ಶ್ಲೋಕ – 18
ಶ್ಲೋಕ – 18
ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ ।
ಅನಾಶಿನೋSಪ್ರಮೇಯಸ್ಯ ತಸ್ಮಾದ್ ಯುಧ್ಯಸ್ವ ಭಾರತ ॥೧೮॥
ಅಂತವಂತ ಇಮೇ ದೇಹಾಃ ನಿತ್ಯಸ್ಯ ಉಕ್ತಾಃ ಶರೀರಿಣಃ ಅನಾಶಿನಃ ಅಪ್ರಮೇಯಸ್ಯ ತಸ್ಮಾತ್ ಯುಧ್ಯಸ್ವ ಭಾರತ– ಅಳಿಯದ ಜೀವಕ್ಕೆ ಅಳಿವ ಈ ದೇಹಗಳ ನಂಟು. ಏತರಿದಲೂ ಅವನಿಗೆ ಅಳಿವಿಲ್ಲ. ಅವನು ಎಲ್ಲೆಡೆ ತುಂಬಿದ ಭಗವಂತನ ಪಡಿಯಚ್ಚು. ಓ ಭಾರತ, ಆದ್ದರಿಂದ [ಅಳಿವಿರದ ಅಳವಿಗೆಟುಕದ ಭಗವಂತನ ಪೂಜೆಯೆಂದು] ಹೋರಾಡು.
ಭೌತಿಕ ಶರೀರ ಅಂತವಂತ(ನಾಶವಾಗುವಂತದ್ದು). ಕೇವಲ ಕಣ್ಣಿಗೆ ಕಾಣುವ ಸ್ಥೂಲ ಶರೀರ ಮಾತ್ರ ನಾಶವಾಗುವುದೇ ಹೊರತು ಆತ್ಮವಲ್ಲ. ಏಕೆಂದರೆ ಜೀವ ಭಗವಂತನ ಪಡಿಯಚ್ಚು. ಅದು ಸರ್ವವ್ಯಾಪಿ ಭಗವಂತನ ಪ್ರತಿಬಿಂಬ. ಆದ್ದರಿಂದ ಎಲ್ಲಾ ಕಡೆ ಇರುವ ಭಗವಂತನ ಪ್ರತಿಬಿಂಬವಾದ ಈ ಜೀವ ನಿತ್ಯ. ಇಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ: “ಸಾಮ್ರಾಟನಾಗಬೇಕು ಎನ್ನುವ ಸ್ವಾರ್ಥದಿಂದಾಗಲಿ, ದುರ್ಯೋಧನನ ಮೇಲಿನ ದ್ವೇಷದಿಂದಾಗಲಿ ಹೋರಾಡದೆ, ‘ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆ’ ಎಂಬಂತೆ ಯುದ್ಧ ಮಾಡು” ಎಂದು.
ನಾವು ನಮ್ಮ ದೈನಂದಿನ ಜೀವನದಲ್ಲಿ ಮಾಡುವ ಪ್ರತಿಯೊಂದು ಕರ್ಮ ಕೂಡಾ ಹೀಗೆ. ಅದು ಭಗವಂತನ ಅರ್ಪಣಾ ರೂಪದಲ್ಲಿರಬೇಕು. ನಮಗೆ ದೇಹ ಕೊಟ್ಟಿದ್ದು ಭಗವಂತ. ಆದ್ದರಿಂದ ಆ ದೇಹ ಹೋದಾಗ ಅಳುವ ಅಗತ್ಯವಿಲ್ಲ. ನಮ್ಮ ಪ್ರತಿಯೊಂದು ಕರ್ತವ್ಯವನ್ನು ಭಗವಂತನ ಪೂಜೆ ಎಂದು ಮಾಡಿ, ಸಾವಿಗೆ ಅಂಜದೆ ಬದುಕಿದಾಗ ಈ ಜೀವನ ಸಾರ್ಥಕ.