ಶ್ಲೋಕ – 23
ಶ್ಲೋಕ – 23
ನೈನಂ ಛಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
ನಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ॥೨೩॥
ನ ಏನಮ್ ಛಂದಂತಿ ಶಸ್ತ್ರಾಣಿ ನ ಏನಮ್ ದಹತಿ ಪಾವಕಃ ನ ಚ ಏನಮ್ ಕ್ಲೇದಯಂತಿ ಅಪಃ ನ ಶೋಷಯತಿ ಮಾರುತಃ –ಈ ಜೀವನನ್ನು (ಭಗವಂತನನ್ನು) ಆಯುಧಗಳು ತುಂಡರಿಸವು. ಇವನನ್ನು ಬೆಂಕಿ ಸುಡದು. ಇವನನ್ನು ನೀರು ನೆನೆಸದು, ಗಾಳಿ ಒಣಗಿಸದು.
ಯಾವುದೇ ಒಂದು ವಸ್ತುವನ್ನು ನಾಶಮಾಡಲು ಇರುವ ಮುಖ್ಯ ಅಸ್ತ್ರ ನಾಲ್ಕು. ಮಣ್ಣು(ಘನ ಆಯುಧ), ನೀರು, ಬೆಂಕಿ ಹಾಗು ಗಾಳಿ. ಜೀವ ಸೂಕ್ಷ್ಮರಲ್ಲಿ ಸೂಕ್ಷ್ಮ. ಶಾಸ್ತ್ರಕಾರರು ಹೇಳುವಂತೆ ಕುದುರೆಯ ಬಾಲದ ಒಂದು ಕೂದಲಿನ ತುತ್ತ ತುದಿಯನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಿದರೆ ಸಿಗುವ ಒಂದು ಭಾಗ ಎಷ್ಟು ಗಾತ್ರದ್ದೋ ಅಷ್ಟು ಗಾತ್ರದಲ್ಲಿರುತ್ತದೆ ಜೀವ. ಇಂತಹ ಜೀವವನ್ನು ಯಾವುದೇ ಆಯುಧ ತುಂಡರಿಸಲು ಸಾಧ್ಯವಿಲ್ಲ. ಬೆಂಕಿ ಜೀವನನ್ನು ಸುಡಲಾರದು. ನೀರಿನಿಂದ ಜೀವ ಒದ್ದೆಯಾಗದು. ಗಾಳಿ ಜೀವನನ್ನು ಒಣಗಿಸದು. ಸೂಕ್ಷ್ಮಾತಿ ಸೂಕ್ಷ್ಮವಾದ ಜೀವನನ್ನು ಯಾವ ಆಯುಧವೂ ನಾಶ ಮಾಡಲಾರವು.
ಇಲ್ಲಿ ನಮಗೆ ಇನ್ನೊಂದು ಪ್ರಶ್ನೆ ಮೂಡುತ್ತದೆ. “ಇಂದು ನಾಶ ಮಾಡಲು ಅಸಾಧ್ಯವಾದ ಜೀವ ಎಂದೆಂದೂ ನಾಶವಾಗದೇ ಇರುತ್ತದೆಯೇ?” ಎಂದು. ಹೌದು ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.