• 21 ನವೆಂಬರ್ 2024

ಅಪ್ಪ – ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ!

 ಅಪ್ಪ – ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ!
Digiqole Ad

father-sonನನ್ನ ಸಾಧನೆಯ ಹಾದಿಯಲ್ಲಿ ಪ್ರತಿ ಕ್ಷಣ,ಪ್ರತಿ ನಿಮಿಷ,ಪ್ರತಿ ದಿನ ನನ್ನೊಂದಿಗೆ ನಡೆಯುತ್ತಾ ,ನಡೆಸುತ್ತಾ ಇರುವ ನನ್ನ ಬದುಕು… ನನ್ನ ಪ್ರಪಂಚ ನನ್ನ ಅಪ್ಪ…ನನ್ನ ಪ್ರಕಾರ ನಾನು ನನ್ನ ಅಪ್ಪನ ಪಡಿ ಅಚ್ಚು, ನಗು ಹಾವ-ಭಾವ ಎಲ್ಲವು ಅವರ ಹಾಗೆಯೇ… ನನ್ನ ಪಾಲಿಗೆ ನನ್ನ ಅಪ್ಪ ಒಬ್ಬ ಒಳ್ಳೆಯ ಸ್ನೇಹಿತ, ಅನುಭವಿ ಸಲಹೆಗಾರ. ಒಮ್ಮೊಮ್ಮೆ ಎಳೆಯ ಮಗು, ಮತ್ತೊಮ್ಮೆ ಹುಡುಗಾಟದ ಪೋರ, ಮಗದೊಮ್ಮೆ ಉತ್ಸಾಹಿ ಯುವಕ.

ಅವರು ಕೊಟ್ಟ ಧೈರ್ಯದಿಂದಲೇ ಇಂದು ನಾನು ನಾನಗಿದ್ದೇನೆ ಅನ್ನುವುದೇ ನನ್ನ ಪಾಲಿನ ನಿತ್ಯ ಸತ್ಯ…

ಅಪ್ಪ ” ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ…… ತಾನು ಎಲ್ಲಾ ಕಡೆ ಇರೊಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವ್ರು, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾಧ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ. ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ. ಕೋಪ ಅತಿ ಎನ್ನಿಸುವ ಶಿಸ್ತು. ಅನುಮಾನ. ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪನ ಬಗ್ಗೆ ಅದೆಂಥದ್ದೋ ಅಮೂರ್ತ ಭಯ.

ಹಾಗಂತ ಆತನಲ್ಲಿ ಪ್ರೀತಿ ಇಲ್ಲ ಎಂದುಕೊಂಡರೇ ತಪ್ಪು. ಆತನಲ್ಲಿ ಅತೀವ ಒಲವಿದೆ. ಆದರೆ ತಾಯಿಯ ಹಾಗೆ ಅದನ್ನು ತೋರಗೊಡಲಾರ. ಅಪ್ಪನ ಪ್ರೀತಿ ಅರ್ಥ ಆಗೋದು ಬಹಳಾನೇ ಕಷ್ಟ. ಅಪ್ಪ ಎಂದರೆ ನಮ್ಮೆಲ್ಲಾ ಕೋರಿಕೆಗಳ ಮ್ಯಾಜಿಕ್ ಬಾಕ್ಸ್. ಸಣ್ಣ ಸ್ಲೇಟಿನಿಂದ ಹಿಡಿದು ದೊಡ್ಡ ಕಾರಿನವರೆಗೆ ನಮ್ಮೆಲ್ಲಾ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬಿದವನು. ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ…ತೋರು ಬೆರುಳು ಹಿಡಿದು ಸಂತೆಯಲ್ಲಿ ಜಗತ್ತನ್ನೇ ತೋರಿದವ…..ನಮ್ಮ ಹಿರಿಯರು ನಮ್ಮ ಬಳಿ ಹೇಳುತ್ತಿದ್ದರು… ಅಪ್ಪಾ ತುಂಬಾ ಜೋರು, ಶಿಸ್ತು ಎಂದು.. ಹೌದು !! ದಶಕಗಳ ಹಿಂದೆ ಅಪ್ಪ ಎಂದರೆ ಮಕ್ಕಳ ಮೊಗದಲ್ಲಿ ಮೂಡುತ್ತಿದ್ದ ಭಾವ ಭಯ. ಸಣ್ಣಪುಟ್ಟ ಕಾರಣಕ್ಕೂ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಭಾವಿಸಿ, ಕೂಗಾಡಿ ದನಕ್ಕೆ ಬಡಿದ ಹಾಗೆ ಬಡಿಯುತ್ತಿದ್ದ ಆತನ ಕೋಪಕ್ಕೆ ಆತನೇ ಸಾಟಿ….ಅದಕ್ಕೆ ಏನೋ ಎಲ್ಲ ಮಕ್ಕಳ ಡಿಮ್ಯಾಂಡುಗಳು ಮೊದಲು ತಾಯಿಯ ಬಳಿಯೇ. ಏನನ್ನೇ ಕೇಳಬೇಕಾದರೂ ಅದಕ್ಕೆ ಅಮ್ಮನ ಮಧ್ಯಸ್ಥಿಕೆ ಬೇಕೆ ಬೇಕು. ಅಪ್ಪನ ಮುಂದೆ ಧೈರ್ಯವಾಗಿ ಹೋಗಿ ಕೇಳುವ ಧೈರ್ಯ ಇಲ್ಲವೇ ಇಲ್ಲ. ಹಾಗಿದ್ದಾಗ ಎದುರು ನಿಂತು ಮಾತನಾಡುವ ಪ್ರಶ್ನೆ ಇಲ್ಲವೇ ಇಲ್ಲ.ಹಾಗೆಂದು ಆತ ಸರ್ವಾಧಿಕಾರಿಯಲ್ಲ. ಬದಲಿಗೆ ಸರಿ ತಪ್ಪುಗಳನ್ನು ತಿದ್ದುವ ಮಾರ್ಗದರ್ಶಕ. ಆದರೆ ಕಾಲ ಬದಲಾದಂತೆ ಅಪ್ಪನೂ ಸಹ ಬದಲಾಗುತ್ತಿದ್ದಾನೆ.

ಅಂದಿನ ಅಪ್ಪನಲ್ಲಿದ್ದ ದರ್ಪ, ಕೋಪ..ಅನುಮಾನ ಇಂದಿನ ಅಪ್ಪಂದಿರಲ್ಲಿಲ್ಲ…ಕೊಂಚ ಕೊಂಚವಾಗಿ ಕಡಿಮೆಯಾಗುತ್ತಿದೆ, ಅಪ್ಪ ಎಂದರೆ ಈಗಿನ ಮಕ್ಕಳಲ್ಲಿ ಭಯದ ಬದಲು ಮಂದಹಾಸ ಮೂಡುತ್ತದೆ. ಈಗಿನ ಅಪ್ಪ ಮಕ್ಕಳನ್ನು ಅನುಮಾನದಿಂದ ನೋಡಲ್ಲ…. ಬದಲಿಗೆ ಅಭಿಮಾನದಿಂದ ಕಾಣುತ್ತಾನೆ. ಅವರ ಬಯಕೆಗಳಿಗೆ ಸಮಸ್ಯೆಗಳಿಗೆ ಕಿವಿಯಾಗುತ್ತಾನೆ… ಅವರ ಕೋರಿಕೆಗಳ ಹಿಂದಿನ ಅವಶ್ಯಕತೆಗಳನ್ನು ಅರಿಯಲು ಮನಸ್ಸು ಮಾಡುತ್ತಿದ್ದಾನೆ… ಹಿಂದೆಲ್ಲಾ ತನ್ನ ಇಚ್ಚೆಗನುಸಾರವಾಗಿ ಮಕ್ಕಳು ಬೆಳೆಯಬೇಕು ಎಂದು ಬಯಸುತ್ತಿದ್ದ ಅಪ್ಪ…ಈಗ ಮಕ್ಕಳ ಓದಿನ, ಆಟದ, ಸ್ನೇಹಿತರ ಅಷ್ಟೆ ಏಕೆ ಸಂಗಾತಿಯ ಆಯ್ಕೆಯ ವಿಷಯದಲ್ಲೂ ಸ್ವಾತಂತ್ರ್ಯ ನೀಡಿದ್ದಾನೆ. ಮಕ್ಕಳ ಮನಸ್ಸನ್ನು ಅರಿತಿದ್ದಾನೆ.. ಅಪ್ಪ ಮಕ್ಕಳ ಅಂತರ ಕಡಿಮೆಯಾಗುತ್ತಿದೆ…

ಹಿಂದೆಲ್ಲಾ ವರ್ಷಕ್ಕೊ…ಆರು ತಿಂಗಳಿಗೋ ನಡೆಯುವ ಸಂತೆ, ಜಾತ್ರೆಗೆ ಮಕ್ಕಳನ್ನು ಕರೆದು ಕೊಂಡು ಹೋದರೆ ಎಲ್ಲಿಲ್ಲದ ಸಂತೋಷ. ವರ್ಷಕ್ಕೊಮ್ಮೆ ಬರುವ ಜಾತ್ರೆಗೆ ಹೋಗಲು ಚಾತಕ ಪಕ್ಷಿಗಳಂತೆ ಕಾಯುತ್ತಿರಬೇಕಾಗಿತ್ತು. ಆದ್ರೆ ಇಂದು ವಿಕೇಂಡ್ ಬಂತು ಅಂದರೆ ಸಾಕು ಮಾಲ್. ಸಿನಿಮಾ ಅಂತಾ ಮಕ್ಕಳು ಅಪ್ಪನ ಜೊತೆಗೆ ಹೋಗ್ತಾರೆ. ಮಕ್ಕಳ ಮನಸ್ಸಿನಲ್ಲಿ ಈಗಿನ ಅಪ್ಪ ಎವರೆಸ್ಟಿಗೂ ಎತ್ತರವಾಗಿದ್ದಾನೆ,

ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ…ಹಿತೈಷಿಯಾಗಿ ಬೆಳೆದಿದ್ದಾನೆ. ಎಷ್ಟೋ ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾನೆ. ಇಂದಿನ ಬಹುತೇಕ ಮಕ್ಕಳಿಗೆ ಅಪ್ಪನ ಕೈನ ಛಡಿಯೇಟು ತಿಂದ ಅನುಭವವಿಲ್ಲ. ಅಪ್ಪ ಒಬ್ಬ ಫ್ರೆಂಡ್. ಎಲ್ಲಾ ರೀತಿಯ ವಿಷಯಗಳನ್ನು ಷೇರ್ ಮಾಡಿಕೊಳ್ಳಬಲ್ಲ ಗೆಳೆಯ….ಮಕ್ಕಳಿಗೆ ಅಪ್ಪನ ಬಗ್ಗೆ ಭಯವಿಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅಪ್ಪ ಕೂಡ ಬದಲಾಗಿದ್ದಾನೆ….ಬದಲಾಗುತ್ತಿದ್ದಾನೆ.

ಕನ್ನಡದ ‘ ಪುಷ್ಪಕ ವಿಮಾನ’ ಸಿನಿಮಾದಲ್ಲಿನ ಒಂದು ದೃಶ್ಯದಲ್ಲಿ ರಚಿತಾ ರಾಮ್ ಅವರು ಹೇಳುವ ಸಾಲು ನೂರಕ್ಕೆ ನೂರು ಸತ್ಯ. ಅದೇನೆಂದರೆ “” ಜೀವನದಲ್ಲಿ ನಮ್ಮ ಮೊದಲನೇ ಹೀರೋ ತಂದೇನೆ ಅಲ್ವಾ, ಅಪ್ಪ ಬರ್ತಿದ್ದಾರೆ ಅಂದಾಗ ಆಗುವ ಭಯ !! ಅಪ್ಪ ಜೊತೆಗಿದ್ದಾರೆ ಅಂದಾಗ ಆಗುವ ಧೈರ್ಯ ಎಂತಾ ಪವರ್ ಇದೆ ಅಲ್ವಾ ” ಅಪ್ಪ” ಅನ್ನೋ ಒಂದು ಶಬ್ದದಲ್ಲಿ.. ಅಕಸ್ಮಾತಾಗಿ ದೇವರು ಪ್ರತ್ಯಕ್ಷ ಆಗಿ ನಿನಗೆ ಏನು ಬೇಕು ಅಂತ ಕೇಳಿದಾಗ ಅಪ್ಪನ ಆಸ್ತಿ ಬೇಕು ಅಂತ ಕೇಳಲ್ಲ!!! ‘ ಅಪ್ಪಾ’ ಅನ್ನೋ ಆಸ್ತಿ ಬೇಕು ಅಂತ ಕೇಳ್ತೇನೆ..””

ನಾನು ಮುಖಪುಟದಲ್ಲಿ ಓದಿದ ಈ ಸಾಲುಗಳು… ಯಾರು ಈ ಸಾಲುಗಳ ಸೃಷ್ಟಿಕರ್ತ ಗೊತ್ತಿಲ್ಲ!!.. ಆ ಸೃಷ್ಟಿಕರ್ತನಿಗೆ ನನ್ನ ಕೋಟಿ ನಮನಗಳು!!! ಆ ಸಾಲು ಓದಿ ಕಣ್ಣಂಚು ಒದ್ದೆಯಾಗಿದ್ದೂ ಸುಳ್ಳಲ್ಲ… ಅದೇನೆಂದರೆ
ಹೆರುವ ವರೆಗೂ ಹೊರುವ ಅಮ್ಮ ,ಹರೆಯದ ವರೆಗೂ ಹೊರುವ ಅಪ್ಪ, ಇಬ್ಬರ ಪ್ರೀತಿ ಸಮಾನಾದರೂ,ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!! ಕುಟುಂಬಕ್ಕಾಗಿ ಸಂಬಳವಿಲ್ಲದೇ ದುಡಿಯುವ ಅಮ್ಮ, ದುಡಿದ ಸಂಬಳವೆನ್ನೆಲ್ಲ ಕುಟುಂಬಕ್ಕೆ ನೀಡುವ ಅಪ್ಪ, ಇಬ್ಬರ ಶ್ರಮ ಸಮಾನಾದರೂ, ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!! ಕೇಳಿದ್ದನ್ನು ಮಾಡಿ ಉಣಿಸುವ ಅಮ್ಮ, ಕೇಳಿದ್ದನ್ನು ಇಲ್ಲ ಅನ್ನದೆ ಕೊಡಿಸುವ ಅಪ್ಪ ಇಬ್ಬರ ಪ್ರೀತಿ ಒಂದೇ ಆದರೂ,ಅಪ್ಪ ಏಕೋ ತುಂಬಾ ಹಿಂದೆಯೇ ಉಳಿದು ಬಿಟ್ಟ!!! ಎಡವಿ ಬಿದ್ದಾಗ ಬರುವ ಮಾತು ಅಮ್ಮ, ಅವಶ್ಯಕತೆ ಇದ್ದಾಗ ಮಾತ್ರ ನೆನಪಾಗುವ ಅಪ್ಪ, ಇಬ್ಬರ ಪ್ರೀತಿ ಒಂದೇ ಆದರೂ, ಮಕ್ಕಳ ಪ್ರೀತಿ ಪಡೆಯಲು ಹಿಂದಿನಿಂದಲೂ ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!! ಅಮ್ಮನ ನೋವು ಕಣ್ಣೀರಾಗಿ ಹರಿಯಿತು, ಅಪ್ಪನ ನೋವು ಮನದಲ್ಲೇ ಹುದುಗಿತು. ಅಮ್ಮನ ನೋವು ಕಂಡ ನಮಗೆ ಅಪ್ಪನ ನೋವು ಕಾಣಲೇ ಇಲ್ಲ. ಇಬ್ಬರ ನೋವು ಒಂದೇ ಆದರೂ, ಅಪ್ಪ ದುಃಖ ನುಂಗಿ ತುಂಬಾ ಹಿಂದೆಯೇ ಉಳಿದು ಬಿಟ್ಟ!!! ಮುಪ್ಪಿನಲ್ಲಿ ಮನೆ ಕೆಲಸಗಳಿಗೆ ನೆರವಾಗುವ ಅಮ್ಮ, ಮಾತುಗಳಿಗೆ ಬೆಲೆಯೇ ಇಲ್ಲದಿದ್ದರೂ ಬೆಲೆಯುಳ್ಳ ಮಾತು ಹೇಳುವ ಅಪ್ಪ, ಇಬ್ಬರೂ ಕಾಳಜಿ ಮಾಡಿದರೂ, ಪ್ರೀತಿ ಪಡೆಯುವಲ್ಲಿ ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!! ಅಪ್ಪ ಹೀಗೆ ಹಿಂದೆ ಉಳಿಯಲು ಕಾರಣ ಅವರೇ ನಮ್ಮೆಲ್ಲರ ಬೆನ್ನೆಲುಬು, ಬೆನ್ನೆಲುಬು ಹಿಂದಿರುವುದರಿಂದಲೇ ನಾವೆಲ್ಲರೂ ಬೆಟ್ಟದ ಹಾಗೆ ನಿಂತಿರುವುದು. ಅದರಿಂದಲೇ ಏನೋ ಅಪ್ಪ ಹಿಂದೆಯೇ ಉಳಿದುಬಿಟ್ಟ!!!

ಹೌದು!!! ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!
ನನ್ನ ಸ್ಫೂರ್ತಿ,ನನ್ನ ಬೆಳಕು,ನನ್ನ ಶಕ್ತಿ,ನನ್ನ ಯುಕ್ತಿ,ನನ್ನ ಬದುಕು,ನನ್ನ ಪ್ರಪಂಚ, ನನ್ನ ಅಪ್ಪ..
ಅಪ್ಪಾ !!! ಐ ಲವ್ ಯು ಅಪ್ಪಾ…!!!

– ✍ ಸಂಜನಾ ವಾಲ್ತಾಜೆ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ