• 8 ಸೆಪ್ಟೆಂಬರ್ 2024

ಇವರು ಅವತರಿಸಿದ ದಿವಸ ಭೂಮಿಯಲ್ಲಿ ಭಯಂಕರವಾದ ಶಬ್ದಕೇಳಿ ಬಂದಿತಂತೆ!

 ಇವರು ಅವತರಿಸಿದ ದಿವಸ ಭೂಮಿಯಲ್ಲಿ ಭಯಂಕರವಾದ ಶಬ್ದಕೇಳಿ ಬಂದಿತಂತೆ!
Digiqole Ad

ಶ್ರೀರಾಘವೇಂದ್ರಸ್ವಾಮಿಗಳ ದ್ವಿತೀಯಾವತಾರ ಬಾಹ್ಲೀಕರಾಜರು,ಶ್ರೀರಾಘವೇಂದ್ರಸ್ವಾಮಿಗಳು ಎರಡನೇಯ ಅವತಾರ ಬಾಹ್ಲೀಕರಾಜರಾಗಿ ದ್ವಾಪರದಲ್ಲಿ ಅವತರಿಸಿದರು. ಇವರು ಅವತರಿಸಿದ ದಿವಸ ಭೂಮಿಯಲ್ಲಿ ಭಯಂಕರವಾದ ಶಬ್ದಕೇಳಿ ಬಂದಿತಂತೆ, ಅಂದರೆ ಭಾಗವತೋತ್ತಮನೊಬ್ಬ ಭೂಮಿಯಲ್ಲಿ ಅವತರಿಸಿರುವನಾದ್ದರಿಂದ ನಾಸ್ತಿಕರ ಎದೆಭೇಧಿಸುವ ಶಬ್ದವಾಯಿತು ಎಂದು ಮಧ್ವಾಚಾರ್ಯರು ತಾತ್ಪನಿರ್ಣಯದಲ್ಲಿ ಬರೆದಿದ್ದಾರೆ. ಕುರುವಂಶದ ಪ್ರತೀಪರಾಜ ದಂಪತಿಗಳಿಗೆ ಪ್ರಥಮ ಪುತ್ರರಾಗಿ ಹುಟ್ಟಿದ ಇವರು ಪುತ್ರಿಕಾಪುತ್ರ ಧರ್ಮದಿಂದ ಬಾಹ್ಲೀಕದೇಶದ ರಾಜನಿಗೆ ದತ್ತು ಹೋದರು. ಇವರು ದತ್ತು ಹೋಗಿದ್ದರಿಂದ ಪ್ರತೀಪರಾಜನ ಮತ್ತೊಬ್ಬ ಪುತ್ರನಾದ ಮಹಾಭಾರತದ ಮೂಲಪುರುಷನಾದ ಶಂತನುವಿನಿಂದ ಕುರುವಂಶವು ಬೆಳೆಯಿತು. ಬಾಹ್ಲಿಕನಾಗಿ ದತ್ತುಹೋಗದೆ ಇದ್ದರೆ ಕುರುಪಾಂಡವರ ಮೂಲಪುರುಷರು ಇವರೇ ಆಗಿರುತ್ತಿದ್ದರು. ಒಟ್ಟಿನಲ್ಲಿ ಭೂಭಾರ ಹರಣ ಮಾಡಲು ಅವತರಿಸಿದ್ದ ಶ್ರೀಕೃಷ್ಣನನ್ನು ಬೆಂಬಲಿಸಲು ಶ್ರೀರಾಘವೇಂದ್ರಸ್ವಾಮಿಗಳು ಬಾಹ್ಲೀಕರಾಜರಾಗಿ ಅವತರಿಸಿದರು. ಬಾಹ್ಲೀಕ ರಾಜರು ಭಾಗವತಧರ್ಮಾಚರಣೆಯಿಂದ ಆದರ್ಶಸಾಧಕರಾಗಿದ್ದರು. ಶಾಸ್ತ್ರಗಳು ಭಾಗವತಧರ್ಮಗಳನ್ನು ಹೀಗೆ ಬೋಧಿಸುತ್ತವೆ – ಶ್ರೀಹರಿಯೇ ಸರ್ವೋತ್ತಮನೆಂಬ ಬುದ್ಧಿಯಿಂದ ಲೌಕಿಕ ವಿಷಯಗಳಲ್ಲಿರತರಾಗದೆ, ಸರ್ವಪ್ರಾಣಿಗಳಲ್ಲಿ ದಯೆಯನ್ನು ತೋರುವುದು, ಸಜ್ಜನರಾದ ಶ್ರೀಹರಿಯ ಭಕ್ತರ ಸಹವಾಸ ಮಾಡುವುದು, ಸದಾ ಶಾಂತ ಚಿತ್ತರಾಗಿರುವುದು, ಎಲ್ಲವೂ ಶ್ರೀಹರಿಯ ಲೀಲೆ ಎಂಬ ಬುದ್ಧಿಯಿಂದ ಎಲ್ಲಕಡೆಯೂ ವ್ಯಾಪ್ತನಾದ ಶ್ರೀಹರಿಯನ್ನು ಧ್ಯಾನಿಸುವುದು, ಸಮಸ್ತವನ್ನು ಶ್ರೀಹರಿಯೇ ಮಾಡಿ-ಮಾಡಿಸುವನೆಂದು ಅನುಸಂಧಾನಮಾಡುತ್ತಾ ಆತನ ಪ್ರೀತಿಗಾಗಿ ಮಾಡುವ ಕರ್ಮಗಳೆಲ್ಲ ಭಾಗವತಧರ್ಮಗಳೆಂದು ಪ್ರಸಿದ್ಧವಾಗಿವೆ. ಇದನ್ನೇ ಶ್ರೀ ರಾಘವೇಂದ್ರಸ್ವಾಮಿಗಳು ಮಾಡಿತೋರಿಸಿದರು. ಹೇಗೆ ಭಕ್ತಶಿರೋಮಣಿಗಳೆಂದು ಬಾಹ್ಲೀಕರಾಜರು ಪ್ರಸಿದ್ಧರಾಗಿದ್ದರೋ ಅದೇ ರೀತಿ ಯುದ್ಧದಲ್ಲಿ ಹಿಮ್ಮೆಟ್ಟದ ಮಹಾರಥಿಗಳೆಂದು ಕೀರ್ತಿ ಗಳಿಸಿದ್ದರು. ಇದನ್ನು ತಿಳಿದಿದ್ದ ದುರ್ಯೋಧನನು ತನ್ನ ಪಕ್ಷಕ್ಕೆ ಸೇರಿಸಿಕೊಂಡರೆ ತನಗೆ ಜಯವಾಗುವುದೆಂದು ಭ್ರಮಿಸಿದನು. ಅದರಂತೆ ಅನೇಕ ತಂತ್ರಗಳಿಂದ ಅವರ ಮನ ಒಲಿಸಿಕೊಂಡದ್ದರಿಂದ ಬಾಹ್ಲೀಕರಾಜರು ಕುರುಗಳ ಪಕ್ಷದಲ್ಲಿ ಸೇರಿ ಯುದ್ಧ ಮಾಡಬೇಕಾಗಿ ಬಂತು. ಸಜ್ಜನರಾದ ಪಾಂಡವರಿಗೆ ಎದುರಾಗಿ ಯುದ್ಧ ಮಾಡುವ ಪ್ರಸಂಗ ಬಂದುದಕ್ಕೆ ಬಾಹ್ಲೀಕರಾಜರು ಬಹುವಿಚಾರಕ್ಕೆ ಒಳಗಾದರು ಮತ್ತು ಮಮ್ಮಲ ಮರುಗಿದರು. ಕೊನೆಗೆ ಭೀಮಸೇನನ ಗದೆಪೆಟ್ಟಿನಿಂದ ಅಸು ನೀಗಲು ಆಶಿಸಿದರು. ಭೀಮಸೇನನಾದರೂ ತಮಗೆ ಘಾತಮಾಡದವರನ್ನು ಹತ ಮಾಡುವವರಲ್ಲ. ಅಂತೂ ಬಾಹ್ಲೀಕರಾಜರು ಬ್ರಹ್ಮದೇವರಿಂದ ವರವಾಗಿ ಪಡೆದಿದ್ದ ಶತಗ್ನಿ ಎಂಬ ಆಯುಧವನ್ನು ಭೀಮಸೇನರ ಮೇಲೆ ಪ್ರಯೋಗಿಸಿದರು. ಬೇರೆ ಯಾರಾದರೂ ಆಗಿದ್ದರೆ ಆ ಶತಗ್ನಿಯಿಂದ ಅಸುನೀಗುತ್ತಿದ್ದರು. ಆದರೆ ಭೀಮಸೇನರಿಗೆ ಅದರಿಂದ ಯಾವ ತೊಂದರೆಯೂ ಆಗಲಿಲ್ಲ. ಅವರು ಸ್ವಲ್ಪ ಕಂಪಿಸಿದಂತೆ ನಿಂತು, ಕೊನೆಗೆ ಭೀಮಸೇನರ ಗದಾಪ್ರಹಾರದಿಂದ ಬಾಹ್ಲೀಕರಾಜರ ಅವತಾರ ಸಮಾಪ್ತಿಯಾಯಿತು.

Raghavendra

ಮುಂದುವರೆಯುವುದು..

 

ಲೇಖಕರು

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ