• 8 ಸೆಪ್ಟೆಂಬರ್ 2024

ಗುರು ರಾಯರಿದ್ದಾರೆ…..ಭಾಗ-3

 ಗುರು ರಾಯರಿದ್ದಾರೆ…..ಭಾಗ-3
Digiqole Ad

 

ಮುಂದುವರೆದ ಭಾಗ….

ದ್ವಾಪರಾಂತ್ಯದಲ್ಲಿ ಮಹಾಭಾರತ ಯುದ್ಧದಲ್ಲಿ ಭೀಮಸೇನರ ಗದಾಪ್ರಹಾರದಿಂದ ತಮ್ಮ ದೇಹವನ್ನು ಬಿಟ್ಟ ಶ್ರೀಬಾಹ್ಲೀಕರಾಜರು ಪ್ರಹ್ಲಾದ ರೂಪದಿಂದ ಹರಿವರ್ಷಖಂಡದಲ್ಲಿ ಮುಖ್ಯಪ್ರಾಣ ಹಾಗೂ ಶ್ರೀನರಸಿಂಹದೇವರ ರೂಪವನ್ನು ಧ್ಯಾನಿಸುತ್ತಾ ಭಕ್ತಿಪರವಶರಾಗಿ ಕಾಲಯಾಪನೆ ಮಾಡುತ್ತಿದ್ದಾರೆ. ಹೀಗೆ ಕಾಲಚಕ್ರ ತಿರುಗುತ್ತಿರಲು ಒಂದು ದಿನ ನಾರದರು ಹರಿವರ್ಷ ಖಂಡಕ್ಕೆ ಬಂದು ಪುನಃ ಭುವಿಯಲ್ಲಿ ಮುಖ್ಯಪ್ರಾಣರ ಮತ್ತು ಶ್ರೀಕೃಷ್ಣರ ಸೇವೆ ಮಾಡುವುದಕ್ಕೋಸ್ಕರ ಅವತರಿಸಲು ಶ್ರೀಕೃಷ್ಣನಿಂದ ಅಪ್ಪಣೆ ಬಂದುದನ್ನು ತಿಳಿಸಿದರು. ಆದರೆ ಇಲ್ಲಿ ಗುರುಗಳಾದ ನಾರದರು ಶಿಷ್ಯರಾಗಿಯೂ ಪ್ರಹ್ಲಾದನು ಗುರುವಾಗಿಯೂ ತನ್ನನ್ನು ಸೇರಿಸಬೇಕೆಂಬ ಶ್ರೀಹರಿಯ ಸಂಕಲ್ಪವನ್ನು ತಿಳಿಸಿದರು. ಹೀಗೆ ಶ್ರೀಹರಿಯ ಸಂಕಲ್ಪದಂತೆ ಪ್ರಹ್ಲಾದರಾಜರು ಮತ್ತೆ ಭೂಮಿಯಲ್ಲಿ ಅವತಾರವೆತ್ತಲು ನಿಶ್ಚಯಿಸಿದರು. ಆಗ ಹರಿಸರ್ವೋತ್ತಮ ಎಂದು ಸಾರುವ ವೈದಿಕಮತವು ‘ನಾನೇ ದೇವರು’ ಎಂದು ಸಾರುವ ಮಾಯವಾದ ಮತದಿಂದ ಮುಚ್ಚಲ್ಪಟ್ಟಿತು. ಆಗ ಪುನಃ ಭೀಮಸೇನರು ಮಾಯಾವಾದವನ್ನು ದಮನಮಾಡಲು ಶ್ರೀಹರಿಯ ಅಪ್ಪಣೆಯಂತೆ ಸ್ವರ್ಗದಿಂದ ಕೆಳಗಿಳಿದು ಭರತಭೂಮಿಯಲ್ಲಿ ಶ್ರೀಮಧ್ವಾಚಾರ್ಯರಾಗಿ ಅವತರಿಸಿದರು. ಅವರು ರಚಿಸಿದ ಬ್ರಹ್ಮಸೂತ್ರಭಾಷ್ಯದ ಮೇಲೆ ಅನೇಕ ಮಾಯಾವಾದಿಗಳು ತಮ್ಮ ಅತತ್ವಗಳಿಂದ ವಿಜೃಂಭಿಸಿದರು. ಆಗ ಶ್ರೀಮಧ್ವಾಚಾರ್ಯರ ಅವಿಚ್ಛಿನ್ನ ಪರಂಪರೆಯಲ್ಲಿ ಬಂದ ಶ್ರೀವಿದ್ಯಾದಿರಾಜತೀರ್ಥರು ಶ್ರೀರಾಜೇಂದ್ರ ತೀರ್ಥರು ಮತ್ತು ಶ್ರೀಕವೀಂದ್ರತೀರ್ಥರು ಎಂಬುದಾಗಿ ಇಬ್ಬರಿಗೆ ಸಂನ್ಯಾಸಾಶ್ರಮವನ್ನು ಕೊಟ್ಟರು. ಶ್ರೀರಾಜೇಂದ್ರ ಸಂಸ್ಥಾನವೇ ಪೂರ್ವಾದಿ ಮಠವೆಂದು ಪ್ರಖ್ಯಾತವಾಯಿತು. ಶ್ರೀಕವೀಂದ್ರತೀರ್ಥರಿಂದ ಬಂದ ಪರ೦ಪರೆಯೇ ಶ್ರೀವಿಬುಧೇಂದ್ರಮಠ – ವಿದ್ಯಾಮಠವೆಂದು ಪ್ರಖ್ಯಾತವಾಯಿತು. ಈ ಶ್ರೀರಾಜೇಂದ್ರರ ಪರಂಪರೆಯಲ್ಲಿ ಮಹಾತಪಸ್ವಿಗಳಾದ ಶ್ರೀಬ್ರಹ್ಮಣ್ಯತೀರ್ಥರು ಕಾವೇರಿ ನದಿ ತೀರದಲ್ಲಿರುವ ಬನ್ನೂರಿನಲ್ಲಿ ರಮಾಚಾರ್ಯ-ಲಕ್ಷ್ಮೀದೇವಿ ದಂಪತಿಗಳಿಗೆ ಅನುಗ್ರಹ ಮಾಡಿದರು. ಆಗ ಯತಿರಾಜನೆಂಬ ಹೆಸರಿನಿಂದ ಪ್ರಹ್ಲಾದರು ಅವರಲ್ಲಿ ಹುಟ್ಟಿದರು. ಶ್ರೀಬ್ರಹ್ಮಣ್ಯತೀರ್ಥರ ಅನುಗ್ರಹದಿಂದ ಬೆಳೆದು ಚಿಕ್ಕವಯಸ್ಸಿನಲ್ಲಿಯೇ ಅವರಿಂದ ಸನ್ಯಾಸವನ್ನು ಸ್ವೀಕರಿಸಿ ಶ್ರೀಪಾದರಾಜರಿಂದ ಸಮಸ್ತಶಾಸ್ತ್ರಗಳನ್ನೂ, ೬೪ ವಿದ್ಯೆಗಳನ್ನೂ ಸಂಪೂರ್ಣವಾಗಿ ಅಭ್ಯಾಸ ಮಾಡಿ ಶ್ರೀವ್ಯಾಸತೀರ್ಥರೆಂದು ಪ್ರಸಿದ್ಧರಾದರು. ಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವವೆಂಬ ಮೂರು ಗ್ರಂಥಗಳನ್ನು ರಚಿಸಿ ಮಾಯಾವಾದಿಗಳ ಹುಟ್ಟಡಗಿಸಿದರು. ಪ್ರತಿವಾದಿಗಳ ಸಿಂಹಸ್ವಪ್ನಗಳಾಗಿರುವ ಈ ಮೂರು ಗ್ರಂಥಗಳು ನರಸಿಂಹದೇವನ ಮೂರು ಕಣ್ಣುಗಳಿದ್ದಂತೆ ಇವೆ ಎಂದು ಶ್ರೀವಾದೀಂದ್ರತೀರ್ಥರು ವರ್ಣಿಸಿರುವುದು ನಿಜವಾಗಿದೆ. ಹೀಗೆ ಸಮಸ್ತ ಶಾಸ್ತ್ರಗಳಲ್ಲಿಯೂ ೬೪ ವಿದ್ಯೆಗಳಲ್ಲಿಯೂ ಮಹಾನ್ ಪಂಡಿತರಾದ ಶ್ರೀವ್ಯಾಸರಾಜರು ವಿಜಯನಗರ ಸಾಮ್ರಾಜ್ಯದ ಅರಸು ಶ್ರೀಕೃಷ್ಣದೇವರಾಯನ ರಾಜಗುರುಗಳಾಗಿ ಅವನಿಗೆ ಬಂದ ಅಪಮೃತ್ಯುರೂಪವಾದ ಕುಹಯೋಗವನ್ನು ಕಳೆದರು. ಈ

Raghavendra

ಶ್ರೀಕೃಷ್ಣದೇವರಾಯನ ಆಶಯದಂತೆ ಆಶಯದಂತೆ ಕರ್ನಾಟಕ ಸಿಂಹಾಸನವನ್ನು  ಪೀಠರೋಹಣೆ ಮಾಡಿದರು.ಮತ್ತು ರಾಜನಿಂದ ಅನೇಕಬಾರಿ ರತ್ನಾಭಿಷೇಕದ ಸತ್ಕಾರವನ್ನು ಹೊಂದಿದರು. ಇದೇ ಸಮಯದಲ್ಲಿ ತಿರುಮಲೆಯಲ್ಲಿ ಅರ್ಚಕಸಂತತಿಗೆ ಆಪತ್ತ ಬಂದು ಪೂಜೆಗೆ ಆತಂಕ ಬಂದಿತು. ಆಗ ವಿದ್ಯಾಗುರುಗಳಾದ ಶ್ರೀಪಾದರಾಜರ ಅಪ್ಪಣೆಯಂತೆ ತಿರುಪತಿಗೆ ಬಂದರು. ಆಗ ಆ ವೆಂಕಟಪರ್ವತವು ಸಾಲಿಗ್ರಾಮಶಿಲೆಯಂತೆ ಅವರಿಗೆ ಕಂಡಿತು. ಆದ್ದರಿಂದ ನಿತ್ಯಮೊಳಕಾಲಿನ ಮೇಲೆ ಬೆಟ್ಟವನ್ನು ಹತ್ತಿ ಶ್ರೀನಿವಾಸನನ್ನು ತಂತ್ರಸಾರೋಕ್ತ ಮಾರ್ಗದಿಂದ ಪೂಜಿಸಿದರು. ಹೀಗೆ ೧೨ (ಹನ್ನೆರಡು) ವರ್ಷ ಪೂಜಿಸಿದ ಮೇಲೆ ಅಲ್ಲಿಯ ಅರ್ಚಕರ ಸಂತತಿಯ ಒಬ್ಬನು ಪ್ರಬುದ್ಧನಾಗಲು ಅವರಿಗೆ ಶ್ರೀನಿವಾಸನ ಅರ್ಚನೆಯನ್ನು ಒಪ್ಪಿಸಿ ಪಂಪಾಕ್ಷೇತ್ರಕ್ಕೆ ವಾಪಸ್ಸಾದರು. ದೇಶದ ನಾಲ್ಕು ಮೂಲೆಗಳಲ್ಲಿ ಹತ್ತು-ಹತ್ತು ಸಾವಿರ ವಿದ್ಯಾರ್ಥಿಗಳಿರುವ ನಾಲ್ಕು ವಿದ್ಯಾಪೀಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಸಮಸಶಾಸ್ತ್ರಗಳನ್ನು ಬೋಧಿಸುವಂತೆ ಸಕಲವ್ಯವಸ್ಥೆ ಮಾಡಿದರು. ಈ ಮಧ್ಯೆ ನವಕೋಟಿನಾರಾಯಣನೆಂದು ಪ್ರಸಿದ್ಧ ವ್ಯಾಪಾರಿ ಶ್ರೀನಿವಾಸನಾಯಕನೆಂಬ ಹೆಸರಿನಿಂದ ಅವತರಿಸಿದ್ದ ನಾರದಮಹರ್ಷಿಗಳು ಶ್ರೀಹರಿಯಿಂದ ಪರೀಕ್ಷೆಗೆ ಒಳಗಾಗಿ ವೈರಾಗ್ಯದಿಂದ ಸಮಸ್ತ ಸಂಪತ್ತನ್ನು ತೊರೆದು ಶ್ರೀವ್ಯಾಸರಾಜರಲ್ಲಿ ಬಂದು ದಾಸ ದೀಕ್ಷೆಯನ್ನು ಹೊಂದಿ ಭಕ್ತಿ ಪಂಥವನ್ನು, ಸಂಗೀತ ಪ್ರಪ೦ಚವನ್ನು ಶ್ರೀಮಂತಗೊಳಿಸಿದರು. ಹಾಗೆಯೇ ಮಹಾಭಾರತದಲ್ಲಿ ಧರ್ಮರಾಜನಾಗಿದ್ದ ಯಮಧರ್ಮನು ಕೂಡ ಕನಕದಾಸರಾಗಿ ಹುಟ್ಟಿ ಇವರಿಂದ ದಾಸದೀಕ್ಷೆಯನ್ನು ಹೊಂದಿದನು. ಹೀಗೆ ಭಕ್ತಿಪಂಥವು ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು, ಶ್ರೀಪುರಂದರದಾಸರು, ಶ್ರೀಕನಕದಾಸರುಗಳಿಂದ ಕರ್ನಾಟಕದಲ್ಲಿ ಉಚ್ಚಾಯ ಸ್ಥಿತಿಯ ಮುಗಿಲು ಮುಟ್ಟಿತು. ಇದಕ್ಕೆ ಹಿನ್ನೆಲೆಯಾಗಿ ಸಂಪೂರ್ಣ ಆಧಾರಸ್ತಂಭವಾದವರು ಭಕ್ತಿಪಂಥದ ಹರಿಕಾರರಾದವರು ನಮ್ಮ ಶ್ರೀರಾಘವೇಂದ್ರಸ್ವಾಮಿಗಳವರ ಮೂರನೇಯ ಅವತಾರವಾದ ಶ್ರೀವ್ಯಾಸರಾಜರು. ಕೊನೆಗೆ ಇವರು ನವಬೃಂದಾವನ ಕ್ಷೇತ್ರದಲ್ಲಿ ಬೃಂದಾವನಸ್ಥರಾದರು.

 

 

ಮುಂದುವರೆಯುವುದು……

ಲೇಖಕರು

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ