ಶಬರಿಮಲೆ: ಭಾರೀ ಮಳೆ – ಅರಣ್ಯ ಮಾರ್ಗ ತಾತ್ಕಾಲಿಕ ಬಂದ್:
ಶಬರಿಮಲೆ: ಭಾರೀ ಮಳೆ – ಅರಣ್ಯ ಮಾರ್ಗ ತಾತ್ಕಾಲಿಕ ಬಂದ್:
ಶಬರಿಮಲೆ: ಫೆಂಗಲ್ ಚಂಡಮಾರುತದಿಂದಾಗಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಮಳೆಯ ಆರ್ಭಟ ಜೋರಾಗುತ್ತಿದ್ದು, ಕೇರಳದಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಶಬರಿಮಲೆ ಪರಿಸರದಲ್ಲೂ ಶನಿವಾರ ಆರಂಭವಾದ ಮಳೆ ಸುರಿಯುತ್ತಲೇ ಇದೆ. ಇದೀಗ ಶಬರಿಮಲೆಗೆ ತೆರಳುತ್ತಿರುವ ಭಕ್ತರ ಮೇಲು ಮಳೆ ಸಂಕಷ್ಟ ತಂದಿದೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಶಬರಿಮಲೆಗೆ ತೆರಳಿದ್ದ ನೂರಾರು ಯಾತ್ರಿಕರು ಭಾರೀ ಮಳೆಗೆ ಸಿಲುಕಿಕೊಂಡಿದ್ದಾರೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಅರಣ್ಯದ ದಾರಿ ಮೂಲಕ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಕರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಭೂಕುಸಿತ ಉಂಟಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ಅರಣ್ಯ ಮಾರ್ಗವನ್ನು ಮುಚ್ಚಲಾಗಿದೆ. ಅರಣ್ಯದ ದಾರಿ ಮೂಲಕ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಕರಿಗೆ ಕರಿಮಲ, ಪುಲ್ಲುಮೇಡು ದಾರಿಯಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ. ಅದೇ ರೀತಿ ಅಳುತಕ್ಕಡವುನಿಂದ ಪಂಪಾವರೆಗಿನ ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಚಾರಣ ನಿಷೇಧಿಸಲಾಗಿದೆ. ಕಾಲ್ನಡಿಗೆ ಯಾತ್ರಿಕರು ನೀಲಕ್ಕಲ್-ಪಂಪಾ ಮೂಲಕ ಶಬರಿಮಲೆಗೆ ತೆರಳುವಂತೆ ಸೂಚನೆ ನೀಡಲಾಗಿದೆ.