• 8 ಸೆಪ್ಟೆಂಬರ್ 2024

ಭಾರತದ ಹೆಮ್ಮೆಯ ಕಾರ್ಗಿಲ್ ಕದನವೀರರ ಸಾಹಸಗಾಥೆಗಳು

 ಭಾರತದ ಹೆಮ್ಮೆಯ ಕಾರ್ಗಿಲ್ ಕದನವೀರರ ಸಾಹಸಗಾಥೆಗಳು
Digiqole Ad

ಭಾರತದ ಹೆಮ್ಮೆಯ ಕಾರ್ಗಿಲ್ ಕದನವೀರರ ಸಾಹಸಗಾಥೆಗಳು

ನಾಗಾಲ್ಯಾಂಡ್­ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು. ಅದರ ಕೆಳಗೆ ಒಂದು ವಾಕ್ಯ ಬರೆದಿದೆ “ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ, ನಿಮ್ಮ ನಾಳೆಗಳಿಗಾಗಿ ನಾವು ನಮ್ಮ ಈ ದಿನವನ್ನು ತ್ಯಾಗ ಮಾಡಿದ್ದೇವೆ.” ಈ ಕೆತ್ತನೆ ಈಗ ಮಳೆಗೆ ತೊಯ್ದು ಚಳಿ, ಗಾಳಿಗೆ ತುಯ್ದು ಮಸುಕಾಗಿದೆ. ಬರೆದ ಅಕ್ಷರಗಳು ಅಳಿಸಿ ಹೋದರು ಯೋಧರ ವೀರಗಾಥೆ ಇಂದಿಗೂ ಇದೇ ಮಾತನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಕಾರ್ಗಿಲ್ ಕದನಭೂಮಿಯಿಂದ ಹೆಣವಾಗಿ ಹುಟ್ಟೂರಿಗೆ ಪೆಟ್ಟಿಗೆಯಲ್ಲಿ ಬಂದ ಪ್ರತಿಯೊಬ್ಬ ಯೋಧರು ನಮ್ಮ ನಾಳೆಗಳಿಗಾಗಿ ತಮ್ಮ ಈ ದಿನವನ್ನು ಬಲಿದಾನ ಮಾಡಿರುವುದು ಮರೆಯುವಂತಿಲ್ಲ.

ನಿಜ, ಕಾರ್ಗಿಲ್ ಇಡೀಯ ಕದನದಲ್ಲಿ 400 ಕ್ಕೂ ಹೆಚ್ಚು ಯೋಧರು ಈ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿ ಕೆಲವರನ್ನಾದರೂ ನೆನಪು ಮಾಡಿಕೊಳ್ಳಬೇಕಿದೆ.

 

ಫ್ಲೈಟ್ ಲೆಫ್ಟಿನೆಂಟ್ ಮುಹಿಲನ್ ಸುಬ್ರಹ್ಮಣ್ಯಂ

ಹದಿನೆಂಟು ಸಹಸ್ರ ಅಡಿಯತ್ತರಕ್ಕೆ ತಲುಪಿ ವೈರಿ ಪಡೆಯನ್ನು ಚೆಂಡಾಡುವುದು ಅಷ್ಟು ಸುಲಭವಲ್ಲ. ಆದರೆ ಕಾರ್ಗಿಲ್ ಕದನ ಬೇರೆಲ್ಲಾ ಕದನಗಳಿಂದ ಕಠಿಣವಾದದ್ದು ಇಂತಹ ಯುದ್ಧದಲ್ಲಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ಎಲ್ಲಾ ಸೈನಿಕರ ಬಗ್ಗೆ ಬರೆದರೆ ದೊಡ್ಡ ಪುಸ್ತಕವೇ ಆಗುವುದರಲ್ಲಿ ಸಂಶಯವಿಲ್ಲ.

ನನ್ನ ಪತಿ ಮಾತೃಭೂಮಿಗಾಗಿ ಅತ್ಯಂತ ದೊಡ್ಡ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣ ನೀಡಲು ಅವರೆಂದೂ ಹಿಂಜರಿಯಲಿಲ್ಲ. ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸುವ ರಾಷ್ಟ್ರಪತಿಗಿಂತ ಅವರು ದೊಡ್ಡವರು.” ಎಂದು ಬೀನಾ ತನ್ನ ಹುತಾತ್ಮ ಪತಿಯ ಬಗ್ಗೆ ಹೇಳುವ ಸಮಯ ಮೈಯ್ಯೆಲ್ಲಾ ರೋಮಾಂಚನಗೊಳಿಸುತ್ತದೆ.

ಕಾರ್ಗಿಲ್ ನಲ್ಲಿ ಅತಿಕ್ರಮಣಕಾರರನ್ನು ಹೊಡೆದಟ್ಟುವ ಹೋರಾಟದಲ್ಲಿ ಪ್ರಾಣತೆತ್ತ ವೀರಯೋಧ ಫ್ಲೈಟ್ ಲೆಫ್ಟಿನೆಂಟ್ ಮುಹಿಲನ್ ಸುಬ್ರಹ್ಮಣ್ಯಂ ಅವರ ಪತ್ನಿ 27ರ ಹರೆಯದ ಬೀನಾ ತನ್ನ ಪತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುವಾಗ ಆಕೆಯ ಕಣ್ಣುಗಳು ಹನಿಗೂಡುತ್ತವೆ.

ಮೇ 28 ಶತ್ರುನೆಲೆಯನ್ನು ಧ್ವಂಸಗೊಳಿಸಿ ಮುಹಿಲನ್ ಸುಬ್ರಹ್ಮಣ್ಯಂ ಹಿಂದಿರುಗುತ್ತಿದ್ದರು. ಆದರೆ ಅಷ್ಟರಲ್ಲಿ ಮತ್ತೆ ಪಾಕ್ ಸೈನಿಕರ ದಾಳಿ ಮುಹಿಲನ್ ನಡೆಸುತ್ತಿದ್ದ ಯುದ್ಧವಿಮಾನ ನೆಲಕ್ಕುರುಳಿತು. ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣ ನೀಡಿದ ವೀರರ ಸಾಲಿನಲ್ಲಿ ಇವರು ಒಬ್ಬರಾದರು.” ಕಾರ್ಗಿಲ್ ಗೆ ಹೋಗುವ ಎರಡು ದಿನಗಳ ಮುಂಚೆ ಮುಹಿಲನ್ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ಗಡಿಭಾಗದಲ್ಲಿ ಉದ್ವಿಗ್ನಸ್ಥಿತಿ ಇರುವುದರಿಂದ ಅಲ್ಲಿಗೆ ತೆರಳುತ್ತಿರುವುದಾಗಿ ತಿಳಿಸಿದ್ದರು. ನಿನ್ನ ಹಾಗೂ ಮಗನ ಬಗ್ಗೆ ಕಾಳಜಿ ಇರಲಿ ಎಂದು ಹೇಳಿದ್ದರು” ಬೀನಾ ಇದನ್ನು ಈಗಲೂ ನೆನಪಿಸಿ ಕೊಳ್ಳುತ್ತಾರೆ. ಬೀನಾ ಮೂಲತಃ ಬೆಳಗಾವಿಯವರು ಅವರ ತಂದೆ ಬಿಸಿನೆಸ್ ಮ್ಯಾನ್. ಮುಹಿಲನ್ ಸುಬ್ರಹ್ಮಣ್ಯಂ ತಂದೆ ಸುಬ್ರಹ್ಮಣ್ಯಂ ತಮಿಳುನಾಡಿನ ಕೊಟ್ಟೂರಿನವರಾದರೂ ಇಂಡಾಲ್ ಕಾರ್ಖಾನೆಯಲ್ಲಿ ಉದ್ಯೋಗ ಮಾಡುತ್ತಿದ್ದುದರಿಂದ ಮುಹಿಲನ್ ಹುಟ್ಟಿದ್ದು ಬೆಳೆದಿದ್ದು ಬೆಳಗಾವಿಯಲ್ಲೇ.

 

ಬೆಳಗಾವಿಯ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಓದಿದ ಮುಹಿಲನ್ ಬಿ.ಎಸ್.ಸಿ. ಪದವಿಗಾಗಿ ಆರ್.ಎಲ್.ಎಸ್ ಕಾಲೇಜು ಸೇರಿದರು. ವಾಣಿಜ್ಯ ಪದವಿ ಪಡೆಯಲು ಬೀನಾ ಲಿಂಗರಾಜು ಕಾಲೇಜು ಸೇರಿದರು. ಬೀನಾ- ಮುಹಿಲನ್ ನಡುವೆ ಪ್ರೇಮವಾಗಿದ್ದು ಆಗಲೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮುಹಿಲನ್ 1991 ರಲ್ಲಿ ಇಂಡಿಯನ್ ಏರ್ ಫೋರ್ಸ್ ಸೇರಿ 1996 ಜೂನ್ ತಿಂಗಳಲ್ಲಿ ಇಬ್ಬರು ಬೆಳಗಾವಿಯಲ್ಲೇ ವಿವಾಹ ಮಾಡಿಕೊಂಡರು.ನಂತರ ಜೂನ್ 22 1997ರಲ್ಲಿ ಮಗನ ಜನನವಾಯಿತು ಧ್ರುವ ಎಂದು ಹೆಸರಿಡಲಾಗಿತ್ತು. ಮಗ ಹುಟ್ಟುವಾಗ ಅವರು ಅಸ್ಸಾಂನ ಮೋಹನಬಾರಿಯಲ್ಲಿ ಇದ್ದರುಅನಂತರ ಉತ್ತರಪ್ರದೇಶದ ಸಾರ್ಸ್ವಾಕ್ಕೆ ಮುಹಿಲನ್ ಸುಬ್ರಹ್ಮಣ್ಯಂ ನನ್ನು ವರ್ಗಾಯಿಸಿದರು. ಕಾರ್ಗಿಲ್ ಯುದ್ದ ಪರಿಸ್ಥಿತಿ ಉಂಟಾದಾಗ ಟ್ರೂಪ್ ಗಳನ್ನು ತಾತ್ಕಾಲಿಕವಾಗಿ ಶ್ರೀನಗರಕ್ಕೆ ಕಳಿಸುಲಾಗಿತ್ತು.ಮೇ 17 ಕ್ಕೆ ಮುಹಿಲನ್ ಶ್ರೀನಗರಕ್ಕೆ ಹೊರಟ್ಟಿದ್ದರು. ನಾನು ಅವರಿಗೆ ಇಷ್ಟವಾದ ಪದಾರ್ಥ ಮಾಡಿದ್ದೆ. ಆದರೆ ತರಾತುರಿಯಲ್ಲಿ ಆತ ರುಚಿ ನೋಡಿ ಎಂದೂ ಹಿಂದಿರುಗಿ ಬಾರದ ಸ್ಥಳಕ್ಕೆ ಹೊರಟುಹೋದ” ಎಂದು ಬೀನಾ ನೆನಪಿಸಿಕೊಳ್ಳುವಾಗ ಕಣ್ಣೀರು ಹರಿಯುತ್ತದೆ.

 

ಮೇ 27 ರಂದು ನನ್ನ ಮನಸ್ಸಿನಲ್ಲಿ ಏನೋ ತಳಮಳ ವಾಗುತ್ತಿತ್ತು. ನನ್ನ ಗಂಡನಿಗೆ ದೇವರೆಂದು ಪ್ರಾರ್ಥಿಸುತ್ತಿದ್ದೆ. ಈ ಮಧ್ಯೆ ಎಂಐ-17 ಏರ್ ಕ್ರಾಫ್ಟ್ ನ್ನು ಪಾಕಿಸ್ತಾನಿಗಳು ಹೊಡೆದುರುಳಿಸಿದ್ದಾರೆ ಎಂಬ ಸುದ್ದಿ ಕೇಳಿಬಂತು. ಆದರೆ ಮುಹಿಲನ್ ಆ ಏರ್ ಕ್ರಾಫ್ಟ್ ಕ್ಯಾಪ್ಟನ್ ಆಗಿದ್ದರು ಎಂಬ ಅರಿವು ನನಗಿರಲಿಲ್ಲ. ಕಾರ್ಗಿಲ್ ಗೆ ಹೋಗುವಾಗ ತನ್ನನ್ನು ಕ್ಯಾಪ್ಟನ್ ಮಾಡಿದ್ದಾರೆ ಎಂದು ಕೂಡಲೇ ಮುಹಿಲನ್ ಆನಂದತುಂದಿಲನಾಗಿದ್ದ. ತನ್ನ ಸ್ನೇಹಿತರಿಗೆಲ್ಲ ಪಾರ್ಟಿ ನೀಡಿದ್ದ ಆತ ಹಿಂದಿರುಗಿ ಬರದಿದ್ದರೂ ತನ್ನ ಗುರಿ ಸಾಧಿಸಿದ್ದಾನೆ. ಶತ್ರುನೆಲೆಯನ್ನು ಧ್ವಂಸಗೊಳಿಸಿದ್ದಾನೆ” ತನ್ನ ಪತಿಯ ಬಗ್ಗೆ ಬೀನಾ ಹೇಳುವ ಹೆಮ್ಮೆಯ ನುಡಿ ಕೇಳುವಾಗ ರೋಮಾಂಚನ ಆಗುತ್ತದೆ.

 

ಪತಿಯನ್ನು ಕಳೆದುಕೊಂಡ ಬೀನಾ ಕಂಗೆಟ್ಟಿಲ್ಲ. ಬದುಕಿನಲ್ಲಿ ಸಂಪೂರ್ಣ ಅಂಧಕಾರ ಕವಿದಿದೆಯೆಂದು ಆಕೆಗೆ ಅನಿಸಿಲ್ಲ. ಕತ್ತಲೆಯ ಮಧ್ಯೆಯೂ ಜ್ಯೋತಿಯೊಂದು ಕಾಣುತ್ತಿದೆ. ‘ಬ್ರೈಲ್ ಲಿಪಿ ಕಲಿತು ಅಂಧರ ಶಾಲೆಯಲ್ಲಿ ಶಿಕ್ಷಕಿಯಾಗುತ್ತೇನೆ. ಹಾಗೇ ಮಾಡಿದರೆ ಮುಹಿಲನ್ ಸಹ ಸಂತಸಗೊಳ್ಳುತ್ತಾರೆ’ ಎನ್ನುವ ವಿಶ್ವಾಸ ಆಕೆಗಿದೆ.

 

(ಈ ವಿಡಿಯೋ ಪೂರ್ತಿ ಕೇಳಿ👆)

ಕ್ಯಾಪ್ಟನ್ ವಿಕ್ರಂ ಬಾತ್ರ

ಕ್ಯಾಪ್ಟನ್ ವಿಕ್ರಂ ಬಾತ್ರ ಹೆಸರು ಕೇಳಿದಾಗಲೇ ಮೈ ರೋಮಾಂಚನವಾಗುತ್ತದೆ. ಇತಿಹಾಸದ ಪುಟಗಳಲ್ಲಿ ಅವರ ನೆನಪು ಎಂದು ಅಳಿಸಿ ಹೋಗದು.

 

ವಿಕ್ರಂ ಬಾತ್ರ ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಜನಿಸಿದರು. 13 ಜೆ & ಕೆ ರೈಫಲ್ಸ್‌ನ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರನ್ನು ಕಾರ್ಗಿಲ್ ಯುದ್ಧದ ವೀರ ಎಂದು ಕರೆಯಲಾಗುತ್ತದೆ. ಅವರು ಕಾಶ್ಮೀರದಲ್ಲಿ ಅತ್ಯಂತ ಕಠಿಣ ಯುದ್ಧ ಕಾರ್ಯಾಚರಣೆಯನ್ನು ನಡೆಸಿದರು, ಮತ್ತು ಅವರನ್ನು ಶೇರ್ ಷಾ ಎಂದೂ ಕರೆಯುತ್ತಾರೆ. (ಪಾಕಿಸ್ತಾನದ ಸೈನ್ಯದ ಪ್ರತಿಬಂಧಿತ ಸಂದೇಶಗಳಲ್ಲಿ).

17,000 ಅಡಿ ಎತ್ತರದಲ್ಲಿರುವ ಪೀಕ್ 5140 ಅನ್ನು ಪುನಃ ಪಡೆದುಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಕಾರ್ಯಾಚರಣೆಯ ಸಮಯದಲ್ಲಿ, ಬಾತ್ರಾ ಗಂಭೀರವಾಗಿ ಗಾಯಗೊಂಡರು ಆದರೆ ಇನ್ನೂ ಮೂರು ಶತ್ರು ಸೈನಿಕರನ್ನು ನಿಕಟ ಯುದ್ಧದಲ್ಲಿ ಕೊಲ್ಲುವಲ್ಲಿ ಯಶಸ್ವಿಯಾದರು. ಪೀಕ್ 5140 ಅನ್ನು ವಶಪಡಿಸಿಕೊಂಡ ನಂತರ, ಅವರು ಜುಲೈ 7, 1999 ರಂದು ಪೀಕ್ 4875 ಅನ್ನು ಮರಳಿ ಪಡೆದುಕೊಳ್ಳಲು ಮತ್ತೊಂದು ಕಷ್ಟಕರವಾದ ಕಾರ್ಯಾಚರಣೆಯನ್ನು ಕೈಗೊಂಡರು. ಅವರು ಹೊರಡುವ ಮೊದಲು ಬಾತ್ರಾ ತನ್ನ ತಂದೆಗೆ ಕರೆ ಮಾಡಿ ನಿರ್ಣಾಯಕ ಕಾರ್ಯಾಚರಣೆಯ ಬಗ್ಗೆ ತಿಳಿಸಿದ್ದರು. ಇದು ಅವರ ಕೊನೆಯ ಕರೆ ಎಂದು ಅವರಿಗೆ ತಿಳಿದಿರಲಿಲ್ಲ.

 

ಪಾಕಿಸ್ತಾನದ ಪಡೆಗಳು ಶಿಖರದ ಮೇಲೆ 16,000 ಅಡಿ ಎತ್ತರದಲ್ಲಿ ಕುಳಿತಿದ್ದರಿಂದ ಮತ್ತು ಕ್ಲೈಂಬಿಂಗ್ ಗ್ರೇಡಿಯಂಟ್ 80 ಡಿಗ್ರಿಗಳಷ್ಟು ಇದ್ದುದರಿಂದ ಇದು ಭಾರತೀಯ ಸೇನೆಯು ಪ್ರಯತ್ನಿಸಿದ ಅತ್ಯಂತ ಕಠಿಣ ಕಾರ್ಯಗಳಲ್ಲಿ ಒಂದಾಗಿದೆ. ಅವರು ಹೋಗುವಾಗ, ಬಾತ್ರಾ ಅವರ ಸಹ ಅಧಿಕಾರಿಗಳಲ್ಲಿ ಒಬ್ಬರು ತೀವ್ರವಾಗಿ ಗಾಯಗೊಂಡರು. ಬಾತ್ರಾ ಅವರನ್ನು ಉಳಿಸಲು ಹೊರಟನು. ಅಧಿಕಾರಿಯನ್ನು ಉಳಿಸಲು ಒಬ್ಬ ಸುಬೇದಾರ್ ಸಹಾಯ ಮಾಡಲು ಪ್ರಯತ್ನಿಸಿದಾಗ, ಬಾತ್ರಾ ಅವನನ್ನು ಪಕ್ಕಕ್ಕೆ ತಳ್ಳಿ, “ನಿಮಗೆ ಮಕ್ಕಳಿದ್ದಾರೆ, ಪಕ್ಕಕ್ಕೆ ಇಳಿಯಿರಿ” ಎಂದು ಹೇಳಿದರು. ಅವನು ತನ್ನ ಸಹ ಸೈನಿಕನನ್ನು ಉಳಿಸಿದನು. ಆದರೆ ಶತ್ರು ಸ್ಥಾನಗಳನ್ನು ಮೇಲೆ ಸಾಗಿ ತೆರವುಗೊಳಿಸುವಾಗ ಶತ್ರುಗಳಿಂದ ಕೊಲ್ಲಲ್ಪಟ್ಟನು. ಬಾತ್ರಾ ಅವರ ಕೊನೆಯ ಪದಗಳು “ಜೈ ಮಾತಾ ಜೀ.”

ಬಾತ್ರಾ ಅವರ ಪ್ರಸಿದ್ಧ ಉಲ್ಲೇಖ ಹೀಗಿದೆ: “ಒಂದೋ ನಾನು ತ್ರಿವರ್ಣವನ್ನು (ಭಾರತೀಯ ಧ್ವಜ) ಹಾರಿಸಿದ ನಂತರ ಹಿಂತಿರುಗುತ್ತೇನೆ, ಅಥವಾ ನಾನು ಅದನ್ನು ಸುತ್ತಿ ಹಿಂತಿರುಗುತ್ತೇನೆ, ಆದರೆ ನಾನು ಖಚಿತವಾಗಿ ಹಿಂತಿರುಗುತ್ತೇನೆ.” ಮುಂದೆ ಅವರಿಗೆ ಪರಮ ವೀರ ಚಕ್ರ ನೀಡಿ ಗೌರವಿಸಲಾಯಿತು.

ಕ್ಯಾಪ್ಟನ್ ಹನೀಫ್ ಉದ್ದೀನ್

ಕಾರ್ಗಿಲ್ ಕದನದ ಹಿಂದೆ ಅನೇಕ ರೋಚಕ ಘಟನೆಗಳಿವೆ ಸಾಹಸದ ಕಥೆಗಳಿವೆ. ಶೌರ್ಯಕ್ಕೆ ಜೀವಂತ ಉದಾಹರಣೆಗಳಿವೆ. ಪ್ರತಿಯೊಬ್ಬ ಯೋಧರ ವೀರಗಾಥೆ ಕಣ್ಣಲ್ಲಿ ನೀರ ಹನಿಗಳನ್ನು ತುಂಬುತ್ತವೆ. ಇಂತಹ ಸಾವಿರಾರು ಯೋಧರ ಬಲಿದಾನವೇ ಈ ಇಂದು ಹೆಮ್ಮ ಪಡುವ ಕಾರ್ಗಿಲ್ ವಿಜಯ ದಿನಕ್ಕೆ ಕಾರಣ ಎಂಬುದು ಮರೆಯುವಂತಿಲ್ಲ.

 

“ಏಕ್ ಪಲ್ ಮೇ ಹೈ ಸಚ್ ಸಾರೀ ಜಿಂದಗೀ ಕಾ. ಇಸ್ ಪಲ್ ಮೇ ಜೀ ಲೋ ಯಾರನ್, ಯಹಾಂ ಕಲ್ ಹೈ ಕಿಸನೇ ದೇಖಾ”

 

ಕ್ಯಾಪ್ಟನ್ ಹನೀಫ್ ಉದ್ದೀನ್ ಆಗಾಗ ಗುನುಗುನಿಸುತ್ತಿದ್ದ ಹಾಡಿದು. ಈ ಹಾಡನ್ನು ಬರೆದಿದ್ದು ಹನೀಫ್ ಸಹೋದರ ಸಮೀರ್. ಹನೀಫ್ ತನ್ನ ಸೈನಿಕ ಗೆಳೆಯರಿಗಾಗಿ ಈ ಹಾಡನ್ನು ಆಗಾಗ ರಾಗವಾಗಿ ಹೇಳುತ್ತಿದ್ದ. ‘ಹಾಡು ಹೇಳುವ ಯೋಧ’ ಎಂದೇ ಆತ ಎಲ್ಲಾರಿಗೂ ಚಿರಪರಿಚಿತ.

ಕಗ್ಗಲ್ಲಿನ ಹಿಮಬಂಡೆಗಳನ್ನು ತುಳಿಯುತ್ತ, ಬೀಸುವ ಬಿರುಗಾಳಿ ಸಹಿಸುತ್ತ ಶತ್ರುಪಾಳೆಯದತ್ತ ಮುನ್ನಡೆಯಬೇಕಾದ ಕಷ್ಟಕರ ಅಸಹನೀಯ ಕ್ಷಣಗಳಲ್ಲಿ ಆತನ ಗೆಳೆಯರಿಗೆ ಹನೀಫ್ ನ ಸುಶ್ರಾವ್ಯ ಧ್ವನಿಯಿಂದ ಹರಿದು ಬರುತ್ತಿದ್ದ ಹಾಡೇ ಪ್ರೇರಣಾಸೂತ್ರ. ಮರುಭೂಮಿಯಲ್ಲೊಂದು ಓಯಸಿಸ್ ದೊರಕಿದಂತೆ. ಮನೆಯಲ್ಲಿ ಆರಾಮವಾಗಿ ಕುಳಿತು ಟಿವಿ ನೋಡಿದಾಗ ಉಂಟಾಗುವ ಸಂತಸ ಈ ಹಾಡು ಕೇಳಿದಾಗ ಸೈನಿಕರಿಗೆ ಆಗುತ್ತಿತ್ತು. ‘ರಣರಂಗದಲ್ಲಿರಲಿ, ಮಿಲಿಟರಿ ಕ್ಯಾಂಪ್ ಗಳಲ್ಲಿರಲಿ ಹನೀಫ್ ಹಾಡುಗಳಿಗೆ ಅಡೆತಡೆಯೇ ಇರಲಿಲ್ಲ. ಹಾಸ್ಯ , ವಿನೋದ , ಹಾಡು ಹಾಗೂ ಪರಾಕ್ರಮ ಆತನ ಜೀವನದ ಅವಿಭಾಜ್ಯ ಅಂಗಗಳು ಎಂದು ಹನೀಫ್ ದೊಡ್ಡಣ್ಣ ನಫೀಸ್ ನೆನಪಿಸಿಕೊಳ್ಳುತ್ತಾರೆ.

ದೆಹಲಿಯ ಶಿವಾಜಿ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ಬಳಿಕ ಕಂಪ್ಯೂಟರ್ ತರಬೇತಿ. 1996ರಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರ್ಪಡೆಯಾಗಿ ಸೈನ್ಯಕ್ಕೆ ಸೇರಿದ್ದು 1997ರ ಜೂನ್ 7ರಂದು. ಹನೀಫ್ ಬದುಕಿನ ತಾವರೆ ಅರಳಿದ್ದು ಹೀಗೆ.

ಕಾರ್ಗಿಲ್ ನ ಕಡಿದಾದ ತುರ್ತುಕ್ ಪರ್ವತ ಪ್ರದೇಶದಲ್ಲಿ ಶತ್ರುಗಳೊಂದಿಗೆ ಹನೀಫ್ ಹಾಗೂ ಆತನ 11 ರಜಪುತಾನಾ ರೈಫಲ್ಸ್ ಪಡೆ ಕೊನೆವರೆಗೂ ಉಗ್ರ ಹೋರಾಟ ನಡೆಸಿದರು. ಇವರ ಬಳಿಯಿದ್ದುದು ಚಿಕ್ಕ ಬಂದೂಕುಗಳು. ಶತ್ರುಗಳಲ್ಲಿ ಅತ್ಯಾಧುನಿಕ ಮೆಶೀನ್ ಗನ್ , ಗ್ರೇನೇಡ್ ಗಳು ಇತ್ತು.

ಒಂದೇ ಸಮನೆ ಶತ್ರುಗಳ ಗುಂಡಿನ ಸುರಿಮಳೆ ಜೊತೆಗೆ ಸಾಯಿಸಿದಷ್ಟೂ ಮುಗಿಯದಿರುವ ಶತ್ರುಸೈನಿಕರು. ಹನೀಫ್ ಹಾಗೂ ಸಂಗಡಿಗರು ಹೆದರದೆ ಕೊನೆವರೆಗೂ ಕಾದಾಡಿದರು. ಶತ್ರುಗಳ ಮದ್ದುಗುಂಡುಗಳು ಹನೀಫ್ ಹಾಗೂ ಆತನ ಜೊತೆಯ ವೀರಸೈನಿಕರನ್ನು ಚಿಂದಿಚಿಂದಿ ಮಾಡಿದವು. ಆದರೆ ತುರ್ತಕ್ ಪರ್ವತ ಪ್ರದೇಶ ಕೊನೆಗೂ ಭಾರತದ ವಶವಾಯಿತು. ರಜಪುತಾನ ರೈಫಲ್ಸ್ ಪಡೆಯ ಸೈನಿಕರ ಬಲಿದಾನ ವ್ಯರ್ಥವಾಗಲಿಲ್ಲ. ಕ್ಯಾಪ್ಟನ್ ಹನೀಫ್ ಉದ್ದೀನ್ ದೇಹ ಪತ್ತೆಯಾಗಿದ್ದು ಮಾತ್ರ ಆತ ಗತಿಸಿ 42 ದಿನಗಳ ಬಳಿಕ..

 

ಹನೀಫ್ ಏಳು ವರ್ಷದ ಬಾಲಕನಿರುವಾಗಲೇ ಆತನ ತಂದೆ ತೀರಿಹೋದರು. ತಾಯಿ ಹೇಮಾ ಅಜೀಜ್ ಒಬ್ಬ ಶಾಸ್ತ್ರೀಯ ಸಂಗೀತಗಾರ್ತಿ. ‘ಹನೀಫ್ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ. ವೈರಿ ಪಡೆಯ ರುಂಡ ಚೆಂಡಾಡುತ್ತ ಮಡಿದನೆಂದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನಾವುದಿದ್ದೀತು?’ ಎಂದು ಹನೀಫ್ ತಾಯಿ ವೀರಮಾತೆ ಮಗನ ಸಾಹಸಕ್ಕೆ ಹೆಮ್ಮೆ ಪಡುತ್ತಾರೆ.

 

ಸೆಪ್ಟೆಂಬರ್ ತಿಂಗಳಲ್ಲಿ ಹನೀಫ್ ಹುಟ್ಟುಹಬ್ಬ ಆಗಲಾದರೂ ಆತ ಯುದ್ಧ ಮುಗಿಸಿ ‘ಏಕ್ ಪಲ್ ಮೇ ಹೈ ಸಚ್ ಸಾರೀ ಜಿಂದಗೀ…’ ಎಂಬ ತನ್ನೊಲವಿನ ಹಾಡು ಹೇಳುತ್ತ ಮನೆಯತ್ತ ಹೆಜ್ಜೆ ಹಾಕಿಯಾನೆಂದು ತಾಯಿ, ಸೋದರರು ಕಾಯುತ್ತಿದ್ದರು. ಆದರೆ ಇನ್ನೆಲ್ಲಿಯ ಹನೀಫ್ ! ಈಗ ಉಳಿದಿರುವುದು ಬರೀ ನೆನಪುಗಳು. ಹನೀಫ್ ಹೇಳುತ್ತಿದ್ದ ಹಾಡು ನಿಜವಾಗಿತ್ತು.

ಯಹಾಂ ಕಲ್ ಹೈ ಕಿಸನೇ ದೇಖಾ ?

 

ಜಸ್‌ವಿಂದರ್ ಸಿಂಗ್

 

“ನೀನೇನೂ ಹೆದರಬೇಕಾಗಿಲ್ಲ ನಾನು ಕಾಶ್ಮೀರದಲ್ಲಿ ಮೂರು ವರ್ಷಗಳ ಕಾಲ ಉಗ್ರಗಾಮಿಗಳ ವಿರುದ್ಧ ಹೋರಾಡಿರುವೆ”

 

ಸೈನಿಕ ಸಮವಸ್ತ್ರದ ತೋಳು ಮಡಚುತ್ತ ಕಂಬನಿ ತುಂಬಿದ ತನ್ನ 20 ರ ಹರೆಯದ ಪತ್ನಿ ಗುರುದಯಾಲ್ ಕೌರ್ ಗೆ ಸಿಪಾಯಿ ಜಸ್ ವಿಂದರ್ ಸಿಂಗ್ ಬೆಚ್ಚನೆಯ ಭರವಸೆಯ ಇತ್ತ ಆತ ಪಾಕ್ ಪಡೆಗಳನ್ನು ಬಲಿ ತೆಗೆದುಕೊಳ್ಳಲು ಕಾರ್ಗಿಲ್ ಯುದ್ಧ ಭೂಮಿಗೆ ಹೊರಟಿದ್ದ.

 

ಕೌರ್ ಜಸ್ ವಿಂದರ್ ಸಿಂಗ್ ವಿವಾಹವಾಗಿ ಇನ್ನೂ ನಾಲ್ಕು ತಿಂಗಳು ಕಳೆದಿತ್ತಷ್ಟೇ. ಕಂಗಳ ತುಂಬಾ ಮನದ ತುಂಬಾ ಅದೇನೇನೋ ದಾಂಪತ್ಯ ಜೀವನದ ಹೊಂಗನಸುಗಳನ್ನು ತುಂಬಿಕೊಂಡಿದ್ದಳು. ಯುದ್ಧ ಮುಗಿದು ಪತಿ ಮನೆಗೆ ಮರಳಿದರೆ ಸಾಕು ತಾನು ಕಟ್ಟಿಕೊಂಡ ಒಂದಿಷ್ಟು ಕನಸುಗಳಾದರೂ ನನಸಾಗಬಹುದೆಂದು ಎಂದು ಲೆಕ್ಕಾಚಾರ ಹಾಕಿದ್ದುಳು.

 

ಗುರುದಯಾಲ್ ಕೌರ್ ತನ್ನ ಪತಿ ಜಸ್‌ವಿಂದರ್ ಸಿಂಗ್ ನನ್ನು ಮದುವೆಯಲ್ಲಿ ನೋಡಿದ್ದೆಷ್ಟೋ ಅಷ್ಟೇ. ಅದೇ ಆಕೆಯ ದಾಂಪತ್ಯ ಬದುಕಿನ ಅಮೃತಘಳಿಗೆಗಳು. ಅನಂತರ ಆ ಅಮೃತಘಳಿಗೆಗಳು ಆಕೆಯ ಬಾಳಿನಲ್ಲಿ ಮತ್ತೆಂದೂ ಬರಲಿಲ್ಲ. ಜಸ್ ವಿಂದರ್ ಸಿಂಗ್ ಪ್ಲೈವುಡ್ ಪೆಟ್ಟಿಗೆಯೊಂದರಲ್ಲಿ ಹೆಣವಾಗಿ ಮನೆಯಂಗಳಕ್ಕೆ ಬಂದಿಳಿದಾಗ ಆಕೆ ಆ ಕ್ರೂರ ಸತ್ಯವನ್ನು ಎದುರಿಸಬೇಕಾಯಿತು.

 

ಜಸ್‌ವಿಂದರ್ ಸಿಂಗ್ ತಂದೆ ಜೋಗಿಂದರ್ ಸಿಂಗ್ ಪಂಜಾಬಿನ ಒಬ್ಬ ಅಂಧ ರೈತ. ಮೂರು ಎಕರೆ ಜಮೀನು ಹೊಂದಿರುವ ಆತನಿಗೆ ಮೂವರು ಗಂಡುಮಕ್ಕಳು. ಈ ಜಮೀನು ಮೂವರು ಮಕ್ಕಳ ಬದುಕಿಗೆ ಏನೇನೂ ಸಾಲದೆಂದು ನಿರ್ಧರಿಸಿದ ಕಿರಿಯ ಜಸ್‌ವಿಂದರ್ ಸಿಂಗ್ 17ನೇ ವಯಸ್ಸಿನಲ್ಲೇ ಮನೆಬಿಟ್ಟು ಹೊರಟ. ಅವನನ್ನು ಬರಸೆಳೆದು ಅಪ್ಪಿಕೊಂಡಿದ್ದು ಭಾರತೀಯ ಸೇನೆ. ಆತನ ಸಾಹಸ ಬದುಕಿದ ಆಸರೆ ನೀಡಿತು.

ಮೇ 21ರಂದು ಜಸ್‌ವಿಂದರ್ ಸಿಂಗ್ ಸಾಹಸದ ಬದುಕಿನ ಕೊನೆಯ ಅಧ್ಯಾಯ. ಆಯಕಟ್ಟಿನ ಟೈಗರ್ ಹಿಲ್ಸ್ ಶತ್ರುಗಳ ವಶದಲ್ಲಿತ್ತು. ಅದನ್ನು ಹೇಗಾದರೂ ವೈರಿಗಳಿಂದ ಬಿಡಿಸಿಕೊಳ್ಳಬೇಕಾಗಿತ್ತು. ಆದರೆ ಅದೇನು ಅಷ್ಟು ಸುಲಭವೇ? ದುರ್ಗಮ ಶಿಖರ. ಕಡಿದಾದ ಹಾದಿ ಶಿಖರದೆತ್ತರದಲ್ಲಿ ಬಂಕರ್ ಗಳಲ್ಲಿ ಮದ್ದುಗುಂಡು ತುಂಬಿಕೊಂಡು ಕಾದಿರುವ ವೈರಿಪಡೆ.

 

ವೈರಿ ಪಡೆಯ ಈ ದುರ್ಗಮ ಅಡಗುದಾಣ ಅರಸಿ ಹೊರಟ ಸಿಪಾಯಿ ಜಸ್‌ವಿಂದರ್ ಸಿಂಗ್ ಕೊನೆಗೂ ಮೇಲಕ್ಕೆ ತಲುಪಿದ ಟೈಗರ್ ಶಿಖರವೇರಿದ. ಅಷ್ಟರಲ್ಲಿ ಆತನ ಎರಡು ತೊಡೆಗಳಿಗೆ ಎಲ್ಲಿಂದಲೂ ಗುಂಡುಗಳು ಬಂದು ಬಡಿದವು. ತೊಡೆಗಳು ಛಿದ್ರಛಿದ್ರ ಆದರೆ ಮನಸ್ಸು ಮಾತ್ರ ಇನ್ನೂ ಭದ್ರ. ಕೊನೆಯುಸಿರಿನವರೆಗೂ ಕೈಯಲ್ಲಿದ್ದ ಬಂದೂಕು ವೈರಿಪಡೆಯ ಮೇಲೆ ಬೆಂಕಿ ಕಾರುತ್ತಲೇ ಇತ್ತು.

 

ಗುರುದಯಾಲ್ ಕೌರ್ ಮನೆಯಲ್ಲಿ ಟಿವಿ ಮುಂದೆ ಕುಳಿತಿದ್ದಳು. ಕಾರ್ಗಿಲ್ ಕದನದ ಸುದ್ದಿಗಳನ್ನು ಕಾತರದಿಂದ ಆಲಿಸುತ್ತಿದ್ದಳು. ತನ್ನ ಪತಿ ಸಿಪಾಯಿ ಜಸ್ ವಿಂದರ್ ಸಿಂಗ್ ಬಗ್ಗೆ ಏನಾದರೂ ಸುದ್ದಿ ಅಥವಾ ಚಿತ್ರ ಮೂಡ ಬರುವುದೇ ಎಂದು ಕಾಯುತ್ತಿದ್ದಳು. ಅವಳ ನಿರೀಕ್ಷೆ ಸುಳ್ಳಾಗಲಿಲ್ಲ ಒಂದೆರೆಡು ದಿನಗಳಲ್ಲೇ ಜಸ್ ವಿಂದರ್ ಸಿಂಗ್ ಮನೆಯಂಗಳಕ್ಕೆ ಬಂದಿಳಿದ. ಆದರೆ ಶವವಾಗಿ ಪೆಟ್ಟಿಗೆಯೊಂದರಲ್ಲಿ ಮಲಗಿ. ಪಂಜಾಬಿನ ಧೂಳು ತುಂಬಿದ ಹಳ್ಳಿ ಮುನ್ನೆಯ ಆ ಸಣ್ಣ ಮನೆಯಂಗಳದಲ್ಲಿ ಕುಳಿತು ಆಗಸದತ್ತ ದೃಷ್ಟಿ ನೆಟ್ಟಿರುವ ಕೌರ್ ಈಗ ಮಾನ್ಲವದನೆ.

 

ಜಸ್‌ವಿಂದರ್ ಸಿಂಗ್ ವೀರಮರಣ ಅಪ್ಪಿದಕ್ಕೆ ತಂದೆ ಜೋಗಿಂದರ್ ಗೆ ದು:ಖವಿಲ್ಲ “ಶತ್ರುಪಡೆಯನ್ನು ಹಿಮ್ಮೆಟ್ಟಿಸಲು ಯಾರಾದರೂ ಹೋರಾಡುತ್ತಾ ಸಾಯಲೇಬೇಕು” ಎಂದು ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಾರೆ.

 

ನಮ್ಮ ಬದುಕಿಗೆ ಇದೊಂದು ಬರಸಿಡಿಲಿನಂತೆ ಬಂದ ಬಳಿಸಿದ ದುರಂತ. ಆದರಿದು ದೇಶಕ್ಕೆ ಉತ್ತಮ ಭವಿಷ್ಯ ತಂದುಕೊಡಬಹುದೇನೋ. ಅದೇ ನಮಗೆ ಈಗ ಉಳಿದಿರುವ ಸಮಾಧಾನ.” ದಾಂಪತ್ಯದಲ್ಲಿ ಸವಿಯನ್ನೇ ಉಣ್ಣದ ಕೌರ್ ಉಮ್ಮಳಿಸಿ ಬರುವ ದು:ಖವನ್ನು ತಡೆದೊತ್ತಿ ಹೇಳುತ್ತಾಳೆ.

 

ಹೌದು ಜಸ್‌ವಿಂದರ್ ಸಿಂಗ್ ಬಲಿದಾನ ಕೊನೆಗೂ ವ್ಯರ್ಥವಾಗಲಿಲ್ಲ. ಆದರೆ ಇಂತಹ ನೂರಾರು ಸೈನಿಕರ ಬಲಿದಾನವೇ ಕಾರ್ಗಿಲ್ ವಿಜಯದ ಹಿಂದಿರುವ ಶಕ್ತಿ ಹಾಗೂ ಕಾರಣ.

 

 

ಲೆಫ್ಟಿನೆಂಟ್ ಕರ್ನಲ್ ಆರ್. ವಿಶ್ವನಾಥನ್

 

“ನಾನು ಗುರುತು ಪರಿಚಯವಿರದ, ಇದುವರೆಗೆ ಕಂಡು ಕೇಳರಿಯದ ದೂರದ ಪ್ರದೇಶಕ್ಕೆ ಹೋಗುತ್ತಿರುವೆ. ಇದೊಂದು ಅಪಾಯಕಾರಿ ಸಾಹಸವೇ ಆಗಬಹುದು”

ಲೆಫ್ಟಿನೆಂಟ್ ಕರ್ನಲ್ ಆರ್. ವಿಶ್ವನಾಥನ್ ಪತ್ನಿ ಜಲಜಾಳಿಗೆ ಜೂನ್ 2ರಂದು ಒಂದು ಪತ್ರ ಬರೆದರು. ಆ ಪತ್ರವೇನೋ ಪತ್ನಿಗೆ ತಲುಪಿತು. ಆದರೆ ಪತ್ರ ತಲುಪಿದ ದಿನವೇ ಪತಿಯ ಪಾರ್ಥಿವ ಶರೀರವೂ ಮನೆಗೆ ಬಂದಿಳಿಯಿತು.

ವಿಶ್ವನಾಥನ್ ಅವರ ಮೂವರು ಸಂಗಡಿಗರು ತೊಲೊಲಿಂಗ್ ನ ಹಿಮಾಚ್ಛಾದಿತ ಪರ್ವತಪ್ರದೇಶದಲ್ಲಿ

ಹೋರಾಡುತ್ತಾ ಮಡಿದಿದ್ದರು. ಅವರ ದೇಹಗಳನ್ನು ಅಲ್ಲಿಂದ ಕೆಳಕ್ಕೆ ಹೇಗಾದರೂ ಒಯ್ಯಬೇಕೆಂದು ವಿಶ್ವನಾಥನ್ ಹೊರಟಿದ್ದರು. ಒಬ್ಬ ಸೈನ್ಯಾಧಿಕಾರಿಯಾಗಿ ಇಷ್ಟನ್ನಾದರೂ ಮಾಡದಿದ್ದರೆ ಹೇಗೆ ?

 

ಜೂನ್ 2ರಂದು ಕಾರಿರುಳ ರಾತ್ರಿ ವಿಶ್ವನಾಥ ತನ್ನ ಪಡೆಯೊಂದಿಗೆ ಹೊರಟರು. 18 ಗ್ರೆನೆಡಿಯರ್ಸ್ ಪಡೆ ವಿಶ್ವನಾಥನ್ ಜೊತೆ ಹೊರಟಿತು. ಮತ್ತೆ ಅದೇ ಕಥೆ ಪರ್ವತದೆತ್ತರದಲ್ಲಿ ಬಂಕರ್ ಗಳಲ್ಲಿ ಅಡಗಿಕೊಂಡ ಶತ್ರು ಪಡೆ ಕೆಳಗೆ ಕಣಿವೆಯಲ್ಲಿ ಮೇಲೇರುತ್ತಿರುವ ಭಾರತೀಯ ಸೇನೆ. ಏನಾಗಿರಬಹುದೆಂದು ಹೇಳುವ ಅಗತ್ಯವೇ ಇಲ್ಲ. ಶತ್ರು ಪಡೆಯು ಎಲ್ ಎಂಜಿ ಮೇಶಿನ್ ಗನ್ ಮೂಲಕ ಒಂದೇ ಸಮನೆ ಗುಂಡಿನ ಮೊರೆತ. ಆದರೆ ಇದನ್ನೆಲ್ಲ ವಿಶ್ವನಾಥನ್ ಲೆಕ್ಕಿಸಲಿಲ್ಲ. ಶತ್ರುಪಡೆಯ ಗುಂಡುಗಳು ಅವರ ತೊಡೆ, ತೊಡೆಸಂದಿಗಳನ್ನು ಸೀಳಿದವು. ತೀವ್ರ ವೇದನೆಯಿಂದ ಚಡಪಡಿಸುತ್ತಿದ್ದ ವಿಶ್ವನಾಥನ್ ಅವರನ್ನು ಸಂಗಡಿಗ ಸೈನಿಕರು ದ್ರಾಸ್ ಪ್ರದೇಶದ ಮಿಲಿಟರಿ ಆಸ್ಪತ್ರೆಗೆ ಸಾಗಿಸುವಷ್ಟಲ್ಲಿ ದಾರಿಯಲ್ಲೇ ಆ ವೀರಯೋಧನ ಪ್ರಾಣಪಕ್ಷಿ ಹೊರಟುಹೋಯಿತು.

 

ಜೂನ್ 3ರಂದು ಕೊಚ್ಚಿಯಲ್ಲಿ ವಿಶ್ವನಾಥನ್ ಅವರ ತಂದೆ ವಿ.ರಾಮಕೃಷ್ಣನ್ ಮನೆಯ ಫೋನ್ ಗುಣುಗುಣಿಸಿತು. ಫೋನ್ ಎತ್ತಿದರೆ ‘ನಿಮ್ಮ ಮಗ ಇನ್ನಿಲ್ಲ’ ಎಂಬ ಸಂದೇಶ ತೇಲಿ ಬಂತು.

 

“ವಿಶ್ವನಾಥನ್ ಮೆಚ್ಚಬಹುದಾದ ಒಂದು ಗುಣವೆಂದರೆ ಆತನಿಗೆ ಏನೇ ಕೆಲಸ ಹೇಳಲಿ ತಕ್ಷಣ ವಿಧೇಯನಾಗಿ ಅದನ್ನು ಪಾಲಿಸುತ್ತಿದ್ದ” ಎಂದು ಆತನ ಉಪಾಧ್ಯಾಯಿನಿ ಸುಶೀಲಾ ರಾಮದಾಸ್ ನೆನಪಿಸಿಕೊಳ್ಳುತ್ತಾರೆ. ವಿಶ್ವನಾಥನ್ ತಂದೆ ರಾಮಕೃಷ್ಣನ್ ಗುಂಡುಗಳಿಂದ ಛಿದ್ರವಾಗಿರುವ , ನೆತ್ತರಿನಿಂದ ತೊಯ್ದಿರುವ ತನ್ನ ಮಗನ ಮಿಲಿಟರಿ ಸಮವಸ್ತ್ರವನ್ನು ಈಗ ಸ್ಮಾರಕವಾಗಿ ಜೋಪಾನವಾಗಿ ತೆಗೆದಿಟ್ಟಿದ್ದಾರೆ.

 

ನಮ್ಮ ಭವಿಷ್ಯದ ಹಿಂದೆ ದೇಶದ ಭವಿಷ್ಯದ ಹಿಂದೆ ಇಂತಹ ಸಾವಿರಾರು ಯೋಧರ ಬಲಿದಾನವೇ ಇದೆ. ಅವರನ್ನು ಸದಾ ನೆನಪಿಸಿಕೊಳ್ಳೋಣ.

 

ಅಮೋಲ್ ಕಾಲಿಯಾ

 

ಆ ದಿನ ಉಷಾಶರ್ಮಾಗೆ ರಾತ್ರಿಯೇ ಎಚ್ಚರವಾಯಿತು. ಅಂದು ಜೂನ್ 9. ಎಚ್ಚರವಾದಾಗ ಏನೋ ತಳಮಳ. ಹೇಳತೀರದ ಸಂಕಟ .ಪಕ್ಕದಲ್ಲಿ ನಿದ್ರಿಸುತ್ತಿದ್ದ ತನ್ನ ಪತಿಯನ್ನು ಎಬ್ಬಿಸಿದಳು. ತಮ್ಮಿಬ್ಬರು ಮಕ್ಕಳ ಬಗ್ಗೆ ರಾತ್ರಿ ಅವರಿಬ್ಬರು ಮಾತನಾಡಿಕೊಂಡರು. ಇಬ್ಬರು ಮಕ್ಕಳು ಮಿಲಿಟರಿಯಲ್ಲಿದ್ದರು, ಒಬ್ಬ ಫ್ಲೈಟ್ ಲೆಫ್ಟಿನೆಂಟ್ ಅಮನ್ ಕಾಲಿಯಾ, ಇನ್ನೊಬ್ಬ ಚಿಕ್ಕವನು ಕ್ಯಾಪ್ಟನ್ ಅಮೋಲ್ ಕಾಲಿಯಾ.

 

ಇದಾಗಿ ಮೂರು ದಿನಗಳ ನಂತರ ಸ್ಥಳೀಯ ವರ್ತಮಾನ ಪತ್ರಿಕೆಯಲ್ಲಿ ಸುದ್ದಿ ತೇಲಿಬಂತು ” ಕಾರ್ಗಿಲ್ ಪರ್ವತ ವಶಪಡಿಸಿಕೊಳ್ಳುವ ಭೀಕರ ಕಾಳಗದಲ್ಲಿ ಭಾರತೀಯ ಕ್ಯಾ. ಅಮೋಲ್ ಕಾಲಿಯಾ. ವೀರ ಸ್ವರ್ಗ ಸೇರಿದ್ದಾರೆ”.

 

ನನ್ನ ಬಗ್ಗೆ ಚಿಂತಿಸಬೇಡಿ ಈ ತಿಂಗಳ ಕೊನೆಗೆ ನಾನು ದೆಹಲಿಗೆ ಹಿಂದಿರುಗುವೆ ನಿಮಗೆ ತುಂಬಾ ತುರ್ತಾಗಿದ್ದರೆ ಆಗ ನನ್ನ ಮದುವೆಯನ್ನು ನಿರ್ಧರಿಸಬಹುದು.” ಅಮೋಲ್ ತಂದೆ-ತಾಯಿಗೆ ಬರೆದ ಈ ಪತ್ರ ತಲುಪಿದ್ದು ಜೂನ್ 9ರಂದು ಅದೇ ದಿನ ಅಮೋಲ್ ತನ್ನ ಜಮ್ಮು-ಕಾಶ್ಮೀರ ಲೈಟ್ ಇನ್ ಫೆಂಟ್ರಿಯ 40 ಉಳಿದ ಸೈನಿಕರೊಂದಿಗೆ ಹದಿನೆಂಟು ಸಹಸ್ರ ಅಡಿ ಎತ್ತರದ ಹಿಮಾಚ್ಛಾದಿತ ಕಾರ್ಗಿಲ್ ಯಲೋಡೀರ್ ಪ್ರದೇಶದಲ್ಲಿ ಶತ್ರು ಪಡೆಯ ವಿರುದ್ಧ ಭೀಕರ ಕದನದಲ್ಲಿ ತೊಡಗಿದ್ದರು. ಪರ್ವತ ಪ್ರದೇಶದ ಯುದ್ಧದಲ್ಲಿ ಪರಿಣಿತರಾದ ಅಮೋಲ್ ಮತ್ತು ಗೆಳೆಯರನ್ನು ಯುದ್ಧ ವಿಮಾನ ಹಿಂದಿನ ದಿನವಷ್ಟೇ ಆ ಪ್ರದೇಶಕ್ಕೆ ತಂದಿಳಿಸಿತ್ತು.ಆದರೆ ಪಾಕ್ ಸೈನಿಕರು ಅಲ್ಲಿ ಆಗಲೇ ಜಮಾಯಿಸಿದ್ದರು. ವಿಮಾನದಿಂದ ಕೆಳಗಿಳಿದ ಅಮೋಲ್ ಮತ್ತು ಸಂಗಡಿಗರ ಮೇಲೆ ಪಾಕ್ ಸೈನಿಕರಿಂದ ಒಂದೇ ಸಮನೆ ಗುಂಡುಗಳು ಎಗರಾಡಿದವು. ಜೊತೆಗಿದ್ದ ಇಬ್ಬರು ಸಂಗಡಿಗರಿಗೆ ಅಷ್ಟರೊಳಗೆ ಗುಂಡೇಟು ತಗುಲಿತು. ಅಮೋಲ್ ನಿಧಾನವಾಗಿ ತೆವಳುತ್ತಾ ಎಲ್ಎಂಜಿ ಬಂದೂಕಿನತ್ಣ ಕೈಚಾಚಿ ಅದನ್ನು ಕೈಯಲ್ಲಿ ಹಿಡಿದು ಬಂದೂಕು ಚಲಾಯಿಸುತ್ತಾ 20 ಅತಿಕ್ರಮಣಕಾರರನ್ನು ಆಹುತಿ ತೆಗೆದುಕೊಂಡ.

 

ಆದರೆ ಸುತ್ತಲೆಲ್ಲ ಶತ್ರುಪಡೆ ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ. ಭದ್ರಾ ಕೋಟೆಯ ಒಳಗೆ ನುಗ್ಗಿದವರಿಗೆ ತಪ್ಪಿಸಿಕೊಳ್ಳುವ ಇರಾದೆಯೂ ಇರಲಿಲ್ಲ. ಕಾದಾಡುತ್ತಾ ಮಡಿಯುವುದೊಂದೇ ಅವರಿಗೆ ಗೊತ್ತು. ಆ ದಿನ ನಮ್ಮ ಸೈನಿಕರ ಪಾಲಿಗೆ ಬಹಳ ದುಃಖದ ದಿನ. ಅನೇಕ ಮಂದಿ ಶತ್ರು ಪಡೆಯ ದಾಳಿಗೀಡಾಗಿ ಮಡಿದರು. ಅಮೋಲ್ ಹಾಗೂ ಆತನ 12 ಮಂದಿ ಪರಕ್ರಾಮಿ ಯೋಧರು ಕದನದಲ್ಲಿ ಜೀವ ತೆತ್ತರು. ಆದರೆ ಅದಾದ ಎರಡು ದಿನಗಳ ನಂತರ ಆ ಪ್ರದೇಶವನ್ನು ಭಾರತೀಯ ಸೈನಿಕರು ವಶಪಡಿಸಿಕೊಂಡರು.

 

ಹಿಮಪರ್ವತದ ಅಡಿ ಬಿದ್ದ ಅಮೋಲ್ ಕಾಲಿಯಾನ ದೇಹವನ್ನು ತತ್ ಕ್ಷಣ ಹುಡುಕಲು ಸಾಧ್ಯವಾಗಲಿಲ್ಲ. ಆದರೆ ಆತನ ಧೈರ್ಯ, ಪರಾಕ್ರಮಗಳ ವೀರಗಾಥೆ ಅದಾಗಲೇ ಆತನ ಊರಿಗೆ ತಲುಪಿತು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ದೆಹಲಿ ಸಮೀಪದ ನಂಗಾಲ್ ಪಟ್ಟಣದ ಮೊದಲ ಪದವೀಧರ ಸೈನಿಕನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನರ ಮಹಾಪೂರವೇ ಹರಿದುಬಂದಿತು

 

ಅಮೋಲ್ ಇಷ್ಟೊಂದು ಪರಾಕ್ರಮಿಯಾಗಬಹುದೆಂದು ನನಗೆಂದೂ ಅನಿಸಿರಲಿಲ್ಲ ನನ್ನ ಪಾಲಿಗೆ ಆತನಿನ್ನೂ ಸಣ್ಣ ಮಗುವಾಗಿದ್ದ” ಎಂದು ತಂದೆ ಎಸ್. ಪಿ ಶರ್ಮಾ ಭಾವುಕರಾಗಿ ನುಡಿಯುತ್ತಾರೆ. ಅವರು ಒಬ್ಬ ಶಾಲಾ ಶಿಕ್ಷಕರು.

 

ಮಗನೇ, ಇದೋ ನಿನಗೆ ಹೆಮ್ಮೆಯ ಪ್ರಣಾಮ” ಎಂದು ಶರ್ಮಾ ಮನೆಯ ಗೋಡೆಗೆ ನೇತು ಹಾಕಿರುವ ಮಗನ ಭಾವಚಿತ್ರಕ್ಕೆ ಸೆಲ್ಯೂಟ್ ಹೊಡೆಯುತ್ತಾರೆ. ನಂಗಾಲ್ ಪಟ್ಟಣದ ಯುವಕರೆಲ್ಲಾ ಹೆಚ್ಚಾಗಿ ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾಭ್ಯಾಸಕ್ಕೆ ಹಾತೊರೆಯುವವರು. ಆದರೀಗ ಅಮೋಲ್ ವೀರಮರಣ ಆ ಯುವಕರಿಗೆ ಪುಳಕಿತಗೊಳಿಸಿದೆ. ಸೈನ್ಯಕ್ಕೆ ಸೇರಿ ತಾವು ಕೂಡ ಅಮೋಲ್ ಕಾಲಿಯಾನಂತೆ ಪರಾಕ್ರಮ ಮೆರೆಯಬೇಕು ಎಂಬುದು ಹಲವು ಯುವಕರ‌ ಬಯಕೆ. ಬಹುಶಃ ಒಬ್ಬ ಸೈನಿಕ ಇಡಿ ದೇಶಕ್ಕೆ ಮಾದರಿಯಾಗಬಲ್ಲಾ ಎಂಬುದಕ್ಕೆ ಅಮೋಲ್ ಕಾಲಿಯಾ ಸಾಕ್ಷಿ.

 

ಅಮರ್ ದೀಪ್ ಸಿಂಗ್

ಅಮರ್ ದೀಪ್ ಸಿಂಗ್ ಚಿಕ್ಕವನಿದ್ದಾಗ ನೆರೆಮನೆಗೆ ಓಡಿಹೋಗಿ ಟಿವಿ ಪರದೆಯ ಮೇಲೆ ಮೂಡಿಬರುತ್ತಿದ್ದ ಗಣರಾಜ್ಯೋತ್ಸವದ ಸೈನಿಕರ ಆಕರ್ಷಕ ಪಥಸಂಚಲನವನ್ನು ತಪ್ಪದೆ ನೋಡುತ್ತಿದ್ದ. ಸೈನಿಕರ ಹಸಿರು-ಹಳದಿ ಮಿಶ್ರಿತ ಸಮವಸ್ತ್ರ ಆತನ ಮನಸ್ಸನ್ನು ಸೆರೆಹಿಡಿದಿತ್ತು. ಎಷ್ಟರಮಟ್ಟಿಗೆ ಅಂದರೆ ಮೆಟ್ರಿಕ್ ಶಿಕ್ಷಣ ಮುಗಿಯುವ ಮುನ್ನವೇ ಅಮರ್ ದೀಪ್ ಮಿಲಿಟರಿ ಸೇರಿ ಅಂತಹ ಸಮವಸ್ತ್ರವನ್ನು ತೊಟ್ಟಾಗಿತ್ತು.

 

ಮನಸ್ಸಿಗೆ ಅನಿಸಿದ್ದನ್ನು ಕೂಡಲೇ ಕಾರ್ಯಗತಗೊಳಿಸುವುದು ಅಮರ್ ದೀಪ್ ಸ್ವಭಾವ. ಮೇ 8 ರಂದು ಆತ ಮಾಡಿದ್ದೂ ಆದೇ ರೀತಿ. ಹಿಮದ ಕಲ್ಲುಬಂಡೆಗಳ ಕೊರಕಲು ಹಾದಿಯಲ್ಲಿ 14 ಸಹಸ್ರ ಅಡಿಗಳೆತ್ತರದ ಕಾರ್ಗಿಲ್ ಪರ್ವತದಲ್ಲಿ ಹವಲ್ದಾರ್ ಜೈಪ್ರಕಾಶ್ ಜೊತೆ ಆತ ಶತ್ರುಪಡೆಯೊಂದಿಗೆ ನಾಲ್ಕು ಗಂಟೆಗೂ ಮಿಕ್ಕಿ ಅವಿರತವಾಗಿ ಹೋರಾಡಿದ. ಎದೆ, ಹೊಟ್ಟೆಯೊಳಗೆ ಗುಂಡುಗಳು ತೂರಿದವು. ಹವಲ್ದಾರ್ ಜೈಪ್ರಕಾಶ್ ಕೂಡಲೇ ಹಿಂದಕ್ಕೆ ಬರುವಂತೆ ಈತನಿಗೆ ಆದೇಶವಿತ್ತರು. ಅಮರ್ ದೀಪ್ ಅದನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಕದನದಲ್ಲಿ ಆಗಲೇ ಮಡಿದಿದ್ದ ಉಳಿದಿಬ್ಬರ ದೇಹಗಳನ್ನು ಹೇಗಾದರೂ ತರಬೇಕೆಂದು ಮುಂದುವರೆಯುತ್ತಲೇ ಹೋದ. ಎತ್ತರದಲ್ಲಿ ಶತ್ರುಗಳು ಈತ ಕೆಳಗೆ. ಶತ್ರುಗಳ ಗುಂಡುಗಳು ಈತನ ಇಡೀಯ ದೇಹವನ್ನು ಛಿದ್ರ ವಿಚ್ಛಿದ್ರಗೊಳಿಸಿದವು. ಸಂಗಡಿಗರ ಶವವನ್ನು ತರಲಾಗದ ದು:ಖಕ್ಕೆ ಈತನೂ ಶವವಾಗಿ ಹಿಮದೊಡಲಲ್ಲಿ ತಲೆಯಿಟ್ಟು ಮಲಗಿದ.

 

ಅಮರ್ ದೀಪ್ ಕಾರ್ಗಿಲ್ ಯುದ್ದ ಪ್ರಾರಂಭವಾದ ಬಳಿಕ ತಾನೊಮ್ಮೆ ಮನೆಗೆ ಬಂದು ಹೋಗುವೆನೆಂದು ಪತ್ರ ಬರೆದಿದ್ದ. ತಂದೆ-ತಾಯಿಗಳಿಗೆ ಈ ಪತ್ರ ಅಚ್ಚರಿ ತಂದಿತ್ತು. ಯುದ್ಧದ ನಡುವೆ ಹೇಗೆ ಬರುತ್ತಾನೆ ? ಇದು ಅವರ ಚಿಂತೆ.

 

ಆದರೆ ಮೇ 13ರಂದು ಆತ ಮನೆಗೆ ಮರಳಿದಾಗ ತಂದೆ-ತಾಯಿಗಳ ಮುಖದಲ್ಲಿ ಯಾವ ಅಚ್ಚರಿಯೂ ಉಳಿದಿರಲಿಲ್ಲ. ಏಕೆಂದರೆ ಅಂದು ಮನೆಗೆ ಬಂದದ್ದು 24ರ ಹರೆಯದ ಅಮರ್ ದೀಪ್ ಸಿಂಗ್ ತ್ರಿವರ್ಣ ಧ್ವಜ ಸುತ್ತಿದ್ದ ಪಾರ್ಥಿವ ಶರೀರ.

 

ಹರಿಯಾಣದ ಪಾಣಿಪತ್ ಜಿಲ್ಲೆಯ ಬಿಂಧ್ ಗ್ರಾಮವಿಡೀ ಆ ದಿನ ದು:ಖದಲ್ಲಿ ಮುಳುಗಿತ್ತು. ತಮ್ಮ ಓರಗೆಯ, ತಮ್ಮದೇ ವಯಸ್ಸಿನ ಹುಡುಗನೊಬ್ಬ ಶೌರ್ಯ ಪರಾಕ್ರಮಗಳಿಂದ ಕಾದಾಡಿ ವೀರಸ್ವರ್ಗ ಸೇರಿದ ಘಟನೆ ಆ ಗ್ರಾಮದ ಯುವಕರಿಗೆ ನವಸ್ಫೂರ್ತಿ ನೀಡಿದೆ. ಅಮರ್ ದೀಪ್ ನಂತೆ ತಾವೂ ದೇಶಕ್ಕಾಗಿ ಹೋರಾಡಿ ಹಿರೋವಾಗಬೇಕೆಂದು ನಿರ್ಧರಿಸಿದ್ದಾರೆ.

ಬಾಂದ್ ಗ್ರಾಮ ಮೊದಲಿನಿಂದಲೂ ಸಶಸ್ತ್ರ ಪಡೆಗೆ ಯುವಕರನ್ನು ಕಳಿಸುವುದಕ್ಕೆ ಹೆಸರುವಾಸಿಯಾಗಿದೆ.

ನಾಲ್ಕು ಸಾವಿರ ಜನಸಂಖ್ಯೆಯ ಆ ಹಳ್ಳಿಯಲ್ಲಿ ಈಗಾಗಲೇ ಎರಡು ಡಜನ್ ಯುವಕರು ಮಿಲಿಟರಿ ಸೇರಿದ್ದಾರೆ. ಅಮರ್ ದೀಪ್ ತಮ್ಮ ನಂತರದ ನವ ಪೀಳಿಗೆಯನ್ನೆ ಏಳಿ ದೇಶಕ್ಕಾಗಿ ಬಲಿದಾನ ಮಾಡಿ ಎಂಬಂತೆ ಕರೆ ನೀಡಿದಂತೆ ಆ ಕರೆಗೆ ಯುವಕರು ಓಡೋಡಿ ಬರುತ್ತಿದ್ದಾರೆ.

 

ಅಮರ್ ದೀಪ್ ಸೈನ್ಯಕ್ಕೆ ಸೇರಿದ ಮೇಲೆ ಮನೆಗೆ ನಿಯಮಿತವಾಗಿ ಹಣ ಕಳಿಸುತ್ತಿದ್ದ. ಎರಡು ಕೋಣೆಗಳ ಮಾಸಿದ ಗೋಡೆಗಳ ತನ್ನ ಪುಟ್ಟ ಮನೆಯನ್ನು ಮುಂದಿನ ಬಾರಿ ಬಂದಾಗ ರಿಪೇರಿ ಮಾಡುವುದಾಗಿ ಭರವಸೆ ನೀಡಿ ಹೋಗಿದ್ದ. ಆದರೆ ಆ ಭರವಸೆ ಮಾತ್ರ ಈಡೇರಲಿಲ್ಲ ಎಂದು ತಂದೆ ಪ್ರೇಮ್ ಸಿಂಗ್ ವಿಷಾದದಿಂದ ನುಡಿಯುತ್ತಾರೆ.

 

ಅಮರ್ ದೀಪ್ ಸಿಂಗ್ 16 ಗ್ರೆನೆಡಿಯರ್ಸ್ ಗೆ ಸೇರಿದ ವೀರ ಸಿಪಾಯಿ ಅವನ ನೆನಪು ಇನ್ನೂ ಅನೇಕ ಯುವಕರಿಗೆ ಆದರ್ಶವಾಗಿದೆ. ಸಣ್ಣ ವಯಸ್ಸಿನಲ್ಲೇ ಸಾಹಸ ಮೆರೆದು ವೀರಸ್ವರ್ಗ ಸೇರಿದ ಪರಕ್ರಾಮಿ ಯೋಧನನ್ನು ಸದಾ ನೆನಪಿಸಿಕೊಳ್ಳಲೇ ಬೇಕು.

 

ಮೇಜರ್ ರಾಜೇಶ್ ಅಧಿಕಾರಿ

 

ಮದುವೆಯಾಗಿ ಇನ್ನೂ ಹತ್ತು ತಿಂಗಳು ಕೂಡ ಕಳೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೆಚ್ಚಿನ ಮಡದಿಯಿಂದ ಪತ್ರವೊಂದು ಬಂದರೆ ಅದನ್ನು ತತ್ ಕ್ಷಣ ತೆರೆದೋದಬೇಕೆಂಬ ಕಾತರ ಯಾರಿಗೆ ತಾನೇ ಇರುವುದಿಲ್ಲ?

 

29ರ ಹರೆಯದ ಮೇಜರ್ ರಾಜೇಶ್ ಅಧಿಕಾರಿಗೆ ಆತನ ಮಡದಿ ಕಿರಣ್ ಬರೆದ ಕಾಗದ ತಲುಪಿದಾಗ ಆತ ಹದಿನಾರು ಸಾವಿರ ಅಡಿ ಎತ್ತರದ ಹಿಮವತ್ಪರ್ವತದ ತಪ್ಪಲಿನಲ್ಲಿದ್ದ. ಒಂದು ಕೈಯಲ್ಲಿ ಭೂಪಟ ಇನ್ನೊಂದರಲ್ಲಿ ಎ.ಕೆ -47 ರೈಫಲ್. ತೊಲೊಲಿಂಗ್ ಪರ್ವತದೆತ್ತರದಲ್ಲಿ ಪಾಕ್ ಅತಿಕ್ರಮಣಕಾರರು ಕಟ್ಟಿಕೊಂಡಿದ್ದ ಬಂಕರ್ ಧ್ವಂಸ ಮಾಡುವುದು ರಾಜೇಶ್ ಅಧಿಕಾರಿಯ ಗುರಿಯಾಗಿತ್ತು.

 

“ಅರೆ, ಈಗ ಪುರುಸೊತ್ತಿಲ್ಲ ನಾಳೆ ಕಾರ್ಯಾಚರಣೆ ಮುಗಿದ ಬಳಿಕ ಇದನ್ನು ಆರಾಮವಾಗಿ ಓದೋಣ” ಎಂದು ಹೆಂಡತಿಯ ಕಾಗದವನ್ನು ಮಡಿಚಿ ಭದ್ರವಾಗಿ ಜೇಬೊಳಗಿಟ್ಟ.

 

ಕಡಿದಾದ ಕೊಡಲಿಯ ಮೊನೆಯಂತಹ ಹಿಮಬಂಡೆಗಳನ್ನು ದಾಟುತ್ತಾ ಅಧಿಕಾರಿ ಹಾಗೂ ಆತನ ತಂಡ ನಿಶ್ಚಿತ ಗುರಿ ತಲುಪಿದ ಕೂಡಲೇ ಶತ್ರು ಪಡೆಯತ್ತ ಗುಂಡು ಹಾರಿಸತೊಡಗಿದರು. ವೈರಿ ಪಡೆಯ ಬಂಕರ್ ಈ ದಾಳಿಗೆ ಕುಸಿದು ಬಿತ್ತು. ಆದರೆ ಅಷ್ಟರಲ್ಲಿ ಗುಂಡೊಂದು ಎಗರಿ ಬಂದು ಅಧಿಕಾರಿಯ ಎದೆಯನ್ನು ಸೀಳಿತು. ಆತ ಧರಾಶಾಯಿಯಾದ. ನೈನಿತಾಲ್ ನಲ್ಲಿರುವ ಮನೆಗೆ ಅಧಿಕಾರಿಯ ಪಾರ್ಥಿವ ಶರೀರ ತಲುಪಿದ್ದು ಇದಾಗಿ ಒಂದು ವಾರ ನಂತರ.

 

ಉತ್ತರಪ್ರದೇಶ ಗಢವಾಲದಲ್ಲಿರುವ ಪ್ರತಿ ಮೂರನೇ ಮನೆಯಿಂದ ಒಬ್ಬ ಸೈನ್ಯಕ್ಕೆ ಸೇರಿದ್ದಾರೆ. ನೈನಿತಾಲ್ -ನಲ್ಲಿರುವ ಅಧಿಕಾರಿಯ ತಾಯಿ ಮಾತ್ರ ಮಗನ ಸುದ್ದಿ ನಂಬಲಿಲ್ಲ. ಆತ ಎಲ್ಲೋ ರಣರಂಗದಲ್ಲಿ ಕಾದಾಡುತ್ತಿದ್ದಾನೆ, ಒಂದಲ್ಲ ಒಂದು ದಿನ ಮನೆಗೆ ಮರಳುತ್ತಾನೆ. ಎಂದು ಹೇಳುತ್ತಾ ತುಂಬಾ ವಿಶ್ವಾಸದಿಂದ ಇದ್ದಳು ಆದರೆ ಮಗನ ಮೃತದೇಹ ಮನೆಗೆ ಮರಳಿದಾಗ ಕೊನೆಗೆ ಆಕೆ ವಾಸ್ತವತೆಯನ್ನು ಒಪ್ಪಿಕೊಳ್ಳಬೇಕಾಯಿತು.

 

ಮಡದಿ ಬರೆದಿದ್ದ ಕಾಗದ ಮಾತ್ರ ರಾಜೇಶ್ ಅಧಿಕಾರಿಯ ಜೇಬಿನೊಳಗೆ ಬೆಚ್ಚಗೆ ಉಳಿಯಿತು. ಆಕೆ ಏನು ಬರೆದಿದ್ದಳೋ.. ನಾಳೆ ಕಾರ್ಯಾಚರಣೆ ಮುಗಿದ ಓದಿಕೊಳ್ಳುವೆ ಎಂದು ಅಧಿಕಾರಿ ಹೇಳಿದ್ದ ಆದರೆ ಆ ನಾಳೆ ಮಾತ್ರ ಅವನ ಬಾಳಲ್ಲಿ ಬರಲೇ ಇಲ್ಲ..

ಪ್ರತಿಯೊಬ್ಬ ಯೋಧರ ಬಲಿದಾನದ ಹಿಂದಿರುವ ಸಾಹಸಗಾಥೆ ರೋಮಾಂಚನಗೊಳಿಸುತ್ತದೆ. ಎಲ್ಲಾ ದೇಶವಾಸಿಗಳಿಗೆ ಪ್ರೇರಣೆಯ ಛಲದ ಕಿಚ್ಚು ತಾಯಿ ಭಾರತೀಯ ವೀರಪುತ್ರರನ್ನು ಸ್ಮರಿಸೋಣ…..

ನಮ್ಮ ನಾಳೆಗಾಗಿ…

https://youtu.be/qFOxzBuIERI

 

ಜೈ ಹಿಂದ್

(ಪ್ರಣವ ಭಟ್)

 

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ