• 22 ನವೆಂಬರ್ 2024

ಶ್ಲೋಕ – 16

 ಶ್ಲೋಕ – 16
Digiqole Ad

ಶ್ಲೋಕ – 16

ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ।

ಅಘಾಯುರಿಂದ್ರ ಯಾರಾಮೋ ಮೋಘಂ ಪಾರ್ಥ ಸ ಜೀವತಿ ॥೧೬॥

ಏವಂ ಪ್ರವರ್ತಿತಮ್ ಚಕ್ರಮ್ ನ ಅನುವರ್ತಯತಿ ಇಹ ಯಃ ಅಘ ಆಯಃ ಇಂದ್ರಿಯ ಆರಾಮಃ ಮೋಘಮ್ ಪಾರ್ಥ ಸಃ ಜೀವತಿ -ಹೀಗೆ ಜಗದ ಗಾಲಿಯನ್ನು ಮುಂದುವರಿಸದವನು ಪಾಪದ ಬದುಕು ಬದುಕುತ್ತ ಇಂದ್ರಿಯ ಸುಖದಲ್ಲೇ ಮೈಮರೆತವನು. ಓ ಪಾರ್ಥ, ಅಂಥವನ ಬದುಕು ವ್ಯರ್ಥ.

ಜೀವಜಾತದ ಹುಟ್ಟು ಆಹಾರದಿಂದ. ಆಹಾರವಿಲ್ಲದೆ ಬದುಕಿಲ್ಲ. ಈ ಆಹಾರ ಸಿಗುವುದು ಬೆಳೆಯಿಂದ. ಬೆಳೆಗೆ ಮೂಲ ಸೌರಶಕ್ತಿ ಮತ್ತು ಮಳೆ. ಮಳೆ ಬರುವುದು ಯಜ್ಞದಿಂದ, ನಾವು ಮಾಡುವ ಪ್ರಾಮಾಣಿಕ ಬದುಕಿನಿಂದ, ಭಗವದರ್ಪಣ ಬುದ್ಧಿಯಿಂದ. ಯಜ್ಞದ ನಿರ್ವಹಣೆ ಕರ್ಮದಿಂದ, ನಮ್ಮ ಕ್ರಿಯಾಶೀಲತೆಯಿಂದ. ಕರ್ಮ ಎಂದರೆ ಕರ್ತವ್ಯ ಕರ್ಮ, ಪ್ರಾಮಾಣಿಕ ಕ್ರಿಯೆ. ಇಂತಹ ಕರ್ಮ ನಡೆಯುವುದು ಭಗವಂತನಿಂದ. ಈ ಭಗವಂತ(ಬ್ರಹ್ಮ) ನೆಲೆಸಿರುವುದು ವೇದ(ಅಕ್ಷರ)ದಲ್ಲಿ. ವೇದ ಇರುವುದು ಜೀವ ಜಾತಗಳಲ್ಲಿ(ಮನುಷ್ಯನಲ್ಲಿ). ಆದ್ದರಿಂದ ಇದೊಂದು ಚಕ್ರ. ಮಾನವ – ಆಹಾರ – ಮಳೆ – ಯಜ್ಞ – ಭಗವಂತ – ವೇದ – ಮಾನವ. ಇಲ್ಲಿ ವೇದ ಎಂದರೆ ವೇದ ಮಂತ್ರವನ್ನು ಬಾಯಿಪಾಠ ಮಾಡುವುದಲ್ಲ. ವೈದಿಕ ವಾಙ್ಮಯದ ಎಚ್ಚರ-ಪ್ರಜ್ಞೆ. ಈ ಚಕ್ರದಲ್ಲಿ ನಾವು ನಮ್ಮ ಕರ್ಮವನ್ನು ತೊರೆಯುವಂತಿಲ್ಲ. ಕರ್ಮವನ್ನು ಸದಾ ಯಜ್ಞವಾಗಿ, ಭಗವದರ್ಪಣವಾಗಿ ಮಾಡಬೇಕು. ಭಗವಂತನ ಎಚ್ಚರ, ವೈದಿಕ ವಾಙ್ಮಯ ಪ್ರಜ್ಞೆ ಎಲ್ಲವೂ ಸಮನಾಗಿದ್ದರೆ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ ಜೀವನ. ಈ ಚಕ್ರವನ್ನು ಯಾರು ಮುಂದುವರಿಸಿಕೊಂಡು ಹೋಗುವುದಿಲ್ಲವೋ ಅವನು ವಿಶ್ವ ಚಕ್ರದ ನಡೆಯನ್ನು ಮುರಿದವನು, ಸಮಾಜದ ಸಹಜ ನಡೆಗೆ ಅಡ್ಡಗಾಲು ಹಾಕಿದವನು. ಅಂತವನು ಬರಿಯ ಇಂದ್ರಿಯ ಸುಖ ಭೋಗದಲ್ಲಿ ಮೈಮರೆತು ತನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾನೆ.

ಇಲ್ಲಿ ಹೇಳಿರುವ ಈ ವಿಶ್ವ ಚಕ್ರದ ಎಚ್ಚರ ನಮಗೆ ನಮ್ಮ ದೈನಂದಿನ ಕಾರ್ಯದಲ್ಲಿ ಇದ್ದರೆ ನಮ್ಮ ಜೀವನ ಸಾರ್ಥಕ. ನಾವು ಸದಾ ಆ ವಿಶ್ವ ಶಕ್ತಿಯ ನಡೆಯನ್ನು ಅನುಸರಿಸಿದರೆ ನಮ್ಮ ಉದ್ಧಾರ ಸದಾಸಿದ್ಧ. ಎಂದೂ ಯಾವ ವಿಚಾರವಾಗಿ ನಾವು ಭಯ ಪಡುವ ಅಗತ್ಯವಿಲ್ಲ. ನಮ್ಮ ದೈನಂದಿನ ಬದುಕನ್ನು ಒಂದು ಯಜ್ಞವಾಗಿ ಮಾಡಿಕೊಂಡು, ಭಗವಂತನ ಪ್ರಜ್ಞೆಯಲ್ಲಿ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು. ಇದು ನಿಜವಾದ ಕರ್ಮಯೋಗ. ಇದುವೇ ಮೋಕ್ಷದ ನಡೆ. ಇದು ಭಗವಂತನನ್ನು ಸೇರುವ ಮಾರ್ಗ.

ಈ ವಿಶ್ವದಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಿದೆ(Inter Dependent). ಒಂದು ಇನ್ನೊಂದರ ಸಹಾಯದಿಂದ ನಿಂತಿದೆ. ಯಾವುದೂ ಸ್ವತಂತ್ರ ಅಲ್ಲ (Inter linked not independent). ಪ್ರತಿಯೊಂದು ಪುಟ್ಟ ಕ್ರಿಯೆಯಲ್ಲಿ ಇಡೀ ವಿಶ್ವದ ಶಕ್ತಿಗಳು ಪರೋಕ್ಷವಾಗಿ ಪಾಲ್ಗೊಳ್ಳುತ್ತವೆ. ನಾವು ಉಣ್ಣುವ ಆಹಾರದ ಹಿಂದೆ ಅನೇಕ ಋಣಗಳಿವೆ. ಅದನ್ನು ನೆನಪಿಸದೇ ಇದ್ದರೆ ವಿಶ್ವ ಶಕ್ತಿಗೆ ಕೃತಘ್ನರಾದಂತೆ.

ವಿಶ್ವದ ನಡೆಯ ‘ಕರ್ಮಚಕ್ರ’; ಅದರಲ್ಲಿ ನಮ್ಮ ‘ಕರ್ತವ್ಯಕರ್ಮ’; ನಮ್ಮ ‘ಯಜ್ಞ ಯಾಗಾದಿಗಳು’ ಈ ಬಗ್ಗೆ ವಿವರವಾಗಿ ಕೃಷ್ಣ ಹೇಳಿದ. ಆದರೆ ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಅದೇನೆಂದರೆ: ಹಿಂದೆ ಕೃಷ್ಣ ಜ್ಞಾನವನ್ನು ಶ್ರೇಷ್ಠ ಎಂದು ಹೇಳಿದ್ದ, ಆದರೆ ಕರ್ಮವನ್ನು ಬಿಟ್ಟಲ್ಲ ಎಂತಲೂ ಹೇಳಿದ. ಆದರೆ ಶಾಸ್ತ್ರದಲ್ಲಿ ಜ್ಞಾನಿಗಳಿಗೆ ಕರ್ಮ ಬೇಡ ಎಂದು ಹೇಳಿದೆ. ಏನಿದರ ಅರ್ಥ? ಕೃಷ್ಣ ನಮ್ಮ ಈ ಪ್ರಶ್ನೆಯನ್ನು ಆತನೇ ಎತ್ತಿಕೊಂಡು ಮುಂದಿನ ಶ್ಲೋಕದಲ್ಲಿ ಉತ್ತರ ಕೊಡುತ್ತಾನೆ. ಒಬ್ಬ ಅಂತರಂಗದಲ್ಲಿ ಯಜ್ಞ ಮಾಡತಕ್ಕವನಿಗೆ ಕರ್ಮವಿದೆಯೋ? ಅವನು ಕರ್ಮ ಮಾಡದಿದ್ದರೆ ಲೋಪವಿದೆಯೋ? ಮನುಷ್ಯ ಕರ್ಮ ಬಂಧನವಿಲ್ಲದೆ ಇರುವ ಸ್ಥಿತಿ ಯಾವುದು? ಮೋಕ್ಷಕ್ಕೆ ಮೊದಲು ಸಂಸಾರಿಕ ಸ್ಥಿತಿಯಲ್ಲಿ ಕರ್ಮ ಮಾಡದೆ ಇರುವುದು ಸಾಧ್ಯವೋ? ಕರ್ಮವಿಲ್ಲದೆ ಸಂಪೂರ್ಣ ಅಂತರಂಗದ ಸ್ಥಿತಿಯಲ್ಲಿರುವುದು ಸಾಧ್ಯವೋ? ಇತ್ಯಾದಿ ಪ್ರಶ್ನೆಗಳಿಗೆ ಮುಂದೆ ಕೃಷ್ಣ ವಿವರಣೆ ಕೊಟ್ಟಿದ್ದಾನೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ