ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆಗೆ ಬ್ರೇಕ್; ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ
ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆಗೆ ಬ್ರೇಕ್; ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ
ಬೆಂಗಳೂರು, ಜ.1: ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಮುಖ್ಯ ಶಿಕ್ಷಕರು, ಶಿಕ್ಷಕರು ಅಥವಾ ಇತರೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮದ ಜೊತೆಗೆ ಎಫ್.ಐ.ಆರ್ ದಾಖಲಿಸುವುದು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಮಕ್ಕಳಿಂದ ಶೌಚಾಲಯ ಸ್ವಚ್ಚತೆಗೆ ಬ್ರೇಕ್ ಹಾಕಿದಂತಾಗಿದೆ.
ಇತ್ತೀಚೆಗೆ ಕೆಲ ಶಾಲೆಗಳಲ್ಲಿ ಮಕ್ಕಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಗಳು ಬೆಳಕಿಗೆ ಬಂದು ಪೋಷಕರು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶನಿವಾರ ಶಾಲಾ ಶೌಚಾಲಯ ನಿರ್ವಹಣೆಗೆ ಎಂಟು ಅಂಶಗಳ ಮತ್ತೊಂದು ಸುತ್ತೋಲೆಯನ್ನು ಇಲಾಖೆಯ ಆಯುಕ್ತರಾದ ಕಾವೇರಿ ಅವರು ಹೊರಡಿಸಿದ್ದಾರೆ.
ವಿದ್ಯಾರ್ಥಿಗಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಒಂದು ವೇಳೆ ಸ್ವಚ್ಛಗೊಳಿಸಿದ್ದು ಕಂಡು ಬಂದರೆ ಇದಕ್ಕೆ ಕಾರಣರಾದ ಮುಖ್ಯ ಶಿಕ್ಷಕರು, ಶಿಕ್ಷಕರು, ಇತರೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಹಾಗೂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗುವುದು. ಇದು ಸರ್ಕಾರಿ ಶಾಲೆಗಳು ಮಾತ್ರವಲ್ಲ, ಅನುದಾನಿತ, ಅನುದಾನ ರಹಿತ ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ.
ಶೌಚಾಲಯ ನಿರ್ವಹಣಾ ಅನುದಾನ ಈಗಾಗಲೇ ಶಾಲೆಗಳಿಗೆ ಬಿಡುಗಡೆಯಾಗಿದೆ. ಈ ಅನುದಾನವನ್ನು ಪ್ರಥಮ ಪ್ರಾಶಸ್ತ್ಯದಲ್ಲಿ ಬಳಸಿಕೊಳ್ಳಬೇಕು.
ಜೊತೆಗೆ ಶಾಲಾ ಎಸ್‌ಡಿಎಂಸಿಗಳ ಸಹಕಾರದೊಂದಿಗೆ ಸ್ಥಳೀಯವಾಗಿ ಲಭ್ಯ ಸಂಪನ್ಮೂಲಗಳೊಂದಿಗೆ ಶೌಚಾಲಯಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು.
ಎಸ್‌ಡಿಎಂಸಿಗಳು ವಿದ್ಯಾರ್ಥಿಗಳಿಗೆ ಶೌಚಾಲಯ ಸ್ವಚ್ಛಗೊಳಿಸದಂತೆ ಅರಿವು ಮೂಡಿಸಬೇಕು.
ಶಾಲಾ ಉಸ್ತುವಾರಿ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಈ ಬಗ್ಗೆ ಕಾಲ ಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು.ಭೇಟಿ ವೇಳೆ ಯಾವುದೇ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಕಂಡು ಬಂದರೆ ತಕ್ಷಣ ಡಿಡಿಪಿಐ, ಬಿಇಒಗಳ ಗಮನಕ್ಕೆ ತರಬೇಕು.
ಡಿಡಿಪಿಐ, ಬಿಇಒಗಳು ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಎಫ್‌ಐಆರ್ ದಾಖಲಿಸಬೇಕು. ತಪ್ಪಿದರೆ ನಿಮ್ಮನ್ನೇ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.