• 8 ಸೆಪ್ಟೆಂಬರ್ 2024

ಮೊದಲ ಬಾರಿಗೆ ಮಂಗಳೂರಿನಲ್ಲಿ ಪತ್ತೆ ಆಯ್ತು ಆಲಿವ್ ರಿಡ್ಲೆ ಕಡಲಾಮೆ ಮೊಟ್ಟೆಗಳು!

 ಮೊದಲ ಬಾರಿಗೆ ಮಂಗಳೂರಿನಲ್ಲಿ ಪತ್ತೆ ಆಯ್ತು ಆಲಿವ್ ರಿಡ್ಲೆ ಕಡಲಾಮೆ ಮೊಟ್ಟೆಗಳು!
Digiqole Ad

ಮೊದಲ ಬಾರಿಗೆ ಮಂಗಳೂರಿನಲ್ಲಿ ಪತ್ತೆ ಆಯ್ತು ಆಲಿವ್ ರಿಡ್ಲೆ ಕಡಲಾಮೆ ಮೊಟ್ಟೆಗಳು!

ಮಂಗಳೂರು: ಮಂಗಳೂರಿನ ಕಡಲತೀರದಲ್ಲಿ ಮೊದಲಬಾರಿಗೆ ಕಡಲತೀರಕ್ಕೆ ಬಂದು ಮೊಟ್ಟೆಗಳನ್ನಿಟ್ಟು ಹೋಗುವ ವಿಶಿಷ್ಟ ಬದುಕಿನ ಆಲಿವ್‌ ರಿಡ್ಲೆ ಕಡಲಾಮೆ ಮೊಟ್ಟೆಗಳು ಮಂಗಳೂರಿನಲ್ಲಿ ಪತ್ತೆ ಯಾಗಿವೆ.

ಸುರತ್ಕಲ್‌ ಆಸುಪಾಸಿನ ಕಡಲತೀರದ ಮೂರು ಕಡೆಗಳಲ್ಲಿ ಆಲಿವ್‌ ರಿಡ್ಲೆ ಅಮೆಗಳು ಬಂದು ಮೊಟ್ಟೆ ಇರಿಸಿ ಹೋಗಿರುವುದನ್ನು ಅರಣ್ಯ ಇಲಾಖೆ ಸಿಬಂದಿ ಪತ್ತೆ ಮಾಡಿದ್ದು, ಸಂರಕ್ಷಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಕುಂದಾಪುರದಲ್ಲಿ ಆಲಿವ್‌ ರಿಡ್ಲೆ ಆಮೆಗಳು ಬಂದು ಮೊಟ್ಟೆ ಇರಿಸಿ ಹೋಗುವುದು ದಾಖಲಾಗುತ್ತಿತ್ತು. ಮಂಗಳೂರಿನಲ್ಲಿ ಬೀಚ್‌ಗಳಲ್ಲಿ ಮಾನವ ಚಟುವಟಿಕೆ ಹೆಚ್ಚಿರುವ ಕಾರಣ ಎಲ್ಲೂ ಕಂಡುಬರುತ್ತಿರಲಿಲ್ಲ. ಹಾಗಾಗಿ ಅರಣ್ಯ ಇಲಾಖೆ ಈ ಬಾರಿ ಮುನ್ನೆಚ್ಚರಿಕೆ ವಹಿಸಿ ಕಡಲ ತೀರದಲ್ಲಿ ಮೂರು ಕಣ್ಗಾವಲು ತಂಡ ರಚಿಸಿತ್ತು. ತಂಡದವರು ರಾತ್ರಿ ಕಡಲ ತೀರದಲ್ಲಿ ಕಾವಲು ನಡೆಸುತ್ತಿದ್ದರು. ಮಾನವ ಚಟುವಟಿಕೆ ಮೇಲೆ ನಿಯಂತ್ರಣ ಇದ್ದ ಕಾರಣ ಮೂರು ಕಡೆಗಳಲ್ಲಿ ಮೊಟ್ಟೆ ಇರಿಸಿರುವುದು ಪತ್ತೆಯಾಗಿದೆ. ಅವುಗಳಲ್ಲಿ ಎರಡು ಕಡೆ ಉಬ್ಬರದಲೆಗಳು ಬಡಿಯುವ ಕಾರಣ ಅವುಗಳನ್ನು ಅಲ್ಲಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ಸುಮಾರು 40-50 ವರ್ಷಗಳ ಹಿಂದೆ ಈ ಆಮೆಗಳ ಮೊಟ್ಟೆಯನ್ನು ಕೆಲವು ಬೆಸ್ತರು ಬೇಯಿಸಿ ತಿನ್ನುವ ಪರಿಪಾಟವಿತ್ತು. ಕ್ರಮೇಣ ಜಾಗೃತಿ ಹಾಗೂ ಕಾನೂನಿನ ಭಯದಿಂದಾಗಿ ಬೆಸ್ತರ ಊಟದ ಮೆನುವಿನಿಂದ ಆಮೆಮೊಟ್ಟೆಗಳು ಹೊರಗುಳಿದವು. ಆದರೆ ನಾಯಿಗಳು ಮತ್ತು ಅಪರೂಪಕ್ಕೆ ನರಿಗಳು ಆಮೆಗಳ ಮೊಟ್ಟೆಗಳನ್ನು ಕದಿಯುತ್ತವೆ.

ಆಲೀವ್ ರಿಡ್ಲೆ ಆಮೆಗಳು ಸಾಗರಗಳ ಆರೋಗ್ಯವನ್ನು ಪ್ರತಿನಿಧಿಸುವ ಸೂಚಕ ಜೀವಿಗಳು. ಸೂಕ್ಷ್ಮಜೀವಿಗಳಾದ ಈ ಪ್ರಭೇದದ ಆಮೆಗಳು ಹೇರಳವಾಗಿವೆ ಎಂದರೆ ಅಲ್ಲಿನ ಸಮುದ್ರದ ಆರೋಗ್ಯ ಸುಸ್ಥಿರವಾಗಿದೆಯೆಂದು ಅರ್ಥ. ಜೊತೆಗೆ ಇವು ಬೆಸ್ತಸ್ನೇಹಿಗಳೂ ಆಗಿ ಆಹಾರಭದ್ರತೆ ಕಾಪಿಡುವ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತವೆ. ಬೆಸ್ತರು ಹಿಡಿಯುವ ಎಲ್ಲಾ ಜಾತಿಯ ಮೀನು ಮರಿಗಳನ್ನು ಕಬಳಿಸುವ ಜೆಲ್ಲಿ ಮೀನುಗಳನ್ನು ಭಕ್ಷಿಸುವ ಮೂಲಕ ಆಲೀವ್ ರಿಡ್ಲೆ ಆಮೆಗಳು ಬೆಸ್ತರ ನೆರವಿಗೆ ನಿಲ್ಲುತ್ತವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿಯ ಪರಿಚ್ಛೇದ 1ರಲ್ಲಿ ಆಮೆಗಳನ್ನು ಸೇರಿಸಿ ಅತಿಹೆಚ್ಚು ರಕ್ಷಣೆಯನ್ನು ನೀಡಲಾಗಿದೆ. ಆಲೀವ್ ರಿಡ್ಲೆ ಆಮೆಗಳನ್ನು ಕೊಲ್ಲುವುದು, ಅವುಗಳ ಆವಾಸಸ್ಥಾನಗಳನ್ನು ನಾಶಪಡಿಸುವುದು, ಮೊಟ್ಟೆಗಳನ್ನು ಕದಿಯುವುದು ಇತ್ಯಾದಿಗಳನ್ನು ಘನ ಅಪರಾಧಗಳು ಎಂದುಪರಿಗಣಿಸಲಾಗಿದ್ದು, ಅತಿಹೆಚ್ಚು ಶಿಕ್ಷೆಯನ್ನು ವಿಧಿಸಬಹುದಾಗಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ