• 8 ಸೆಪ್ಟೆಂಬರ್ 2024

ಯುವಜನತೆಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು

 ಯುವಜನತೆಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು
Digiqole Ad

ಯುವಜನರ ಕನಸಿನ ಭಾರತದ ನಿರ್ಮಾಣದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು.ಸ್ವಾಮಿ ವಿವೇಕಾನಂದ, ಕಿವಿಗೆ ಕೇಳಿ ಬಂದರೆ ಸಾಕು ಮನಸ್ಸಿಗೆ ಪರಮಾನಂದವನ್ನು ಉಂಟುಮಾಡುವಂತಹ ಹೆಸರು. ಏಕೆಂದರೆ ಆ ಹೆಸರಿಗಿರುವ ಶಕ್ತಿಯೇ ಅಂಥದ್ದು. ಹೆಸರು ಕೇಳಿದ ಪ್ರತಿ ಎದೆಯಲ್ಲಿಯೂ”ಯುವಶಕ್ತಿ ಜಾಗೃತವಾಗುತ್ತದೆ”ಯುವಕರ ರಕ್ತ ಪುಟಿದೇಳುತ್ತದೆ. ಹೊಸ ಹುರುಪನ್ನು ಮೂಡಿಸುತ್ತದೆ.

Vivekananda

ಕೇವಲ ಒಂದು ಹೆಸರು ಇಷ್ಟೆಲ್ಲಾ ಭಾವನೆಗಳನ್ನು ಮೂಡಿಸಿದರೆ…
ಆ ವ್ಯಕ್ತಿಯ ವ್ಯಕ್ತಿತ್ವ, ಅವರ ಚಿಂತನೆಗಳು, ಮತ್ತು ಅವರ ಜೀವನ ಸಾಧನೆ ಇನ್ನೆಷ್ಟು ಶ್ರೇಷ್ಠಮಟ್ಟದ್ದು ಇಂದು ನಾವು ಇಲ್ಲಿ ಗಮನಿಸಬೇಕಾಗುತ್ತದೆ.

ಇಡೀ ಭಾರತವನ್ನು ಕಾಲ್ನಡಿಗೆಯಲ್ಲೇ ಪರ್ಯಟನೆ ಮಾಡಿದ ನಂತರ ಕನ್ಯಾಕುಮಾರಿ ತಲುಪಿದ ಸ್ವಾಮಿವಿವೇಕಾನಂದರು ತಪಸ್ಸಿಗೆ ಕೂರುವ ಮುನ್ನ ತಾಯಿಯ ಮಂದಿರದಲ್ಲಿ ಕುಳಿತು ಕೇಳಿದ್ದಿಷ್ಟೇ… “ಹೇ ಜಗನ್ಮಾತೆ, ನನಗೆ ಸ್ವರ್ಗ ಬೇಡ, ಮುಕ್ತಿ ಬೇಡ ನನ್ನ ಭಾರತದ ಕೋಟಿ ಕೋಟಿ ದೀನ-ದಲಿತ-ದರಿದ್ರರನ್ನು ಮೇಲೆತ್ತುವ ಮಾರ್ಗತೋರು”.

ಸ್ವಾಮಿ ವಿವೇಕಾನಂದರು ಭಾರತವನ್ನು ಅದೆಷ್ಟು ಪ್ರೀತಿಸುತ್ತಿದ್ದರೆಂದರೆ… ಸೋದರಿ ನಿವೇದಿತಾ ಹೇಳುವ ಹಾಗೆ “ವಿವೇಕಾನಂದರ ಎದೆಬಡಿತದಲ್ಲಿ ಭಾರತ ಕೇಳಿಬರುತ್ತಿತ್ತು. ಅವರ ಧಮನಿ- ಧಮನಿಗಳಲ್ಲಿ ಭಾರತ ಮಿಡಿಯುತ್ತಿತ್ತು. ಅವರ ಕನಸುಗಳಲ್ಲೆಲ್ಲ ಭಾರತವೇ ತುಂಬಿತ್ತು. ಅಷ್ಟೇ ಅಲ್ಲ ಸ್ವತಃ ಅವರೇ ಭಾರತವಾಗಿಬಿಟ್ಟಿದ್ದರು. ಭಾರತಾಂಬೆಯ ಆಧ್ಯಾತ್ಮಿಕತೆ, ಪವಿತ್ರತೆ, ಜ್ಞಾನ, ಶಕ್ತಿ, ಮತ್ತು ಧ್ಯೇಯಗಳ ಶ್ರೇಷ್ಠತಮ ಲಾಂಛನವಾಗಿದ್ದರು. ಭಾರತದ ಸಾಕಾರಮೂರ್ತಿಯೇ ಅವರಾಗಿದ್ದರು. ಅವರು ಭಾರತವೇ ಆಗಿದ್ದರು” . ಹೀಗೆ ಒಬ್ಬ ಪಾಶ್ಚಾತ್ಯ ಮಹಿಳೆ ಸೋದರಿ ನಿವೇದಿತಾ ನಮ್ಮ ಸ್ವಾಮೀಜಿಯವರನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಳು ಎಂಬುದನ್ನು ಇಲ್ಲಿ ಗಮನಿಸಬೇಕು. ಹಾಗೆಯೇ ಸ್ವಾಮೀಜಿಯವರ ದೇಶಪ್ರೇಮವನ್ನು ಸಹ ಗಮನಿಸಬೇಕು. ಒಬ್ಬ ವ್ಯಕ್ತಿ ತನ್ನ ಸ್ವಂತಿಕೆಯನ್ನು ಮರೆತು ಭಾರತವಾಗಲು ಸಾಧ್ಯವೇ??? ಭಾರತದ ಬಗ್ಗೆ ಅವರಿಗಿದ್ದ ತುಡಿತವದೆಷ್ಟು ಎಂಬುದನ್ನು ನಾವು ಭಾವಿಸಿ ನೋಡಬೇಕಾಗುತ್ತದೆ.

ಭಾರತವನ್ನು ಅವನತಿಯ ದಿಕ್ಕಿನಿಂದ ವಿಕಾಸನದೆಡೆಗೆ ತರುವಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಅತ್ಯಂತ ಶ್ರೇಷ್ಠವಾದದ್ದು. ಭಾರತದ ಅವನತಿಗೆ ಕಾರಣ ಧರ್ಮವಲ್ಲ
ಬದಲಾಗಿ ಆ ಧರ್ಮ ಎಲ್ಲಿಯೂ ಅನುಷ್ಠಾನದಲ್ಲಿ ಇಲ್ಲದೆ ಇರುವುದು ಎಂಬುದನ್ನು ಮನಗಂಡರು. ಧರ್ಮ ಜನರ ದಿನನಿತ್ಯದ ಬದುಕಿನಲ್ಲಿ, ಜನರ ನಡೆ-ನುಡಿಗಳಲ್ಲಿ ಹಾಸುಹೊಕ್ಕಾಗಿರಬೇಕು. ಮತ್ತು ಧರ್ಮದ ಕಾಂತಿ ಪ್ರತಿಫಲಿಸುವಂತಾಗಬೇಕು ಎಂದು ಪಣತೊಟ್ಟರು. ಈ ಕಾರ್ಯಕ್ಕಾಗಿ ಅವರು ಆರಿಸಿಕೊಂಡಿದ್ದು ಯುವಶಕ್ತಿಯನ್ನು. ಭಾರತವನ್ನು ಮೇಲೆತ್ತಲು ಯುವಶಕ್ತಿಯಿಂದ ಮಾತ್ರ ಎಂದು ಮನಗಂಡರು. ಬಿಸಿರಕ್ತದ ತರುಣರನ್ನು ಬಡಿದೆಬ್ಬಿಸಿ ಅವರನ್ನು ಸಿಡಿಲಿನ ಕಿಡಿಗಳನ್ನಾಗಿಸಿದರು. ಯುವ ಶಕ್ತಿಗೆ ತಮ್ಮ ಶ್ರೇಷ್ಠ ಚಿಂತನೆಗಳ ಮೂಲಕ ಅನುಸರಿಸಬೇಕಾದ ದಿವ್ಯ ಮಾರ್ಗಗಳನ್ನು ತೋರಿದರು. ಭಾರತದ ಸಂಸ್ಕೃತಿಯ ಧರ್ಮಪ್ರಚಾರಕ್ಕಾಗಿ ಹಗಲಿರುಳು ಶ್ರಮಿಸಿದರು. ಸಾಮಿ ವಿವೇಕಾನಂದರೇ ಹೇಳುವ ಹಾಗೆ “ಬೆಟ್ಟ ಮಹಮದನ ಬಳಿಗೆ ಹೋಗದಿದ್ದರೆ, ಮಹಮದನೇ ಬೆಟ್ಟದ ಬಳಿಗೆ ಹೋಗಬೇಕು”. ಎಂಬಂತೆ ಇವರ ಧರ್ಮಪ್ರಚಾರವನ್ನು ಕೇಳಲು ಯಾರು ಬರದಿದ್ದರೂ ಇವರೇ ಮನೆಮನೆಗಳಿಗೆ ಹೋಗಿ ಧರ್ಮಪ್ರಚಾರ ಕಾರ್ಯವನ್ನು ಕೈಗೊಂಡರು. ಅವರ ಕನಸಿನ ಭಾರತ ನಿರ್ಮಿಸುವಲ್ಲಿ ದೀನದಲಿತರನ್ನು ಉದ್ಧರಿಸುವಲ್ಲಿ ಭಾಗಶಃ ಯಸಸ್ವಿಯಾದರು.

ಆದರೆ ಇಂದಿನ ದಿನಮಾನಗಳಲ್ಲಿ ನಮ್ಮ ಧರ್ಮ ಸಂಸ್ಕೃತಿಗಳು ಮತ್ತೆ ಅವನತಿಯ ದಾರಿ ಹಿಡಿದಿರುವುದು ಶೋಚನೀಯ ಸಂಗತಿಯೇ ಸರಿ. ಆದರೆ ಇನ್ನೂ ಕಾಲ ಮಿಂಚಿಲ್ಲ ಇಂದಿನ ಯುವ ಪೀಳಿಗೆಯೂ ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನೆಗಳನ್ನು ಅನುಸರಿಸಿದರೆ ಅವರ ಶ್ರೇಷ್ಠ ಮಾರ್ಗಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ತೋರಿಸಿಕೊಟ್ಟ ಶ್ರೇಷ್ಠ ಮಾರ್ಗದಲ್ಲಿ ನಡೆದರೆ ಅವರ ಕನಸಿನ ಭಾರತವನ್ನು ಮತ್ತೆ ಕಟ್ಟಬಹುದು. ಸ್ವಾಮೀಜಿಯವರು ನಮ್ಮಿಂದ ದೂರಾಗಿ ನೂರಾರು ವರ್ಷಗಳು ಕಳೆದಿರಬಹುದು ಆದರೆ ಅವರು ಈಗಲೂ ಎಲ್ಲಾ ಯುವಕರ ಹೃದಯದಬಡಿತದಲ್ಲಿದ್ದಾರೆ ಅವರ ನಾಡಿಮಿಡಿತಗಳಲ್ಲಿದ್ದಾರೆ. ಯುವಕರ ಬಿಸಿ ರಕ್ತದ ಕಣಕಣದಲ್ಲಿದ್ದಾರೆ. ಆದ್ದರಿಂದಲೇ ಇಂದಿಗೂ ಸಹ ಸ್ವಾಮಿ ವಿವೇಕಾನಂದರ ದಿನಾಚರಣೆಯನ್ನು
” ರಾಷ್ಟ್ರೀಯ ಯುವ ದಿನಾಚರಣೆ ” ಎಂದು ಆಚರಿಸಲಾಗುತ್ತದೆ.

ಹಾಗೆಯೇ ಇಂದಿನ ಮಕ್ಕಳ ವಿದ್ಯಾಭ್ಯಾಸದ ಪಠ್ಯಪುಸ್ತಕಗಳಲ್ಲಿ ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನೆಗಳನ್ನು ಪಠ್ಯಗಳಲ್ಲಿ ಅಳವಡಿಸಿದರೆ ಮಕ್ಕಳಿಗೆ ಭಾರತದ ಮೇಲಿನ ಪ್ರೀತಿ ಹಾಗೂ ನಮ್ಮ ಸಂಸ್ಕೃತಿಯ ಅರಿವಾಗುತ್ತದೆ. ಅವರ ಸಿಡಿಲಿನಂತಹ ವಿವೇಕವಾಣಿಗಳನ್ನು ಅರ್ಥೈಸಿಕೊಂಡರೆ ಖಂಡಿತಾ ಪ್ರತಿ ಮನೆ-ಮನೆಯಲ್ಲೂ ಒಬ್ಬ ವಿವೇಕಾನಂದ ಮತ್ತೆ ಹುಟ್ಟಿ ಬರುವುದರಲ್ಲಿ ಸಂಶಯವೇ ಇಲ್ಲ….✍️

✍️✍️Swami Vivekananda
*ಶ್ರೀಮತಿ ಶಿಲ್ಪಾಜಗದೀಶ್. ಶಿಕ್ಷಕರು.ಸಾಹಿತಿಗಳು ಮತ್ತು ಹವ್ಯಾಸಿ ಬರಹಗಾರರು ಹಿರಿಯೂರು ಚಿತ್ರದುರ್ಗ ಜಿಲ್ಲೆ .

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ