ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?
ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?
ಕಲ್ಲು ಗಣಪತಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಬಹಳಷ್ಟು ಮಂದಿ ಕೇಳಿರಲಿಕ್ಕಿಲ್ಲ. ಇದೊಂದು ಗುಹೆಯೊಳಗೆ ಇರುವ ಗಣಪತಿ. ಇದೊಂದು ಬಹಳ ಪ್ರಾಚೀನ ದೇವಾಲಯವಾಗಿದೆ. ಉಡುಪಿ ಜಿಲ್ಲೆಯ ಜನರಿಗೆ ಇದು ಚಿರಪರಿಚಿತ ದೇವಸ್ಥಾನ. ಇದೊಂದು ಗುಹಾದೇವಾಲಯವಾಗಿದ್ದು,ಇಲ್ಲಿ ಶಿವ, ಪಾರ್ವತಿ ಹಾಗೂ ಗಣೇಶನ ವಿಗ್ರಹವಿದೆ. ಇಲ್ಲಿನ ಶಿವ ಪಾರ್ವತಿ ಉದ್ಭವ ಮೂರ್ತಿ ಎನ್ನಲಾಗುತ್ತದೆ.
ಈ ದೇವಾಲಯವು ಬಂಡೆಕಲ್ಲಿನ ಮೇಲೆ ಸ್ಥಾಪಿತವಾಗಿದೆ. ಬಲಗಡೆಯ ಕೆರೆಯನ್ನು ಸೂರ್ಯ ಪುಷ್ಕರಣಿ ಎನ್ನಲಾಗುತ್ತದೆ ಎಡಗಡೆಯ ಕೆರೆಯನ್ನು ಚಂದ್ರ ಪುಷ್ಕರಣಿ ಎನ್ನಲಾಗುತ್ತದೆ.ಉಡುಪಿ ಜಿಲ್ಲೆಯನ್ನು ದೇವನಗರಿ, ತೀರ್ಥ ಕ್ಷೇತ್ರಗಳ ನೆಲೆಬೀಡೆಂದು ಪ್ರವಾಸಿಗರು ಕರೆಯು ತ್ತಾರೆ. ಇಲ್ಲಿ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶಿಲಾಮಯ ದೇವಸ್ಥಾನಗಳಿವೆ. ನಾವು ಇಲ್ಲಿ ಶ್ರೀ ಗಣಪತಿ ದೇವಸ್ಥಾನಗಳ ಸಾಲಿಗೆ ಬಂದರೆ… ಆನೆಗುಡ್ಡೆ ಗಣಪತಿ, ಹಟ್ಟಿಯಂಗಡಿ ಗಣಪತಿ, ಉದ್ಯಾವರ ಗಣಪತಿ, ಬಾರಕೂರು ಬಟ್ಟೆ ಗಣಪತಿ, ಗುಡ್ಡಟ್ಟು ಗಣಪತಿ, ಪೆರ್ಣ ಂಕಿಲ ಗಣಪತಿ ಹೀಗೆ ಹತ್ತು ಹಲವು ಪ್ರಸಿದ್ಧ ಗಣಪತಿ ದೇವಸ್ಥಾನಗಳು ಉಡುಪಿ ಜಿಲ್ಲೆಯ ಸುತ್ತಮುತ್ತಲು ಕಂಡುಬರುತ್ತದೆ.
ಹೀಗೆಯೇ ಅವುಗಳ ಸಾಲಿನಲ್ಲಿ ಬರು ವುದು ಇತಿಹಾಸ ಪ್ರಸಿದ್ಧ ಶಿರಿಯಾರ ಕಲ್ಲು ಗಣಪತಿ ದೇವಸ್ಥಾನ. ಈ ಕಲ್ಲು ಗಣಪತಿ ದೇವಸ್ಥಾನವನ್ನು ೧೨ನೇ ಶತಮಾನದಲ್ಲಿ ತುಳುನಾಡನ್ನು ಆಳಿದ ಭೂತಾಳ ಪಾಂಡ್ಯ ರಾಜನು ಕಟ್ಟಿಸಿದನೆಂದು ಕ್ಷೇತ್ರದ ಅರ್ಚಕರಾದ ರಾಮಕೃಷ್ಣ ಅಡಿಗರು ಉಲ್ಲೇಖಿಸುತ್ತಾರೆ. ಪ್ರಕೃತಿ ನಿರ್ಮಿತ ಗುಹೆಯೊಳಗೆ ಶಿಲ್ಪಿ ಶಿಲಾಮಯ ಗುಡಿ ನಿರ್ಮಾಣ ಮಾಡಿದ್ದನ್ನು ಕಂಡಾಗ ಅದ್ಭುತ ಎನಿಸುತ್ತದೆ.
ಇಂತಹ ಕೌತುಕಮಯ ಕಲ್ಲು ಗಣಪತಿ ದೇವಸ್ಥಾನ ಉಡುಪಿ ನಗರದಿಂದ ೨೫ ಕಿ.ಮೀ. ದೂರದ ಶಿರಿಯಾರ ಗ್ರಾಮದ ಪಡುಮುಂಡದಲ್ಲಿ ಇರುವುದು. ಆದರೆ ಇದು ಹೊರಪ್ರಪಂಚಕ್ಕೆ ಅಷ್ಟೊಂದು ಪ್ರಚಲಿತವಾಗದೆ ಅಜ್ಞಾತವಾಗಿಯೇ ಇದೆ. ಒಂದು ಸಣ್ಣ ಬಂಡೆಯ ಮೇಲೆ ದೊಡ್ಡ ಬಂಡೆ, ಅದರ ಮೇಲೆ ಮತ್ತೊಂದು ಬಂಡೆ. ಹೀಗೆ ಮೂರು ಅಂತಸ್ತುಗಳಲ್ಲಿ ಪ್ರಕೃತಿಯೆ ವಿಸ್ಮಯವಾಗಿ ನಿರ್ಮಾಣ ಮಾಡಿದ ಪರ್ವತದಲ್ಲಿ ದೃಶ್ಯ ಕಾಣಬಹುದು.
ಈ ದೇವಾಲಯದ ವಿಶೇಷತೆ ಏನು?
ಇಲ್ಲಿನ ಗಣೇಶನು 4 ಕೈಯನ್ನು ಹೊಂದಿದ್ದಾನೆ ಎರಡು ಕೈ ವರದಾ ಹಸ್ತ ಇಚ್ಛೆಯನ್ನು ಸೂಚಿಸಿದರೆ ಇನ್ನೆರಡು ಕೈಗಳು ಮೋಕ್ಷವನ್ನು ಸೂಚಿಸುತ್ತದೆ. ಇಲ್ಲಿ ತುಲಾಭಾರದ ಮೂಲಕ ಗಣೇಶನನ್ನು ಪ್ರಾರ್ಥೀಸಲಾಗುತ್ತದೆ. ಗಣೇಶ ಚತುರ್ಥೀ ಸಂದರ್ಭದಲ್ಲಿ ದೂರದೂರದ ಊರುಗಳಿಂದ ಭಕ್ತರು ಗಣೇಶನ ದರ್ಶನಕ್ಕೆ ಆಗಮಿಸುತ್ತಾರೆ.
ಅನ್ನದಾನ
ಗಣೇಶ ಚತುರ್ಥೀಯಂದು ಅಲ್ಲಿ ಬಂದ ಭಕ್ತರಿಗೆಲ್ಲರಿಗೂ ಅನ್ನದಾನವನ್ನು ಏರ್ಪಡಿಸಲಾಗಿರುತ್ತದೆ. ಹಾಲು, ಸಕ್ಕರೆ, ದಾಲ್ ಹಾಗೂ ಜೇನುತುಪ್ಪದಿಂದ ತಯಾರಿಸಲಾದ ಪ್ರಸಾದವನ್ನೂ ನೀಡಲಾಗುತ್ತದೆ.
ವಿಶೇಷ ಪೂಜೆ
ಕಲ್ಲು ಗಣಪನಿಗೆ ದಿನದಲ್ಲಿ ಮೂರು ಬಾರಿ ವಿಶೇಷ ಪೂಜೆ ಮಾಡಲಾಗುತ್ತದೆ. ಬೆಳಗ್ಗೆ 5ಗಂಟೆಗೆ, ಮಧ್ಯಾಹ್ನ 1 ಗಂಟೆಗೆ ಹಾಗೂ ರಾತ್ರಿ 8.30 ಕ್ಕೆ. ಬೆಳಗ್ಗೆ 6 ಗಂಟೆಯಿಂದ 9ಗಂಟೆವರೆಗೆ ಭಕ್ತರಿಗಾಗಿ ತೆರೆದಿರುತ್ತದೆ. ಸಾಮಾನ್ಯವಾಗಿ ಭಾನುವಾರ, ಗುರುವಾರ ಹಾಗೂ ಶುಕ್ರವಾರ ಬಹಳ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಹಬ್ಬಗಳಂದು ಭಕ್ತರಿಂದ ತುಂಬಿರುತ್ತದೆ
ವಿಶೇಷ ಹಬ್ಬಗಳ ಸಂದರ್ಭಗಳಾದ ಗಣೇಶ ಚತುರ್ಥೀ, ಸಂಕ್ರಮಣ ಹಾಗೂ ಸಂಕಷ್ಟಹಾರ ಚತುರ್ಥಿಯಂದು, ವಾರ್ಷಿಕ ಉತ್ಸವದಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಗುಹೆಯೊಳಗಿನ ಗಣೇಶನ ದರ್ಶನ ಪಡೆಯಲು ಭಕ್ತರ ದಂಡೇ ಆಗಮಿಸುತ್ತದೆ.
ಸತ್ಯ ಗಣಪತಿ ವೃತ
ಇತರ ವಿಶೇಷ ಪೂಜೆಗಳಾದ ಸತ್ಯ ಗಣಪತಿ ವೃತ, ಇದನ್ನು ಮದುವೆಯ ಸಂದರ್ಭದಲ್ಲಿ ಅಥವಾ ಸರಿಯಾದ ವರ ದೊರೆಯುವಂತೆ ಬೇಡಿಕೊಳ್ಳುವ ಸಲುವಾಗಿ ಈ ವೃತವನ್ನು ಆಚರಿಸುತ್ತಾರೆ. ಗಣೇಶನಿಗೆ ಕಬ್ಬು, ತೆಂಗಿನಕಾಯಿ, ಹಣ್ಣುಉ, ಮೋದಕ, ಕಡುಬನ್ನು ಅರ್ಪಿಸುತ್ತಾರೆ.