ಸಾಧ್ಯ. ಯಜ್ಞದಲ್ಲಿ ನಾವು ಪೂಜೆ ಮಾಡುವುದು ಬೆಂಕಿಯನ್ನಲ್ಲ, ಅಗ್ನಿ ಮುಖೇನ ಅಗ್ನಿನಾರಾಯಣನ ಪೂಜೆ-ಯಜ್ಞ. ಈ ಅರಿವಿಲ್ಲದೆ ಯಜ್ಞವನ್ನು ಮಾಡಿದರೆ ಹೊಗೆ ತಿಂದು ಸಾಯಬೇಕಾದೀತು! ನಮ್ಮ ಪೂಜೆ ಅಗ್ನಿನಾರಾಯಣನಿಂದ ಸೂರ್ಯ ನಾರಾಯಣನನ್ನು ಸೇರಿ, ಮರಳಿ ನರನಾರಾಯಣನನ್ನು ತಲುಪುತ್ತದೆ. ಇದಕ್ಕಾಗಿ ದೇವರನ್ನು ಕುರಿತು ಮಾಡುವ ಯಜ್ಞ ಯಾವಾಗಲೂ ಹಗಲು ಹೊತ್ತಿನಲ್ಲೇ ನಡೆಯುತ್ತದೆ. ಅಗ್ನಿಯ ಏಳು ಬಣ್ಣಗಳ ಮುಖೇನ ಸೂರ್ಯನ ಏಳು ಬಣ್ಣಗಳಲ್ಲಿ ವಿಲೀನವಾಗುವ ಯಜ್ಞಶಕ್ತಿ, ವಾತಾವರಣವನ್ನು ಸೇರಿ ಲೋಕಕ್ಕೆ ಮಂಗಳಮಂಗಳವನ್ನುಂಟುಮಾಡುತ್ತದೆ. ಇದನ್ನು ಇಲ್ಲಿ ಕೊಡು-ಕೊಂಡುಕೊಳ್ಳುವ ಕ್ರಿಯೆ ಎಂದಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ