ಚಂದ್ರನ ಮೇಲೆ ಕಾಲಿರಿಸಿದ ಖಾಸಗಿ ಬಾಹ್ಯಾಕಾಶ ಸಂಸ್ಥೆ
ಚಂದ್ರನ ಮೇಲೆ ಕಾಲಿರಿಸಿದ ಖಾಸಗಿ ಬಾಹ್ಯಾಕಾಶ ಸಂಸ್ಥೆ
ಮೊದಲನೇ ಬಾರಿಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಯಶಸ್ವಿಯಾಗಿ ನೌಕೆ ಇಳಿಸಿದ್ದ ಇಸ್ರೋ ಬಳಿಕ ಇದೀಗ ಅಮೆರಿಕಾದ ಖಾಸಗಿ ಸಂಸ್ಥೆಯೊಂದು ಇದೇ ರೀತಿಯ ಸಾಧನೆ ಪ್ರದರ್ಶಿಸಿದೆ. ಹೂಸ್ಟನ್ ಮೂಲದ ಇಂಟ್ಯೂಟಿವ್ ಮೆಷಿನ್ಸ್ ತನ್ನ ಒಡಿಸ್ಸಿಯಸ್ ರೋಬೋಟ್ ಅನ್ನು ನಾಸಾ ನೆರವಿನಿಂದ ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿಸಿದ್ದು, ಈ ಮೂಲಕ ಸಾಧನೆ ಪ್ರದರ್ಶಿಸಿದ ಮೊದಲ ವಾಣಿಜ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ.
ಆರಂಭದಲ್ಲಿ ನೌಕೆಯ ಇಳಿಕೆಯನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಕರು ಸ್ವಲ್ಪ ಸಮಯ ತೆಗೆದುಕೊಂಡಿದ್ದರು. ಅಂತಿಮವಾಗಿ ನೌಕೆ ಸಿಗ್ನಲ್‌ಗಳನ್ನು ಸ್ವೀಕರಿಸಿದ್ದು, ಯೋಜನೆಯ ಯಶಸ್ವಿ ಎಂದು ಘೋಷಿಸಲಾಯಿತು. ನಮ್ಮ ಉಪಕರಣಗಳು ಚಂದ್ರನ ಮೇಲ್ಮೈಯಲ್ಲಿವೆ ಮತ್ತು ನಾವು ಸಿಗ್ನಲ್‌ಗಳನ್ನು ರವಾನಿಸುತ್ತಿದ್ದೇವೆ ಎಂಬುದನ್ನು ನಾವು ನಿಸ್ಸಂದೇಹವಾಗಿ ದೃಢೀಕರಿಸಬಹುದು” ಎಂದು ವಿಮಾನ ನಿರ್ದೇಶಕ ಟಿಮ್ ಕ್ರೇನ್ ಸಂತಸದಿಂದ ಘೋಷಿಸಿದರು. ಈ ವೇಳೆ ಕಂಪೆನಿಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸುವ ಮೂಲಕ ಸಂತಸ ಅಭಿವ್ಯಕ್ತಪಡಿಸಿದರು. ಇನ್ನು ಈ ಯೋಜನೆಯ ಸಫಲತೆಯು ಕೇವಲ ವಾಣಿಜ್ಯ ಸಂಸ್ಥೆಯ ದೃಷ್ಟಿಯಲ್ಲಿ ಅಲ್ಲದೆ ಒಟ್ಟಾರೆಯಾಗಿ ಅಮೆರಿಕಾದ ಬಾಹ್ಯಾಕಾಶ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಒಡಿಸ್ಸಿಯಸ್ ರೋಬೋಟ್‌ನಲ್ಲಿ ನಾಸಾದ ಪ್ರಮುಖ ಭಾಗಗಳು ಕೂಡ ಜೋಡಣೆಯಾಗಿದೆ. ಹಾಗಾಗಿ ಈ ಮಹತ್ವದ ಮೈಲಿಗಲ್ಲಿನಲ್ಲಿ ನಾಸಾದ ಪಾತ್ರ ಕೂಡ ಇದೆ. ಈ ಹಿನ್ನೆಲೆಯಲ್ಲಿ ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಅವರು ಒಡಿಸ್ಸಿಯಸ್ ರೋಬೋಟ್ ಯಶಸ್ವಿ ಲ್ಯಾಂಡಿಂಗ್‌ಗೆ ಅಭಿನಂದನೆ ಕೂಡ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ನೆಲ್ಸನ್, ?ಅಮೆರಿಕಾ ಚಂದ್ರನತ್ತ ಮರಳಿದೆ. ಯುಎಸ್ ಚಂದ್ರನತ್ತ ಮರಳಿದೆ” ಎಂದು ಅವರು ಹೇಳಿದರು. “ಇಂದು ಮಾನವೀಯತೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಅಮೆರಿಕಾದ ವಾಣಿಜ್ಯ ಕಂಪೆಯೊಂದುಚಂದ್ರನಲ್ಲಿಗೆ ಪ್ರಯಾಣ ಪ್ರಾರಂಭಿಸಿ, ಮುನ್ನಡೆದಿದೆ. ಇಂದು ನಾಸಾದ ವಾಣಿಜ್ಯ ಪಾಲುದಾರಿಕೆಗಳ ಶಕ್ತಿ ಮತ್ತು ಭರವಸೆಯನ್ನು ತೋರಿಸುವ ದಿನವಾಗಿದೆ ಎಂದು ತಿಳಿಸಿದ್ದಾರೆ. ಈ ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಗ್ರೀನ್ ವಿಚ್ ಸಮಯ ೨೩೨೩ಕ್ಕೆ ಇಳಿದಿದ್ದು, ಇದರ ವೇಗ ಗಂಟೆಗೆ ೬೫೦೦ ಕಿಲೋಮೀಟರ್ ಗಿಂತ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಬಾಹ್ಯಾಕಾಶ ನೌಕೆಯಿಂದ ಚಿತ್ರೀಕರಣ ಮಾಡುವ ಬಾಹ್ಯ ಈಗಲ್ ಕ್ಯಾಮ್ ಕಳುಹಿಸಿದ ಚಿತ್ರಗಳನ್ನು ಶೀಘ್ರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.